ಕೇಂದ್ರಿಯ ವಿದ್ಯಾಲಯಗಳಲ್ಲಿ ಸಂಸದರ ಕೋಟಾ: ಮಹತ್ವದ ಅಪ್‌ಡೇಟ್
ನವದೆಹಲಿ, ಮಾರ್ಚ್ 11: ಕೇಂದ್ರ ಸರ್ಕಾರ ಕೇಂದ್ರಿಯ ವಿದ್ಯಾಲಯದ ಪ್ರವೇಶಾತಿಯಲ್ಲಿ ಸಂಸದರ ಕೋಟಾ ಕುರಿತು ಮಹತ್ವದ ಅಪ್‌ಡೇಟ್ ನೀಡಿದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ರಕ್ಷಣಾ ಮತ್ತು ಪ್ಯಾರಾ-ಮಿಲಿಟರಿ ಸಿಬ್ಬಂದಿ ಸೇರಿದಂತೆ ವರ್ಗಾವಣೆಯಾಗಬಹುದಾದ ಕೇಂದ್ರ ಸರ್ಕಾರಿ ನೌಕರರ ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಲು ಕೇಂದ್ರಿಯ ವಿದ್ಯಾಲಯ ಸ್ಥಾಪನೆ ಮಾಡಲಾಗಿದ್ದು, ಸಾಮಾನ್ಯ ಜನರ ಮಕ್ಕಳಿಗೂ ಸಹ ಇಲ್ಲಿ ಸೀಮಿತ ಸೀಟುಗಳನ್ನು ನೀಡಲಾಗುತ್ತದೆ.
ಲೋಕಸಭೆ ಕಲಾಪದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೇಂದ್ರಿಯ ವಿದ್ಯಾಲಯದಲ್ಲಿ ಸಂಸದರ ಕೋಟಾದ ಬಗ್ಗೆ ಲಿಖಿತ ಉತ್ತರ ನೀಡಿದ್ದಾರೆ. ಕೇಂದ್ರಿಯ ವಿದ್ಯಾಲಯದ ಪ್ರವೇಶಾತಿಯಲ್ಲಿ ಸಂಸದರ ಕೋಟಾವನ್ನು ಮರು ಜಾರಿಗೊಳಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

2022ರಲ್ಲಿ ರದ್ದು: ಸಚಿವರು ತಮ್ಮ ಉತ್ತರದಲ್ಲಿ, "2022ರಲ್ಲಿ ಸಂಸದರ ಕೋಟಾವನ್ನು ರದ್ದುಗೊಳಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ-2020ರ ದೂರದೃಷ್ಟಿಯಂತೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಅನುಪಾತ (ಪಿಟಿಆರ್) ಮತ್ತು ಕಲಿಕೆಯ ಗುಣಮಟ್ಟ ಕಾಪಾಡಲು ಕೇಂದ್ರ ಸರ್ಕಾರ ಸಂಸದರ ಕೋಟಾವನ್ನು ರದ್ದುಗೊಳಿಸಿದೆ" ಎಂದು ಹೇಳಿದ್ದಾರೆ.
ಈ ಹಿಂದಿನ ನಿಯಮದಂತೆ ಕೇಂದ್ರಿಯ ವಿದ್ಯಾಲಯದಲ್ಲಿ ಲೋಕಸಭೆ ಸದಸ್ಯರ ಕೋಟಾದಡಿ ಪ್ರವೇಶ ಅವಕಾಶ ಇತ್ತು. ಸಂಸದರು 10 ಮಕ್ಕಳ ಪ್ರವೇಶಕ್ಕೆ ಶಿಫಾರಸು ಮಾಡುವ ವಿವೇಚನಾಧಿಕಾರ ಹೊಂದಿದ್ದರು. ಜಿಲ್ಲಾಧಿಕಾರಿಗಳು 17 ವಿದ್ಯಾರ್ಥಿಗಳ ಪ್ರವೇಶಕ್ಕೆ ಶಿಫಾರಸು ಮಾಡಬಹುದಿತ್ತು.
ಲೋಕಸಭೆಯ 543 ಸದಸ್ಯರು, ರಾಜ್ಯಸಭೆಯ 245 ಸದಸ್ಯರು ಸೇರಿ ವರ್ಷಕ್ಕೆ 7,800 ಮಕ್ಕಳ ಪ್ರವೇಶಕ್ಕೆ ಈ ಕೋಟಾದಡಿ ಶಿಫಾರಸು ಮಾಡಬಹುದಿತ್ತು. ಇದು ಮಂಜೂರಾದ ಸೀಟುಗಳ ಸಂಖ್ಯೆಯಲ್ಲಿ ಹೆಚ್ಚಾಗುವ ಕಾರಣ, ಮಕ್ಕಳ ಕಲಿಕೆ ಮೇಲೆ ಪರಿಣಾಮ ಬೀರುವ ಕಾರಣ 2022ರಲ್ಲಿ ಸಂಸದರ ಕೋಟಾವನ್ನು ರದ್ದುಗೊಳಿಸಲಾಗಿತ್ತು.
2024ರ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ದೇಶಾದ್ಯಂತ ಹೊಸದಾಗಿ 85 ನೂತನ ಕೇಂದ್ರಿಯ ವಿದ್ಯಾಲಯ ಸ್ಥಾಪನೆ ಮಾಡಲು ಅನುಮೋದನೆ ನೀಡಲಾಗಿತ್ತು. ಈ ತೀರ್ಮಾನದ ಮೂಲಕ ಎಲ್ಲಾ ವರ್ಗದ ಮಕ್ಕಳಿಗೂ ಶಾಲಾ ಶಿಕ್ಷಣ ನೀಡಲು ಸರ್ಕಾರ ಮತ್ತೊಂದು ಮಹತ್ವದ ತೀರ್ಮಾನ ಕೈಗೊಂಡಿದೆ ಎಂದು ನರೇಂದ್ರ ಮೋದಿ ಹೇಳಿದ್ದರು.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ನರೇಂದ್ರ ಮೋದಿ, "ಶಾಲಾ ಶಿಕ್ಷಣದ ವಿಚಾರದಲ್ಲಿ ನಮ್ಮ ಸರ್ಕಾರವು ಮತ್ತೊಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ. ಇದರಡಿ ದೇಶದಲ್ಲಿ ಹೊಸದಾಗಿ 85 ಕೇಂದ್ರಿಯ ವಿದ್ಯಾಲಯಗಳನ್ನು ತೆರೆಯಲಾಗುತ್ತದೆ. ಇದರಿಂದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುತ್ತದೆ. ಜೊತೆಗೆ ಹೊಸ ಉದ್ಯೋಗವಕಾಶ ನಿರ್ಮಾಣವಾಗುತ್ತದೆ" ಎಂದು ತಿಳಿಸಿದ್ದರು.
85 ನೂತನ ಕೇಂದ್ರಿಯ ವಿದ್ಯಾಲಯ ಮತ್ತು 28 ನವೋದಯ ವಿದ್ಯಾಲಯಗಳನ್ನು ತೆರೆಯಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು. ಇದರಿಂದಾಗಿ 82,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಲು ಅವಕಾಶ ಸಿಗಲಿದೆ.












Click it and Unblock the Notifications