ಆರೆಸ್ಸೆಸ್ ದಿನಾಚರಣೆಯಂದು ರಾಷ್ಟ್ರ ನಿರ್ಮಾಣದ ಬಗ್ಗೆ ಸತ್ಯಾರ್ಥಿ ಸಲಹೆ
ಆಗ್ನೇ ನಯಾ ಸುಪಥ ರಯೇ ಅಸ್ಮನ್
ವಿಶ್ವನಿ ದೇವ ವಾಯುನಾನಿ ವಿದ್ವನ್
ಯುಯೊ-ಧ್ಯಾಸ-ಮಜ್ಜುಹು-ರಣ-ಮೇನೊ
ಭೂಯಿಷ್ಟಂ ತೆ ನಮೋ ಉಕ್ತಿಂ ವಿಧೇಮಾ
(ಓ ಅಗ್ನಿದೇವನೇ, ನಮ್ಮನ್ನು ಸರಿಯಾ ಮಾರ್ಗದಲ್ಲಿ ಮುನ್ನಡೆಸು, ಆ ಮೂಲಕ ನಾವು ಭೌತಿಕ ಮತ್ತು ಆಧ್ಯಾತ್ಮಿಕ ಸಂತೋಷವನ್ನು ನಮ್ಮ ಸತ್ಕಾರ್ಯಗಳ ಮೂಲಕ ತಲುಪುವಂತೆ ಮಾಡು. ಓ ದೇವರೇ ದಯವಿಟ್ಟು ದುಷ್ಟತೆ ಮತ್ತು ವಂಚನೆಯಿಂದ ದೂರವಿಡು)
ಮೊಟ್ಟಮೊದಲನೆಯದಾಗಿ ನಾನು ವಿಜಯದಶಮಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ 93ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಹಾರ್ದಿಕ ಶುಭಾಶಯ ಕೋರುತ್ತಿದ್ದೇನೆ. ಈ ವಿಜಯ ದಶಮಿಯ ಹಬ್ಬವು ಕೇವಲ ರಾವಣನ ವಿರುದ್ಧ ರಾಮನ ಗೆಲುವನ್ನು ಸಂಭ್ರಮಿಸುವ ಹಬ್ಬ ಮಾತ್ರವಾಗಿರದೇ, ಅಹಂಕಾರದ ವಿರುದ್ಧ ಮಾನವೀಯತೆಯನ್ನು ಸಂಭ್ರಮಿಸುವ ಹಬ್ಬವೂ ಹೌದು;
ಅನೈತಿಕತೆಯ ವಿರುದ್ಧ ನೈತಿಕತೆ, ಕ್ರೌರ್ಯದ ವಿರುದ್ಧ ಅನುಕಂಪದ ವಿಜಯ ಸಂಕೇತವೂ ಹೌದು. ವಾಸ್ತವವಾಗಿ ಈ ದಿನವನ್ನು ವನವಾಸದಲ್ಲಿದ್ದ ರಾಮನಿಗೆ ಮರು ಪಟ್ಟಾಭಿಷೇಕ ಮಾಡಿದ ದಿನವಾಗಿದ್ದು, ತೀರಾ ಕೆಳವರ್ಗದ, ತುಳಿತಕ್ಕೊಳಗಾದ ಮತ್ತು ಗ್ರಾಮಗಳಲ್ಲಿ, ಅರಣ್ಯಗಳಲ್ಲಿ ಮತ್ತು ಬೆಟ್ಟದ ತಪ್ಪಲಲ್ಲಿ ವಾಸಿಸುವ ಪರಿತ್ಯಕ್ತ ಜನರ ಆರಾಧ್ಯ ದೈವದ ವಿಜಯದ ಸಂಕೇತ.
ಇಂದು ನಿಮ್ಮ ಸಂಸ್ಥಾಪನಾ ದಿನದ ಸುಸಂದರ್ಭದಲ್ಲಿ ನನ್ನನ್ನು ಆಹ್ವಾನಿಸುವ ಮೂಲಕ, ನೀವು ಭಾರತದ ಲಕ್ಷಾಂತರ ಶೋಷಿತರ ಮತ್ತು ಸೌಲಭ್ಯ ವಂಚಿತ ಮಕ್ಕಳನ್ನು ಗೌರವಿಸಿ ಅವರಿಗೆ ಅನುಕಂಪ ತೋರಿರುವುದು ಮಾತ್ರವಲ್ಲದೇ, ಇಡೀ ವಿಶ್ವದ ಇಂಥ ಮಕ್ಕಳ ಬಗ್ಗೆ ಗೌರವ ತೋರಿದ್ದೀರಿ. ಈ ಲಕ್ಷಾಂತರ ಮಕ್ಕಳ ಪರವಾಗಿ ನಾನು ನಿಮಗೆ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ.

ನಮ್ಮ ಸಂವಿಧಾನ ಜೀತಪದ್ಧತಿಗೆ ಅವಕಾಶ ನೀಡುವುದಿಲ್ಲ
ಸುಮಾರು ಮೂವತ್ತೊಂಬತ್ತು ವರ್ಷಗಳಷ್ಟು ಹಿಂದೆ, ಕೆರಳಿದ ಮತ್ತು ದುರಾದೃಷ್ಟದ ವಸಾಲ್ ಖಾನ್ ನನ್ನ ಬಾಗಿಲು ತಟ್ಟಿದ್ದರು. ಪಂಜಾಬಿನ ಸರ್ಹಿಂದ್ ನಲ್ಲಿ ಇಟ್ಟಿಗೆ ಬಟ್ಟಿಯಲ್ಲಿ ಜೀತಕ್ಕಿದ್ದಾಗ ಹುಟ್ಟಿದ ಅವರ ಹದಿನೈದು ವರ್ಷದ ಪುತ್ರಿ ಸಾಬೂವನ್ನು ವೇಶ್ಯಾಗೃಹಕ್ಕೆ ಮಾರಾಟ ಮಾಡಲು ಯೋಜಿಸಲಾಗಿತ್ತು. ಆ ದಿನಗಳಲ್ಲಿ ನಾನು ದೆಹಲಿಯಲ್ಲಿ ಪಾಕ್ಷಿಕವೊಂದರ ಸಂಪಾದಕನಾಗಿದ್ದೆ. ಆತನ ಕಥೆಯನ್ನು ನಮ್ಮ ಪಾಕ್ಷಿಕದಲ್ಲಿ ಪ್ರಕಟಿಸಬೇಕು ಮತ್ತು ಆ ಮೂಲಕ ಮಗಳನ್ನು ರಕ್ಷಿಸಬೇಕು ಎಂದು ವಾಸೆಲ್ ಬಯಸಿದ್ದರು. ವಾಸಲ್ ಖಾನ್ ಅವರ ವಿಷಮ ಪರೀಕ್ಷೆಯ ಕಥೆ ಕೇಳಿ ನನ್ನ ಮನಸ್ಸಿನಲ್ಲಿ ಥಟ್ಟನೇ ಯೋಚನೆಯೊಂದು ಹೊಳೆಯಿತು. ಸಾಬೂ ನನ್ನ ತಂಗಿ ಅಥವಾ ಮಗಳಾಗಿದ್ದರೆ, ನಾನು ಒಂದು ನಿಮಿಷವಾದರೂ ಕಾಯಲು ಸಾಧ್ಯವಿತ್ತೇ? ನಮ್ಮ ಸಂವಿಧಾನ ಜೀತಪದ್ಧತಿಗೆ ಅವಕಾಶ ನೀಡುವುದಿಲ್ಲ ಎಂಬ ಅರಿವು ನನಗಿತ್ತು.
ನಾನು ಕೆಲ ಸ್ನೇಹಿತರನ್ನು ಕಲೆ ಹಾಕಿ, ನನ್ನ ಪತ್ನಿಯ ಆಭರಣಗಳನ್ನು ಮಾರಾಟ ಮಾಡಿ, ಒಂದು ಟ್ರಕ್ ಬಾಡಿಗೆಗೆ ಪಡೆದು, ಜೀತದವರನ್ನು ಸಂರಕ್ಷಿಸುವ ಸಲುವಾಗಿ ದೆಹಲಿಯಿಂದ ಸರ್ಹಿಂದ್‍ಗೆ ಚಾಲನೆ ಮಾಡಿಕೊಂಡು ಹೋದೆ. ಇಟ್ಟಿಗೆಭಟ್ಟಿಯ ಮಾಲೀಕರು ಹಾಗೂ ಅವರ ಗೂಂಡಾಗಳು ನನ್ನನ್ನು ಹಾಗೂ ಸ್ನೇಹಿತರನ್ನು ನಿರ್ದಯವಾಗಿ ಥಳಿಸಿದರು. ಬರಿಗೈಯಲ್ಲಿ ನಾವು ದೆಹಲಿಗೆ ವಾಪಸ್ಸಾದೆವು. ನಾನು ನ್ಯಾಯಾಲಯದ ಕಟ್ಟೆ ಏರಿ, ಸಾಬೂ ಸೇರಿದಂತೆ ಎಲ್ಲ 36 ಮಂದಿ ಜೀತಕಾರ್ಮಿಕರನ್ನು ಪಾರು ಮಾಡಲು ಸಾಧ್ಯವಾಯಿತು.

