ಕರ್ನಾಟಕ ಚುನಾವಣೆ 2023: ಕಾಂಗ್ರೆಸ್‌ಗಿಂತ ಯಡಿಯೂರಪ್ಪ ಅವರನ್ನು ಕೆಣಕದಿರುವುದು ಬಿಜೆಪಿಗೆ ಒಳ್ಳೆಯದು!
ಬೆಂಗಳೂರು, ಡಿ. 20: ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವ ರಾಜ್ಯ ಬಿಜೆಪಿ ಒಳಗೆ ಭಿನ್ನಾಭಿಪ್ರಾಯಗಳಿವೆ ಎಂಬುದು ಆಗೊಮ್ಮೆ ಈಗೊಮ್ಮೆ ಹೊರ ಬರುತ್ತಲೇ ಇದೆ. ಇದಕ್ಕೆ ನಾಯಕರು ತೆಪೆ ಹಚ್ಚುತಲ್ಲೇ ಇದ್ದಾರೆ. ಆದರೆ, ಇಲ್ಲಿ ಗಮನಿಸಬೇಕಾದ ಅಂಶವೆಂದರೆ ರಾಜ್ಯದಲ್ಲಿ ಬಿಜೆಪಿಗೆ ಕಾಂಗ್ರೆಸ್‌ನ ಒಗ್ಗಟ್ಟಿಗಿಂತ ಯಡಿಯೂರಪ್ಪ ಅವರನ್ನು ನಿರ್ಲಕ್ಷಿಸುವುದು ಹೆಚ್ಚು ಅಪಾಯಕಾರಿ ಎಂಬುದು!.
ಹೌದು, ಚುನಾವಣಾ ತಯಾರಿಯಲ್ಲಿರುವ ಬಿಜೆಪಿ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬಲು ಮತ್ತು ಬೆಂಬಲವನ್ನು ಹೆಚ್ಚಿಸಲು ಈಗಾಗಲೇ ರಾಜ್ಯಾದ್ಯಂತ ಜನಸಂಕಲ್ಪ ಯಾತ್ರೆ ನಡೆಸುತ್ತಿದೆ. ಈ ಜನಸಂಕಲ್ಪ ಯಾತ್ರೆಯಲ್ಲಿಯೇ ಬಿಜೆಪಿಯ ಒಳ ಜಗಳಗಳು ಹೊರಬರುತ್ತಿವೆ. ಅದು ಕೊಪ್ಪಳದಲ್ಲಿ ನಡೆದ ಜನಸಂಕಲ್ಪ ಯಾತ್ರೆ ವೇಳೆಯೂ ಹೊರ ಬಂದಿತ್ತು.
ಕೊಪ್ಪಳದಲ್ಲಿ ನಡೆದ ಸಂಕಲ್ಪ ಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಹೆಸರು ಕಾಣೆಯಾಗಿತ್ತು. ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂಬ ಬಗ್ಗೆ ಭಾರೀ ಅಸಮಾಧಾನ ಉಂಟಾಗಿತ್ತು. ಇದು ಲಿಂಗಾಯತ ಪ್ರಬಲ ವ್ಯಕ್ತಿ ಮತ್ತು ಅವರ ಬೆಂಬಲಿಗರನ್ನು ಕೆರಳಿಸಿತ್ತು.

ಬಿಎಸ್‌ವೈ ಮನವೊಲಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ!
ಕೊಪ್ಪಳ ಜನಸಂಕಲ್ಪ ಯಾತ್ರೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಆಹ್ವಾನಿಸಿಲ್ಲ ಎಂಬ ವದಂತಿಗಳು ಹಬ್ಬಿದ್ದವು. ಇದಕ್ಕೆ ಬಿಎಸ್‌ವೈ ಕೂಡ ಬೇಸರ ವ್ಯಕ್ತಪಡಿಸಿದ್ದ ವರದಿಗಳು ಬಂದಿದ್ದವು.
ಕೊನೆ ಗಳಿಗೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಮನವೊಲಿಕೆ ಮಾಡಿದ ಬಳಿಕ ಯಡಿಯೂರಪ್ಪ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ರಾಕ್ಯದ ಲಿಂಗಾಯತ ಸಮುದಾಯದ ಪ್ರಮುಖ ಮುಖಂಡ ಮತ್ತು ರಾಜ್ಯ ಬಿಜೆಪಿಯ ಮುಖವಾಣಿ ಎಂದು ಗುರುತಿಸಿಕೊಂಡಿರುವ ಬಿ.ಎಸ್. ಯಡಿಯೂರಪ್ಪ ಅವರನ್ನು ಪಕ್ಷ ನಿರ್ಲಕ್ಷಿಸುವುದು ಮುಂದಿನ ಚುನಾವಣೆಯಲ್ಲಿ ಭಾರೀ ಸಂಕಷ್ಟಕ್ಕೆ ಕಾರಣವಾಗಬಹುದು.

ಪಕ್ಷದಲ್ಲಿ ಬಿಎಸ್‌ವೈ ಅವರಿಗೆ ಹೆಚ್ಚಿನ ಗೌರವವಿದೆ!
ಈ ವದಂತಿಗಳಿಗೆ ತೆರೆ ಎಳೆಯುವ ಕೆಲಸವಂತೂ ರಾಜ್ಯ ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿ.ಎಸ್ ಯಡಿಯೂರಪ್ಪ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಮುಖಂಡರು ದೃಢವಾಗಿ ಹೇಳಿಕೊಳ್ಳುತ್ತಿದ್ದಾರೆ.
ಬಿಜೆಪಿಯ ಪ್ರಮುಖ ನಾಯಕನನ್ನು ಮೂಲೆಗುಂಪು ಮಾಡಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟ್ರೀಯ ಕೇಂದ್ರ ಸಂಸದೀಯ ಮಂಡಳಿಯ ಸದಸ್ಯರಾಗಿರುವ ಬಿಎಸ್‌ವೈ ಅವರನ್ನು ಪಕ್ಷವು ಘನತೆಯಿಂದ ನಡೆಸಿಕೊಂಡಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ.

