Jharkhand Election: ರಾಷ್ಟ್ರಪತಿ ಮಧ್ಯಪ್ರವೇಶಕ್ಕೆ ಜೆಎಂಎಂ ಆಗ್ರಹ
ಜಾರ್ಖಂಡ್ ವಿಧಾನಸಭಾ ಚುನಾವಣಾ ಅಖಾಡ ರಂಗೇರಿದೆ, ಭಾನುವಾರ ಮತ್ತು ಸೋಮವಾರ ಬಿಜೆಪಿ ರಾಜ್ಯದಲ್ಲಿ ಭರ್ಜರಿ ಪ್ರಚಾರ ನಡೆಸಿದೆ. ಭಾನುವಾರ ಗೃಹ ಸಚಿವ ಅಮಿತ್ ಶಾ ಪ್ರಚಾರ ನಡೆಸಿದ್ದರೆ, ಸೋಮವಾರ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಚುನಾವಣಾ ರ್‍ಯಾಲಿಯಲ್ಲಿ ಭಾಗವಹಿಸಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಭೇಟಿ ವೇಳೆ ಭದ್ರತಾ ಕಾರಣ ನೀಡಿ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಹೆಲಿಕಾಪ್ಟರ್ ಟೇಕ್-ಆಫ್ ಆಗಲು ವಿಳಂಬಪಡಿಸಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಭದ್ರತಾ ಸಿಬ್ಬಂದಿಯ ವರ್ತನೆಯಿಂದ ಕೆರಳಿರುವ ಜಾರ್ಖಂಡ್‌ನ ಆಡಳಿತ ಪಕ್ಷವಾದ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ), ಪ್ರಧಾನಿ ನರೇಂದ್ರ ಮೋದಿಯವರ ಭದ್ರತಾ ದೃಷ್ಟಿಯ ಕಾರಣ ನೀಡಿ ಉದ್ದೇಶ ಪೂರ್ವಕವಾಗಿದೆ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಹೆಲಿಕಾಪ್ಟರ್ ಟೇಕ್-ಆಫ್ ವಿಳಂಬ ಮಾಡಲಾಗಿದೆ ಎಂದು ಆರೋಪಿಸಿದ್ದು, ಈ ವಿಚಾರದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮಧ್ಯಪ್ರವೇಶಿಸಬೇಕು ಎಂದು ಪತ್ರ ಬರೆದಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆಎಂಎಂ ನಾಯಕ ಮನೋಜ್ ಪಾಂಡೆ, "ಇದು ಗಂಭೀರವಾದ ವಿಚಾರ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯ ಸಂದರ್ಭದಲ್ಲಿ ಎಲ್ಲರಿಗೂ ಸಮಾನ ಅವಕಾಶವಿರಬೇಕು. ಎಲ್ಲಾ ಪಕ್ಷಗಳಿಗೆ ಪ್ರಚಾರ ಮಾಡಲು ಸಮಾನ ಅವಕಾಶ ಇರಬೇಕು, ಆದರೆ ಇಲ್ಲಿ ಅದನ್ನು ಬಹಿರಂಗವಾಗಿಯೇ ಉಲ್ಲಂಘಿಸಲಾಗಿದೆ" ಎಂದು ಹೇಳಿದರು.
ಕೇಂದ್ರದ ಸರ್ವಾಧಿಕಾರಿ ಸರ್ಕಾರ ನಮ್ಮ ಜನಪ್ರಿಯ ಮುಖ್ಯಮಂತ್ರಿ, ಸ್ಟಾರ್ ಪ್ರಚಾರಕರಾಗಿರು ಮತ್ತು ಬುಡಕಟ್ಟು ಜನಾಂಗದ ಮಗನನ್ನು ಚುನಾವಣಾ ಪ್ರಚಾರಕ್ಕೆ ಹೋಗದಂತೆ ತಡೆಯಲಾಗಿದೆ. ಅಗತ್ಯವಿಲ್ಲದೇ ಇದ್ದರೂ ಸಿಎಂರನ್ನು 1.5-2 ಗಂಟೆಗಳ ಕಾಲ ನಿಲ್ಲಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜೆಎಂಎಂ ರ್‍ಯಾಲಿಗಳಿಗೆ ಅಡ್ಡಿ ಮಾಡಿದ್ರಾ?
"ಹೇಮಂತ್ ಸೊರೇನ್ ಗುದ್ರಿಯಿಂದ ಹೆಲಿಕ್ಯಾಪ್ಟರ್ ನಲ್ಲಿ ಚುನಾವಣಾ ರ್‍ಯಾಲಿಗಾಗಿ ಹೋಗಬೇಕಿತ್ತು, ಅದು ಕೂಡ ರಾಂಚಿಯಿಂದ ತುಂಬಾ ದೂರದಲ್ಲಿತ್ತು. ಆದರೆ ಅವರಿಗೆ ಎಟಿಸಿ ಕ್ಲಿಯರೆನ್ಸ್ ನೀಡಲಿಲ್ಲ. ಇಂತಹ ಘಟನೆಗಳಿಗೆ ಬಿಜೆಪಿ ಎಷ್ಟು ಹತಾಶೆಯಲ್ಲಿದೆ ಎನ್ನುವುದು ಅರ್ಥವಾಗುತ್ತದೆ. ಸಮಯಕ್ಕೆ ಸರಿಯಾಗಿ ಚುನಾವಣಾ ರ್‍ಯಾಲಿಗೆ ತಲುಪಲು ಸಾಧ್ಯವಾಗಿಲ್ಲದ ಕಾರಣ ಚುನಾವಣಾ ಪ್ರಚಾರ ಮಾಡಲು ಆಗಿಲಿಲ್ಲ. ಬೇಕಂತಲೆ ನಮ್ಮ ರ್‍ಯಾಲಿಗಳಿಗೆ ಅಡ್ಡಿಪಡಿಸಲಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಇದನ್ನು ನಾವು ಒಪ್ಪಲು ಸಾಧ್ಯವಿಲ್ಲ, ರಾಷ್ಟ್ರಪತಿಗಳು ನಮ್ಮ ಪ್ರಜಾಪ್ರಭುತ್ವ ಹಕ್ಕುಗಳ ಪಾಲಕರಾಗಿದ್ದು, ಅವರಿಗೆ ಈಗಾಗಲೇ ಪತ್ರ ಬರೆದಿದ್ದೇವೆ. ಈ ವಿಚಾರದಲ್ಲಿ ಅವರು ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಿದ್ದೇವೆ. ಚುನಾವಣಾ ಆಯೋಗದ ಮೇಲೆ ನಮಗೆ ನಂಬಿಕೆ ಇಲ್ಲ" ಎಂದು ಪಾಂಡೆ ಹೇಳಿದ್ದಾರೆ.
ಸೋಮವಾರ ಜಾರ್ಖಂಡ್‌ಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಎರಡು ರ್‍ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದರು. ಚೈಬಾಸಾ ಮತ್ತು ಗರ್ಹ್ವಾದಲ್ಲಿ ಬಿಜೆಪಿ ಬೃಹತ್ ಚುನಾವಣಾ ಪ್ರಚಾರ ನಡೆಸಿತು. ಈ ಎರಡೂ ರ್‍ಯಾಲಿಗಳಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಿದರು.












Click it and Unblock the Notifications