ಜೀತಪದ್ಧತಿಯ ಅನಿಷ್ಟಗಳು ವಿಶ್ವಾದ್ಯಂತ ವ್ಯಾಪಕವಾಗಿವೆ
ನಾವು ನ್ಯಾಯಾಲಯದಿಂದ ವಾಪಸ್ಸಾಗುತ್ತಿದ್ದಾಗ, ಎಲ್ಲ ನಿರೀಕ್ಷೆಗಳನ್ನೂ ಬಿಟ್ಟುಬಿಟ್ಟಿದ್ದ ಈ ಮಕ್ಕಳ ತಾಯಂದಿರ ಮೊಗದಲ್ಲಿ ಸಂತೋಷದ ಮಿಂಚು ಹರಿದದ್ದನ್ನು ಮತ್ತು ಸಂಭ್ರಮದ ಅಲೆಯಲ್ಲಿ ಅವರು ತೇಲಾಡುತ್ತಿದ್ದುದನ್ನು ನಾನು ನೋಡಲು ಸಾಧ್ಯವಾಯಿತು. ಅವರ ಕೆನ್ನೆಗಳಲ್ಲಿ ಸುರಿಯುತ್ತಿದ್ದ ಆನಂದಭಾಷ್ಪದಲ್ಲಿ ನಾನು ದೇವರ ಪ್ರತಿಫಲನವನ್ನು ಕಂಡೆ. ಮಕ್ಕಳು ತಮ್ಮ ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ಸ್ವಾತಂತ್ರ್ಯದ ಸಂಭ್ರಮದಲ್ಲಿ ತೇಲಾಡುತ್ತಿದ್ದರು.
ಆ ಕ್ಷಣದಲ್ಲಿ ನಾನು ಯಾರನ್ನಾದರೂ ವಿಮೋಚನೆಗೊಳಿಸಲು ನಾನು ಯಾರು? ಎಂದು ಯೋಚಿಸಿದೆ. ಬಹುಶಃ ಆ ಮೂಲಕ ನನ್ನ ಅಂತಃಕರಣದಲ್ಲಿದ್ದ ದೇವರಿಂದ ಅದು ಸಾಧ್ಯವಾಗಿರಬೇಕು. ಬಾಲಕಾರ್ಮಿಕ ಮತ್ತು ಜೀತಪದ್ಧತಿಯ ಅನಿಷ್ಟಗಳು ವಿಶ್ವಾದ್ಯಂತ ವ್ಯಾಪಕವಾಗಿವೆ. ಆದರೆ ಇದರ ವಿರುದ್ಧ ಯಾವುದೇ ಕ್ರಮ ಅಥವಾ ಮಧ್ಯಪ್ರವೇಶ ಇಲ್ಲ ಎಂಬ ಸ್ಥಿತಿ. ಕೇವಲ ನನ್ನ ತಾಯ್ನೆಲದಲ್ಲಿ ಅಂತರ್ಗತವಾಗಿರುವ ಆಧ್ಯಾತ್ಮಿಕ ಶಕ್ತಿಯಷ್ಟೇ ನನ್ನಂಥ ಸಾಮಾನ್ಯ ಮನುಷ್ಯನಿಗೆ, ಬಾಲ್ಯ ನಾಶವಾಗುತ್ತಿರುವುದನ್ನು ತಡೆಯುವ ವಿಶ್ವವ್ಯಾಪಿ ಚಳವಳಿಯನ್ನು ಮುನ್ನಡೆಸಲು ಸ್ಫೂರ್ತಿ ನೀಡಿದೆ.

ಬಾಲಕಾರ್ಮಿಕರ ಸಂಖ್ಯೆ ಇಳಿಮುಖ
ಕಳೆದ ಇಪ್ಪತ್ತು ವರ್ಷಗಳಲ್ಲಿ ಜಾಗತಿಕವಾಗಿ ಬಾಲಕಾರ್ಮಿಕರ ಸಂಖ್ಯೆ 260 ದಶಲಕ್ಷದಿಂದ ಸುಮಾರು 150 ದಶಲಕ್ಷಕ್ಕೆ ಇಳಿದಿದೆ. ನನಗ ಹೃದಯ ಕಿತ್ತುಬರುವ ಸಂಗತಿಯೆಂದರೆ, ನಾವು ಜೀವಿಸುವ ಇಂದಿನ ಯುಗದಲ್ಲಿ ಕೂಡಾ ನಮ್ಮ ಹೆಣ್ಣುಮಕ್ಕಳನ್ನು ಜಾನುವಾರುಗಳಿಗಿಂತಲೂ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಹಾಗೂ ಖರೀದಿಸಲಾಗುತ್ತಿದೆ.
ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳದಿಂದಾಗಿ ತಮ್ಮ ದೇಹ ಮತ್ತು ಆತ್ಮ ಮಲಿನವಾಗಿದೆ ಎಂಬ ಭಾವನೆಯಿಂದ ತಮ್ಮ ತಂದೆ- ತಾಯಿಯನ್ನು ಅಪ್ಪಿಕೊಂಡು ಅಳುವ ಧೈರ್ಯವನ್ನೂ ಹೊಂದಿರದ ಹಲವಾರು ಮಗಳಂದಿರನ್ನು ಜೀತ ಹಾಗೂ ಶೋಷಣೆಯಿಂದ ನಾನು ಪಾರು ಮಾಡಿದ್ದೇನೆ. ನನ್ನ ಆತ್ಮೀಯ ಸಹೋದರ, ಸಹೋದರಿಯರೇ, ನಮ್ಮ ದೇಶದಲ್ಲಿ ಪ್ರತಿ ಗಂಟೆಗೆ ಎಂಟು ಮಕ್ಕಳು ಕಾಣೆಯಾಗುತ್ತಿದ್ದಾರೆ, ನಾಲ್ವರು ಮಕ್ಕಳನ್ನು ಲೈಂಗಿಕವಾಗಿ ಶೋಷಿಸಲಾಗುತ್ತಿದೆ ಮತ್ತು ಇಬ್ಬರ ಮೇಲೆ ಅತ್ಯಾಚಾರ ನಡೆಯುತ್ತಿದೆ.
ನಮ್ಮೆಲ್ಲರ ತಾಯಿಯಾದ ಭಾರತ ಮಾತೆಯ ಮಕ್ಕಳಲ್ಲದಿದ್ದರೂ ಇವರೆಲ್ಲರೂ ಕೆಲವರ ಮಕ್ಕಳಾದರೂ ಅಲ್ಲವೇ? ನಾವು ಗೌತಮ, ಕಪಿಲ, ಕನಾದ, ಅನಸೂಯ, ಸಾವಿತ್ರಿ, ಸೀತೆ, ಲಕ್ಷ್ಮಿಬಾಯಿ, ಬುದ್ಧ, ಮಹಾವೀರ, ಕಬೀರ, ಗುರುನಾನಕ್, ಛತ್ರಪತಿ ಶಿವಾಜಿ, ಮಹಾರಾಣಾ ಪ್ರತಾಪ್, ಗಾಂಧಿ, ಭಗತ್ ಸಿಂಗ್, ಸುಭಾಷ್‍ಮತ್ತು ಅಶ್ಫಕ್ ಉಲ್ಲಾ ಖಾನ್ ಅವರ ಮಕ್ಕಳೆನ್ನುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ. ನಿಮ್ಮಲ್ಲಿ, ಈ ಶ್ರೇಷ್ಠ ತಾಯ್ನಾಡಿನ ಮಕ್ಕಳಲ್ಲಿ ನಾನು ಕೇಳುವುದೆಂದರೆ, ಎಷ್ಟು ಕಾಲ ನೀವು ನಿರ್ಲಕ್ಷ್ಯ, ನಿಷ್ಕ್ರಿಯತೆ ಮತ್ತು ಭೀತಿಯ ನಿದ್ರಾವಸ್ಥೆಯಲ್ಲಿ ಇರಲು ಸಾಧ್ಯ?

