4 ಜನರಿಗೆ ಹೊಸ ಬದುಕು ಕೊಟ್ಟ ಪುಟ್ಟ ಕಂದಮ್ಮ: ವೈದ್ಯಕೀಯ ಇತಿಹಾಸದಲ್ಲೇ ಇದು ದಾಖಲೆ
ಭೂಮಿಯ ಮೇಲೆ ಒಂದು ವರ್ಷವೂ ಪೂರ್ಣವಾಗಿ ಕಳೆಯದ ಪುಟಾಣಿ ಕಂದಮ್ಮ ನಾಲ್ವರಿಗೆ ಹೊಸ ಬದುಕು ಕೊಟ್ಟಿದೆ. ರಸ್ತೆ ಅಪಘಾತದಲ್ಲಿ ಅಲಿನ್ ಶೆರಿನ್ ಎನ್ನುವ ಮಗು ಮೃತಪಟ್ಟಿದ್ದು, ನಾಲ್ವರ ಬಾಳಿನಲ್ಲಿ ಆಶಾಕಿರಣವಾಗಿದೆ. 4 ಜನರಿಗೆ ಹೊಸ ಬದುಕು ಕೊಟ್ಟ ಪುಟ್ಟ ಕಂದಮ್ಮ... ವೈದ್ಯಕೀಯ ಇತಿಹಾಸದಲ್ಲೇ ಇದು ದಾಖಲೆ. ಸಂಕಷ್ಟದ ಸಮಯದಲ್ಲೂ ಮಗುವಿನ ಪೋಷಕರು ತೆಗೆದುಕೊಂಡ ನಿರ್ಧಾರದಿಂದ ಇದು ಸಾಧ್ಯವಾಗಿದೆ. ಇಷ್ಟಕ್ಕೂ ಆಗಿದ್ದೇನು ಎನ್ನುವ ವಿವರ ನೋಡೋಣ.
ಬಾಳಿ ಬದುಕಬೇಕಾಗಿದ್ದ ಸಣ್ಣ ಕೂಸು ಅಪಘಾತದಲ್ಲಿ ಮೃತಪಟ್ಟಿದೆ. ಅಲಿನ್ ಶೆರಿನ್ ಎನ್ನುವ 10 ತಿಂಗಳ ಹೆಣ್ಣು ಮಗು ಅಪಘಾತದಲ್ಲಿ ಮೃತಪಟ್ಟಿದ್ದು, ಪೋಷಕರು ಮಗುವಿನ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಅಲಿನ್ ಮಗುವಿನ ಮೂತ್ರಪಿಂಡ, ಯಕೃತ್ತು ಮತ್ತು ಹೃದಯ ಕವಾಟಗಳು ನಾಲ್ವರಿಗೆ ಹೊಸ ಜೀವನವನ್ನು ಕೊಡಲಿವೆ . ರಾಜ್ಯದ ಇತಿಹಾಸದಲ್ಲಿ ಅತ್ಯಂತ ಕಿರಿಯ ಅಂಗಾಂಗ ದಾನಿ ಅಲಿನ್ ಶೆರಿನ್ ಮಗುವಾಗಿದೆ. ಕೇರಳದ ಕೊಚ್ಚಿಯಲ್ಲಿ ಈ ಘಟನೆ ನಡೆದಿದೆ.

ಕೇರಳದಲ್ಲಿ ಹೃದಯವಿದ್ರಾವಕ ಘಟನೆ
ಕೇರಳದ ಪತ್ತನಂತಿಟ್ಟದ ಹತ್ತು ತಿಂಗಳ ಮಗು ಅಲಿನ್ ಶೆರಿನ್ ಅಬ್ರಹಾಂ ರಾಜ್ಯದ ಅತ್ಯಂತ ಕಿರಿಯ ಅಂಗಾಂಗ ದಾನಿ ಮಗುವಾಗಿದೆ. ಕೊಚ್ಚಿಯ ಅಮೃತ ಆಸ್ಪತ್ರೆಯಿಂದ ಅಂಗಾಂಗಗಳನ್ನು ರಸ್ತೆ ಮೂಲಕ ತಿರುವನಂತಪುರಕ್ಕೆ ಸಾಗಿಸಲಾಗುತ್ತಿದೆ. ಪೊಲೀಸರು ಸಹ ಈ ವಾಹನಕ್ಕೆ ಬೆಂಗಾವಲು ನೀಡುತ್ತಿದ್ದಾರೆ. ಆಂಬ್ಯುಲೆನ್ಸ್ (KL07 DF 3177) ಸಂಜೆ 7.15ರ ಸುಮಾರಿಗೆ ಕೇರಳ ರಾಜಧಾನಿಗೆ ತಲುಪಿದೆ.
