Jharkhand Election: ಝರಿಯಾ ಕ್ಷೇತ್ರದಲ್ಲಿ ಒಂದೇ ಕುಟುಂಬದ ಸೊಸೆಯರ ಹಣಾಹಣಿ
ಭಾರತದಲ್ಲಿ ಕುಟುಂಬ ರಾಜಕೀಯವೇನೂ ಹೊಸದಲ್ಲ. ಸಾಮಾನ್ಯವಾಗಿ ಒಂದು ಕುಟುಂಬ ಒಂದೇ ಪಕ್ಷದ ಜೊತೆ ಗುರುತಿಸಿಕೊಂಡು, ಹಲವು ತಲೆಮಾರು ಅಧಿಕಾರ ಅನುಭವಿಸುವುದನ್ನು ನೋಡಿದ್ದೇವೆ. ಇನ್ನೂ ಕೆಲವು ಸಂದರ್ಭಗಳಲ್ಲಿಒಂದೇ ಕುಟುಂಬದಲ್ಲಿ ಎರಡು ರಾಜಕೀಯ ಬಣಗಳಿರುವುದು, ಒಂದೇ ಕ್ಷೇತ್ರದಲ್ಲಿ ಅದೇ ಕುಟುಂಬದ ನಡುವೆ ರಾಜಕೀಯ ಸಮರ ನಡೆಯುವುದು ಕೂಡ ನಡೆಯುತ್ತದೆ. ಕರ್ನಾಟಕದಲ್ಲಿ ಬಂಗಾರಪ್ಪ ಕುಟುಂಬ ಇದಕ್ಕೆ ಉತ್ತಮ ಉದಾಹರಣೆ, ಕ್ರಿಕೆಟಿಗ ರವೀಂದ್ರ ಜಡೇಜಾ ಕುಟುಂಬದಲ್ಲಿ ಕೂಡ ಇದೇ ರೀತಿ ಇದೆ.
ಇದೀಗ ವಿಧಾನಸಭಾ ಚುನಾವಣೆ ಘೋಷಣೆಯಾಗಿರುವ ಜಾರ್ಖಂಡ್‌ನ ಝರಿಯಾ ಕ್ಷೇತ್ರದಲ್ಲಿ ಕೂಡ ಒಂದೇ ಕುಟುಂಬದ ಇಬ್ಬರು ಮಹಿಳಾ ಮಣಿಗಳು ಎರಡು ಪಕ್ಷಗಳಿಂದ ಸ್ಪರ್ಧೆ ಮಾಡಿದ್ದು ರಾಜಕೀಯ ಸಮರಕ್ಕೆ ವೇದಿಕೆಯಾಗಿದೆ. ಧನ್‌ಬಾದ್ ಜಿಲ್ಲೆಯ ಝರಿಯಾ ವಿಧಾನಸಭಾ ಕ್ಷೇತ್ರವು 'ಸಿಂಗ್' ಕುಟುಂಬದ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

ಸೂರ್ಯ ದೇವ್ ಸಿಂಗ್ ಅಥವಾ 'ಸಿಂಗ್ ಮ್ಯಾನ್ಷನ್' ಈ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿದೆ. ಸೂರ್ಯ ದೇವ್ ಸಿಂಗ್, ಅವರ ಸಹೋದರ ಬಚ್ಚಾ ಸಿಂಗ್, ಸೂರ್ಯದೇವ್ ಸಿಂಗ್ ಅವರ ಪತ್ನಿ ಕುಂತಿ ದೇವಿ ಮತ್ತು ಪುತ್ರ ಸಂಜೀವ್ ಸಿಂಗ್ ಎಲ್ಲರೂ ಝರಿಯಾದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ 2019ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪೂರ್ಣಿಮಾ ಸಿಂಗ್ ಸಂಜೀವ್ ಸಿಂಗ್ ಅವರ ಪತ್ನಿ ಮತ್ತು ಬಿಜೆಪಿ ಅಭ್ಯರ್ಥಿ ರಾಗಿಣಿ ಸಿಂಗ್ ಅವರನ್ನು ಸೋಲಿಸಿದ್ದು ಇಲ್ಲಿನ ರಾಜಕೀಯ ಚಿತ್ರವಣವನ್ನು ಬದಲಿಸಿತು.
ಶಾಸಕಿ ಪೂರ್ಣಿಮಾ ಸಿಂಗ್ ಸೂರ್ಯದೇವ್ ಸಿಂಗ್ ಅವರ ಕಿರಿಯ ಸಹೋದರ ರಾಜನ್ ಸಿಂಗ್ ಅವರ ಸೊಸೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲೂ ಝರಿಯಾದಲ್ಲಿ 'ಸಿಂಗ್' ಕುಟುಂಬದ ಸೊಸೆಯರ ನಡುವೆ ಪೈಪೋಟಿ ನಡೆಯಲಿದೆ.