ಅನುಕಂಪವಿಲ್ಲದೇ ಯಾವ ಗೌರವಾರ್ಹ ಸಮಾಜ ಅಸಾಧ್ಯ
ಇಷ್ಟೊಂದು ಇತಿಮಿತಿಗಳು ಮತ್ತು ಸಮಸ್ಯೆಗಳ ನಡುವೆಯೂ ಎಳೆ ಮಕ್ಕಳ ಬಾಲ್ಯವನ್ನು ಹೇಗೆ ಸಂರಕ್ಷಿಸಲು ಸಾಧ್ಯ ಎಂದು ಜನ ನನ್ನನ್ನು ಸಾಮಾನ್ಯವಾಗಿ ಕೇಳುತ್ತಾರೆ. ಇದಕ್ಕೆ ನನ್ನ ಪ್ರತಿಕ್ರಿಯೆ ಸದಾ ಒಂದೇ; ಭಾರತ ನೂರಾರು ಸಮಸ್ಯೆಗಳ ತವರೂರು ನಿಜ; ಆದರೆ ಇದು ಕೋಟ್ಯಂತರ ಪರಿಹಾರಗಳ ತಾಯಿ ಕೂಡಾ.
ಬಾಲ್ಯದಲ್ಲಿ ನಾನು ಕುಟುಂಬದ ಜತೆಗೆ ಹಲವಾರು ಧಾರ್ಮಿಕ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದೆ. ಸತ್ಯನಾರಾಯಣ ಮತ್ತು ರಾಮ ಚರಿತ ಮಾನಸದಂಥ ಕಥೆ ಕೇಳಿದ ಬಳಿಕ ನಾವು ಪಂಚಾಮೃತ ಸಿದ್ಧಪಡಿಸುತ್ತಿದ್ದೆವು. ಈ ಪವಿತ್ರ ಪಂಚಾಮೃತವನ್ನು ಎಲ್ಲರಿಗೂ ವಿತರಿಸುವ ಮುನ್ನ ಅದನ್ನು ಮೂರ್ತಿಗಳಿಗೆ ನೈವೇದ್ಯವಾಗಿ ನೀಡುತ್ತಿದ್ದೆವು. ಇದೀಗ ತಾಯ್ನಾಡು ಭಾರತಮಾತೆಯ ಬಗೆಗೆ ಅತ್ಯಂತ ದೈನ್ಯತೆ ಮತ್ತು ಪವಿತ್ರ ಭಾವನೆಯಿಂದ ಆಕೆಯ ಪದತಲದಲ್ಲಿ ಪಂಚಾಮೃತವನ್ನು ಸಮರ್ಪಿಸುತ್ತಿದ್ದೇನೆ.
ಐದು ಅಂಶಗಳ ಈ ಪಂಚಾಮೃತದಲ್ಲಿ, ಸಂವೇದನಾಶೀಲ ಭಾರತ, ಸಮಾವೇಶಿ (ಎಲ್ಲರನ್ನು ಒಳಗೊಂಡ) ಭಾರತ, ಸುರಕ್ಷಿತ ಭಾರತ, ಸ್ವಾವಲಂಬಿ ಭಾರತ ಮತ್ತು ಸ್ವಾಭಿಮಾನಿ ಭಾರತವನ್ನು ನಿರ್ಮಿಸುವ ಶಕ್ತಿ ಇದೆ ಎನ್ನುವುದು ನನ್ನ ದೃಢನಂಬಿಕೆ!
ಅನುಕಂಪವಿಲ್ಲದೇ ಯಾವ ಗೌರವಾರ್ಹ ಸಮಾಜವನ್ನು ಕೂಡಾ ಕಟ್ಟಲು ಸಾಧ್ಯವಿಲ್ಲ. ಅನುಕಂಪರಹಿತ ರಾಜಕೀಯ, ಆರ್ಥಿಕತೆ ಮತ್ತು ಸಮಾಜ ಎಲ್ಲವೂ ಆತ್ಮವಿಲ್ಲದ ದೇಹದಂತೆ. ಮತ್ತೊಬ್ಬರ ನೋವನ್ನು ನೈಜವಾಗಿ ಅನುಭವಿಸದೇ, ಅವರ ನರಳಿಕೆಯನ್ನು ಕೊನೆಗೊಳಿಸದೇ, ಸಂತೋಷ ಮತ್ತು ಶಾಂತಿಯನ್ನು ಪ್ರತಿಷ್ಠಾಪಿಸಲಾಗದು.

ಅನುಕಂಪದ ತಂಗಾಳಿ ನಮ್ಮ ಶ್ರೇಷ್ಠ ತಾಯ್ನೆಲದಿಂದ ಉದಯಿಸಬೇಕು
ಇಂದಿನ ದಿನಮಾನಗಳಲ್ಲಿ ರೋಬೋಟ್‍ಗಳು, ಕೃತಕ ಬುದ್ಧಿಮತ್ತೆ, ಆಗ್ಯುಮೆಂಟೆಡ್ ಮತ್ತು ವರ್ಚುವಲ್ ರಿಯಾಲಿಟಿ, ಕ್ಷಿಪ್ರವಾಗಿ ಬೆಳೆಯತ್ತಿವೆ. ಇವುಗಳು ಬಹಳಷ್ಟು ಪ್ರಯೋಜನಕಾರಿ ಕೂಡಾ ಎನ್ನುವುದನ್ನು ಅಲ್ಲಗಳೆಯಲಾಗದು.
ಆದರೆ ಈ ವೇಗದ ಗತಿಯ ತಂತ್ರಜ್ಞಾನಗಳು ಮುಂದಿನ 20-30 ವರ್ಷಗಳಲ್ಲಿ ನಮ್ಮನ್ನು ಎಲ್ಲಿಗೆ ಒಯ್ಯಬಲ್ಲವು ಎಂಬ ಬಗ್ಗೆ ಕೂಡಾ ನಾವು ಯೋಚಿಸಬೇಕಾದ ಅಗತ್ಯವಿದೆ. ನಮಗೆಲ್ಲರಿಗೂ ತಿಳಿದಿರುವಂತೆ ಶಿಕ್ಷಕರು, ವೈದ್ಯರು, ತತ್ವಶಾಸ್ತ್ರಜ್ಞರು, ಮಾರ್ಗದರ್ಶಕರು ಮತ್ತು ಸ್ಫೂರ್ತಿ ನೀಡುವವರ ಪಾತ್ರಗಳ ಬಗ್ಗೆ ಉಪೇಕ್ಷೆ ಇದೆ. ಶಾಲೆ, ಆಸ್ಪತ್ರೆ ಮತ್ತು ಮಾರುಕಟ್ಟೆಯ ಜತೆಗೆ ನಮ್ಮ ಪರಸ್ಪರ ಸಂಬಂಧಗಳು ಕೂಡಾ ಗಣನೀಯವಾಗಿ ಕುಗ್ಗುತ್ತಿವೆ.ಇಂಥ ಪರಿಸ್ಥಿತಿಯಲ್ಲಿ, ಕೌಟುಂಬಕ ಮೌಲ್ಯಗಳು, ಮಾನವೀಯ ಭಾವನೆಗಖು ಮತ್ತು ಅನುಕಂಪ ಇಲ್ಲದಿದ್ದರೆ, ನಾವು ಎಲ್ಲಿಗೆ ತಲುಪುತ್ತೇವೆ? ನನ್ನ ಅಭಿಪ್ರಾಯದಂತೆ ಭೌತಿಕ ಐಷಾರಾಮದಿಂದ ಚಾಲಿತವಾದ ಬಂಡವಾಳಶಾಹಿ ಆರ್ಥಿಕತೆಯನ್ನು ಹೊಂದಿರುವ ದೇಶಗಳಿಗೆ ಇಂದು ಭಾರತದ ಅಗತ್ಯ ಹಿಂದೆಂದಿಗಿಂತಲೂ ಅಧಿಕವಾಗಿದೆ. ಆದ್ದರಿಂದ ನಾವು ಇನ್ನಾದರೂ, ನಮ್ಮಲ್ಲಿ ಭಾವಸೂಕ್ಷ್ಮತೆಯನ್ನು ಅಳವಡಿಸಿಕೊಳ್ಳುವ ಕಾರ್ಯ ಆಗಬೇಕು.
