ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೇಸ್ ಬುಕ್ ನಲ್ಲಿ ಕನ್ಸಾಸ್ ಶೂಟೌಟ್ ದುರ್ದೈವಿ ಶ್ರೀನಿವಾಸ್ ಪತ್ನಿಯ ಬಹಿರಂಗ ಪತ್ರ

ದೊಡ್ಡ ಕನಸುಗಳನ್ನು ಹೊತ್ತು ಭಾರತದಿಂದ ಅಮೆರಿಕಕ್ಕೆ ತೆರಳಿದ್ದ ತಮ್ಮ ಬಾಳಿನಲ್ಲಿ ನಡೆದ ಕ್ರೂರ ದುರ್ಘಟನೆಯ ಹಿಂದಿನ ಚಿತ್ರಣವನ್ನು ಶ್ರೀನಿವಾಸ್ ಪತ್ನಿ ಸುನಯನಾ ದಮಲಾ ಅವರು ತೆರೆದಿಟ್ಟಿದ್ದಾರೆ.

|
Google Oneindia Kannada News

ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಇದೇ ತಿಂಗಳ 9ರಂದು (ಮಾರ್ಚ್ 9) ತಮ್ಮ 33ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಿದ್ದ ಆಂಧ್ರಪ್ರದೇಶದ ಟೆಕ್ಕಿ ಶ್ರೀನಿವಾಸ್ ಕುಚಿಭೋತ್ಲಾ ಅವರ ಪತ್ನಿ ಸುನಯನಾ ದಮಲಾ ಅವರು, ಫೇಸ್ ಬುಕ್ ನಲ್ಲಿ ತಮ್ಮ ಹೃದಯಾಂತರಾಳದ ನೋವನ್ನು ತೆರೆದಿಟ್ಟಿದ್ದಾರೆ.

ಫೆಬ್ರವರಿ 24ರಂದು ಅಮೆರಿಕದ ಕನ್ಸಾಸ್ ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಬಾರ್ ನಲ್ಲಿ ಸ್ನೇಹಿತನೊಂದಿಗೆ ಕುಳಿತಿದ್ದ ಶ್ರೀನಿವಾಸ್ ಅವರನ್ನು ಅರಬ್ ದೇಶದವನೆಂದು ಭ್ರಮಿಸಿ ''ನೀನು ಭಯೋತ್ಪಾದಕ, ನನ್ನ ದೇಶ ಬಿಟ್ಟು ತೊಲಗು'' ಎಂದು ಅರಚಿ ಗುಂಡು ಹಾರಿಸಿ ಹತ್ಯೆಗೈದಿದ್ದ.

ಸುರಧ್ರೂಪಿ, ಬುದ್ಧಿವಂತ, ಉತ್ತಮ ವೃತ್ತಿಯಲ್ಲಿದ್ದ ಶ್ರೀನಿವಾಸ್ ಅವರನ್ನು ಸುಮಾರು 6 ವರ್ಷಗಳ ಕಾಲ ಪ್ರೀತಿಸಿ ಆನಂತರ ಮದುವೆಯಾಗಿ ಹೊಸ ಕನಸುಗಳನ್ನು ಕಟ್ಟಿಕೊಂಡಿದ್ದ ಅವರ ಪತ್ನಿ ಸುನಯನಾ ಅವರ ಕನಸಿನ ಕಟ್ಟೆ ಒಡೆದಿದೆ.[ಗೆಟ್ ಔಟ್ ಎಂದು ಕಿರುಚಿ ಅಮೆರಿಕದಲ್ಲಿ ಭಾರತೀಯನ ಹತ್ಯೆ]

ಸುಂದರ ಬದುಕಿನ ಹಾದಿಯಲ್ಲಿ ಇದ್ದಕ್ಕಿದ್ದಂತೆ ಎರಗಿರುವ ಸಿಡಿಲೊಂದು ತಮ್ಮೊಂದಿಗೆ ಜೀವನವಿಡೀ ಹೆಜ್ಜೆ ಹಾಕಬೇಕಿದ್ದ ಆಪ್ತ ಸಖ, ಬಂಧುವನ್ನು ಹೊತ್ತೊಯ್ದಿದೆ. ಈ ನೋವು, ಆಕ್ರಂದನಗಳಲ್ಲಿ ಆ ಕನಸಿನ ಹಾದಿ ಇಂದು ಸುನಯನಾ ಅವರಿಗೆ ಬರಡಾಗಿ ಕಾಣುತ್ತಿದೆ. ಇದೇ ನೋವನ್ನು ಅವರು ತಮ್ಮ ಫೇಸ್ ಬುಕ್ ಅಕೌಂಟ್ ಮೂಲಕ ಹಂಚಿಕೊಂಡಿದ್ದಾರೆ.[ಅಮೆರಿಕಾ ಶೂಟೌಟ್: ಶ್ರೀನಿವಾಸ್ ಕುಚಿಭೋತ್ಲಾಗೆ ಅಂತಿಮ ವಿದಾಯ]