ನಾಲ್ಕು ದಶಕಗಳ ರಾಜಕೀಯ ಪ್ರಾಬಲ್ಯ
ನಾಲ್ಕು ದಶಕಗಳಿಂದ ಇಲ್ಲಿ 'ಸಿಂಗ್ ಮ್ಯಾನ್ಷನ್' ಕುಟುಂಬ ಪ್ರಾಬಲ್ಯ ಹೊಂದಿದೆ. 2009ರವರೆಗೆ ಈ ಕುಟುಂಬ ಒಗ್ಗಟ್ಟಾಗಿ ರಾಜಕೀಯದಲ್ಲಿದ್ದು. ಬಳಿಕ ಸೂರ್ಯ ದೇವ್ ಸಿಂಗ್ ಅವರ ಕಿರಿಯ ಸಹೋದರ ರಾಜನ್ ಸಿಂಗ್ ಅವರ ಕುಟುಂಬ 'ರಘುಕುಲ' ಎಂದು ಗುರುತಿಸಿಕೊಂಡಿತು.
2014 ರ ಚುನಾವಣೆಯಲ್ಲಿ ಸೂರ್ಯ ದೇವ್ ಸಿಂಗ್ ಅವರ ಪುತ್ರ ಸಂಜೀವ್ ಸಿಂಗ್ ಬಿಜೆಪಿಯಿಂದ ಸ್ಪರ್ಧಿಸಿದರೆ. ರಾಜನ್ ಸಿಂಗ್ ಅವರ ಮಗ ರಾಜನ್ ಸಿಂಗ್ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದರು. ಆದರೆ ಸಂಜೀವ್ ಸಿಂಗ್ ಶಾಸಕರಾಗಿ ಆಯ್ಕೆಯಾದರು, 2017ರಲ್ಲಿ ನೀರಜ್ ಸಿಂಗ್ ಅವರ ಕೊಲೆಯಾಯಿತು, ಈ ಪ್ರಕರಣದಲ್ಲಿ ಶಾಸಕ ಸಂಜೀವ್ ಸಿಂಗ್ ಕೈವಾಡವಿದೆ ಎಂದು ಆರೋಪಿಸಿ ಜೈಲಿಗೆ ಕಳಿಸಲಾಯಿತು.
2019 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ, ಸಂಜೀವ್ ಸಿಂಗ್ ಅವರ ಪತ್ನಿ ರಾಗಿಣಿ ಸಿಂಗ್ ಮತ್ತು ಮೃತ ನೀರಜ್ ಸಿಂಗ್ ಅವರ ಪತ್ನಿ ಪೂರ್ಣಿಮಾ ಸಿಂಗ್ ಸ್ಪರ್ಧೆ ಮಾಡಿದರು. ಸೊಸೆಯರ ನಡುವಿನ ಕಾಳಗದಲ್ಲಿ ಈ ಬಾರಿ ಪೂರ್ಣಿಮಾ ಸಿಂಗ್ ಗೆಲುವು ಸಾಧಿಸುವ ಮೂಲಕ ಸಿಂಗ್ ಮ್ಯಾನ್ಷನ್ ಪ್ರಾಬಲ್ಯಕ್ಕೆ ಅಂತ್ಯ ಹಾಡಿದರು.
2024ರಲ್ಲಿ ಮತ್ತೆ ಈ ಸೊಸೆಯರ ನಡುವಿನ ಕದನಕ್ಕೆ ವೇದಿಕೆ ಸಜ್ಜಾಗಿದೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪೂರ್ಣಿಮಾ ಸಿಂಗ್ 50.34 ಪ್ರತಿಶತ ಮತಗಳನ್ನು ಪಡೆದಿದ್ದರೆ, ಬಿಜೆಪಿಯ ರಾಗಿಣಿ ಸಿಂಗ್ 42.73 ಪ್ರತಿಶತ ಮತ ಪಡೆದಿದ್ದರು. ಕಾಂಗ್ರೆಸ್‌ನ ಪೂರ್ಣಿಮಾ ಸಿಂಗ್ 12,054 ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಝರಿಯಾ ವಿಧಾನಸಭಾ ಕ್ಷೇತ್ರದಲ್ಲಿ 3,10,564 ಮತದಾರರಿದ್ದು, 1,59,623 ಪುರುಷ ಹಾಗೂ 1,41,925 ಮಹಿಳಾ ಮತದಾರರಿದ್ದಾರೆ. ಝರಿಯಾ ವಿಧಾನಸಭಾ ಕ್ಷೇತ್ರದಲ್ಲಿ ಎರಡನೇ ಹಂತದಲ್ಲಿ ನವೆಂಬರ್ 20ರಂದು ಮತದಾನ ನಡೆಯಲಿದೆ. ನವೆಂಬರ್ 23ರಂದು ಫಲಿತಾಂಶ ಹೊರಬೀಳಲಿದೆ.












Click it and Unblock the Notifications