ಬಸವರಾಜ ಬೊಮ್ಮಾಯಿಗೆ ಸಿಎಂ ಸ್ಥಾನ ಸಿಗಲು ಬಿಎಸ್‌ವೈ ಕಾರಣ
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವನೆ ವೇಳೆ ಮೂವರ ಹೆಸರು ಕೇಳಿಬರುತ್ತಿರುವಾಗ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಲು ಪಕ್ಷದ ಹೈಕಮಾಂಡ್‌ನಲ್ಲಿ ಮೇಲುಗೈ ಸಾಧಿಸುವಲ್ಲಿ ಯಡಿಯೂರಪ್ಪ ಪ್ರಮುಖ ಪಾತ್ರ ವಹಿಸಿದ್ದರು.
ಇನ್ನು, ನನ್ನನ್ನು ಯಾರೂ ಮುಗಿಸಲು ಅಥವಾ ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಇತ್ತೀಚಿನ ಸಭೆಯೊಂದರಲ್ಲಿ ಯಡಿಯೂರಪ್ಪ ದೃಢವಾಗಿ ಸುಳಿವು ನೀಡಿದ್ದರು. ಇದರ ಬೆನ್ನಲ್ಲೇ ತಂದೆ ಮಗನ ಸಂಬಂಧವನ್ನು ಹೊಂದಿರುವ ಯಡಿಯೂರಪ್ಪ ಅವರೊಂದಿಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಬೊಮ್ಮಾಯಿ ತರಾತುರಿಯಲ್ಲಿ ಸ್ಪಷ್ಟಪಡಿಸಿದ್ದರು.

ಯಡಿಯೂರಪ್ಪರನ್ನು ನಿರ್ಲಕ್ಷಿಸಿದರೇ ಚುನಾವಣೆಯಲ್ಲಿ ಭಾರಿ ಪರಿಣಾಮ!
ಯಡಿಯೂರಪ್ಪ ಅವರನ್ನು ಉತ್ತಮ ಸಂಬಂಧದಲ್ಲಿಟ್ಟುಕೊಂಡು ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಸೆಣಸಾಡುವುದು ಬಿಜೆಪಿ ಮತ್ತು ಪಕ್ಷದ ನಾಯಕರಿಗಿರುವ ಪ್ರಮುಖ ಕೆಲಸವಾಗಿದೆ. ಪ್ರಬಲವಾದ ಲಿಂಗಾಯತರು ಮತ್ತು ಗ್ರಾಮೀಣ ಭಾಗದಲ್ಲಿ ಬಲವಾದ ಬೆಂಬಲದ ನೆಲೆಯನ್ನು ಹೊಂದಿರುವುದರಿಂದ ಕಾಂಗ್ರೆಸ್‌ಗಿಂತ ಯಡಿಯೂರಪ್ಪ ಬಿಜೆಪಿಗೆ ಹೆಚ್ಚು ಅಪಾಯಕಾರಿಯಾಗುತ್ತಾರೆ.
ಏಕೆಂದರೆ ಯಡಿಯೂರಪ್ಪ ಅವರು ಪಕ್ಷದ ಚುನಾವಣಾ ಭವಿಷ್ಯವನ್ನು ಹಾಳುಮಾಡಬಹುದು. ಅದು ಈ ಹಿಂದೆಯೂ ಸಾಭೀತಾಗಿದೆ. ಬಿಎಸ್‌ವೈ ಕೆಜೆಪಿ ಪಕ್ಷವನ್ನು ಕಟ್ಟಿದ್ದಾಗ 9.5 ಪ್ರತಿಶತ ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದರು. ಜೊತೆಗೆ 2013 ರಲ್ಲಿ ಕಾಂಗ್ರೆಸ್ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ಸಹಾಯ ಮಾಡಿದ್ದರು.
ಇನ್ನು, ರಾಜ್ಯದಲ್ಲಿ ಬಿಎಸ್‌ವೈ ಅವರನ್ನು ನಿರ್ಲಕ್ಷಿಸುವ ಬಿಜೆಪಿಯ ಸಣ್ಣ ತಪ್ಪು ಲೆಕ್ಕಾಚಾರಗಳು ಪಕ್ಷಕ್ಕೆ ಮಾರಕವಾಗಬಹುದು. ಏಕೆಂದರೆ ಈ ಸಮುದಾಯವು ಬೊಮ್ಮಾಯಿ ಅವರನ್ನು ತಮ್ಮ ನಾಯಕನನ್ನಾಗಿ ಸ್ವೀಕರಿಸಿಲ್ಲ ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಇತ್ತ, ಯಡಿಯೂರಪ್ಪ ಕೂಡ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಗೊಂದಲಗಳು ಇಲ್ಲ. ನಾವೆಲ್ಲ ಒಟ್ಟಾಗಿ ಇದ್ದೇವೆ. ಒಂದಾಗಿ ಇದ್ದೇವೆ ನಮ್ಮದು ಒಂದೇ ಅಜೆಂಡಾ ಮುಂದೆ ಚುನಾವಣೆ ಇದೆ, ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ವದಂತಿಗೆ ತೆರೆ ಎಳೆಯುವ ಯತ್ನ ನಡೆಸಿದ್ದಾರೆ.












Click it and Unblock the Notifications