ಫೇಸ್ ಬುಕ್ ನಲ್ಲಿ ಹಾಕುತ್ತಿರುವ ತಮ್ಮ ಮೊದಲ ಈ ಅಪ್ಲೋಡ್ ಶೋಕದಿಂದ ಕೂಡಿರುವ ಬಗ್ಗೆ ಅವರಿಗೂ ವಿಷಾದವಿದೆ. ಸುನಯನಾ ಅವರಿಗೆ ನೋವನ್ನು ಸಹಿಸಿಕೊಳ್ಳುವ ಶಕ್ತಿ ಬರಲಿ ಎಂದು ಹಾರೈಸಬಹುದಷ್ಟೇ. ಅವರು ಬರೆದ ಪತ್ರದ ಸಾರಾಂಶ ಅವರದೇ ಮಾತುಗಳಲ್ಲಿ ಇಲ್ಲಿ ನೀಡಲಾಗುತ್ತಿದೆ. ಆ ಹೆಣ್ಮಗಳ ನೋವು, ನಿರಾಸೆಯ ಬಿಸಿ ಹಾಗೆಯೇ ನಿಮ್ಮ ಮುಂದೆ ತರುವ ನಿಟ್ಟಿನಲ್ಲಿ ಇದು ನಮ್ಮ ವಿನಮ್ರ ಪ್ರಯತ್ನ.[ನೀನ್ಯಾವೋನಯ್ಯ ಅಮೆರಿಕಾಕ್ಕೆ ಬರಬೇಡ ಅಂತ ಹೇಳೋಕೆ?]

ಛಲದಿಂದ ಮೇಲೆ ಬಂದ ವ್ಯಕ್ತಿ

ಛಲದಿಂದ ಮೇಲೆ ಬಂದ ವ್ಯಕ್ತಿ

ಭಾರವಾದ ಹೃದಯದಿಂದ ಈ ಪತ್ರವನ್ನು ಬರೆಯುತ್ತಿದ್ದೇನೆ. ನನಗಿನ್ನೂ ನೆನಪಿದೆ... 2006ರಲ್ಲಿ ನಾವು ಆಗ ಹೆಚ್ಚು ಜನಪ್ರಿಯವಾಗಿದ್ದ ಸಾಮಾಜಿಕ ಜಾಲತಾಣವಾದ ಆರ್ಕುಟ್ ನಲ್ಲಿ ಪರಸ್ಪರ ಪರಿಚಯವಾಗಿದ್ದೆವು. ಪರಿಚಿತವಾದ ಕೂಡಲೇ ಅಚ್ಚುಮೆಚ್ಚಿನ ಸ್ನೇಹಿತರಾದ ನಾವು ಆನಂತರ ಆರು ವರ್ಷಗಳ ನಂತರ ಮದುವೆಯಾಗಿದ್ದು. ಶ್ರೀನಿವಾಸ್ ಕೇವಲ ನನ್ನ ಪತಿಯಾಗಿರಲಿಲ್ಲ. ಅವರೊಬ್ಬ ಉತ್ತಮ ಸ್ನೇಹಿತ, ದಾರಿ ತೋರುವ ಬಂಧು, ಸ್ಫೂರ್ತಿಯ ಚಿಲುಮೆ ಎಲ್ಲವೂ ಆಗಿದ್ದವರು. ನಾನು ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡಬೇಕೆಂದು ಕಂಡಿದ್ದ ಕನಸನ್ನು ನನಸು ಮಾಡಿಕೊಟ್ಟವರು. ನನ್ನಲ್ಲಿ ಸ್ಫೂರ್ತಿ ಹಾಗೂ ಉತ್ಸಾಹಗಳನ್ನು ತುಂಬಿದವರು. ಹಾಗಾಗಿಯೇ, ನಾನು ಇಂದು ಏನಾಗಿದ್ದೇನೋ ಅದು ಅವರ ನೆರವಿನಿಂದಲೇ ಎಂಬುದನ್ನು ಹತ್ಪೂರ್ವಕವಾಗಿ, ಘಂಟಾಘೋಷವಾಗಿ ಹೇಳಬಲ್ಲೆ. ಆದರೆ, ಅವರನ್ನು ನಾನು ಕಳೆದುಕೊಂಡಿದ್ದೇನೆ ಎಂಬುದನ್ನು ನೆನೆದಾಗ ಮಾತ್ರ ನನ್ನ ಸ್ವರ ಗಂಟಲಲ್ಲೇ ಕುಸಿದು ಹೋಗಿ ಆರ್ದ್ರಳಾಗುತ್ತೇನೆ.
ಅಲ್ಪ ಆದಾಯದ ತಂದೆಗೆ ಇದ್ದ ಮೂವರು ಮಕ್ಕಳಲ್ಲಿ ಎರಡನೆಯವರಾಗಿ ಜನಿಸಿದ್ದ ಶ್ರೀನಿವಾಸ್, ಆರ್ಥಿಕ ಅನಾನುಕೂಲತೆಯ ನಡುವೆಯೂ ಉತ್ತಮವಾಗಿ ಓದಿ, ಕಷ್ಟಪಟ್ಟು ಮೇಲೆ ಬಂದಿದ್ದ ವ್ಯಕ್ತಿಯೆಂದು ಹೇಳಲು ಈಗಲೂ ನನಗೆ ಹೆಮ್ಮೆಯೆನಿಸುತ್ತದೆ.

