ದೇವೇಗೌಡರು ಸುಳ್ಳು ಹೇಳುತ್ತಿದ್ದಾರೆ ಎಂದ ಕೇರಳ ಸಿಎಂ ಪಿಣರಾಯಿ ವಿಜಯನ್
ತಿರುವನಂತಪುರಂ, ಅಕ್ಟೋಬರ್ 20: ಕರ್ನಾಟಕದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸಂಪೂರ್ಣ ಒಪ್ಪಿಗೆಯನ್ನು ಪಡೆಯಲಾಗಿದೆ ಎಂದು ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡರ ಹೇಳಿಕೆ ರಾಜ್ಯದಲ್ಲಿ ದೊಡ್ಡ ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ ಎಂದು ನ್ಯೂಸ್ 9 ವರದಿ ಮಾಡಿದೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದ ದೇವೇಗೌಡರು, ಎನ್‌ಡಿಎ ಮೈತ್ರಿಕೂಟಕ್ಕೆ ಕೇರಳದ ರಾಜ್ಯ ಘಟಕ ಸಮ್ಮತಿ ನೀಡಿದೆ. ಎಲ್‌ಡಿಎಫ್ ಸಚಿವ ಸಂಪುಟದಲ್ಲಿರುವ ಜೆಡಿಎಸ್ ಮುಖಂಡ ಕೆ.ಕೃಷ್ಣನ್‌ಕುಟ್ಟಿ ಕೂಡ ಮೈತ್ರಿಗೆ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದ್ದರು.

ಈ ಹಿನ್ನೆಲೆಯಲ್ಲಿ ದೇವೇಗೌಡರ ಹೇಳಿಕೆಯನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ತಳ್ಳಿ ಹಾಕಿದ್ದಾರೆ. ದೇವೇಗೌಡರ ಹೇಳಿಕೆ ನಿರಾಧಾರ ಮತ್ತು ಸತ್ಯವಲ್ಲ. ಅವರು ತಮ್ಮ ಪಕ್ಷಾಂತರವನ್ನು ಸಮರ್ಥಿಸಿಕೊಳ್ಳಲು ಸುಳ್ಳು ಹೇಳುತ್ತಿದ್ದಾರೆ ಎಂದು ವಿಜಯನ್ ಹೇಳಿದ್ದಾರೆ.
ದೇವೇಗೌಡರ ಹೇಳಿಕೆಗೆ ಕೇರಳದ ವಿರೋಧ ಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ದೇವೇಗೌಡರ ಹೇಳಿಕೆಯು ಬಿಜೆಪಿ ಮತ್ತು ಸಿಪಿಐ(ಎಂ) ನಡುವಿನ ರಹಸ್ಯ ಸಂಬಂಧವನ್ನು ಹೊರತಂದಿದೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ. ಆದರೆ ರಾಜ್ಯದ ಹಿರಿಯ ಜೆಡಿಎಸ್ ನಾಯಕರಾದ ಕೃಷ್ಣನ್‌ಕುಟ್ಟಿ ಮತ್ತು ಮ್ಯಾಥ್ಯೂ ಟಿ ಥಾಮಸ್ ಈ ಹೇಳಿಕೆಯನ್ನು ಸಾರಾಸಗಟಾಗಿ ನಿರಾಕರಿಸಿದ್ದಾರೆ.
ಕೇರಳ ಸಿಎಂ ಪಿಣರಾಯಿ ವಿಜಯನ್ ವಿರುದ್ಧ ಹೇಳಿಕೆಗಳು ರಾಜ್ಯದಲ್ಲಿ ತಪ್ಪು ತಿಳುವಳಿಕೆಯನ್ನು ಉಂಟುಮಾಡುತ್ತವೆ. ದೇವೇಗೌಡ ಮತ್ತು ಕೇರಳ ಸಿಎಂ ನಡುವೆ ಯಾವುದೇ ಸಭೆ ನಡೆದಿಲ್ಲ. ಅವರ ಹೇಳಿಕೆ ತಪ್ಪಾಗಿರಬಹುದು ಅಥವಾ ಅವರ ವಯಸ್ಸಿನ ಸಮಸ್ಯೆಗಳ ಕಾರಣದಿಂದಾಗಿರಬಹುದು. ಇಬ್ಬರೂ ಸಂವಹನ ನಡೆಸಿ ವರ್ಷಗಳೇ ಕಳೆದಿವೆ ಎಂದು ಮ್ಯಾಥ್ಯೂ ಟಿ ಥಾಮಸ್ ಹೇಳಿದ್ದಾರೆ.
ಎನ್‌ಡಿಎ ಮೈತ್ರಿಕೂಟವನ್ನು ಜೆಡಿಎಸ್‌ನ ರಾಜ್ಯ ಘಟಕವು ಒಪ್ಪುವುದಿಲ್ಲ. ಈ ಬಗ್ಗೆ ದೇವೇಗೌಡರಿಗೆ ತಿಳಿಸಲಾಗಿದೆ. ದೇವೇಗೌಡರು ಮತ್ತು ವಿಜಯನ್ ಅವರ ನಡುವೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಮುಖಂಡ ಕೆ.ಮುರಳೀಧರನ್, ಕೇರಳದಲ್ಲಿ ಸಿಪಿಐ(ಎಂ) ಬಿಜೆಪಿಯ ಬಿ ಟೀಂ ಆಗಿ ಕೆಲಸ ಮಾಡುತ್ತಿದೆ. ಎನ್‌ಡಿಎ ಮೈತ್ರಿ ಮಾಡಿಕೊಂಡ ಕೂಡಲೇ ಎಲ್‌ಡಿಎಫ್ ಸರ್ಕಾರ ಕೃಷ್ಣನ್‌ಕುಟ್ಟಿ ಅವರನ್ನು ಸಂಪುಟದಿಂದ ಹೊರಹಾಕಬೇಕಿತ್ತು. ಇದು ಬಿಜೆಪಿಗೆ ನೀಡಿದ ಪರೋಕ್ಷ ಬೆಂಬಲವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ದೇವೇಗೌಡರ ಹೇಳಿಕೆಯಿಂದ ಬಿಜೆಪಿ ಮತ್ತು ಪಿಣರಾಯಿ ವಿಜಯನ್ ನಡುವಿನ ನಂಟು ಬಯಲಾಗಿದೆ. ಕೃಷ್ಣನಕುಟ್ಟಿ ಅವರನ್ನು ಸಂಪುಟದಲ್ಲಿ ಮುಂದುವರಿಸಿರುವುದು ಗೌಡರ ಹೇಳಿಕೆಗೆ ಸಾಕ್ಷಿ ಎಂದು ಕಾಂಗ್ರೆಸ್ ಮುಖಂಡ ರಮೇಶ್ ಚೆನ್ನಿತ್ತಲ ಹೇಳಿದ್ದಾರೆ.












Click it and Unblock the Notifications