Pahalgam Attack: ಗುಂಡೇಟಿಗೂ ಮುನ್ನ ಪ್ಯಾಂಟ್ ಬಿಚ್ಚಿಸಿ ಧರ್ಮ ಚೆಕ್ ಮಾಡಿದ ಉಗ್ರರು
ಕೆಲವು ಸಮಯದಿಂದ ಗುಂಡಿನ ಸದ್ದಿಲ್ಲದೇ ಶಾಂತವಾಗಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ನಿನ್ನೆ ಮತ್ತೆ ಗುಂಡಿನ ಸದ್ದು ಮೊಳಗಿದ್ದು, ಉಗ್ರರು ನೇರವಾಗಿ ಪ್ರವಾಸಿಗರ ಮೇಲೆ ದಾಳಿ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಸುಮಾರು 25ಕ್ಕೂ ಹೆಚ್ಚು ಪ್ರವಾಸಿಗರು ಉಗ್ರರ ದಾಳಿಗೆ ಅಸುನೀಗಿದ್ದಾರೆ.
ನಿನ್ನೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಪಹಲ್ಗಾಮ್‌ನ ಪ್ರವಾಸಿ ತಾಣಕ್ಕೆ ಬಂದ ಉಗ್ರರು ಮೊದಲು ಪ್ರವಾಸಿಗರನ್ನು ಮಾತನಾಡಿಸಿದ್ದಾರೆ. ಬಳಿಕ ಅವರ ಧರ್ಮಗಳನ್ನು ತಿಳಿದುಕೊಂಡು ದಾಳಿ ಮಾಡಲು ಆರಂಭಿಸಿದ್ದಾರೆ. ಇಬ್ಬರು ಸ್ಥಳೀಯರು ಸೇರಿ ಒಟ್ಟು 8 ಉಗ್ರರು ಎಕೆ-47 ಗನ್ ಬಳಸಿ ಓಪನ್ ಫೈರ್ ಮಾಡಿದ್ದಾರೆ.

ಉಗ್ರರು ಧರ್ಮವನ್ನು ತಿಳಿದುಕೊಂಡು ದಾಳಿ ಮಾಡಿರುವುದು ತಿಳಿದು ಬಂದಿದ್ದು, ನೀವು ಹಿಂದೂಗಳಾ ಎಂದು ಕೇಳಿ ಪ್ರವಾಸಿಗರನ್ನು ಟಾರ್ಗೆಟ್ ಮಾಡಿದ್ದಾರೆ. ಹಿಂದೂ ಪ್ರವಾಸಿಗರನ್ನೇ ಕೊಲ್ಲುವ ಉದ್ದೇಶವಿಟ್ಟುಕೊಂಡು ದಾಳಿ ಮಾಡಿದ ಉಗ್ರರು, ಗುಂಡೇಟಿಗೂ ಮುನ್ನ ಪ್ರತಿಯೊಬ್ಬ ವ್ಯಕ್ತಿಯ ಧರ್ಮ ಕೇಳಿ ಬಳಿಕ ಪ್ಯಾಂಟ್ ಬಿಚ್ಚಿಸಿ ಧರ್ಮ ಚೆಕ್ ಮಾಡಿ ಕೊನೆಗೆ ಹತ್ಯೆ ಮಾಡಿದ್ದಾರೆ ಎನ್ನುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ಬೈಸರನ್ ಕಣಿವೆಯಿಂದ ಇಳಿದು ಬಂದು ಪಹಲ್ಗಾಮ್‌ನ ಪ್ರವಾಸಿ ತಾಣದಲ್ಲಿ ಅಟ್ಟಹಾಸ ಮೆರೆದಿರುವ ದುಷ್ಟರು ಪಾಕಿಸ್ತಾನದ ಲಷ್ಕರ್ ಎ ತೊಯ್ಬಾ ಉಗ್ರರು ಎಂದು ಪೋಷಣೆಯಾಗಿದ್ದು, ಈ ಕೃತ್ಯದ ಹೊಣೆಯನ್ನು ಎಲ್ಇಟಿಯ ರೆಸಿಸ್ಟೆನ್ಸ್ ಫ್ರಂಟ್ (The Resistance Front) ಹೊತ್ತುಕೊಂಡಿದೆ ಎಂದು ತಿಳಿದು ಬಂದಿದೆ. ಇನ್ನು ಈ ದಾಳಿಯಲ್ಲಿ ಭಾಗಿಯಾದ ಉಗ್ರನೊಬ್ಬನ ಫೋಟೋ ಕೂಡ ರಿಲೀಸ್ ಆಗಿದೆ.
ಉಗ್ರರ ದಾಳಿಗೆ ಕನ್ನಡಿಗರು ಬಲಿ
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸೇರಿದಂತೆ 25ಕ್ಕೂ ಹೆಚ್ಚು ಪ್ರವಾಸಿಗರು ಜೀವ ಕಳೆದುಕೊಂಡಿದ್ದಾರೆ. ಬೇಸಿಗೆ ರಜೆ ಕಳೆಯಲು ಬಂದ ಪ್ರವಾಸಿಗರಿಗೆ ಉಗ್ರರು ಸಾವಿನ ದಾರಿ ತೋರಿಸಿದ್ದಾರೆ. ಈ ದಾಳಿಯಲ್ಲಿ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಉದ್ಯಮಿ ಮಂಜುನಾಥ್ ಎನ್ನುವವರು ಕೂಡ ಸಾವನ್ನಪ್ಪಿದ್ದಾರೆ.
ಶಿವಮೊಗ್ಗದ ಮಂಜುನಾಥ್ ತಮ್ಮ ಪತ್ನಿ ಹಾಗೂ ಮಗನೊಂದಿಗೆ ಮಗನಿಗೆ ಬೇಸಿಗೆ ರಜೆಯಿದ್ದ ಕಾರಣ ಕಾಶ್ಮೀರದ ಪ್ರವಾಸಕ್ಕೆ ತೆರಳಿದ್ದಾರೆ. ಕೆಲವು ಜಾಗಗಳನ್ನು ವೀಕ್ಷಿಸಿ ಪಹಲ್ಗಾಮ್‌ಗೆ ತೆರಳಿದ್ದಾರೆ. ಈ ವೇಳೆ ಉಗ್ರರು ಏಕಾಏಕಿ ದಾಳಿ ನಡೆಸಿ ಗುಂಡು ಹಾರಿಸಿದ್ದಾರೆ. ಉಗ್ರರ ಗುಂಡಿನ ದಾಳಿಗೆ ಮಂಜುನಾಥ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪತಿಯನ್ನು ಕಣ್ಣೇದುರೇ ಕಳೆದುಕೊಂಡ ಮಂಜುನಾಥ್ ಪತ್ನಿ, ನನ್ನ ಗಂಡನನ್ನು ಕೊಂದು ಹಾಕಿದಿರಿ, ನನ್ನನ್ನೂ ಕೊಂದು ಬಿಡಿ ಎಂದು ಉಗ್ರರ ಬಳಿ ಕೇಳಿದ್ದು, ಈ ವೇಳೆ ಉಗ್ರನೊಬ್ಬ ನೀವು ಹೋಗಿ ನಿಮ್ಮ ಮೋದಿಗೆ ಹೇಳಿ ಅಂತಾ ಹೇಳಿ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಒಟ್ಟಾರೆ ಉಗ್ರರ ಹೊಂಚಿನ ದಾಳಿಗೆ ಅಮಾಯಕ ಪ್ರವಾಸಿಗರು ಅಸುನೀಗಿದ್ದಾರೆ.












Click it and Unblock the Notifications