ಎಲ್ಲರ ಮನಗೆದ್ದು ಮದುವೆಯಾದವರು

ಎಲ್ಲರ ಮನಗೆದ್ದು ಮದುವೆಯಾದವರು

ಶ್ರೀನಿವಾಸ್ ಒಬ್ಬ ಉತ್ತಮ ವ್ಯಕ್ತಿ. ಅವರದ್ದು ಎಲ್ಲರನ್ನೂ ಸೆಳೆಯುವಂಥ ಆಕರ್ಷಕ ವ್ಯಕ್ತಿತ್ವ. ನಾವು ಪ್ರೀತಿಸಿ ಮದುವೆಯಾಗುವ ಮಾತು ಅಷ್ಟು ಸುಲಭದ್ದಾಗಿರಲಿಲ್ಲ. ಅವರು ತಮ್ಮ ತಂದೆ, ತಾಯಿಯನ್ನು ಒಪ್ಪಿಸುವುದು ಸೇರಿದಂತೆ ನನ್ನ ತಂದೆ ತಾಯಿಯನ್ನೂ ಮನೆಯವರನ್ನೂ ಒಪ್ಪಿಸಬೇಕಿತ್ತು. ನಾನಾದರೋ ನನ್ನ ಮನೆಯ ಮೂರನೇ ಹಾಗೂ ಕೊನೆಯ ಮಗಳಾಗಿ ಮುದ್ದಿನಿಂದ ಬೆಳೆದಿದ್ದೆ. ನನಗೆ ಇಬ್ಬರು ಅಕ್ಕಂದಿರು. ಕಿರಿಯ ಮಗಳಾಗಿದ್ದರಿಂದ ಮುದ್ದು ಮಾಡಿ ಬೆಳೆಸಿದ್ದ ನನ್ನ ತಂದೆ ತಾಯಂದಿರು, ಅಕ್ಕಂದಿರು ನನ್ನನ್ನು ಅಂತಿಂಥವರಿಗೆ ಕೊಟ್ಟು ಮದುವೆ ಮಾಡಲು ಸಿದ್ಧರಿರಲಿಲ್ಲ. ಹಾಗಾಗಿಯೇ, ನನ್ನ ಆಯ್ಕೆ ಉತ್ತಮವಾಗಿದೆಯೆಂದು ಸಾಬೀತುಪಡಿಸಲು ನಾನು ಸಾಕಷ್ಟು ಪ್ರಯಾಸಪಡಬೇಕಾಯಿತು. ಆದರೆ, ಈ ಪ್ರಯಾಸವನ್ನು ಸಿಹಿ ಪ್ರಯಾಸವಾಗಿಸಿದ್ದು ಶ್ರೀನಿವಾಸ್. ನನ್ನ ಮನೆಯವರನ್ನು ಮದುವೆಗೆ ಒಪ್ಪಿಸಲು ಅದೆಷ್ಟೋ ಸಲ ನಮ್ಮ ಮನೆಗೆ ಬಂದಿದ್ದ ಅವರು, ನಮ್ಮ ಮನೆಯವರು ಕೇಳುತ್ತಿದ್ದ ಕಟ್ಟುನಿಟ್ಟಾದ ಪ್ರಶ್ನೆಗಳಿಗೆ ನಗುಮೊಗದಿಂದಲೇ ಉತ್ತರಿಸುತ್ತಾ, ನುಡಿದಂತೆ ನಡೆಯುತ್ತಾ ಎಲ್ಲರ ಮನಗೆದ್ದೇ ನನ್ನನ್ನು ವಿವಾಹವಾದರು. ಅಷ್ಟೇ ಅಲ್ಲ, ನೋಡನೋಡುತ್ತಿದ್ದಂತೆ ತಮ್ಮ ಉತ್ತಮ ವ್ಯಕ್ತಿತ್ವದಿಂದ ನಮ್ಮ ಮನೆಯ ಅತ್ಯಂತ ಪ್ರೀತಿಯ ಸದಸ್ಯರಾಗಿಬಿಟ್ಟರು.

