ಉತ್ತರ ಪ್ರದೇಶ: 2 ವರ್ಷಗಳ ನಂತರ ಕೇರಳ ಪತ್ರಕರ್ತ ಸಿದ್ದಿಕ್ ಕಪ್ಪನ್‌ಗೆ ಜಾಮೀನು
ಲಕ್ನೋ, ಡಿಸೆಂಬರ್ 23: ಎರಡು ವರ್ಷಗಳ ಹಿಂದೆ ದಲಿತ ಯುವತಿಯ ಮೇಲಿನ ಅತ್ಯಾಚಾರ ಮತ್ತು ಹತ್ಯೆಯ ವರದಿ ಮಾಡಲು ಯುಪಿಯ ಹತ್ರಾಸ್‌ಗೆ ತೆರಳುತ್ತಿದ್ದಾಗ ಭಯೋತ್ಪಾದನೆ ಆರೋಪದ ಮೇಲೆ ಬಂಧಿತರಾಗಿದ್ದ ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್‌ಗೆ ಇಂದು ಹೈಕೋರ್ಟ್‌ನಿಂದ ಜಾಮೀನು ಸಿಕ್ಕಿದೆ.
ಅವರು ಈಗಾಗಲೇ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ನಿಂದ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಮತ್ತು ಇತರ ಸಂಬಂಧಿತ ಕಾನೂನುಗಳ ಅಡಿಯಲ್ಲಿ ದಾಖಲಾದ ಭಯೋತ್ಪಾದನಾ ಪ್ರಕರಣದಲ್ಲಿ ಜಾಮೀನು ಪಡೆದಿದ್ದರು. ಆದರೆ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇದುವರೆಗೆ ಯಾವುದೇ ಪರಿಹಾರ ಸಿಗದ ಕಾರಣ ಲಕ್ನೋ ಜೈಲಿನಲ್ಲಿಯೇ ಇದ್ದರು. ಇದು ಜಾರಿ ನಿರ್ದೇಶನಾಲಯ ದಾಖಲಿಸಿದ ಪ್ರಕರಣವಾಗಿದೆ.
ಈ ತಿಂಗಳ ಆರಂಭದಲ್ಲಿ, ಲಕ್ನೋ ನ್ಯಾಯಾಲಯವು ಕಪ್ಪನ್ ಮತ್ತು ಇತರ ಆರು ಜನರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು. ಕೆ.ಎ.ರವೂಫ್ ಶೆರೀಫ್, ಅತಿಕುರ್ ರೆಹಮಾನ್, ಮಸೂದ್ ಅಹ್ಮದ್, ಮೊಹಮ್ಮದ್ ಆಲಂ, ಅಬ್ದುಲ್ ರಜಾಕ್ ಮತ್ತು ಅಶ್ರಫ್ ಖಾದಿರ್ ಇತರ ಆರೋಪಿಗಳು.

ಈ ವ್ಯಕ್ತಿಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ ವಿದ್ಯಾರ್ಥಿ ವಿಭಾಗವಾದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಸದಸ್ಯರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಅವರು ಭಯೋತ್ಪಾದಕ ಕೃತ್ಯಗಳು ಅಥವಾ ಹಣಕಾಸಿ ಯಾವುದೇ ಅವ್ಯವಹಾರವನ್ನು ನಿರಾಕರಿಸಿದ್ದಾರೆ. ಪತ್ರಿಕೋದ್ಯಮದ ಕೆಲಸಕ್ಕಾಗಿ ಮಾತ್ರ ಹತ್ರಾಸ್‌ಗೆ ಪ್ರಯಾಣಿಸುತ್ತಿದ್ದರು ಎಂದು ವಾದಿಸಿದ್ದಾರೆ.
ಕಪ್ಪನ್ ಮತ್ತು ಮೂವರು ಸಹ-ಆರೋಪಿಗಳಾದ ಅತಿಕುರ್ ರೆಹಮಾನ್, ಮೊಹಮ್ಮದ್ ಆಲಂ ಮತ್ತು ಮಸೂದ್ ಅಹ್ಮದ್ ಅವರನ್ನು ಮಥುರಾದಲ್ಲಿ ಯುಪಿ ಪೊಲೀಸರು ಬಂಧಿಸಿದ್ದರು.
ಸೆಪ್ಟೆಂಬರ್‌ನಲ್ಲಿ, ಕಪ್ಪನ್‌ಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್ ಆದೇಶವನ್ನು ವಿರೋಧ ಪಕ್ಷಗಳು ಮತ್ತು ಪತ್ರಕರ್ತರ ಸಂಘಗಳು ಸ್ವಾಗತಿಸಿದ್ದವು.
ಮುಸ್ಲಿಂ ಎಂಬ ಕಾರಣಕ್ಕಾಗಿ ಕಪ್ಪನ್ ಅವರನ್ನು 'ಸಾಫ್ಟ್ ಟಾರ್ಗೆಟ್' ಎಂದು ಯುಪಿಯ ಬಿಜೆಪಿ ಸರ್ಕಾರವು ಪರಿಗಣಿಸಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
2020ರ ಸೆಪ್ಟೆಂಬರ್ 14 ರಂದು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ದಲಿತ ಯುವತಿಯೊಬ್ಬರು ತೀರಿಹೋಗಿದ್ದರು. ಇದು ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಪ್ರಕರಣದ ವರದಿಗಾಗಿ ಕಪ್ಪಣ್ ತೆರಳಿದ್ದರು ಎಂದು ಹೇಳಲಾಗುತ್ತಿದೆ.












Click it and Unblock the Notifications