lawrence bishnoi: ಲಾರೆನ್ಸ್ ಬಿಷ್ಣೋಯ್ ಕಥೆ ಮುಗಿಸಿದ್ರೆ ಲಕ್ಕಿ ನಂಬರ್ 1,11,11,111 ರೂ. ಆಫರ್!
ಜೈಲಿನಲ್ಲಿದ್ದರೂ ದೇಶದಲ್ಲಿ ಭಯ ಸೃಷ್ಟಿಸಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಕಥೆ ಮುಗಿಸಲು ದೊಡ್ಡ ಆಫರ್ ಘೋಷಣೆಯಾಗಿದೆ. ಬಿಷ್ಣೋಯ್ ಅವರನ್ನು ಎನ್‌ಕೌಂಟರ್ ಮಾಡಿದವರಿಗೆ ಬರೋಬ್ಬರಿ 1,11,11,111 ರೂಪಾಯಿ ನೀಡುವುದಾಗಿ ಕ್ಷತ್ರಿಯ ಕರ್ಣಿ ಸೇನೆ ಹೇಳಿದೆ.
ಈ ಸಂಬಂಧ ವಿಡಿಯೋವೊಂದನ್ನು ರಿಲೀಸ್ ಮಾಡಲಾಗಿದೆ. ಆದರೆ, ಈ ಆಫರ್ ನೀಡಿರುವುದು ಪೊಲೀಸರಿಗೆ ಎನ್ನಲಾಗಿದೆ. ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರನ್ನು ಯಾವ ಅಧಿಕಾರಿಯಾದರೂ ಎನ್‌ಕೌಂಟರ್ ಮಾಡಿದರೆ, ಅವರಿಗೆ ಒಂದು ಕೋಟಿಗೂ ಮೀರಿದ ನಗದು ಬಹುಮಾನ ಕೊಡುವುದಾಗಿ ಕ್ಷತ್ರಿಯ ಕರ್ಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷ ರಾಜ್ ಶೇಖಾವತ್ ಹೇಳಿದ್ದಾರೆ.

ಆದರೆ, ಒಂದು ಕೋಟಿ ಹನ್ನೊಂದು ಲಕ್ಷದ ಹನ್ನೊಂದು ಸಾವಿರದ ನೂರ ಹನ್ನೊಂದು ರೂಪಾಯಿ ಎನ್ನುವ ಲಕ್ಕಿ ನಂಬರ್ ಮಾದರಿಯ ನಗದು ಬಹುಮಾನ ಘೋಷಿಸಿರುವುದು ಗಮನ ಸೆಳೆದಿದೆ. ಇನ್ನು ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಡೆದ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆಯನ್ನೂ ನಾವೇ ಮಾಡಿದ್ದು ಎಂದು ಬಿಷ್ಣೋಯ್ ಗ್ಯಾಂಗ್ ಹೇಳಿಕೊಂಡಿತ್ತು. ಕರ್ಣಿ ಸೇನಾ ಮುಖ್ಯಸ್ಥ ಸುಖದೇವ್ ಸಿಂಗ್ ಅವರ ಹತ್ಯೆಯಲ್ಲೂ ಇದೇ ಗ್ಯಾಂಗ್‌ನ ಹೆಸರು ಕೇಳಿಬಂದಿತ್ತು.
ಲಾರೆನ್ಸ್ ಬಿಷ್ಣೋಯ್ ಗುಜರಾತ್‌ನ ಸಬರಮತಿ ಜೈಲಿನಲ್ಲಿದ್ದಾರೆ. ಸದ್ಯ ಲಾರೆನ್ಸ್ ಬಿಷ್ಣೋಯ್ ಅವರನ್ನು ಕಾಯಲು ನಿಯೋಜಿಸಲಾದ ಭದ್ರತಾ ಸಿಬ್ಬಂದಿಯಿಂದ ಎನ್‌ಕೌಂಟರ್ ಪಕ್ಕಾ ಮಾಡಿದರೆ ಈ ಭಾರಿ ಮೊತ್ತ ನೀಡಲಾಗುವುದು ಎಂದು ರಾಜ್ ಶೇಖಾವತ್ ಹೇಳಿದ್ದಾರೆ.
ಈ ಬಗ್ಗೆ ಕ್ಷತ್ರಿಯ ಕರ್ಣಿ ಸೇನಾ ಮುಖ್ಯಸ್ಥ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ. ನಮ್ಮ ಅಮೂಲ್ಯ ರತ್ನದಂತಿದ್ದ ಸುಖದೇವ್ ಸಿಂಗ್ ಗೊಗಮೆಡಿ ಅವರನ್ನು ಹತ್ಯೆ ಮಾಡಿದ್ದಾಗಿ ಲಾರೆನ್ಸ್ ಬಿಷ್ಣೋಯ್ ಹೇಳಿದ್ದಾನೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಸುಖದೇವ್ ಸಿಂಗ್ ಅವರ ಮೇಲೆ ಕೆಲ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದರು. ಈ ಘಟನೆ ನಂತರ ಈ ಹತ್ಯೆಯನ್ನು ನಾವೇ ಮಾಡಿದ್ದಾಗಿ ಲಾರೆನ್ಸ್ ಗ್ಯಾಂಗ್ ಹೇಳಿಕೊಂಡಿತ್ತು.

ಮುಂಬೈನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ನಿವಾಸದ ಬಳಿಯೂ ಗುಂಡಿನ ದಾಳಿ ನಡೆದಿತ್ತು. ಈ ವೇಳೆಯೂ ಲಾರೆನ್ಸ್ ಗ್ಯಾಂಗ್‌ನ ಹೆಸರು ಜೋರಾಗಿ ಕೇಳಿಬಂದಿತ್ತು. ಈಗಲೂ ಸಹ ಹಳೆ ವೈಷಮ್ಯದ ಹಿನ್ನೆಲೆ ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡುವುದಾಗಿ ಈ ಗ್ಯಾಂಗ್ ಹೇಳುತ್ತಲೇ ಇದೆ. ಇದಕ್ಕಾಗಿ ಸಲ್ಮಾನ್ ಖಾನ್ ಅವರಿಗೆ ಸೆಕ್ಯುರಿಟಿ ಕೂಡ ಹೆಚ್ಚಿಸಲಾಗಿದೆ.
ಇತ್ತೀಚೆಗೆ ಮುಂಬೈನಲ್ಲಿ ಗುಂಡಿನ ದಾಳಿಗೆ ಬಲಿಯಾದ ಎನ್‌ಸಿಪಿ ನಾಯಕ ಕೂಡ ಸಲ್ಮಾನ್ ಖಾನ್ ಅವರ ಆಪ್ತರಾಗಿದ್ದರು. ಈ ಘಟನೆ ಬಳಿಕ ನಮ್ಮ ಟಾರ್ಗೆಟ್ ಸಲ್ಮಾನ್ ಖಾನ್ ಎಂದು ಈ ಗ್ಯಾಂಗ್ ಹೇಳಿಕೊಂಡಿದೆ. ಸದ್ಯ ಹಲವು ಹತ್ಯೆಗಳ ಹೊಣೆಯನ್ನು ಇದೇ ಗ್ಯಾಂಗ್ ಹೊತ್ತಿಕೊಂಡಿದ್ದು, ಇದರಲ್ಲಿ ಪ್ರಮುಖ ಗಣ್ಯರ ಹೆಸರೇ ಇವೆ. ಲಾರೆನ್ಸ್ ಬಿಷ್ಣೋಯ್ ಅವರನ್ನು ಎನ್‌ಕೌಂಟರ್ ಮಾಡಲು ಓಪನ್ ಆಫರ್ ನೀಡಿರುವ ಬಗ್ಗೆ ದೇಶದೆಲ್ಲೆಡೆ ಚರ್ಚೆಗಳು ನಡೆಯುತ್ತಿವೆ. ಘೋಷಿಸಿರುವ ಬಹುಮಾನದ ಮೊತ್ತವೂ ಗಮನ ಸೆಳೆದಿದೆ.












Click it and Unblock the Notifications