ಕೆಲಸದ ಬಗ್ಗೆ ಬೇಸರ ಪಡದ ವ್ಯಕ್ತಿ

ಕೆಲಸದ ಬಗ್ಗೆ ಬೇಸರ ಪಡದ ವ್ಯಕ್ತಿ

ಅವರೊಬ್ಬ ಕನಸುಗಾರ. ಜೀವನದಲ್ಲಿ ದೊಡ್ಡ ದೊಡ್ಡ ಗುರಿಗಳಿದ್ದವು. ಅವರಿಗೆ ಕೆಲಸವೇ ದೇವರು ಅಥವಾ ದೇವರ ಪೂಜೆ. ಅದನ್ನು ತುಂಬಾ ಶ್ರದ್ಧೆಯಿಂದ, ನಿಷ್ಠೆಯಿಂದ ಮಾಡುತ್ತಿದ್ದರು. ರಾಕ್ ವೆಲ್ ಕೊಲೀನ್ಸ್ ಎಂಬ ವಿಮಾನ ತಂತ್ರಜ್ಞಾನ ಕಂಪನಿಯೊಂದರಲ್ಲಿ ಪ್ರೈಮರಿ ಫ್ಲೈಟ್ ಕಂಟ್ರೋಲ್ ಸಿಸ್ಟಂ ನಲ್ಲಿ ಇಂಜಿನಿಯರ್ ಆಗಿದ್ದ ಅವರು, ಬೆಳಗ್ಗೆ ಕಂಪನಿಗೆ ಹೋದವರು ರಾತ್ರಿ ಊಟಕ್ಕೇ ಮನೆಗೆ ಬರುತ್ತಿದ್ದರು. ಊಟ ಮುಗಿಸಿ ಮತ್ತೆ ಲ್ಯಾಪ್ ಟಾಪ್ ಹಿಡಿದು ಕೆಲಸಕ್ಕೆ ಜಾರುತ್ತಿದ್ದರು. ಬೆಳಗ್ಗೆ ನಮ್ಮೆಲ್ಲರ ಜತೆ ತಿಂಡಿ ಮುಗಿಸಿದವರೇ ಮತ್ತೆ ಕೆಲಸಕ್ಕೆಂದು ಓಡುತ್ತಿದ್ದರು. ದಿನದ ಬಹು ಗಂಟೆಗಳ ಕಾಲ ಕೆಲಸದಲ್ಲೇ ಮುಳುಗಿಹೋಗಿದ್ದರೂ ಅವರೆಂದೂ ಕೆಲಸದ ಬಗ್ಗೆ ಬೇಸರ ಪಟ್ಟವರಲ್ಲ. ಏಕೆಂದರೆ, ಅವರಿಗೆ ಇನ್ನೂ ಉತ್ತಮವಾಗಿ ಕೆಲಸ ಮಾಡಿ ಹೆಸರು ಗಳಿಸಬೇಕು, ದೊಡ್ಡದಾದ ಬದುಕು ಕಟ್ಟಬೇಕೆಂದು ಛಲವಿತ್ತು.
ಅದೇ ಛಲವನ್ನು ನನ್ನಲ್ಲೂ ತುಂಬಲು ಪ್ರಯತ್ನಿಸಿದ್ದರು. ನನಗೆ ಕೊಟ್ಟ ಮಾತಿನಂತೆ ನನ್ನನ್ನು ಅಮೆರಿಕದಲ್ಲಿ ಓದಿಸಿ, ಕೆಲಸವಿಲ್ಲದೆ ಪರದಾಡಿ ಹತಾಶಳಾಗಿದ್ದ ನನ್ನಲ್ಲಿ ಉತ್ಸಾಹ ತುಂಬಿದ್ದರು. ಆಗಲೇ ನಾವು ನಾವಿದ್ದ ಲೋವಾ ಎಂಬ ಪುಟ್ಟ ಊರಿನಿಂದ ದೊಡ್ಡ ಊರೊಂದಕ್ಕೆ ಸಾಗಲು ನಿರ್ಧರಿಸಿದ್ದು. ದೊಡ್ಡ ಊರಿನಲ್ಲಿ ಕೆಲಸದ ಅವಕಾಶಗಳು ಹೆಚ್ಚೆಂಬುದು ಶ್ರೀನಿವಾಸ್ ಅವರ ನಿರ್ಧಾರವಾಗಿತ್ತು. ದೊಡ್ಡ ಊರು ಎಂಬ ವಿಚಾರ ಬರುತ್ತಲೇ ನಾವು ಆಯ್ಕೆ ಮಾಡಿಕೊಂಡ ಊರೇ ಕಾನ್ಸಾಸ್.

