Trans couple gave birth: ಮಗುವಿಗೆ ಜನ್ಮ ನೀಡಿದ ಸಂಭ್ರಮದಲ್ಲಿ ಕೇರಳ ಟ್ರಾನ್ಸ್ ದಂಪತಿ!
ಭಾರತದ ಮೊದಲ ಲಿಂಗತ್ವ ಅಲ್ಪಸಂಖ್ಯಾತ ಜಿಯಾ ಪಾವಲ್ ಮತ್ತು ಜಹಾದ್ ಫಾಜಿಲ್ ದಂಪತಿ ಮಗುವನ್ನು ಪಡೆದಿದ್ದಾರೆ.
ಕೊಚ್ಚಿ ಫೆಬ್ರವರಿ 9: ಇತ್ತೀಚೆಗಷ್ಟೇ ಗರ್ಭಿಣಿಯಾಗಿದ್ದಕ್ಕೆ ವೈರಲ್ ಆಗಿದ್ದ ಕೇರಳದ ಟ್ರಾನ್ಸ್ ದಂಪತಿಗಳಾದ ಜಿಯಾ ಪಾವಲ್ ಮತ್ತು ಜಹಾದ್ ಫಾಜಿಲ್ ಅವರು ಫೆಬ್ರವರಿ 8 ರಂದು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಆರೋಗ್ಯವಂತ ಮಗುವನ್ನು ಪಡೆದಿದ್ದಾರೆ. ಆದರೆ ದಂಪತಿಗಳು ನವಜಾತ ಶಿಶುವಿನ ಲಿಂಗವನ್ನು ಮಾತ್ರ ಬಹಿರಂಗಪಡಿಸಿಲ್ಲ.
ಭಾರತದ ಮೊದಲ ಲಿಂಗತ್ವ ಅಲ್ಪಸಂಖ್ಯಾತ ದಂಪತಿ ಮಗುವನ್ನು ಪಡೆದಿದ್ದಾರೆ. ಲಿಂಗ ಪರಿವರ್ತಿತ ಪುರುಷ ಜಹಾದ್ ಬುಧವಾರ ಮಗುವಿಗೆ ಜನ್ಮ ನೀಡಿದ್ದಾನೆ. "ಇದು ನನ್ನ ಜೀವನದ ಅತ್ಯಂತ ಸಂತೋಷದ ದಿನ. ನನಗೆ ನೋವುಂಟು ಮಾಡುವ ಹಲವಾರು ಸಂದೇಶಗಳು ಬಂದಿವೆ. ನಮ್ಮ ಮಗುವಿನ ಜನನವು ಅವರಿಗೆ ನಮ್ಮ ಉತ್ತರವಾಗಿದೆ. ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ. ಮಗು ಮತ್ತು ಜಹಾದ್ ಇಬ್ಬರೂ ಚೆನ್ನಾಗಿದ್ದಾರೆ" ಜಹಾದ್ ಅವರ ಸಂಗಾತಿ ಜಿಯಾ ಟ್ವೀಟ್ ಮಾಡಿದ್ದಾರೆ.
ಇನ್ನಷ್ಟು ವಿಚಾರಗಳನ್ನು ಹಂಚಿಕೊಂಡ ಜಿಯಾ, "ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಬೆಳಿಗ್ಗೆ 9.30 ರ ಸುಮಾರಿಗೆ ಮಗು ಜನಿಸಿತು, ಏಕೆಂದರೆ ಹೆರಿಗೆಯ ಸಮಯದಲ್ಲಿ, ಜಹಾದ್ ಅವರ ದೇಹದಲ್ಲಿನ ಸಕ್ಕರೆಯ ಮಟ್ಟವು ಅಧಿಕವಾಗಿತ್ತು" ಎಂದು ಹೇಳಿದರು.

ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಮಗುವಿನ ಜನನದಿಂದ ಜಿಯಾ ಪಾವಲ್ ಮತ್ತು ಜಹಾದ್ ಫಾಜಿಲ್ ಅವರನ್ನು ಅಭಿನಂದಿಸಿದ್ದಾರೆ. ಜೊತೆಗೆ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನ ಐಎಂಸಿಎಚ್ (ತಾಯಿ ಮತ್ತು ಮಕ್ಕಳ ಆರೋಗ್ಯ ಸಂಸ್ಥೆ) ಅಧೀಕ್ಷಕರೊಂದಿಗೆ ಮಾತನಾಡಿದ ಸಚಿವರು, ಜಾಗರೂಕರಾಗಿರಲು ಮತ್ತು ಇಬ್ಬರಿಗೂ ಅಗತ್ಯವಿರುವ ಎಲ್ಲಾ ಚಿಕಿತ್ಸೆಯನ್ನು ಉಚಿತವಾಗಿ ನೀಡುವಂತೆ ಸೂಚಿಸಿದ್ದಾರೆ. ಹೆರಿಗೆ ನಂತರ ಜಹಾದ್ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಯಾ ಪಾವಲ್, 21, ಮತ್ತು ಅವರ ಸಂಗಾತಿ ಜಹಾದ್, 23 ವರ್ಷದವರಾಗಿದ್ದು ಇತ್ತೀಚೆಗೆ ಅವರ ಗರ್ಭಧಾರಣೆಯ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಡ್ಯಾನ್ಸರ್ ಆಗಿರುವ ಜಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಗರ್ಭಧಾರಣೆಯ ಚಿತ್ರಗಳನ್ನು ಹಂಚಿಕೊಂಡಿದ್ದರು. ತನ್ನ ಸಂಗಾತಿ ಜಹಾದ್ ಈಗ ಎಂಟು ತಿಂಗಳ ಗರ್ಭಿಣಿ ಎಂದು ಘೋಷಿಸಿದರು. ಫೆಬ್ರವರಿ ಎಂಟರಂದು ಬೆಳಿಗ್ಗೆ ಮುದ್ದಾದ ಮಗುವನ್ನು ಪಡೆದಿದ್ದಾರೆ.

ಜಿಯಾ ಮತ್ತು ಜಹಾದ್ ಯಾರು?
ಜಹಾದ್ ಅಕೌಂಟೆಂಟ್ ಆಗಿ ಕೆಲಸ ಮಾಡುವ ಟ್ರಾನ್ಸ್ಜೆಂಡರ್ ವ್ಯಕ್ತಿ. ಇವರು ಹೆಣ್ಣಾಗಿ ಹುಟ್ಟಿದ್ದು, ಪುರುಷನಾಗಲು ಹಾರ್ಮೋನ್ ಥೆರಪಿ ಮಾಡಿಸಿಕೊಳ್ಳುತ್ತಿದ್ದಾರೆ. ಶಾಸ್ತ್ರೀಯ ನೃತ್ಯದ ಶಿಕ್ಷಕಿಯಾದ ಜಿಯಾ ಪುರುಷನಾಗಿ ಜನಿಸಿದರು ಮತ್ತು ಲಿಂಗ ರೂಪಾಂತರಕ್ಕೆ ಒಳಗಾದರು. ಕೇರಳದ ಮೂಲದವರಾದ ಟ್ರಾನ್ಸ್ ದಂಪತಿಗಳು ಸದ್ಯ ಮಗುವನ್ನು ಪಡೆದಿದ್ದಾರೆ.












Click it and Unblock the Notifications