Jharkhand Assembly Election 2024: ಎನ್‌ಸಿಪಿ ಶಾಸಕ ಕಮಲೇಶ್ ಸಿಂಗ್ ಬಿಜೆಪಿ ಸೇರ್ಪಡೆ
Jharkhand Assembly Election 2024: ಜಾರ್ಖಂಡ್‌ನಲ್ಲಿ ಇನ್ನೂ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಆಗಿಲ್ಲ. ಆದರೆ, ರಾಜಕೀಯ ಕೆಸರೆರಚಾಟಗಳು ಮಾತ್ರ ನಡೆಯುತ್ತಲೇ ಇವೆ. ಇದರ ನಡುವೆಯೇ ಇದೀಗ ಇಂದು (ಅಕ್ಟೋಬರ್ 04) ಹುಸೇನಾಬಾದ್ ಎನ್‌ಸಿಪಿ ಶಾಸಕ ಕಮಲೇಶ್ ಸಿಂಗ್ ಅವರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ.
ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ಬಿಜೆಪಿ ರಾಜ್ಯಾಧ್ಯಕ್ಷ ಬಾಬುಲಾಲ್ ಮರಾಂಡಿ ನೇತೃತ್ವದಲ್ಲಿ ಹುಸೇನಾಬಾದ್ ಎನ್‌ಸಿಪಿ ಶಾಸಕ ಕಮಲೇಶ್ ಸಿಂಗ್ ಅವರು ಇಂದು ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ.

ಇನ್ನು ಈ ವೇಳೆ ಮಾತನಾಡಿದ ಕಮಲೇಶ್ ಸಿಂಗ್ ಅವರು, "ದೇಶದ ಅತಿ ದೊಡ್ಡ ಪಕ್ಷದೊಂದಿಗೆ ಕೈಜೋಡಿಸುತ್ತಿರುವುದಕ್ಕೆ ನನಗೆ ಹೆಮ್ಮೆ ಎನಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಅತ್ಯಂತ ಜನಪ್ರಿಯ ನಾಯಕ. ಜಾರ್ಖಂಡ್‌ನ ಚಿತ್ರಣವನ್ನು ಬದಲಿಸಬಲ್ಲ ಪಕ್ಷ ಅಂತ ಇದ್ದರೆ ಅದು ಬಿಜೆಪಿ ಮಾತ್ರ," ಎಂದು ಹೇಳಿದರು.
ಪಲಾಮು ಭಾಗದಲ್ಲಿ ಈ ಬಾರೀ ಬಿಜೆಪಿ ಜಯಭೇರಿ ಬಾರಿಸುವುದು ಖಚಿತ. ಬಿಜೆಪಿ ಸಾಗರವಾಗಿದ್ದು, ಈ ಪಕ್ಷದಲ್ಲಿ ವಿರೋಧಿಗಳಿಗೆ ಯಾವುದೇ ಸ್ಥಾನಮಾನವಿಲ್ಲ ಎಂದು ಹೇಳಿದರು. ಇನ್ನು ಅಸ್ಸಾಂ ಮುಖ್ಯಮಂತ್ರಿ ಹೇಮಂತ್ ಬಿಸ್ವಾ ಶರ್ಮಾ ಮಾತನಾಡಿ, "ಕಮಲೇಶ್ ಸಿಂಗ್ ಅವರು ನೂತನ ಬಿಜೆಪಿಯ ಸದಸ್ಯರಾಗಿದ್ದಾರೆ. ಇನ್ನು ಶೀಘ್ರದಲ್ಲೇ ಚುನಾವಣೆ ಘೋಷಣೆಯಾಗಲಿದ್ದು, ಈ ಬಾರಿ ಜಾರ್ಖಂಡ್‌ನಲ್ಲಿ ಪೂರ್ಣ ಬಹುಮತದೊಂದಿಗೆ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ," ಎಂದು ಹೇಳಿದರು.
ಇದೀಗ ಜಾರ್ಖಂಡ್ ಚುನಾವಣೆಯಲ್ಲಿ ಗೆಲ್ಲುವುದೇ ನಮಗೆ ದೊಡ್ಡ ಸವಾಲಾಗಿದೆ. ನಾವು ಎಲ್ಲರೂ ಸೇರಿ ಪಕ್ಷವನ್ನು ಬೆಂಬಲಿಸಬೇಕು. ಜಾರ್ಖಂಡ್‌ನಲ್ಲಿ ಬಿಜೆಪಿ ಸರ್ಕಾರದ ಅಗತ್ಯವಿದೆ ಎಂದು ಕಮಲೇಶ್ ಸಿಂಗ್ ಅವರು ಹೇಳಿದರು.
ಎಷ್ಟು ವಿಧಾನಸಭಾ ಸ್ಥಾನಗಳಿವೆ?: 2019ರಲ್ಲಿ ನವೆಂಬರ್ 30 ಮತ್ತು ಡಿಸೆಂಬರ್ 20ರ ನಡುವೆ 5 ಹಂತಗಳಲ್ಲಿ 81 ವಿಧಾನಸಭಾ ಸ್ಥಾನಗಳಿಗೆ ಚುನಾವಣೆಗಳನ್ನು ನಡೆಸಲಾಗಿದ್ದು, ಡಿಸೆಂಬರ್ 23ರಂದು ಫಲಿತಾಂಶಗಳನ್ನು ಘೋಷಣೆ ಮಾಡಲಾಯಿತು. ಇನ್ನು ಈ ಬಾರಿ ವರ್ಷದ ಕೊನೆಯಲ್ಲಿ ಜಾರ್ಖಂಡ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 2-3 ಹಂತಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಮತದಾರರ ವಿವರ: ಜಾರ್ಖಂಡ್ ವಿಧಾನಸಭೆಯ ಚುನಾವಣೆಯು ಜನವರಿ 5, 2025ರಂದು ಕೊನೆಗೊಳ್ಳಲಿದೆ ಎಂದು ಹೇಳಾಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು 2.59 ಕೋಟಿ ಮತದಾರರಿದ್ದಾರೆ. ಇವರಲ್ಲಿ 1.31 ಕೋಟಿ ಪುರುಷರು ಮತ್ತು 1.28 ಕೋಟಿ ಮಹಿಳೆಯರಿದ್ದಾರೆ. ರಾಜ್ಯದಲ್ಲಿ ಪ್ರಥಮ ಬಾರಿಗೆ 11.5 ಲಕ್ಷಕ್ಕೂ ಹೆಚ್ಚು ಮಂದಿ ಮತದಾನ ಮಾಡಲಿದ್ದಾರೆ. 1.5 ಲಕ್ಷ ಮತದಾರರು 85 ವರ್ಷ ಮೇಲ್ಪಟ್ಟವರಾಗಿದ್ದು, 3.64 ಲಕ್ಷ ಅಂಗವಿಕಲ ಮತದಾರರಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications