ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ; ಪಕ್ಷ ಆಡಳಿತದಲ್ಲಿರುವ ರಾಜ್ಯಗಳು
ಬೆಂಗಳೂರು, ಮೇ 15; ಕರ್ನಾಟಕ ವಿಧಾನಸಭೆ ಚುನಾವಣೆ 2023ರಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿದೆ. 224 ಸದಸ್ಯ ಬಲದ ವಿಧಾನಸಭೆಯಲ್ಲಿ ಪಕ್ಷ 135 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಬಹುಮತಕ್ಕಿಂತ (113) ಹೆಚ್ಚಿನ ಸ್ಥಾನದಲ್ಲಿ ಜಯಗಳಿಸಿದೆ. ದಕ್ಷಿಣ ಭಾರತದಲ್ಲಿ ಪೂರ್ಣ ಬಹುಮತದೊಂದಿಗೆ ಪಕ್ಷ ಸರ್ಕಾರವನ್ನು ರಚನೆ ಮಾಡಲಿದೆ.
ಕಾಂಗ್ರೆಸ್ ಮುಳುಗುವ ಹಡಗು ಎಂದು ಟೀಕೆ ಮಾಡುತ್ತಿದ್ದವರಿಗೆ ಪಕ್ಷ ದಿಟ್ಟ ಉತ್ತರ ನೀಡಿದೆ. ದಕ್ಷಿಣ ಭಾರತದಲ್ಲಿ ಅಧಿಕಾರದಲ್ಲಿದ್ದ ಒಂದು ರಾಜ್ಯದಲ್ಲಿಯೂ ಬಿಜೆಪಿ ಹೀನಾಯ ಸೋಲು ಅನುಭವಿಸಿದೆ. ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರಮಟ್ಟದಲ್ಲಿ ತೀರಾ ಅತ್ಯಗತ್ಯವಾಗಿದ್ದ ಗೆಲುವು ಇದಾಗಿತ್ತು.

ಕರ್ನಾಟಕದ ಗೆಲುವಿನ ಬಳಿಕ ಕಾಂಗ್ರೆಸ್ ಪಕ್ಷ ದೇಶದ 7 ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಇವುಗಳಲ್ಲಿ 4 ರಾಜ್ಯಗಳಲ್ಲಿ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚನೆ ಮಾಡಿದೆ. ಉಳಿದ ಮೂರು ರಾಜ್ಯದಲ್ಲಿ ಆಡಳಿತಾರೂಢ ಸರ್ಕಾರದ ಭಾಗವಾಗಿದೆ. ಈ ವರ್ಷ ಛತ್ತೀಸ್‌ಗಢ, ಮಧ್ಯ ಪ್ರದೇಶ, ಮಿಜೋರಾಂ, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯದ ಚುನಾವಣೆ ಇದೆ. ಈ 5 ರಾಜ್ಯಗಳ ಪೈಕಿ ರಾಜಸ್ಥಾನ ಮತ್ತು ಛತ್ತೀಸ್‌ಢದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ.
ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳು; 2022ರಲ್ಲಿ ನಡೆದ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಿದೆ. 68 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 45 ಕ್ಷೇತ್ರಗಳಲ್ಲಿ ಗೆದ್ದು ಸರ್ಕಾರ ರಚನೆ ಮಾಡಿದೆ. ರಾಜ್ಯದಲ್ಲಿ 2027ರಲ್ಲಿ ಮತ್ತೆ ವಿಧಾನಸಭೆ ಚುನಾವಣೆ ನಡೆಯಲಿದೆ.
ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಆದರೆ ಇದೇ ವರ್ಷ ರಾಜ್ಯ ವಿಧಾನಸಭೆ ಚುನಾವಣೆ ಎದುರಿಸಬೇಕಿದೆ. 2018ರ ಚುನಾವಣೆಯಲ್ಲಿ ರಾಜ್ಯದ 200 ಕ್ಷೇತ್ರಗಳ ಪೈಕಿ 100 ಸೀಟುಗಳಲ್ಲಿ ಗೆಲ್ಲುವ ಮೂಲಕ ಪಕ್ಷ ಬಹುಮತದ ಸರ್ಕಾರ ರಚನೆ ಮಾಡಿದೆ. ಚುನಾವಣೆ ಹೊತ್ತಿನಲ್ಲಿಯೇ ರಾಜ್ಯದ ಕಾಂಗ್ರೆಸ್ ನಾಯಕರ ಅಸಮಾಧಾನಗಳು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಲ್ಲಿದೆ.