ಮನೆಯನ್ನು ಒಪ್ಪ ಓರಣಗೈದಿದ್ದರು

ಮನೆಯನ್ನು ಒಪ್ಪ ಓರಣಗೈದಿದ್ದರು

ಕನ್ಸಾಸ್ ನಲ್ಲಿ ಮನೆಯೊಂದನ್ನು ಕಟ್ಟಿಕೊಂಡು ಅಲ್ಲೇ ಜೀವನ ನಡೆಸಲಾರಂಭಿಸಿದೆವು. ನನ್ನ ಮನಸ್ಸಿನಲ್ಲಿನ್ನೂ ಅಚ್ಚಳಿಯದೇ ಉಳಿದಿದೆ.... ಶ್ರೀನಿವಾಸ್ ಮನೆಯ ಚಿಕ್ಕ ಪುಟ್ಟ ಕೆಲಸವನ್ನೂ ಅಚ್ಚುಕಟ್ಟಾಗಿ ಮಾಡಿದ್ದು, ಮನೆಗೆ ತಾವೇ ಖುದ್ದಾಗಿ ತನ್ನಿಷ್ಟದ ಬಣ್ಣ ತಂದು ಬಳಿದು ಒಳಾಂಗಣ ಹಾಗೂ ಹೊರಾಂಗಣಗಳನ್ನು ಸುಂದರವಾಗಿ ಕಾಣುವಂತೆ ಮಾಡಿದ್ದು, ಕಾರಿನ ಗ್ಯಾರೇಜು ಗೇಟನ್ನು ಖುದ್ದು ತಾವೇ ನಿಲ್ಲಿಸಿದ್ದು... ಹೀಗೆ, ಯಾವುದೇ ಕೆಲಸ ಮಾಡಿದರೂ ಅಚ್ಚುಕಟ್ಟು ಹಾಗೂ ಅದರಲ್ಲಿ ತನ್ಮಯತೆ, ಖುಷಿ ಕಾಣುತ್ತಿದ್ದ ವ್ಯಕ್ತಿ ಅವರು.

