2022ರ ಮೊದಲ ತ್ರೈಮಾಸಿಕದಲ್ಲಿ ಜೆಟ್ ಏರ್‌ವೇಸ್ ದೇಶೀಯ ಹಾರಾಟ ಪುನರಾರಂಭ
ನವದೆಹಲಿ, ಸೆಪ್ಟೆಂಬರ್ 13: ಜೆಟ್ ಏರ್‌ವೇಸ್ 2022ರ ಮೊದಲ ತ್ರೈಮಾಸಿಕದಿಂದ ದೇಶೀಯ ವಿಮಾನ ಸೇವೆಯನ್ನು ಆರಂಭಿಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮೊದಲ ಜೆಟ್ ಏರ್ವೇಸ್ ದೆಹಲಿ-ಮುಂಬೈ ಮಾರ್ಗವಾಗಿ ಸಂಚರಿಸಲಿದೆ. ಏರ್ ಲೈನ್ಸ್ ನ ಕೇಂದ್ರ ಕಚೇರಿ ಮುಂಬೈ ಬದಲಿಗೆ ದೆಹಲಿಗೆ ವರ್ಗಾವಣೆಯಾಗಲಿದೆ ಎಂದೂ ಸಂಸ್ಥೆ ತಿಳಿಸಿದೆ.
ಸಂಸ್ಥೆಯ ಅಂತಾರಾಷ್ಟ್ರೀಯ ವಿಮಾನಗಳ ಸೇವೆ 2022 ರ ಕೊನೆಯ ತ್ರೈಮಾಸಿಕದಿಂದ ಪ್ರಾರಂಭವಾಗಲಿದೆ ಎಂದು ಏರ್ಲೈನ್ಸ್ ನ ಬಿಡ್ಡರ್ ವಿಜೇತ ಜಲನ್ ಕಲ್ರಾಕ್ ಒಕ್ಕೂಟ ಮಾಹಿತಿ ನೀಡಿದೆ.

ಈ ಪುನರುಜ್ಜೀವನ ಯೋಜನೆಗೆ ಜೆಟ್ ಏರ್‌ವೇಸ್‌ನ ಸಾಲದಾತರು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಒಪ್ಪಿಗೆ ನೀಡಿದ್ದರು, ಬಳಿಕ ದಿವಾಳಿ ನ್ಯಾಯಾಲಯವೂ ಒಪ್ಪಿಗೆ ನೀಡಿತ್ತು. ಹೊಸ ಜೆಟ್ ಏರ್‌ವೆಸ್ ಕಂಪನಿಯು ದಿಲ್ಲಿ ಎನ್‌ಸಿಆರ್‌ನಲ್ಲಿ ಕೇಂದ್ರ ಕಚೇರಿ ಹೊಂದಿರಲಿದ್ದು, ಹಿರಿಯ ಅಧಿಕಾರಿಗಳು ಗುರ್ಗಾಂವ್‌ನ ಕಾರ್ಪೊರೇಟ್ ಕಚೇರಿಯಿಂದ ಕೆಲಸ ನಿರ್ವಹಿಸಲಿದ್ದಾರೆ.
ಆರ್ಥಿಕವಾಗಿ ದಿವಾಳಿ ಆಗಿರುವ ಜೆಟ್ ಏರ್ವೇಸ್ ಕಂಪನಿಯ ಪುನಶ್ಚೇತನಕ್ಕೆ ಜಲನ್ ಕಲ್ರಾಕ್ ಒಕ್ಕೂಟ ಸಲ್ಲಿಸಿದ್ದ ಪ್ರಸ್ತಾವನೆಗೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ ಜೂನ್‌ನಲ್ಲಿ ಒಪ್ಪಿಗೆ ಸೂಚಿಸಿತ್ತು.
