ತಂದೆಗೆ ಲಿವರ್ ದಾನ ಮಾಡಿದ ದೇಶದ ಅತ್ಯಂತ ಕಿರಿಯ ಅಂಗಾಂಗ ದಾನಿ!
ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದ ತಂದೆಗೆ ಅಪ್ರಾಪ್ತ ವಯಸ್ಸಿನ ಮಗಳೆ ಅಂಗಾಂಗ ದಾನ ಮಾಡಿದ ಘಟನೆ ಕೇರಳ ರಾಜ್ಯದ ತ್ರಿಶೂರ್ ನಲ್ಲಿ ನಡೆದಿದೆ. ಈ ಮೂಲಕ ಬಾಲಕಿ ತಂದೆಗೆ ದಾನ ಮಾಡುವ ಮೂಲಕ ದೇಶದ ಅತ್ಯಂತ ಕಿರಿಯ ಅಂಗಾಂಗ ದಾನಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.
ತ್ರಿಶೂರ್, ಫೆಬ್ರವರಿ 19: ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದ ತಂದೆಗೆ ಅಪ್ರಾಪ್ತ ವಯಸ್ಸಿನ ಮಗಳು ಅಂಗಾಂಗ ದಾನ ಮಾಡಿದ ಹೃದಯಸ್ಪರ್ಶಿ ಘಟನೆ ಕೇರಳ ರಾಜ್ಯದ ತ್ರಿಶೂರ್ ನಲ್ಲಿ ನಡೆದಿದೆ. ಈ ಮೂಲಕ ಬಾಲಕಿ, ತಂದೆಗೆ ಯಕೃತ್ ದಾನ ಮಾಡಿದ ದೇಶದ ಅತ್ಯಂತ ಕಿರಿಯ ಅಂಗಾಂಗ ದಾನಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.
ಬಾಲಕಿ ಅಪ್ರಾಪ್ತೆಯಾಗಿದ್ದರಿಂದ ಅಂಗಾಂಗ ದಾನಕ್ಕೆ ಅವಕಾಶ ಇರಲಿಲ್ಲ. ಹೀಗಿದ್ದರೂ ಕಾನೂನಿನಿಂದಲೇ ಅನುಮತಿ ಪಡೆದು ತಂದೆಗೆ ಅಂಗಾಂಗ ದಾನ ನೀಡುವ ಮೂಲಕ ಅನಾರೋಗ್ಯದಿಂದ ಬಳಲುತ್ತಿದ್ದ ತಂದೆಯನ್ನು ಬದುಕಿಸಿಕೊಂಡು ಅಪಾರ ಜನರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.

12ನೇ ತರಗತಿಯ ವಿದ್ಯಾರ್ಥಿನಿ ದೇವಾನಂದ ಎಂಬವಳ ತಂದೆ ಪ್ರತೀಶ್ (48) ಅನಾರೋಗ್ಯಕ್ಕೆ ತುತ್ತಾಗಿದ್ದರು. ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ ಯಕೃತ್ತಿನ ಒಂದು ಭಾಗ ನೀಡಲು ಅಪ್ರಾಪ್ತ ವಯಸ್ಸಿನ ಮಗಳು ಕೇರಳ ಹೈಕೋರ್ಟ್‌ನ ಮೊರೆ ಹೋಗಿದ್ದಳು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಾಲಯ ಯಕೃತ್ ದಾನಕ್ಕೆ ಒಪ್ಪಿಗೆ ನೀಡಿತು. ಬಳಿಕ ಇದೇ ಫೆಬ್ರವರಿ 9ರಂದು ದೇವಾನಂದ, ದೀರ್ಘಕಾಲದ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದ ತಮ್ಮ ತಂದೆಗೆ ಅಂಗಾಂಗ ದಾನ ಮಾಡಿದರು. ಅಂಗಾಂಗ ಕಸಿ ಚಿಕಿತ್ಸೆ ಯಶಸ್ವಿಯಾಗಿದೆ. ಈ ಮೂಲಕ ದೇವಾನಂದ ಅವರಿಗೆ ದೇಶಾದ್ಯಂತ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಕೆಫೆ ನಡೆಸುತ್ತಿದ್ದ ತಂದೆಗೆ ಅನಾರೋಗ್ಯ!
ತಂದೆ ಪ್ರತೀಶ್ ತ್ರಿಶೂರ್ ನಲ್ಲಿ ಕೆಫೆ ನಡೆಸುತ್ತಿದ್ದಾರೆ. ದೇವಾನಂದ ಅವರು ತಂದೆಗೆ ಅಂಗಾಂಗ ದಾನ ನೀಡಲು ಆಹಾರ ಕ್ರಮದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದರು. ದಾನಕ್ಕೆ ಯಕೃತ್ ಉತ್ತಮ ಸ್ಥಿತಿಯಲ್ಲಿದೆ ಎಂದು ಖಚಿತಪಡಿಸಿಕೊಳ್ಳಲು ನಿಯಮಿತ ವ್ಯಾಯಾಮ ಮಾಡಿದ್ದರು. ನಂತರವೇ ಈಕೆ ಅಂಗಾಂಗ ದಾನ ಮಾಡಿದ್ದಳು.

ಸ್ಥಳೀಯ ರಾಜಗಿರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆದಿದೆ. ದೇವಾನಂದ ಅವರ ತಂದೆ ಮೇಲಿನ ಪ್ರೀತಿ ಕಂಡು ಚಿಕಿತ್ಸೆ ಮಾಡಿದ ಆಸ್ಪತ್ರೆಯು ಶಸ್ತ್ರಚಿಕಿತ್ಸೆಯ ವೆಚ್ಚವನ್ನು ಪಡೆಯದೆ ಮಾನವೀಯತೆ ಮೆರೆದಿದೆ. ಆಸ್ಪತ್ರೆಯಲ್ಲಿ ಒಂದು ವಾರದ ನಂತರ, ದೇವಾನಂದ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ತಂದೆ ತಮ್ಮ ಮಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಪ್ರತೀಶ್ ಅವರು ಅನಾರೋಗ್ಯಕ್ಕೆ ತುತ್ತಾದ ನಂತರ ಸೂಕ್ತ ದಾನಿ ಸಿಗದ ಹಿನ್ನೆಲೆಯಲ್ಲಿ ಅವರ ಕುಟುಂಬ ತತ್ತರಿಸಿತ್ತು. ಹೀಗಾಗಿ ಮಗಳೆ ಅಂಗಾಂಗ ದಾನಕ್ಕೆ ಮುಂದಾಗಿದ್ದಳು. ಮಾನವ ಅಂಗಾಂಗಗಳ ಕಸಿ ಕಾಯಿದೆ, 1994ರ ಪ್ರಕಾರ, ಅಪ್ರಾಪ್ತರಿಂದ ಅಂಗಾಂಗಗಳನ್ನು ದಾನ ಮಾಡಲು ಕಾನೂನಿನಲ್ಲಿ ಅನುಮತಿ ಇಲ್ಲ. ಆದರೆ ಈ ವಿಶೇಷ ಪ್ರಕರಣದಲ್ಲಿ ನ್ಯಾಯಾಲಯದಿಂದ ವಿನಾಯಿತಿ ಪಡೆಯಲಾಗಿತ್ತು.












Click it and Unblock the Notifications