ದುರ್ವಿಧಿ ತಂದ ಸುದ್ದಿ ನಂಬಲಾರದೇ ಹೋಗಿದ್ದೆ

ದುರ್ವಿಧಿ ತಂದ ಸುದ್ದಿ ನಂಬಲಾರದೇ ಹೋಗಿದ್ದೆ

ಹೊಸ ಮನೆಗೆ ಬಂದ ಮೇಲೆ ನಾವು ಮಾರ್ಚ್ ನ ಆರಂಭದಲ್ಲಿ ನ್ಯೂ ಜೆರ್ಸಿಗೆ ತೆರಳಲು ನಿರ್ಧರಿಸಿದ್ದೆವು. ಅಲ್ಲಿ ಅವರ ಸಂಬಂಧಿಕರೊಬ್ಬರ ಎಂಗೇಜ್ ಮಂಟ್ ಇತ್ತು. ಈ ಸಮಾರಂಭಕ್ಕೆ ಹೋಗಲು ತೀರಾ ಉತ್ಸುಕರಾಗಿದ್ದ ಶ್ರೀನಿವಾಸ್, ಮಾರ್ಚ್ ಮೊದಲ ವಾರದಲ್ಲೇ ಶಾಪಿಂಗ್ ಮಾಡಲು ನಿರ್ಧರಿಸಿದ್ದರು. ಆದರೆ, ಅವರು ಇಹಲೋಕದ ವ್ಯಾಪಾರವನ್ನು ಇಷ್ಟುಬೇಗ ಮುಗಿಸಿಕೊಂಡು ತೆರಳುತ್ತಾರೆಂದು ನಾನು ಎಣಿಸಿರಲಿಲ್ಲ.
ಅಂದು, ಫೆಬ್ರವರಿ 24ರಂದು ರಾತ್ರಿ ನಮ್ಮ ಮನೆಗೆ ಬಂದ ಕನ್ಸಾಸ್ ಪೊಲೀಸರು ಶ್ರೀನಿವಾಸ್ ಹತ್ಯೆಯಾದ ವಿಚಾರ ತಿಳಿಸಿದಾಗ ನಾನು ನಂಬಿರಲೇ ಇಲ್ಲ. ನೀವು ನಿಜ ಹೇಳುತ್ತಿದ್ದೀರಾ? ನೀವು ಸರಿಯಾಗಿ ನನ್ನ ಪತಿಯೇ ಎಂದು ಕರಾರುವಾಕ್ ಆಗಿ ಹೇಳುತ್ತಿದ್ದೀರಾ? ನನ್ನ ಪತಿಯೇ ಸತ್ತು ಹೋದರೆಂದು ಹೇಳಲು ನಿಮ್ಮಲ್ಲಿ ಸಾಕ್ಷಿ ಏನಿದೆ? ಎಂದೆಲ್ಲಾ ಪ್ರಶ್ನಿಸಿದ್ದೆ. ಆದರೆ, ನಿಜ ಒಪ್ಪಿಕೊಳ್ಳಲೇಬೇಕಾದ ಪರಿಸ್ಥಿತಿ ಆನಂತರ ನನ್ನದಾಗಿತ್ತು.
ತಕ್ಷಣವೇ ನಾನು ಡಲ್ಲಾಸ್ ನಲ್ಲಿರುವ ಶ್ರೀನಿವಾಸ್ ಅವರ ಸಹೋದರರಿಗೆ ಫೋನ್ ಮಾಡಿ ನಡೆದದ್ದನ್ನು ವಿವರಿಸಿದರೆ ಅವರಿಗೂ ನಾನು ಜೋಕ್ ಮಾಡುತ್ತಿದ್ದೇನೆಂದು ತಿಳಿದು ನನ್ನನ್ನೇ ರೇಗಿಸಿದರು. ಆದರೆ, ನಿಜ ಗೊತ್ತಾದ ನಂತರ...... ಮತ್ತೇನಿದೆ ಎಲ್ಲವೂ ಮೌನ, ಕಣ್ಣೀರು.