ಜೆಟ್ ಏರ್‌ವೇಸ್ ಮುಂಬೈನಲ್ಲಿ ಹೆಚ್ಚಿನ ಕಾರ್ಯಾಚರಣೆಗಳನ್ನು ನಡೆಸಲಿದ್ದು, ಕುರ್ಲಾದ ತನ್ನ 'ಗ್ಲೋಬಲ್ ಒನ್' ಕಚೇರಿಯಿಂದ ಇವುಗಳ ನಿರ್ವಹಣೆ ಮಾಡಲಿದೆ. ಜೆಟ್ ಏರ್‌ವೇಸ್ ಗ್ಲೋಬಲ್ ಒನ್‌ನಲ್ಲಿ ಅತ್ಯಾಧುನಿಕ ತರಬೇತಿ ಕೇಂದ್ರವನ್ನು ಹೊಂದಿದ್ದು, ಇದನ್ನು ಜೆಟ್ ಏರ್‌ವೇಸ್ ತಂಡಕ್ಕೆ ಆಂತರಿಕ ತರಬೇತಿಗಾಗಿ ಉಳಿಸಿಕೊಳ್ಳಲಾಗುವುದು ಎಂದು ಹಂಗಾಮಿ ಸಿಇಒ ಕ್ಯಾಪ್ಟನ್ ಗೌರ್ ಹೇಳಿದ್ದಾರೆ.
ಸದ್ಯಕ್ಕೆ ದೇಶಿ ಕಾರ್ಯಚರಣೆಗಳಿಗಾಗಿ ವಿಮಾನಗಳನ್ನು ಲೀಸ್‌ಗೆ ಪಡೆದುಕೊಳ್ಳಲು ಕಂಪನಿ ನಿರ್ಧರಿಸಿದೆ. ಈಗಾಗಲೇ ಜೆಟ್ ಏರ್‌ವೇಸ್ 150 ಪೂರ್ಣಕಾಲಿಕ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದ್ದು, 2021-22ರ ಅಂತ್ಯಕ್ಕೆ ಇನ್ನೂ 1000ಕ್ಕೂ ಹೆಚ್ಚು ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದ್ದೇವೆ ಎಂದು ಕ್ಯಾಪ್ಟನ್ ಗೌರ್ ಹೇಳಿದ್ದಾರೆ.
ಮೂರು ವರ್ಷಗಳಲ್ಲಿ 50ಕ್ಕೂ ಹೆಚ್ಚಿನ ಏರ್ ಕ್ರಾಫ್ಟ್ ಗಳನ್ನು ಪ್ರಾರಂಭಿಸುವುದಕ್ಕೆ ಹಾಗೂ 5 ವರ್ಷಗಳಲ್ಲಿ 100 ಕ್ಕೂ ಹೆಚ್ಚು ವಿಮಾನಗಳನ್ನು ಪ್ರಾರಂಭಿಸುವುದಕ್ಕೆ ಜೆಟ್ ಏರ್ವೇಸ್ 2.0 ಯೋಜನೆ ಹೊಂದಿದೆ.
ಜೆಟ್ ಏರ್ವೇಸ್ ಇನ್ಸಾಲ್ವೆನ್ಸಿ ಪ್ರಕ್ರಿಯೆಗೆ ಒಳಪಟ್ಟ ಕಾರಣ ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್ (ಎನ್ ಸಿಎಲ್ ಟಿ) ಈ ವರ್ಷದ ಜೂನ್ ನಲ್ಲಿ ಜನಲ್ ಕಾಲ್ರಾಕ್ ಒಕ್ಕೂಟದ ಪರಿಹಾರ ಯೋಜನೆಯನ್ನು ಅನುಮೋದಿಸಿತ್ತು.
ಈಗಾಗಲೇ ಅಸ್ತಿತ್ವದಲ್ಲಿರುವ ಏರ್ ಆಪರೇಟರ್ ಸರ್ಟಿಫಿಕೇಟ್‌ನೊಂದಿಗೆ ಪ್ರಯಾಣ ನಿಲ್ಲಿಸಿರುವ ವಿಮಾನಯಾನ ಕಂಪನಿಗೆ ಚಾಲನೆ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಜೆಟ್ ಏರ್‌ವೇಸ್ 2.0 2022ರ ಮೊದಲ ತ್ರೈಮಾಸಿಕದೊಳಗೆ ದೇಶೀಯ ಕಾರ್ಯಾಚರಣೆಗಳನ್ನು ಪುನರಾರಂಭಿಸುವ ಹಾಗೂ 2022ರ 3 ಮತ್ತು 4ನೇ ತ್ರೈಮಾಸಿಕದ ಹೊತ್ತಿಗೆ ಸಣ್ಣ ಅಂತರದ ಅಂತಾರಾಷ್ಟ್ರೀಯ ಪ್ರಯಾಣ ಕಾರ್ಯಾಚರಣೆಗಳನ್ನು ಆರಂಭಿಸುವ ಗುರಿಯನ್ನು ಹೊಂದಿದೆ. ನಮ್ಮ ಯೋಜನೆಯು 3 ವರ್ಷಗಳಲ್ಲಿ 50+ ವಿಮಾನಗಳನ್ನು ಮತ್ತು 5 ವರ್ಷಗಳಲ್ಲಿ 100+ ಅನ್ನು ವಿಮಾನಗಳನ್ನು ಹೊಂದುವುದಾಗಿದೆ.