ಪಾಶ್ಚಿಮಾತ್ಯರು ಮಾರುಕಟ್ಟೆ, ಆರ್ಥಿಕತೆ, ಕೊಳ್ಳುಬಾಕ ಸಂಸ್ಕೃತಿ, ಉತ್ಪಾದನೆ ಮತ್ತು ತಂತ್ರಜ್ಞಾನದ ಜಾಗತೀಕರಣವನ್ನು ಪಾಶ್ಚಿಮಾತ್ಯ ದೇಶಗಳು ಬೋಧಿಸಿವೆ ಎಂದು ನಾನು ಸದಾ ಹೇಳುತ್ತಿರುತ್ತೇನೆ.
ಈ ಭೌತಿಕತೆಯ ತೂಫಾನು ಮತ್ತು ಬಿಸಿಗಾಳಿ ಬಹುತೇಕ ನಮ್ಮ ಪಾದವನ್ನು ಗುಡಿಸಿಕೊಂಡು ಹೋಗುತ್ತಿದೆ. ಇದಕ್ಕೆ ಪ್ರತಿದಾಳಿ ನಡೆಸಲು ತಂಪಾದ ಮತ್ತು ಹಿತಕರವಾದ ಅನುಕಂಪದ ತಂಗಾಳಿ ನಮ್ಮ ಶ್ರೇಷ್ಠ ತಾಯ್ನೆಲದಿಂದ ಉದಯಿಸಬೇಕು.
ಪಂಚಾಮೃತದ ಎರಡನೇ ವಸ್ತು ಎಲ್ಲರ ಪಾಲ್ಗೊಳ್ಳುವಿಕೆ
ಪಂಚಾಮೃತದ ಎರಡನೇ ವಸ್ತು ಎಲ್ಲರ ಪಾಲ್ಗೊಳ್ಳುವಿಕೆ. ಭಾರತ ವೈವಿಧ್ಯತೆಯ ನಾಡು. ನಮ್ಮ ಅಸಂಖ್ಯಾತ ಧರ್ಮಗಳು, ಪ್ರಾರ್ಥನಾ ವಿಧಾನಗಳು, ಆಹಾರ, ಸಂಸ್ಕೃತಿ, ಭಾಷೆ, ಸಂಪ್ರದಾಯ, ಯೋಚನಾ ಲಹರಿ ಎಲ್ಲವೂ ಆಕರ್ಷಕ ಹೂದಾನಿಯಲ್ಲಿರುವ ವರ್ಣಮಯ ಪುಷ್ಪಗಳಂತೆ. ನಮ್ಮ ಸಂಸ್ಕøತಿಯ ಸೌಂದರ್ಯ ಅಡಗಿರುವುದೇ ಇಲ್ಲಿ. ಭಾರತದಂಥ ವೈವಿಧ್ಯಮಯ ದೇಶ ಇನ್ನೊಂದಿಲ್ಲ. ಎಲ್ಲರನ್ನೂ ಒಪ್ಪಿಕೊಳ್ಳುವುದು ನಮ್ಮ ಆತ್ಮ. ಎಲ್ಲರನ್ನೂ ಸೇರಿಸಿಕೊಳ್ಳದೇ ವಿವಿಧತೆಯಲ್ಲಿ ಏಕತೆಯನ್ನು ಕಲ್ಪಿಸಿಕೊಳ್ಳಲೂ ಸಾದ್ಯವಿಲ್ಲ.
ಋಗ್ವೇದ ಹೇಳುವಂತೆ,
ಸಮ್ವಾಚದ್ವಾಮ್ ಸಂವಾದದ್ವಾಂ
ಸಾಮ ವೋ ಮನಾಮಸ್ಮಿಜಾನತಂ
ದೇವ ಭಾಗಂ ಯಥೋ ಪೂರ್ವೇ
ಸಂಜನಾನ ಅಪಾಸತೆ
(ನಾವೆಲ್ಲರೂ ಒಗ್ಗಟ್ಟಾಗಿ ನಡೆಯೋಣ ಎಂದು ಪ್ರತಿಜ್ಞೆ ಮಾಡೋಣ. ಯಾರೂ ವಿಭಜಿಸಲಾರರು; ಯಾರು ಕೂಡಾ ಹಿಂದುಳಿಯಲಾರರು. ನಾವೆಲ್ಲರೂ ಒಕ್ಕೊರಲ ಧ್ವನಿ ಎತ್ತೋಣ. ನಾವೆಲ್ಲರೂ ಒಗ್ಗಟ್ಟಾಗಿ ಚಿಂತಿಸೋಣ. ನಮ್ಮ ಪೂರ್ವಜರಂತೆ ನಾವು ಕೂಡಾ ಜತೆಗೆ ಕೂರೋಣ ಮತ್ತು ಜ್ಞಾನ ಸಂಪತ್ತನ್ನು ಸೃಷ್ಟಿಸೋಣ).
ಅರ್ಥಶಾಸ್ತ್ರಜ್ಞರ ಅಭಿವೃದ್ಧಿ ಸೂಚಕಗಳು ತಲಾದಾಯದಿಂದ ಹಿಡಿದು ಜಿಡಿಪಿವರೆಗೆ ವ್ಯತ್ಯಯವಾಗಬಹುದು. ಆದರೆ ನ್ನ ಮಾಪನವೇ ಭಿನ್ನ. ದೂರದ ಹಳ್ಳಿಗಾಡಿನಲ್ಲಿ ಜೀತಕ್ಕಿರುವ ಅಥವಾ ಕಲ್ಲಿನ ಗಣಿಯಲ್ಲಿ ನಿರಂತರ ಭಯ, ಆತಂಕ, ಅಭದ್ರತೆ, ಅನಿಶ್ಚಿತತೆಯ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಆದಿವಾಸಿ ಹೆಣ್ಣುಮಗಳ ಮುಖದಲ್ಲಿ ಅರಳುವ ನಗುವಿನಿಂದ ನಾನು ಸಮಾಜದ ಅಭಿವೃದ್ಧಿಯನ್ನು ಅಳೆಯುತ್ತೇನೆ.

ವೇದಗಳಲ್ಲಿ ಜನಪ್ರಿಯವಾದ ಸ್ತುತಿಯೊಂದಿದೆ
ಮೂರನೇ ಅಂಶ ಭದ್ರತೆ. ಸಮಾಜದಲ್ಲಿ ಭದ್ರತೆ ಇಲ್ಲದೇ ಮತ್ತು ಪರಸ್ಪರ ವಿಶ್ವಾಸ ಮತ್ತು ಗೌರವದ ವಾತಾವರಣವಿಲ್ಲದೇ, ರಾಷ್ಟ್ರನಿರ್ಮಾಣವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ನಮ್ಮ ಸಾರ್ವಭೌಮತ್ವದ ಗಡಿಯನ್ನು ಕಾಯುವುದಕ್ಕಿಂತ ಹೆಚ್ಚಿನದಲ್ಲದಿದ್ದರೂ, ಅಷ್ಟೇ ಸಮಾನವಾಗಿ ಆಂತರಿಕ ಭದ್ರತೆ ಕೂಡಾ ಮುಖ್ಯ.
ವೇದಗಳಲ್ಲಿ ಜನಪ್ರಿಯವಾದ ಸ್ತುತಿಯೊಂದಿದೆ.
ಸಹ ನಾವ್ ಅವತು
ಸಹ ನಾವ್ ಭುನಕ್ತು
ಸಹವೀರ್ಯಂ ಕರವಾವಹೈ
(ಓ ದೇವದೇ, ನಮ್ಮೆಲ್ಲರನ್ನೂ ಕಾಪಾಡು! ನಮ್ಮೆಲ್ಲರನ್ನೂ ಪೋಷಿಸು ಮತ್ತು ಸಂಘಟಿತ ಪ್ರಯತ್ನಪಡುವಂತೆ ಮಾಡು)
ಹದಿನೈದು ವರ್ಷದ ಹೆಣ್ಣುಮಕ್ಕಳ ಆರ್ತನಾದ ನನ್ನ ಕರ್ಣವನ್ನು ಬಿಸಿ ಸೀಸ ಎರಕ ಹೊಯ್ದಂತೆ ತುಂಬಿದೆ. ಆ ದಿನ ಆಕೆ ಹೇಳಿದ ಎಲ್ಲವನ್ನೂ ಕೇಳಿಸಿಕೊಳ್ಳುವುದು ಎಷ್ಟು ಯಾತನಾಮಯವಾಗಿತ್ತು ಎನ್ನುವುದನ್ನು ಇಂದಿಗೂ ನಾನು ನೆನೆಸಿಕೊಳ್ಳುತ್ತೇನೆ.
