Jharkhand Assembly Election 2024: ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ ಮಿತ್ರಪಕ್ಷ ಪಕ್ಷ
Jharkhand Assembly Election 2024: ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆ ಆಗಿದೆ. ಇನ್ನು ಇತ್ತೀಚೆಗಷ್ಟೇ ಇಂಡಿಯಾ ಮೈತ್ರಿ ಕೂಟ ಸಪ್ತ ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಇದೀಗ ಇಂದು (ನವೆಂಬರ್ 08) ಬಿಜೆಪಿ ಮಿತ್ರ ಪಕ್ಷ ಎಜೆಎಸ್‌ಯು ಪಕ್ಷ ತನ್ನ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ. ಹಾಗಾದರೆ ಇದರಲ್ಲಿ ಯಾವೆಲ್ಲ ಅಂಶಗಳು ಇವೆ ಎಂದು ಇಲ್ಲಿ ತಿಳಿಯಿರಿ.
ಎಜೆಎಸ್‌ಯು ಪಕ್ಷವು ರಾಜ್ಯದ ಪ್ರತಿಯೊಂದು ಬಡ ಕುಟುಂಬಕ್ಕೆ ವಾರ್ಷಿಕವಾಗಿ 1.21 ಲಕ್ಷ ಆರ್ಥಿಕ ನೆರವು ನೀಡುವ ಭರವಸೆ ನೀಡಿದೆ. ಇನ್ನು ಪಕ್ಷದ ಮುಖ್ಯಸ್ಥ ಸುದೇಶ್ ಮೆಹ್ತೋ ಅವರು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದರು.

ಪ್ರತಿ ಬಡ ಕುಟುಂಬಕ್ಕೆ ವಾರ್ಷಿಕ 1.21 ಲಕ್ಷ ಆರ್ಥಿಕ ನೆರವು, ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ, ಮಹಿಳೆಯರ ಸುರಕ್ಷತೆಗೆ ಒಂದು ಆಯೋಗ, ಕೆಲಸ ಮಾಡುವ ಮಹಿಳೆಯರಿಗೆ ವಸತಿ ನಿಲಯಗಳ ಸ್ಥಾಪನೆ, ಪ್ರತಿಯೊಬ್ಬರಿಗೆ 25 ಲಕ್ಷದ ಆರೋಗ್ಯ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿ ತಿಳಿಸಿದರು.
ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಅಡಿಯಲ್ಲಿ ಎಜೆಎಸ್‌ಯು 10, 10 ಜೆಡಿ(ಯು) 2, ಎಲ್‌ಜೆಪಿ (ರಾಮ್ ವಿಲಾಸ್) 1 ಸ್ಥಾನದಲ್ಲಿ ಸ್ಪರ್ಧಿಸುತ್ತಿವೆ. ಉಳಿದ 68 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇನ್ನು ಜಾರ್ಖಂಡ್‌ನ 81 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 13 ಮತ್ತು 20ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ನವೆಂಬರ್ 23ರಂದು ಫಲಿತಾಂಶ ಹೊರಬೀಳಿದೆ.
ಇಂಡಿಯಾ ಮೈತ್ರಿ ಕೂಟದ ಸಪ್ತ ಗ್ಯಾರಂಟಿಗಳು
* ಖತಿಯಾನ್‌ನ ಖಾತರಿ: ಸ್ಥಳೀಯ ಹಕ್ಕುಗಳನ್ನು ಕಾಪಾಡಲು 1932ರ ಖತಿಯಾನ್‌ನ ಆಧಾರದ ಮೇಲೆ ಸ್ಥಳೀಯ ನೀತಿ ಜಾರಿಗೊಳಿಸಲಾಗುವುದು. ಸರ್ನಾ ಧರ್ಮ ಸಂಹಿತೆಯನ್ನು ಪರಿಚಯಿಸಲಾಗುವುದು ಮತ್ತು ಪ್ರಾದೇಶಿಕ ಭಾಷೆ ಹಾಗೂ ಸಂಸ್ಕೃತಿ ಸಂರಕ್ಷಿಸಲು ಕ್ರಮ.