ಮೋದಿ ಬಗ್ಗೆ ಅಪಾರ ನಂಬಿಕೆ

ಮೋದಿ ಬಗ್ಗೆ ಅಪಾರ ನಂಬಿಕೆ

ಅವರಿಗೆ ಜನಪ್ರಿಯ ಟಿವಿ ನಿರೂಪಕ ಅರ್ನಾಬ್ ಗೋಸ್ವಾಮಿ ಅಂದ್ರೆ ತುಂಬಾ ಇಷ್ಟ. ಭಾರತದಲ್ಲಿ ಪ್ರತಿದಿನ ರಾತ್ರಿ ಪ್ರಸಾರವಾಗುತ್ತಿದ್ದ ಅವರ ಟಾಕ್ ಶೋ ನೋಡಲು ಅವರು ಪ್ರತಿ ದಿನ ಮಧ್ಯಾಹ್ನದ ಲಂಚ್ ಬ್ರೇಕ್ ನಲ್ಲಿ ಕಾಯುತ್ತಿದ್ದರು.
ಸುದ್ದಿಗಳನ್ನು ತಿಳಿದುಕೊಳ್ಳುವುದು ಅವರಿಗಿಷ್ಟವಾದ ಕೆಲಸ. ಭಾರತದ ಪ್ರಧಾನಿ ನರೇಂದ್ರ ಮೋದಿ ಅಂದ್ರೆ ಅಚ್ಚುಮೆಚ್ಚು. ಮೋದಿ ಪ್ರಧಾನಿಯಾದಾಗ ಅಂತೂ ಇಂತೂ ಭಾರತಕ್ಕೊಬ್ಬ ಸೂಕ್ತ ನಾಯಕ ಸಿಕ್ಕಿದ ಎಂದು ಸಂಭ್ರಮಿಸಿದ್ದರು.
ಇತ್ತೀಚೆಗೆ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ, ವಲಸೆ ನೀತಿಗಳಲ್ಲಿ ಬದಲಾವಣೆ ತಂದಿದ್ದು ಅವರಲ್ಲಿ ಕೊಂಚ ಆತಂಕ ಸೃಷ್ಟಿಯಾಗಲು ಕಾರಣವಾಗಿತ್ತು.
ಹಾಗೆಯೇ ಇಂಡಿಯನ್ ಐಡಲ್ ತುಂಬಾ ಇಷ್ಟವಾದ ಕಾರ್ಯಕ್ರಮ. ಊಟದ ವಿಚಾರದಲ್ಲೂ ಒಳ್ಳೇ ಟೇಸ್ಟ್ ಇದ್ದ ವ್ಯಕ್ತಿ. ಮನೆ ಅಡುಗೆ ಅಂದ್ರೆ ಪಂಚಪ್ರಾಣ. ಆಗಾಗ ಅವರ ಲಂಚ್ ಬಾಕ್ಸ್ ಗೆ ಅವರಿಗಿಷ್ಟವಾದ ತಿಂಡಿ, ತಿನಿಸು ಕಟ್ಟಿದರೆ ಅನ್ನದಾತಾ ಸುಖೀಭವ ಎಂದು ಹಾರೈಸುತ್ತಿದ್ದರು. ಇದೇ ಹಾರೈಕೆ ಅವರು ಯಾವುದೇ ಸಮಾರಂಭ ಪಾರ್ಟಿಗಳಲ್ಲಿ ಅತಿಥಿಗಳಿಗೆ ಉತ್ತಮ ಊಟ ಹಾಕಿದ ಸಂಬಂಧಿಗಳು, ಸ್ನೇಹಿತರಿಗೂ ಹೇಳುತ್ತಿದ್ದರು.

ಆದರೆ, ನಮಗೇ ಆ ಕೆಟ್ಟ ದಿನ ಬಂತು

ಆದರೆ, ನಮಗೇ ಆ ಕೆಟ್ಟ ದಿನ ಬಂತು

ಅಮೆರಿಕದಲ್ಲಿ ಎಲ್ಲಾದರೂ ಶೂಟೌಟ್ ಆದರೆ, ನಾವಿಬ್ಬರೂ ತುಂಬಾ ನೊಂದುಕೊಳ್ಳುತ್ತಿದ್ದೆವು. ಆ ಘಟನೆಯ ಬಗ್ಗೆ ನಾವು ಸುದೀರ್ಘವಾಗಿ ಚರ್ಚಿಸಿ ದುರ್ದೈವಿಗಳ ಬಗ್ಗೆ ಹಾಗೂ ಅವರನ್ನು ಅವಲಂಬಿಸಿರಬಹುದಾದ ವ್ಯಕ್ತಿಗಳು, ಹತ್ತಿರದ ಬಂಧುಗಳಿಗಾದ ನೋವುಗಳ ಬಗ್ಗೆ ಚರ್ಚಿಸುತ್ತಿದ್ದೆವು. ಆದರೆ, ಮುಂದೊಂದು ದಿನ ಅಂಥದ್ದೇ ಕ್ರೂರ ದಿನ ನಮ್ಮ ಜೀವನದಲ್ಲೂ ಬರಬಹುದೆಂದು ನಾವು ಎಣಿಸಿರಲಿಲ್ಲ.
ಆದರೂ, ಒಮ್ಮೊಮ್ಮೆ ನಮಗೂ ಭೀತಿಯಾಗುತ್ತಿತ್ತು. ಆದರೆ, ಭಾರತದಿಂದ ಇಷ್ಟು ದೂರಕ್ಕೆ ಬಂದಿದ್ದು ನಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲಿಕ್ಕಾಗಿ. ಆದ್ದರಿಂದ ಎಲ್ಲಾ ಭೀತಿಯನ್ನೂ ಬದಿಗೊತ್ತಿ ಮುಂದುವರಿಯಬೇಕೆಂದು ಶ್ರೀನಿವಾಸ್ ನಿಶ್ಚಯಿಸಿದ್ದರು.