ಪೊಲೀಸ್ ಠಾಣೆಯಿಂದ ವಾಪಸ್ಸಾಗುತ್ತಿದ್ದಾಗ ಆಕೆ ಎದೆಯೊಡೆಯುವ ರೀತಿಯಲ್ಲಿ ಅಳುತ್ತಿದ್ದಳು. ಹಿಂದಿನ ದಿನ ರಾತ್ರಿ ಆಕೆ ಅಳುತ್ತಾ ತಂದೆಯ ಎದುರು ತೀರಾ ಬಳಲಿ, ಆಯಾಸವಾದ್ದರಿಂದ ದಯೆ ತೋರುವಂತೆ ದೈನ್ಯದಿಂದ ಬೇಡಿಕೊಂಡಿದ್ದಳು. ಆದರೆ ಆತ ತನ್ನ ಕೃತ್ಯ ನಿಲ್ಲಿಸಲಿಲ್ಲ; ಆತನ ಕಿವಿ ಆಕೆಯ ಮೊರೆಗೆ ಕಿವುಡಾಗಿತ್ತು. ಆಕೆಯ ಮೇಲೆ ಅತ್ಯಾಚಾರ ಎಸಗಿದ ಎಂದು ಬಾಲಕಿ ತನ್ನ ಕರುಣಾಜನಕ ಕಥೆ ಬಿಚ್ಚಿಟ್ಟಿದ್ದಳು.
"ನನ್ನ ತಂದೆಯ ವಿರುದ್ಧ ದೂರು ದಾಖಲಿಸುವುದು ಬಿಟ್ಟರೆ ನನಗೆ ಬೇರಾವ ಆಯ್ಕೆಯೂ ಇರಲಿಲ್ಲ" ಎಂದು ಆಕೆ ಗೋಳು ತೋಡಿಕೊಂಡಿದ್ದಳು. "ನಾನು ನನ್ನ ತಂದೆಯ ವಿರುದ್ಧ ದೂರು ದಾಖಲಿಸಬಾರದಿತ್ತು" ಎಂದು ಪದೇ ಪದೇ ಪಶ್ಚಾತ್ತಾಪದಿಂದ ನುಡಿಯುತ್ತಿದ್ದಳು.

ಅಪರಾಧದ ವಿರುದ್ಧ ಪ್ರಬಲವಾದ ಶಾಸನ ಜಾರಿಗೆ
ಇದು ತಂದೆಯೇ ಮಗಳ ಮೇಲೆ ಅತ್ಯಾಚಾರ ಎಸಗಿದ ಒಂದು ಘಟನೆ ಅಲ್ಲ; ಇದು ಭಾರತದ ಆತ್ಮದ ಮೇಲೆ ನಡೆದ ಅತ್ಯಾಚಾರ. ನಮ್ಮ ಶ್ರೇಷ್ಠ ಸಂಪ್ರದಾಯಗಳ ಮೇಲೆ ನಡೆದ ಅತ್ಯಾಚಾರ. ಇದು ನಮ್ಮ ಶತಮಾನಗಳಷ್ಟು ಹಳೆಯ ಕೌಟುಂಬಿಕ ಮೌಲ್ಯಗಳ ಮೇಲೆ ನಡೆದ ಅತ್ಯಾಚಾರ.
ದುರ್ಗಾಮಾತೆ ಶಕ್ತಿ ಮತ್ತು ಧೈರ್ಯದ ದೇವತೆ ಎಂದು ಪೂಜಿಸುವ ನಾಡಿನಿಂದ ಬಂದವರು ನಾವು. ಸರಸ್ವತಿಯನ್ನು ಜ್ಞಾನದೇವತೆ, ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದು ಆರಾಧಿಸುವವರು ನಾವು. ಇಂಥ ಪತನವನ್ನು ಮತ್ತು ಚಾರಿತ್ರ್ಯ ಹನನವನ್ನು ನಾವು ಹೇಗೆ ಒಪ್ಪಿಕೊಳ್ಳಲು ಅಥವಾ ಸಹಿಸಿಕೊಳ್ಳಲು ಸಾಧ್ಯ?ಕೆಲ ತಿಂಗಳ ಹಿಂದೆ ಹನ್ನೆರಡು ವರ್ಷದ ಬಾಲಕ ಹಾಗೂ ಆತನ ಸ್ನೇಹಿತರು ಒಬ್ಬಂಟಿಯಾಗಿದ್ದ ಸ್ವಂತ ಸಹೋದರಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದರು. ಈ ಹುಡುಗರು ಈ ಘಟನೆಯ ಹಿಂದಿನ ದಿನ ರಾತ್ರಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದ್ದರು.
ಆನ್‍ಲೈನ್‍ನಲ್ಲಿ ಆಶ್ಲೀಲ ಚಿತ್ರಗಳ ವಹಿವಾಟು ತಡೆಯಲು ಅಸಾಧ್ಯ ಎಂಬ ರೀತಿಯಲ್ಲಿ ಬೆಳೆಯುತ್ತಿದೆ. ಈ ಅಪರಾಧದ ವಿರುದ್ಧ ಪ್ರಬಲವಾದ ಶಾಸನ ಜಾರಿಗೆ ತರುವಂತೆ ನಾನು ನಿರಂತರವಾಗಿ ಒತ್ತಾಯಿಸುತ್ತಾ ಬಂದಿದ್ದೇನೆ. ಕಳೆದ ತಿಂಗಳು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ, ಹಲವು ದೇಶಗಳ ಮುಖ್ಯಸ್ಥರನ್ನು ನಾನು ಭೇಟಿ ಮಾಡಿದ್ದೆ ಹಾಗೂ ಅವರು ಈಗಾಗಲೇ ಆನ್‍ಲೈನ್ ಮಕ್ಕಳ ಅಶ್ಲೀಲತೆ ವಿರುದ್ಧ ಅಂತರರಾಷ್ಟ್ರೀಯ ಮಟ್ಟದಲ್ಲಿ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಕಾರ್ಯ ಆರಂಭಿಸಿದ್ದಾರೆ.
ಸುರಕ್ಷಿತ ಭಾರತದ ಉದ್ದೇಶಕ್ಕಾಗಿ ಯಾತ್ರೆ
ನಮ್ಮ ಮಹಿಳೆಯರು ಮನೆಯಲ್ಲಿ, ಕೆಲಸದ ಸ್ಥಳದಲ್ಲಿ, ಪ್ರದೇಶಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಭೀತಿ, ಬೆದರಿಕೆ ಮತ್ತು ಅಭದ್ರತೆಯ ಕಪಿಮುಷ್ಟಿಯಲ್ಲಿ ಸಿಲುಕಿಕೊಂಡಿದ್ದಾರೆ. ಬಾಲಕಿಯರ ಪಾಲನಾಗೃಹಗಳನ್ನು ನಡೆಸುವ ಹೊಣೆಯನ್ನು ಹೊತ್ತವರೇ ಅವರ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡುತ್ತಿದ್ದಾರೆ.
