Jharkhand: ಮೊದಲ ಹಂತದಲ್ಲಿ ಮತ ಚಲಾಯಿಸಲಿರುವ 900ಕ್ಕೂ ಹೆಚ್ಚು ಶತಾಯುಷಿಗಳು
ಜಾರ್ಖಂಡ್ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಎಲ್ಲಾ ಪಕ್ಷಗಳು ಈಗಾಗಲೇ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿವೆ. ಎರಡು ಹಂತಗಳಲ್ಲಿ ಜಾರ್ಖಂಡ್ ವಿಧಾನಸಭಾ ಚುನಾವಣೆ ನಡೆಯಲಿದ್ದು, ನವೆಂಬರ್ 13 ಮತ್ತು 20 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ನವೆಂಬರ್ 23 ರಂದು ಫಲಿತಾಂಶ ಪ್ರಕಟವಾಗಲಿದೆ. ಮೊದಲ ಹಂತದಲ್ಲಿ 43 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ವಿಶೇಷ ಎಂದರೆ 900ಕ್ಕೂ ಹೆಚ್ಚು ಶತಾಯುಷಿಗಳು ಮತ ಹಾಕಲು ಸಜ್ಜಾಗಿದ್ದಾರೆ.
900ಕ್ಕೂ ಹೆಚ್ಚು ಜನ 100 ವರ್ಷಕ್ಕೂ ಹೆಚ್ಚಿನ ವಯಸ್ಸಾದವರು ಮತದಾನ ಮಾಡಲಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ಪಿಟಿಐ ವರದಿ ಮಾಡಿದೆ. 100 ವರ್ಷ ಮೇಲ್ಪಟ್ಟ ಒಟ್ಟು 995 ಮತದಾರರು ಮತ ಚಲಾಯಿಸಲು ಅರ್ಹರಿದ್ದು, ಈ ಪೈಕಿ 462 ಪುರುಷ ಮತದಾರರು ಹಾಗೂ 533 ಮಹಿಳಾ ಮತದಾರರಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ವಿಕಲಚೇತನರು ಮತ್ತು ವೃದ್ಧರಿಗೆ ಮತದಾನ ಮಾಡಲು ವಿಶೇಷ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಭಾರತೀಯ ಚುನಾವಣಾ ಆಯೋಗ ಹೇಳಿದೆ.

ಜಾರ್ಖಂಡ್‌ನ ಎಲ್ಲಾ ಮತಗಟ್ಟೆಗಳು ನೆಲಮಹಡಿಯಲ್ಲಿದ್ದು ಅಂಗವಿಕಲರು ಮತ್ತು ಹಿರಿಯ ನಾಗರಿಕರು ಮತ ಚಲಾಯಿಸಲು ಅನುಕೂಲವಾಗುವಂತೆ ಗಾಲಿಕುರ್ಚಿಗಳನ್ನು ಒಳಗೆ ತರಲು ರ್‍ಯಾಂಪ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ವಿಧಾನಸಭಾ ಕ್ಷೇತ್ರದಲ್ಲಿರುವ ಎಲ್ಲ ಅಂಗವಿಕಲರು ಮತ್ತು ಹಿರಿಯರನ್ನು ಗುರುತಿಸಿ ಆಯಾ ಮತಗಟ್ಟೆಗಳಲ್ಲಿ ಟ್ಯಾಗ್ ಮಾಡುವ ಮೂಲಕ ಅವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಚುನಾವಣಾ ಆಯೋಗ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದೆ. ಮತಗಟ್ಟೆ ಕೇಂದ್ರಗಳಿಗೆ ಬರಲು ಅಂಗವಿಕಲರಿಗೆ ಹಾಗೂ ವೃದ್ಧರಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಮಾಡಲು ಕೇಳಿದೆ.
ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ
ಮೊದಲ ಹಂತದಲ್ಲಿ 43 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಇಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಅಕ್ಟೋಬರ್ 25 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. 2.60 ಕೋಟಿ ಮತದಾರರು ಹಕ್ಕು ಚಲಾಯಿಸಲು ಸಜ್ಜಾಗಿದ್ದಾರೆ ಇದರಲ್ಲಿ 11.84 ಲಕ್ಷ ಮತದಾರರು ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ. 1.13 ಲಕ್ಷ ಮತದಾರರು ಅಂಗವಿಕಲರು, 85 ವರ್ಷ ಮೇಲ್ಪಟ್ಟವರು ಮತ್ತು ತೃತೀಯಲಿಂಗಿ ಮತದಾರರು ಸೇರಿದ್ದಾರೆ.
ಬಿಜೆಪಿ ಸೀಟು ಹಂಚಿಕೆ
ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸೀಟು ಹಂಚಿಕೆಯನ್ನು ಅಂತಿಮಗೊಳಿಸಿದೆ. 81 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 68 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ. ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ (ಎಜೆಎಸ್‌ಯು), ಜನತಾ ದಳ-ಯುನೈಟೆಡ್ (ಜೆಡಿಯು) ಮತ್ತು ಲೋಕ ಜನಶಕ್ತಿ ಪಕ್ಷ (ರಾಮವಿಲಾಸ್) ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಸಜ್ಜಾಗಿದೆ.












Click it and Unblock the Notifications