ವೈದ್ಯರಿಂದ ಸಲಹೆಯನ್ನೂ ಪಡೆದಿದ್ದೆವು

ವೈದ್ಯರಿಂದ ಸಲಹೆಯನ್ನೂ ಪಡೆದಿದ್ದೆವು

ಎಲ್ಲಕ್ಕಿಂತ ಮುಖ್ಯವಾದ ಮಾತು ಮತ್ತೊಂದಿದೆ. ಇಷ್ಟರಲ್ಲೇ ನಾವಿಬ್ಬರು ತಂದೆ-ತಾಯಿಗಳಾಗಬೇಕೆಂದು ಅಂದುಕೊಂಡಿದ್ದೆವು. ಕೆಲ ವಾರಗಳ ಹಿಂದಷ್ಟೇ ನಾವು ಕನ್ಸಾಸ್ ನಲ್ಲಿರುವ ಒಬ್ಬ ತಜ್ಞವೈದ್ಯರೊಂದಿಗೆ ಮಾತುಕತೆ ನಡೆಸಿ ನಾನು ಗರ್ಭಿಣಿಯಾಗುವ ಬಗ್ಗೆ ಕೆಲವಾರು ಸಲಹೆಗಳನ್ನು ಪಡೆದಿದ್ದೆ. ನಾವಿಬ್ಬರೂ ಸದ್ಯದಲ್ಲೇ ಮಗುವಿಗೆ ಜನ್ಮ ನೀಡಲು ತಯಾರಿ ನಡೆಸುತ್ತೇವೆಂಬುದೇ ಶ್ರೀನಿವಾಸ್ ಅವರ ಸಂಭ್ರಮಕ್ಕೆ ಇಂಬು ನೀಡಿತ್ತು.

 ಕನಸು ಸಾಕಾರಕ್ಕೆ ಸಹಕಾರ ಕೇಳಿದ್ದ ಪತಿರಾಯ

ಕನಸು ಸಾಕಾರಕ್ಕೆ ಸಹಕಾರ ಕೇಳಿದ್ದ ಪತಿರಾಯ

ಅದಷ್ಟೇ ಅಲ್ಲ, ಹಣದ ಬಗ್ಗೆ ಕರಾರುವಾಕ್ ತಿಳುವಳಿಕೆಯಿತ್ತು ಅವರಿಗೆ. ಯಾವುದನ್ನೇ ಪ್ಲಾನ್ ಮಾಡಿದರೂ ಕ್ರಮಬದ್ಧವಾಗಿ, ಸೂಕ್ತ ಆಲೋಚನೆಗಳನ್ನು ಮಾಡಿಯೇ ಕೆಲಸಕ್ಕೆ ಕೈ ಹಾಕುತ್ತಿದ್ದರು. ನಾವು ತಂದೆ ತಾಯಿಯಾಗಬೇಕೆಂದು ನಿರ್ಧರಿಸಿದ ನಂತರ ನನ್ನ ಬಳಿ ಮಾತನಾಡಿದ್ದ ಅವರು, ತಂದೆ ತಾಯಿ ಆಗುವುದು ಮಾತ್ರ ಮುಖ್ಯವಲ್ಲ. ಪೋಷಕರಾಗಿ ಮಗುವಿಗೆ ಸೂಕ್ತ ಭವಿಷ್ಯ ನೀಡುವುದೂ ನಮ್ಮ ಗುರಿಯಾಗಿರಬೇಕು. ಹಾಗಾಗಿ ನಾವು ಹಣವನ್ನು ಉಳಿಬೇಕೆಂದು ಕಿವಿಮಾತು ಹೇಳಿದ್ದರು.
ಹೀಗೆ, ಭವಿಷ್ಯದ ಬಗ್ಗೆ ನಾನಾ ಕನಸುಗಳನ್ನು ಕಟ್ಟಿಕೊಂಡಿದ್ದ ನನ್ನ ಪ್ರಾಣ ಸಖ ಇಂದು ನನ್ನೊಂದಿಗಿಲ್ಲ. ಕೇವಲ ಅವರ ನೆನಪುಗಳು ಮಾತ್ರ ಉಳಿದಿವೆ. ಅವರ ಕಳೆಯಾದ ಮುಖ, ಮಾತು, ನಗು ಎಲ್ಲವೂ ಕಣ್ಣಿಗೆ ಕಟ್ಟಿದಂತಿದೆ.

English summary
Kansas shootout victim, Andhapradesh techie Srinivas Kuchibhotla's wife shared her pain via face book post. In that write up she reveals Srinivas's personality and couple's dreams which was blown apart by unknown person on February 24, 2017
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X