ಮಕ್ಕಳ ಕಲ್ಯಾಣ ಮತ್ತು ಸಂರಕ್ಷಣೆಯ ಪೋಷಕರು ಎನಿಸಿಕೊಂಡವರೇ ಮಕ್ಕಳನ್ನು ಮಾರುತ್ತಿದ್ದಾರೆ. ಕಿರುಕುಳ ಮತ್ತು ಅಣಕದ ಭೀತಿಯಿಂದ ಹೆಣ್ಣುಮಕ್ಕಳು ಶಾಲೆಗೆ ಹಾಜರಾಗುವುದು ನಿಲ್ಲಿಸುತ್ತಿದ್ದಾರೆ. ಭೀತಿಯಿಂದಾಗಿ ನಾವು ಕೂಡಾ ನಮ್ಮ ಕಣ್ಣೆದುರೇ ನಡೆಯುತ್ತಿರುವ ಇವೆಲ್ಲವನ್ನೂ ನೋಡುತ್ತಾ ಸುಮ್ಮನಾಗಿದ್ದೇವೆ. ಇದು ಭಾರತಮಾತೆಗೆ ನಾವು ತೋರುವ ದೊಡ್ಡ ಅವಮಾನ.ಈ ಭೀತಿ ನಮ್ಮನ್ನು ಒಳಗಿನಿಂದಲೇ ಟೊಳ್ಳಾಗಿಸುತ್ತಿದೆ. ಅಸಹಿಷ್ಣು ಮತ್ತು ಹಿಂಸಾತ್ಮಕ ಕೃತ್ಯಗಳನ್ನು ನಾವು ಸಹಿಸುತ್ತಿದ್ದೇವೆ. ತನ್ನೆದುರೇ ನಡೆಯುತ್ತಿರುವ ಹಿಂಸೆ ಮತ್ತು ಅನ್ಯಾಯವನ್ನು ನೋಡುವ ಸಮಾಜದ ಮೌನ, ಕೇವಲ ದನಗಾಹಿ ಪ್ರವೃತ್ತಿ ಮಾತ್ರವಲ್ಲದೇ, ಅದು ಕೂಡಾ ಒಂದು ರೀತಿಯ ಹಿಂಸಾತ್ಮಕ ಕ್ರಮವೇ ಆಗಿದೆ!.ಕಳೆದ ವರ್ಷ ಸುರಕ್ಷಿತ ಬಾಲ್ಯ, ಸುರಕ್ಷಿತ ಭಾರತದ ಉದ್ದೇಶಕ್ಕಾಗಿ ನಾವು ಭಾರತಯಾತ್ರೆ ಹೆಸರಿನಲ್ಲಿ 12 ಸಾವಿರ ಕಿಲೋಮೀಟರ್ ನಡಿಗೆಯನ್ನು ಕೈಗೊಂಡಿದ್ದೆವು. ಈ ಐತಿಹಾಸಿಕ ಯಾತ್ರೆ, ಕನ್ಯಾಕುಮಾರಿಯ ವಿವೇಕಾನಂದ ಶಿಲಾಸ್ಮಾರಕದಿಂದ ಆರಂಭವಾಗಿದ್ದು, 12 ಲಕ್ಷ ಮಂದಿ ಇದರಲ್ಲಿ ಪಾಲ್ಗೊಂಡಿದ್ದರು. ನಮ್ಮ ಪ್ರಯತ್ನ ಈಗಲೂ ಮುಂದುವರಿದಿದೆ.
ಸ್ವಾಮೀಜಿಯೊಬ್ಬರು ಒಮ್ಮೆ ಹೀಗೆ ಎಚ್ಚರಿಕೆ ನೀಡಿದ್ದರು, "ಅಭಯಂ ಮಿತ್ರದ್- ಅಭಯಂ ಅಮಿತ್ರದ್, ಅಭಯಮ್ ಜ್ಞಾತದ್ ಅಭಯಮ್ ಪರೋಕ್ಷತ್ (ನಾವು ಸ್ನೇಹಿತರ ಬಗ್ಗೆ ಭೀತಿಪಡಬೇಕಿಲ್ಲ. ಸುಳ್ಳುಗಳ ಬಗ್ಗೆ ನಾವು ಭಯ ಪಡಬೇಕಾಗಿಲ್ಲ. ನಮಗೆ ಕಾಣುವುದರ ಬಗ್ಗೆ ನಾವು ಭಯ ಪಡಬೇಕಿಲ್ಲ. ಆದರೆ ಅದೃಶ್ಯವಾಗಿರುವುದರ ಬಗ್ಗೆ ನಾವು ಭಯ ಪಡಬೇಕಿಲ್ಲ).

ಪಂಚಾಮೃತದ ನಾಲ್ಕನೇ ಅಂಶ ಸ್ವಾವಲಂಬಿ ಭಾರತ
ಪಂಚಾಮೃತದ ನಾಲ್ಕನೇ ಅಂಶ ಸ್ವಾವಲಂಬಿ ಭಾರತ. ಎಲ್ಲ ದೇಶಗಳು, ವ್ಯವಹಾರಗಳು, ಮಾರುಕಟ್ಟೆಗಳು ಮತ್ತು ತಂತ್ರಜ್ಞಾನಗಳನ್ನು ಒಂದುಗೂಡಿಸಬೇಕು ಎನ್ನುವುದು ನಿಜ. ಆದರೆ ಸ್ವಾವಲಂಬಿ ದೇಶವನ್ನಾಗಿ ಮಾಡಬೇಕಾದರೆ, ಆರ್ಥಿಕ ಸ್ಥಿರತೆ, ಉದ್ಯೋಗ ಸೃಷ್ಟಿ ಮತ್ತು ಸಾಮಾಜಿಕ ಸಮಾನತೆಯನ್ನು ಹೊಂದಲೇಬೇಕು.
ನಮ್ಮ ದೇಶ ಬಹುತೇಕ ಕೃಷಿಯ ಮೇಲೆ ಮತ್ತು ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕೆಗಳ ಮೇಲೆಯೇ ಅವಲಂಬಿತವಾಗಿದೆ. ನಾವು ವಿದೇಶಿ ಬಂಡವಾಳದಿಂದ ಸ್ವಾವಲಂಬಿಗಳಾಗಲು ಸಾಧ್ಯವಿಲ್ಲ ಅಥವಾ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುವುದರಿಂದ ಇದು ಸಾಧ್ಯವಿಲ್ಲ. ನಮ್ಮ ರೈತರಿಗೆ, ಕಾರ್ಮಿಕರಿಗೆ ಮತ್ತು ಚಿಲ್ಲರೆ ಮಾರಾಟಗಾರರಿಗೆ ನಾವು ಶಕ್ತಿ ತುಂಬಬೇಕು.
ಭಾರತ ಇನ್ನೂ ಹಸಿವಿನಿಂದ ಮುಕ್ತವಾಗಬೇಕಿದೆ. ಲಕ್ಷಾಂತರ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅರ್ಥಪೂರ್ಣ, ಗುಣಮಟ್ಟದ ಮತ್ತು ಉದ್ಯೋಗಕ್ಕೆ ಸೂಕ್ತವಾದ ಕೌಶಲ ಅಭಿವೃದ್ಧಿ ಮತ್ತು ಶಿಕ್ಷಣ ಇನ್ನೂ ನಮ್ಮನ್ನು ಸವಾಲಾಗಿಯೇ ಕಾಡುತ್ತಿದೆ.
ನಮ್ಮ ಚಿನ್ನದ ಹಕ್ಕಿಯ ನಾಡು ಎಂಬ ಬಿರುದನ್ನು ನಾವು ವಾಸ್ತವವಾಗಿ ಮರಳಿ ಪಡೆಯಬೇಕಾದರೆ, ಶಿಕ್ಷಣದ ಪರಿದಿಯಿಂದ ಹೊರಗುಳಿದ 85 ದಶಲಕ್ಷ ಮಕ್ಕಳಿಗೆ ನಾವು ಗುಣಮಟ್ಟದ ಅರ್ಥಪೂರ್ಣ ಹಾಗೂ ಸಮಾನತೆಯ ಶಿಕ್ಷಣವನ್ನು ನೀಡಬೇಕಾದ ಅನಿವಾರ್ಯತೆ ಇದೆ.

ಮೊದಲನೆಯದಾಗಿ ಅಮರತ್ವ
ಋಗ್ವೇದದ ಪ್ರಥಮ ಸ್ತುತಿ, "ಅಗ್ನಿಂ ಈಳೇ ಪುರೋಹಿತಂ ಯಜ್ಞಸ್ಯ ದೇವಂ ರಿತ್ವಿಜಂ; ಹೋತಾರಂ ರತ್ನ ಧಾತಮಮ್ (ಓ ಸಮಾಜದ ಹಿತೈಷಿಗಳೇ, ಜ್ಞಾನ ಬೆಳಕು ಉರಿಸೋಣ. ಕಾಲದ ಕರೆಗೆ ಅನುಗುಣವಾಗಿ ಪರಸ್ಪರರ ಕಲ್ಯಾಣಕ್ಕೆ ಸಂಘಟಿತವಾಗಿ ಕೊಡುಗೆ ನೀಡೋಣ. ಹೀಗೆ ಹಂಚಿಕೊಂಡ ಜ್ಞಾನವನ್ನು ಎಲ್ಲರ ಸಮೃದ್ಧಿಗಾಗಿ ಪರಿವರ್ತಿಸೋಣ).
ರಾಷ್ಟ್ರನಿರ್ಮಾಣವೆಂಬ ಪಂಚಾಮೃತದ ಐದನೇ ಅಂಶ ಸ್ವಯಂಗೌರವ. ನೂರಾರು ವರ್ಷಗಳ ಸಾಮ್ರಾಜ್ಯಶಾಹಿ ಆಡಳಿತ ಕೂಡಾ ಭಾರತದ ಆತ್ಮವನ್ನು ಕೊಲ್ಲಲು ಸಾಧ್ಯವಾಗಿಲ್ಲವಾದರೂ, ಇದು ನಮ್ಮ ಮನಸ್ಸುಗಳಲ್ಲಿ ಕೀಳರಿಮೆಯನ್ನು ಮತ್ತು ಜೀತಪದ್ಧತಿಯ ಮನೋಭಾವವನ್ನು ಇಂದಿಗೂ ಕಟ್ಟಿಹಾಕುವುದು ಸಾಧ್ಯವಾಗಿಲ್ಲ. ಈ ಕೀಳರಿಮೆ ಭಾಷೆ, ಸಂಪ್ರದಾಯ, ಸಂಸ್ಕøತಿ, ಆಚರಣೆಗಳು, ಜೀವನ ವಿಧಾನ, ಆಹಾರ ಮತ್ತು ಶಿಕ್ಷಣ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಪ್ರತಿಫಲಿತವಾಗಿದೆ. ಈ ಸಂಕೀರ್ಣತೆಯನ್ನು ನಿರ್ಮೂಲನೆಗೊಳಿಸುವ ಕಪಟನಾಟಕ ನಮ್ಮನ್ನು ಮತ್ತಷ್ಟು ಅತಾರ್ಕಿಕಗೊಳಿಸಿದೆ ಹಾಗೂ ನಮ್ಮ ಅಹಮಿಕೆಯನ್ನು ಹೆಚ್ಚಿಸುವಲ್ಲಷ್ಟೇ ಸಾಧ್ಯವಾಗಿದೆ.
ನಮ್ಮ ಸಂಸ್ಕøತಿಯ ಬಗ್ಗೆ ಸ್ವಯಂ ಗೌರವವನ್ನು ಸೃಷ್ಟಿಸುವ ಸಲುವಾಗಿ, ನಮ್ಮ ಶ್ರೇಷ್ಠ ಸಂಸ್ಕøತಿಯ ಹೃದಯದಲ್ಲಿರುವ ಮೌಲ್ಯಗಳನ್ನು ನಾವು ಅಳವಡಿಸಿಕೊಳ್ಳಬೇಕು. ಶ್ರೇಷ್ಠ ಮತ್ತು ಪುರಾತನ ಭಾರತೀಯ ಸಂಸ್ಕøತಿ ಮೂರು ತತ್ವಶಾಸ್ತ್ರೀಯ ಅಂಶಗಳನ್ನು ಒಳಗೊಂಡಿದೆ ಎನ್ನುವುದು ನನ್ನ ಅಭಿಮತ.
ಮೊದಲನೆಯದಾಗಿ ಅಮರತ್ವ. ಅಂದರೆ ನಾವು ಹುಟ್ಟುವುದೂ ಇಲ್ಲ; ನಾಶವಾಗುವುದೂ ಇಲ್ಲ. ಎರಡನೆಯದೆಂದರೆ, ಸಾರ್ವತ್ರಿಕತೆ. ಅಂದರೆ ನಾವು ಸಮಯ ಮತ್ತು ಸ್ಥಳದ ಗಡಿಯೊಳಗೆ ನಮ್ಮನ್ನು ಸೀಮಿತಗೊಳಿಸಿಕೊಳ್ಳಬಾರದು. ಈ ಸಾರ್ವತ್ರಿಕತೆಗಾಗಿ ಸಾವಿರಾರು ವರ್ಷಗಳ ಹಿಂದೆಯೇ ಋಷಿಮುನಿಗಳು ವಸುದೈವ ಕುಟುಂಬಕಂ (ಇಡೀ ಭೂಮಿಯೇ ಒಂದು ಕುಟುಂಬ) ಎಂಬ ಧ್ಯೇಯೋದಾತ್ತ ಸಾರ್ವತ್ರಿಕ ಸಂದೇಶವನ್ನು ನೀಡಿದ್ದಾರೆ. ಮೂರನೆಯದು ಪರಿಪೂರ್ಣತೆ. ಅಂದರೆ ನಾವು ಈ ಸಮಾಜ ಮತ್ತು ವಿಶ್ವವನ್ನು ಛಿದ್ರ ಛಿದ್ರವಾಗಿ ನೋಡಬಾರದು. ಉಪನಿಷತ್ ಹೇಳುವಂತೆ, "ಈಶಾ ವಾಸ್ಯಂ ಇದಂ ಸರ್ವಂ, ಯುಕ್ತಿಂಚ ಜಗತ್ಯಾಂ ಜಗತ್" (ಈ ಪ್ರಕೃತಿಯ ಪೂರ್ಣ ವೃತ್ತವೇ ದೇವರಿಂದ ಆವರಿಸಲ್ಪಟ್ಟಿದೆ. ಈ ವಿಶ್ವದಲ್ಲಿ ಯಾವುದೆಲ್ಲ ಇದೆಯೋ ಅದೆಲ್ಲ ಆ ಮಹಾಬಲನಾದ ದೇವರ ಅಸ್ತಿತ್ವದಲ್ಲಿ ಅಥವಾ ನಿಯಂತ್ರಣದಲ್ಲಿದೆ)

ಸಂಸ್ಕೃತಿ ಎನ್ನುವುದು ನಿಂತ ನೀರಿನ ಕೆರೆಯಲ್ಲ
ಈ ವಿಶೇಷ ಕಾರಣಕ್ಕಾಗಿಯೇ ಸಂಸ್ಕೃತಿ ಎನ್ನುವುದು ನಿಂತ ನೀರಿನ ಕೆರೆಯಲ್ಲ; ಬದಲಾಗಿ ಅದು ಹರಿಯುವ ನದಿ. ಅದು ಹಲವು ತೊರೆ, ಉಪನದಿಗಳಿಗೆ ಜನ್ಮ ನೀಡುತ್ತಲೇ ಇರುತ್ತದೆ. ಭಾರತೀಯರಿಗೆ ನಿರಂತರ ಸ್ವಯಂ ಸುಧಾರಣೆಯ ವಿಶಿಷ್ಟ ಗುಣವಿದೆ. ಈ ಬಗ್ಗೆ ನಾವು ಹೆಮ್ಮೆಪಡಬೇಕು.
ನಾನು ಭಾರತದ ಯುವಕರನ್ನು ಬಡಿದೆಬ್ಬಿಸುತ್ಥೇನೆ. ಇತರರ ನೆರಳನ್ನು ಅನುಕರಿಸುವ ಅಥವಾ ಬೆನ್ನಟ್ಟುವ ಬದಲು, ನಿಮ್ಮದೇ ಸಹಜ ಸಂಸ್ಕøತಿಯನ್ನು ಗುರುತಿಸಿಕೊಳ್ಳಿ ಮತ್ತು ಇದರಿಂದ ಸ್ವಯಂಗೌರವವನ್ನು ಗಳಿಸಿಕೊಳ್ಳಿ. ಎಲ್ಲರೂ ಅನುಕಂಪಯುಕ್ತ, ಎಲ್ಲರನ್ನೂ ಒಳಗೊಂಡ, ಸುಭದ್ರ, ಸ್ವಾವಲಂಬಿ ಹಾಗೂ ಸ್ವಯಂಗೌರವದ ಭಾರತವನ್ನು ನಿರ್ಮಿಸುವ ಪ್ರತಿಜ್ಞೆ ಮಾಡೋಣ. ಲಕ್ಷಾಂತರ ಮಂದಿ ನಿರ್ಲಕ್ಷ್ಯಕ್ಕೊಳಗಾದ ಮತ್ತು ಸಾಮಾಜಿಕವಾಗಿ ಹೊರಗುಳಿದ ಮಕ್ಕಳಿಂದ ಇದನ್ನು ಆರಂಭಿಸೋಣ ಮತ್ತು ಅವರ ಸ್ವಾತಂತ್ರ್ಯ, ಸಂರಕ್ಷಣೆ, ಭದ್ರತೆ, ಶಿಕ್ಷಣ, ಮೌಲ್ಯಗಳು ಮತ್ತು ಆರೋಗ್ಯಕ್ಕಾಗಿ ಒಗ್ಗೂಡಿ ಕೆಲಸ ಮಾಡೋಣ. ಆಗ ಮಾತ್ರ ನಮ್ಮ ಶ್ರೇಷ್ಠ ಭಾರತದ ನಿರ್ಮಾಣದ ಕನಸು ನನಸಾಗಲು ಸಾಧ್ಯ. ಅಪವಾದಗಳ ಎರಚಾಟ ಮತ್ತು ಸರ್ಕಾರಗಳ ನಿಂದನೆಯಿಂದ ಒಂದು ಪ್ರಬಲ ದೇಶವನ್ನು ಕಟ್ಟಲಾಗದು. ಕೇವಲ ಆಗೊಮ್ಮೆ ಈಗೊಮ್ಮೆ ಕೋರಿಕೆಗಳನ್ನು ಮಾಡುವುದರಿಂದಲೂ ಇದು ಸಧ್ಯವಿಲ್ಲ.ಆದ್ದರಿಂದ ದೇಶವನ್ನು ಶ್ರೇಷ್ಠವನ್ನಾಗಿ ಮಾಡುವುದು ಯಾವುದು? ದೊಡ್ಡ ಕನಸನ್ನು ಬೆನ್ನಟ್ಟುವ ಮತ್ತು ತನ್ನ ಪ್ರತಿಜ್ಞೆಯನ್ನು ಈಡೇರಿಸುವ ಅಂತರ್ಗತ ಶಕ್ತಿ, ಸಾಮಥ್ರ್ಯ ಮತ್ತು ಇಚ್ಛಾಶಕ್ತಿಯಿಂದ ಈ ಗುರಿಯನ್ನು ತಲುಪುವ ಬದ್ಧತೆಯ ಪ್ರತಿಜ್ಞೆಯಷ್ಟೇ ಒಂದು ದೇಶವನ್ನು ಶ್ರೇಷ್ಠ ದೇಶವಾಗಿ ರೂಪಿಸಬಹುದು. ನಾಳೆ ಸಂಜೆ, ಪ್ರತಿ ವರ್ಷದಂತೆ, ಜೈಪುರದ ಹೊರವಲಯದಲ್ಲಿರುವ ನಮ್ಮ ಧೀರ್ಘಾವಧಿ ಪುನರ್ವಸತಿ ಕೇಂದ್ರವಾದ ಬಾಲ ಆಶ್ರಮದ ನಮ್ಮ ಮಕ್ಕಳು, ರಾವಣದ ಪ್ರತಿಕೃತಿ ದಹಿಸುವ ಮುನ್ನ ರಾಮಲೀಲಾ ಆಡಲಿದ್ದಾರೆ.
