'ಸುಪ್ರೀಂ' ಮುಖ್ಯ ನ್ಯಾಯಮೂರ್ತಿಯಾಗಿ ರಂಜನ್ ಗೊಗೊಯ್ ನೇಮಕ ಸಾಧ್ಯತೆ
ನವದೆಹಲಿ, ಅಗಸ್ಟ್ 29: ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯನಾಯಮೂರ್ತಿ ಯಾರಾಗಬಹುದು? ಅಸ್ಸಾಂ ಮೂಲದವರಾದ ನ್ಯಾಯಮೂರ್ತಿ ರಂಜನ್ ಗೊಗೊಯ್ ಆಗುವ ಸಾಧ್ಯತೆಗಳಿವೆ. ಸದ್ಯಕ್ಕೆ ಮುಖ್ಯ ನ್ಯಾಯಮೂರ್ತಿ ಆಗಿರುವ ದೀಪಕ್ ಮಿಶ್ರಾ ಅವರ ನಂತರ ಆ ಸ್ಥಾನಕ್ಕೆ ರಂಜನ್ ಗೊಗೊಯ್ ನೇಮಕಗೊಳ್ಳಬಹುದು.
ಕೇಂದ್ರದ ಕಾನೂನು ಸಚಿವಾಲಯವು ನ್ಯಾ.ಮಿಶ್ರಾ ಅವರಿಗೆ ಮಾಹಿತಿ ರವಾನಿಸಿದೆ. ಇದೇ ವರ್ಷದ ಅಕ್ಟೋಬರ್ 2ನೇ ತಾರೀಕಿಗೆ ಅವರು ನಿವೃತ್ತರಾಗುವುದರಿಂದ ಆ ನಂತರ ಯಾರನ್ನು ಹುದ್ದೆಗೆ ನೇಮಿಸಬೇಕು ಎಂದು ಶಿಫಾರಸು ಮಾಡುವಂತೆ ಕೇಳಿಕೊಳ್ಳಲಾಗಿದೆ. ಆ ಮೂಲಕ ಮುಂದಿನ ಮುಖ್ಯನಾಯಮೂರ್ತಿ ಯಾರಾಗಬೇಕು ಎಂಬ ಪ್ರಕ್ರಿಯೆಗೆ ಚಾಲನೆ ದೊರೆಯುತ್ತದೆ.
ಸಾಮಾನ್ಯವಾಗಿ ಮುಖ್ಯ ನ್ಯಾಯಮೂರ್ತಿಗಳು ತಮ್ಮ ನಿವೃತ್ತಿಯ ಒಂದು ತಿಂಗಳ ಮುಂಚೆಯೇ ಶಿಫಾರಸನ್ನು ಕಳುಹಿಸುತ್ತಾರೆ. ಮೂಲಗಳ ಪ್ರಕಾರ, ದೀಪಕ್ ಮಿಶ್ರಾ ಅವರು ಮುಂದಿನ ವಾರ ತಮ್ಮ ಸ್ಥಾನಕ್ಕೆ ಮುಂದೆ ಯಾರು ಬರಬೇಕು ಎಂಬ ಬಗ್ಗೆ ಶಿಫಾರಸು ಕಳುಹಿಸುವ ಸಾಧ್ಯತೆಗಳಿವೆ. ನ್ಯಾ.ಗೊಗೊಯ್ ಮುಖ್ಯ ನ್ಯಾಯಮೂರ್ತಿಗಳಾಗಿ ಆಯ್ಕೆ ಆಗುತ್ತಾರೆ ಎಂಬ ಮಾತೇ ಚಾಲ್ತಿಯಲ್ಲಿದೆ.

ಈ ವರೆಗೆ ನಡೆದುಕೊಂಡು ಬಂದಿರುವ ಸಂಪ್ರದಾಯದ ಪ್ರಕಾರ, ನಿವೃತ್ತರಾಗಲಿರುವ ಮುಖ್ಯ ನ್ಯಾಯಮೂರ್ತಿ ತಮ್ಮ ಉತ್ತರಾಧಿಕಾರಿ ಹೆಸರನ್ನು ಸೂಚಿಸುತ್ತಾರೆ. ನ್ಯಾಯಾಂಗದ ಇತಿಹಾಸದಲ್ಲಿ ಎರಡು ಬಾರಿ ಮಾತ್ರ ಈ ಕಟ್ಟಳೆ ಮುರಿಯಲಾಗಿದೆ. ಆ ಎರಡು ಬಾರಿಯೂ ಪ್ರಧಾನಿಯಾಗಿದ್ದವರು ಇಂದಿರಾ ಗಾಂಧಿ.












Click it and Unblock the Notifications