* ಮೈನಿಯ ಸಮ್ಮಾನ್ ಗ್ಯಾರಂಟಿ: ಮೈನಿಯ ಸಮ್ಮಾನ್ ಯೋಜನೆ ಡಿಸೆಂಬರ್ 2024ರಿಂದ ಆರಂಭಗೊಳ್ಳಲಿದ್ದು, ಈ ಯೋಜನೆಯಡಿ 2,500 ರೂಪಾಯಿ ಗೌರವಧನ ಒದಗಿಸಲಾಗುತ್ತದೆ.
* ಸಾಮಾಜಿಕ ನ್ಯಾಯದ ಖಾತರಿ: ಮೀಸಲಾತಿಯ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು, ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಶೇಕಡಾ 28ರಷ್ಟು, ಪರಿಶಿಷ್ಟ ಜಾತಿಗಳಿಗೆ (ಎಸ್‌ಸಿ) ಶೇಕಡಾ 12 ಮತ್ತು ಇತರ ಹಿಂದುಳಿದ ವರ್ಗಗಳಿಗೆ(ಒಬಿಸಿ) ಶೇಕಡಾ 27ರಷ್ಟು ಮೀಸಲಾತಿ ನೀಡಲಾಗುವುದು. ಹೆಚ್ಚುವರಿಯಾಗಿ, ಹಿಂದುಳಿ ವರ್ಗಗಳಿಗೆ ಪ್ರತ್ಯೇಕ ಕಲ್ಯಾಣ ಸಚಿವಾಲಯ, ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳನ್ನೂ ರಕ್ಷಿಸಲಾಗುವುದು.
* 7 ಕೆಜಿ ಪಡಿತರ: ಮೈತ್ರಿಕೂಟ ಅಧಿಕಾರಕ್ಕೆ ಬಂದ ನಂತರ ಪ್ರತಿ ವ್ಯಕ್ತಿಗೆ 5-7 ಕೆಜಿಗೆ ಆಹಾರ ಧಾನ್ಯ ವಿತರಣೆ ಮಾಡಲಾಗುವುದು. ಜೊತೆಗೆ ಬಡ ಕುಟುಂಬಗಳಿಗೆ 450 ರೂಪಾಯಿಗೆ ಗ್ಯಾಸ್ ಸಿಲಿಂಡರ್‌ಗಳನ್ನು ನೀಡಲಾಗುವುದು.
* ಉದ್ಯೋಗ ಖಾತ್ರಿ: ಜಾರ್ಖಂಡ್‌ನಲ್ಲಿ 10 ಲಕ್ಷ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿ.
* ಶಿಕ್ಷಣದ ಭರವಸೆ: ಪ್ರತಿ ಬ್ಲಾಕ್‌ನಲ್ಲಿ ಪದವಿ ಕಾಲೇಜುಗಳನ್ನು ಸ್ಥಾಪನೆ ಮಾಡಲಾಗುತ್ತದೆ. ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಜಿಲ್ಲಾ ಕೇಂದ್ರಗಳಲ್ಲಿ ಸ್ಥಾಪಿಸಲಾಗುವುದು.
* ರೈತ ಕಲ್ಯಾಣ ಖಾತ್ರಿ: ರೈತರ ಜೀವನೋಪಾಯವನ್ನು ಸುಧಾರಿಸಲು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು(ಎಂಎಸ್‌ಪಿ) ಪರಿಷ್ಕರಿಸಲು ಮೈತ್ರಿಕೂಟ ವಾಗ್ದಾನ ಮಾಡಿದೆ. ಭತ್ತದ ಎಂಎಸ್‌ಪಿಯನ್ನು 2,400-3,200 ರೂಪಾಯಿಗೆ ಏರಿಕೆ ಮಾಡಲಾಗುತ್ತದೆ.












Click it and Unblock the Notifications