ಒಂದು ಸ್ಪರ್ಧೆಯಲ್ಲಿ ಈ ಮಕ್ಕಳು ಅವಿರೋಧವಾಗಿ ನಮ್ಮ ದೇಶ ಮತ್ತ ಸಮಾಜದ ಹತ್ತು ಅನಿಷ್ಟಗಳನ್ನು ಗುರುತಿಸಿದ್ದಾರೆ. ಈ ಅನಿಷ್ಟಗಳನ್ನು ರಾವಣದ ಪ್ರತಿ ತಲೆಯನ್ನೂ ಬರೆದು ಆ ಬಳಿಕ ಅದಕ್ಕೆ ಬೆಂಕಿ ಹಚ್ಚಲಿದ್ದಾರೆ. ನಮ್ಮ ಮಕ್ಕಳು ಸಾವಿರಾರು ಮಂದಿ ಗ್ರಾಮಸ್ಥರ ಜತೆ ಸೇರಿ, ಸಮಾಜದ ಈ ಅನಿಷ್ಟಗಳನ್ನು ಮತ್ತು ಅಪರಾಧಗಳನ್ನು ನಿರ್ಮೂಲನೆ ಮಾಡುವ ಪ್ರತಿಜ್ಞೆ ಕೈಗೊಳ್ಳಲಿದ್ದಾರೆ.

ಪ್ರಜ್ಞಾವಂತ ಯುವಕರ ಪಾಲ್ಗೊಳ್ಳುವಿಕೆ ಮತ್ತು ನಾಯಕತ್ವ ಅತ್ಯಗತ್ಯ
ಇದನ್ನು ಮಾಡುವಲ್ಲಿ ಮತ್ತು ಶ್ರೇಷ್ಠ ಭಾರತವನ್ನು ನಿರ್ಮಿಸುವ ಗುರಿ ಸಾಧನೆ ನಿಟ್ಟಿನಲ್ಲಿ ಮತ್ತು ಮಗುಸ್ನೇಹಿ ದೇಶವನ್ನು ನಿರ್ಮಿಸುವಲ್ಲಿ ಪ್ರಜ್ಞಾವಂತ ಯುವಕರ ಪಾಲ್ಗೊಳ್ಳುವಿಕೆ ಮತ್ತು ನಾಯಕತ್ವ ಅತ್ಯಗತ್ಯ. ನಮ್ಮ ಮಾತೃಭೂಮಿಯ ವರ್ತಮಾನ ಹಾಗೂ ಭವಿಷ್ಯವನ್ನು ಕಾಪಾಡುವ ಮಾರ್ಗದಲ್ಲಿ ನಾಯಕತ್ವ ವಹಿಸುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಯುವಕರಿಗೆ ಮನವಿ ಮಾಡುತ್ತಿದ್ದೇನೆ.
ನಮ್ಮ ದೇಶದ ಉದ್ದಗಲಕ್ಕೂ ಗ್ರಾಮ ಗ್ರಾಮಗಳಲ್ಲಿ ಆರೆಸ್ಸೆಸ್ ಶಾಖೆಗಳಿದ್ದು, ನಮ್ಮ ತಲೆಮಾರಿನ ಮಕ್ಕಳ ಸಂರಕ್ಷಣೆಯ ಮಹಾಗೋಡೆಯಾಗಿ ಇದು ಕೆಲಸ ಮಾಡಿದ್ದೇ ಆದಲ್ಲಿ, ಮುಂದೆ ಬರುವ ಪೀಳಿಗೆ ತಮ್ಮನ್ನು ರಕ್ಷಿಸಿಕೊಳ್ಳುವಲ್ಲಿ ಸ್ವಯಂಶಕ್ತಿಯನ್ನು ಪಡೆಯಲಿದೆ.
ವಿಷಣ್ಣನಾಗಿ ಸಮುದ್ರದಂಡೆಯಲ್ಲಿ ಕುಳಿತಿದ್ದು ಹನುಮಂತನಿಗೆ ತನ್ನ ಅಗಾಧ ಶಕ್ತಿ ಮತ್ತು ಸಾಮರ್ಥ್ಯವನ್ನು ತೋರಿಸಿ ಕೊಟ್ಟದ್ದು ಜಾಂಬವಂತ. ಈ ಕರಡಿಗಳ ರಾಜ ಆತನಿಗೆ, "ಪವನತನಯ ಬಾಲ ಪವನ ಸಮಾನ, ಕಾ ಚೂಪ್ ಸಾಧ್ ರಹಾ ಬಲ್ವಾನಾ" (ನೀನು ವಾಯುಪುತ್ರ! ನೀನೇಕೆ ಮೌನಕ್ಕೆ ಶರಣಾಗಿರುವೆ, ನೀನು ಬಲವಂತ!) ಎಂದು ಹುರಿದುಂಬಿಸಿದ. ಈ ಸವಾಲಿನ ಕಾರಣಕ್ಕಾಗಿ ನಾವು ವಿಜಯ ದಶಮಿಯನ್ನು ಅಂದಿನಿಂದ ಇಂದಿನವರೆಗೂ ಆಚರಿಸುತ್ತಾ ಬಂದಿದ್ದೇವೆ.
ಜಾಂಬವಂತನಂತೆ, ನಾನು ನಿಮ್ಮ ಅದಮ್ಯ ಅಂತಃಶಕ್ತಿಯನ್ನು ನಿಮಗೆ ನೆನಪಿಸುತ್ತಿದ್ದೇನೆ. ಸಾವಿರಾರು ವರ್ಷಗಳ ಹಿಂದಿನ ವೇದಕಾಲದ ನಮ್ಮ ಸಾಧು ಸಂತರ ಉಕ್ತಿಗಳನ್ನು ನಿಮಗೆ ನೆನಪಿಸುತ್ತೇನೆ. "ವಯಂ ರಾಷ್ಟ್ರೇ ಜಾಗರ್ಯಾಮ ಪುರೋಹಿತಹ" (ಸಮಾಜದ ಹಿತೈಷಿಗಳೇ, ಎಚ್ಚರಗೊಳ್ಳಿ, ಏಳಿ, ದೇಶವನ್ನು ಬಡಿದೆಬ್ಬಿಸಿ).
ಓಂ ಶಾಂತಿ!
-
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ












Click it and Unblock the Notifications