ಮಗುವಿನ ಅಂಗಾಂಗಳನ್ನು ಕುನ್ನುಂಪುರಂ, ಎಡಪ್ಪಳ್ಳಿ, ವೈಟ್ಟಿಲ, ಕುಂದನೂರು, ತ್ರಿಪುಣಿತುರ, ಥಲಯೋಲಪರಂಬು, ಕೊಟ್ಟಾಯಂ, ಚೆಂಗನ್ನೂರು, ವೆಂಜರಮೂಡು ಹಾಗೂ ಕಜಕೂಟಂ ಮೂಲಕ ಸಾಗಿಸಲಾಗಿದೆ. ಆಂಬ್ಯುಲೆನ್ಸ್ ಸುಗಮ ಸಂಚಾರಕ್ಕಾಗಿ ಪೊಲೀಸರು ಈ ಮಾರ್ಗಗಳಲ್ಲಿ ಸಂಚಾರ ನಿರ್ಬಂಧಗಳನ್ನು ವಿಧಿಸಲಿದ್ದಾರೆ.
ಅಂಗಗಳನ್ನು ಕೊಚ್ಚಿಯಿಂದ ತಿರುವನಂತಪುರಂಗೆ ವಿಶೇಷವಾಗಿ ವ್ಯವಸ್ಥೆಗೊಳಿಸಲಾದ 'ಗ್ರೀನ್ ಕಾರಿಡಾರ್' ರಸ್ತೆ ಮೂಲಕ ಸಾಗಿಸಲಾಗಿದೆ. ಅಂಗಾಂಗ ದಾನ ಪ್ರಕ್ರಿಯೆಯನ್ನು ಸರ್ಕಾರಿ ಸಂಸ್ಥೆ ಕೆ-ಸೊಟ್ಟೊ (ಕೇರಳ ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ) ಮೂಲಕ ಮಗುವಿನ ತಂದೆಯ ಒಪ್ಪಿಗೆಯೊಂದಿಗೆ ನಡೆಸಲಾಗಿದೆ.
ಯೋಜನೆಯ ಪ್ರಕಾರ, ಹೃದಯ ಕವಾಟಗಳನ್ನು ಚಿತ್ರ ತಿರುನಾಳ್ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗೆ, ಯಕೃತ್ತನ್ನು ಕಿಮ್ಸ್ ಆಸ್ಪತ್ರೆಗೆ ಮತ್ತು ಮೂತ್ರಪಿಂಡಗಳನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗುತ್ತದೆ. ಹೆಚ್ಚುವರಿಯಾಗಿ, ಮಗುವಿನ ಕಣ್ಣುಗಳನ್ನು ನೇತ್ರ ಬ್ಯಾಂಕ್‌ಗೆ ದಾನ ಮಾಡಲಾಗುತ್ತದೆ ಎಂದು ವರದಿಯಾಗಿದೆ.
ಘಟನೆಯ ಹಿನ್ನೆಲೆ ಏನು
ಫೆಬ್ರವರಿ 5 ರಂದು ಕೊಟ್ಟಾಯಂನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹೆಣ್ಣು ಮಗುವಿಗೆ ಬ್ರೈನ್‌ಡೆಡ್ ಆಗಿದೆ ಎಂದು ವೈದ್ಯರು ತಿಳಿಸಿದ್ದರು. ಇಲ್ಲಿನ ಎಂಸಿ ರಸ್ತೆಯ ಪಲ್ಲಂ ಬೊರ್ಮಾ ಜಂಕ್ಷನ್ ಬಳಿ ಮಧ್ಯಾಹ್ನ 2.30ರ ಸುಮಾರಿಗೆ ತಾಯಿ ಮತ್ತು ಅಜ್ಜ-ಅಜ್ಜಿಯೊಂದಿಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿತ್ತು. ಕುಟುಂಬವು ಪ್ರಯಾಣಿಸುತ್ತಿದ್ದ ಕಾರು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದ್ದರಿಂದ ಅಪಘಾತ ಸಂಭವಿಸಿತ್ತು.
ತೀವ್ರ ಗಾಯಗೊಂಡಿದ್ದ ಮಗುವನ್ನು ಮೊದಲು ಚಂಗನಶ್ಶೇರಿ ಮತ್ತು ತಿರುವಲ್ಲಾ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು. ನಂತರ, ಫೆಬ್ರವರಿ 6ರ ರಾತ್ರಿ ತಜ್ಞ ವೈದ್ಯಕೀಯ ಆರೈಕೆಗಾಗಿ ಕೊಚ್ಚಿಯ ಅಮೃತ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ವೈದ್ಯರ ತೀವ್ರ ಪ್ರಯತ್ನಗಳ ಹೊರತಾಗಿಯೂ, ಪುಟ್ಟ ಮಗುವನ್ನು ಉಳಿಸಲು ಸಾಧ್ಯವಾಗಿಲ್ಲ.
ಕೇರಳ ಆರೋಗ್ಯ ಸಚಿವೆ ಕೃತಜ್ಞತೆ
ನೋವಿನ ಸಮಯದಲ್ಲೂ ಇತರರ ಜೀವಗಳನ್ನು ಉಳಿಸಲು ತಮ್ಮ ಮಗುವಿನ ಅಂಗಗಳನ್ನು ದಾನ ಮಾಡಿದ್ದಕ್ಕಾಗಿ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಗುವಿನ ಪೋಷಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಕುಟುಂಬದ ದುಃಖದಲ್ಲಿ ತಾವು ಭಾಗಿ ಎಂದು ಹೇಳಿದ್ದಾರೆ.












Click it and Unblock the Notifications