ಛತ್ತೀಸ್‌ಗಢ ರಾಜ್ಯದಲ್ಲಿಯೂ ಸ್ಪಷ್ಟ ಬಹುಮತದ ಸರ್ಕಾರವಿದೆ. 2018ರ ಚುನಾವಣೆಯಲ್ಲಿ ಪಕ್ಷ ರಾಜ್ಯದ 90 ಕ್ಷೇತ್ರಗಳ ಪೈಕಿ 68 ಕ್ಷೇತ್ರಗಳಲ್ಲಿ ಜಯಗಳಿಸಿ ಸರ್ಕಾರ ರಚನೆ ಮಾಡಿದೆ. ಈ ವರ್ಷ ರಾಜ್ಯ ಚುನಾವಣೆಯನ್ನು ಎದುರಿಸುತ್ತಿದೆ.
ಮೇ 10ರಂದು ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 135 ಸ್ಥಾನಗಳಲ್ಲಿ ಜಯಗಳಿಸಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 113. ರಾಜ್ಯದ ಆಡಳಿತ ಪಕ್ಷವಾದ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿ ಪಕ್ಷ ಸರ್ಕಾರ ರಚನೆ ಮಾಡುವ ತಯಾರಿಯಲ್ಲಿದೆ.
ಕಾಂಗ್ರೆಸ್‌ನ ಮೈತ್ರಿ ಸರ್ಕಾರಗಳು; ಸಂಪೂರ್ಣ ಬಹುಮತದ 4 ಸರ್ಕಾರಗಳ ಜೊತೆಗೆ 3 ರಾಜ್ಯಗಳಲ್ಲಿ ಆಡಳಿತ ಪಕ್ಷಕ್ಕೆ ಕಾಂಗ್ರೆಸ್ ಬೆಂಬಲ ಸೂಚಿಸಿದೆ. ನಿತಿಶ್ ಕುಮಾರ್ ನೇತೃತ್ವದ ಬಿಹಾರದ ಜೆಡಿಯು ಸರ್ಕಾರಕ್ಕೆ ಕಾಂಗ್ರೆಸ್ ಬೆಂಬಲವಿದೆ. ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದ ನಿತೀಶ್ ಕುಮಾರ್ ರಾಜ್ಯದಲ್ಲಿ ಮತ್ತೆ ಸರ್ಕಾರ ರಚನೆ ಮಾಡಿದರು. ಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಇಬ್ಬರು ಸಚಿವರನ್ನು ಹೊಂದಿದೆ.
2019ರಲ್ಲಿ ಜಾರ್ಖಂಡ್ ವಿಧಾನಸಭೆ ಚುನಾವಣೆ ನಡೆಯಿತು. 81 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 16 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಜೆಎಂಎಂ ಪಕ್ಷದ ಹೇಮಂತ್ ಸೊರೇನ್ ಸರ್ಕಾರಕ್ಕೆ ಕಾಂಗ್ರೆಸ್ ಬೆಂಬಲ ನೀಡಿದೆ. ಸರ್ಕಾರದಲ್ಲಿ ಕಾಂಗ್ರೆಸ್‌ನ 4 ಸಚಿವರಿದ್ದಾರೆ.
133 ಸದಸ್ಯ ಬಲದ ತಮಿಳುನಾಡು ವಿಧಾನಸಭೆಗೆ 2021ರಲ್ಲಿ ಚುನಾವಣೆ ನಡೆಯಿತು. ಎಂ. ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಅಧಿಕಾರಕ್ಕೆ ಬಂದಿದೆ. 18 ಕ್ಷೇತ್ರಗಳಲ್ಲಿ ಜಯಗಳಿಸಿರುವ ಕಾಂಗ್ರೆಸ್ ರಾಜ್ಯದಲ್ಲಿ ಡಿಎಂಕೆ ಮೈತ್ರಿಕೂಟಕ್ಕೆ ಬೆಂಬಲ ನೀಡಿದೆ.












Click it and Unblock the Notifications