ಇದು ಒಕ್ಕೂಟದ ತಕ್ಷಣದ ಹಾಗೂ ದೀರ್ಘಾವಧಿಯ ವ್ಯಾಪಾರ ಯೋಜನೆಯಾಗಿದೆ," ಎಂದು ಯುಎಇ ಉದ್ಯಮಿ ಮುರಾರಿ ಲಾಲ್ ಜಲನ್ ಹೇಳಿದ್ದಾರೆ. ಇವರು ಲಂಡನ್ ಮೂಲದ ಜಲನ್ ಕಲ್ರಾಕ್ ಒಕ್ಕೂಟದ ಪ್ರಮುಖ ಸದಸ್ಯರಾಗಿದ್ದು, ಜೆಟ್ ಏರ್‌ವೇಸ್‌ನ ಉದ್ದೇಶಿತ ಕಾರ್ಯನಿರ್ವಾಹಕೇತರ ಅಧ್ಯಕ್ಷರಾಗಿದ್ದಾರೆ.
ಸೆಪ್ಟೆಂಬರ್ ಅಂತ್ಯದವರೆಗೆ ಅಂತಾರಾಷ್ಟ್ರೀಯ ವಿಮಾನ ಸೇವೆ ಸ್ಥಗಿತ: ಕೊರೊನಾ ಸೋಂಕು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತೊಮ್ಮೆ ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನ ಸೇವೆಗಳ ಮೇಲಿನ ನಿರ್ಬಂಧವನ್ನು ವಿಸ್ತರಿಸಿದೆ.
ವಾಣಿಜ್ಯ ಪ್ರಯಾಣಿಕ ವಿಮಾನಗಳ ಮೇಲಿನ ನಿರ್ಬಂಧಗಳು ಸೆಪ್ಟೆಂಬರ್ 30ರವರೆಗೆ ಜಾರಿಯಲ್ಲಿರುತ್ತವೆ. ಆದರೆ, ಸರಕು ವಿಮಾನಗಳ ಸೇವೆ ಎಂದಿನಂತೆ ಮುಂದುವರಿಯಲಿದೆ ಎಂದು ಡಿಜಿಸಿಎ ಸ್ಪಷ್ಟಪಡಿಸಿದೆ. ನಿರ್ಬಂಧಿತ ವಾಯು ಮಾರ್ಗಗಳಲ್ಲಿ ಅಧಿಕಾರಿಗಳು ಅನುಮೋದಿಸಿದ ಅಂತಾರಾಷ್ಟ್ರೀಯ ವಿಮಾನಗಳಿಗೆ ಈ ನಿರ್ಬಂಧಗಳಿಂದ ವಿನಾಯಿತಿ ಇದೆ.
ವಾಣಿಜ್ಯ ವಿಮಾನಗಳ ಮೇಲಿನ ನಿರ್ಬಂಧಗಳನ್ನು 2021ರ ಜುಲೈ 31ರಂದು ಕೊನೆಗೊಳಿಸಲು ನಿರ್ಧರಿಸಲಾಗಿತ್ತು. ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಜುಲೈ 30 ರಿಂದ ಆಗಸ್ಟ್ 31ರವರೆಗೆ ವಿಸ್ತರಿಸಲಾಗಿತ್ತು. ಇದೀಗ ಈ ಅವಧಿಯನ್ನೂ ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ. 2020ರ ಮಾರ್ಚ್ 23 ರಿಂದ ನಿಗದಿತ ಅಂತಾರಾಷ್ಟ್ರೀಯ ವಿಮಾನಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.












Click it and Unblock the Notifications