J&K 2024 polls: 24 ಕ್ಷೇತ್ರಗಳಲ್ಲಿ ಇಂದು ಮತದಾನ; ಗಮನ ಸೆಳೆದ ಕ್ಷೇತ್ರಗಳು, ಅಭ್ಯರ್ಥಿಗಳ ಮಾಹಿತಿ, ವಿವರ
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ದಶಕಗಳ ಬಳಿಕ ಮೊದಲ ಬಾರಿಗೆ ವಿಧಾನಸಭಾ ಚುನಾವಣೆ ನಡೆಯಲಿದೆ. ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಹಂತದ ಮತದಾನ ಇಂದು ನಡೆಯಲಿದೆ. ಏಳು ಜಿಲ್ಲೆಗಳ 24 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯಲಿದ್ದು, 23 ಲಕ್ಷಕ್ಕೂ ಅಧಿಕ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. 24 ಕ್ಷೇತ್ರಗಳಿಂದ 219 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು, ಎಲ್ಲರ ಭವಿಷ್ಯ ಮತಗಟ್ಟೆಯಲ್ಲಿ ಭದ್ರವಾಗಲಿದೆ.
2019ರಲ್ಲಿ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸಿಲಾಗಿತ್ತು. ರಾಜ್ಯದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿ ಮತ್ತು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ ಬಳಿಕ ಇದು ಮೊದಲ ವಿಧಾನಸಭಾ ಚುನಾವಣೆಯಾಗಿದ್ದು, ಭಾರಿ ಮಹತ್ವ ಪಡೆದುಕೊಂಡಿದೆ. ಬಿಜೆಪಿ ಜಮ್ಮು ಮತ್ತು ಕಾಶ್ಮೀರ ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ.

ಪ್ರಮುಖ ಪಕ್ಷಗಳ ನಡುವೆ ಪೈಪೋಟಿ
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಮಾಡಿದ ಬಳಿಕ, ರಾಜ್ಯದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಪ್ರಮುಖ ಪ್ರಾದೇಶಿಕ ಪಕ್ಷಗಳಾದ ಫಾರೂಕ್ ಅಬ್ದುಲ್ಲಾ ಅವರ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಮೆಹಬೂಬಾ ಮುಫ್ತಿ ಅವರ ಪಿಡಿಪಿ ಮತ್ತು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗೆ ಈ ಚುನಾವಣೆ ನಿರ್ಣಾಯಕವಾಗಿದೆ.
ಜಮಾತ್-ಎ-ಇಸ್ಲಾಮಿಯೊಂದಿಗೆ ಮೈತ್ರಿ ಮಾಡಿಕೊಂಡ ಎಂಜಿನಿಯರ್ ರಶೀದ್ ಅವರ ಕಾಶ್ಮೀರ ಅವಾಮಿ ಇತ್ತೆಹಾದ್ ಪಾರ್ಟಿ ಮತ್ತು ಸಜ್ಜದ್ ಲೋನ್ ಅವರ ಪೀಪಲ್ಸ್ ಕಾನ್ಫರೆನ್ಸ್‌ನಂತಹ ಸಂಘಟನೆಗಳು ಕೂಡ ಸ್ಪರ್ಧೆಯಲ್ಲಿವೆ. ಇವು ತಮ್ಮ ಸಿದ್ಧಾಂತ ಬೆಂಬಲಿಸುವ ಅಭ್ಯರ್ಥಿಗಳ ಪರ ಕೆಲಸ ಮಾಡುತ್ತಿವೆ.
ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ದೂರುವಿನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಮ್ ಅಹ್ಮದ್ ಮಿರ್, ಕುಲ್ಗಾಮ್‌ನಿಂದ ಸಿಪಿಐ(ಎಂ)ನ ಮೊಹಮ್ಮದ್ ಯೂಸುಫ್ ತಾರಿಗಾಮಿ, ದೇವ್‌ಸರ್‌ನಿಂದ ಪಿಡಿಪಿಯ ಸರ್ತಾಜ್ ಮದ್ನಿ, ದಮ್ಹಾಲ್ ಹಾಜಿಪೋರಾದಿಂದ ನ್ಯಾಷನಲ್ ಕಾನ್ಫರೆನ್ಸ್‌ನ ಸಕೀನಾ ಇಟೂ, ಶ್ರೀಗುಫ್ವಾರಾ- ಬಿಜ್‌ಬೆಹರಾದಿಂದ ಪಿಡಿಪಿಯ ವಹೀದ್ ಪಾರಾ, ಮತ್ತು ಪುಲ್ವಾಮದಿಂದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಪುತ್ರಿ ಇಲ್ತಿಜಾ ಮುಫ್ತಿ ಕಣಕ್ಕಿಳಿದಿದ್ದು, ಕಾಶ್ಮೀರ ಭಾಗದಲ್ಲಿ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.
ಜಮ್ಮು ಪ್ರದೇಶದಲ್ಲಿ ಸುನಿಲ್ ಶರ್ಮಾ (ಬಿಜೆಪಿ), ವಿಕರ್ ರಸೂಲ್ ವಾನಿ (ಕಾಂಗ್ರೆಸ್), ಮಾಜಿ ಸಚಿವ ಸಜ್ಜದ್ ಕಿಚ್ಲೂ (ಎನ್‌ಸಿ), ಖಾಲಿದ್ ನಜೀದ್ ಸುಹರ್ವರ್ದಿ (ಎನ್‌ಸಿ), ಶಕ್ತಿ ರಾಜ್ ಪರಿಹಾರ್ (ದೋಡಾ ವೆಸ್ಟ್), ಅಬ್ದುಲ್ ಮಜಿದ್ ವಾನಿ (ಡಿಪಿಎಪಿ) ಸ್ಪರ್ಧೆ ಗಮನ ಸೆಳೆದಿದೆ.
ಎನ್‌ಸಿ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದರೂ, ಬನಿಹಾಲ್, ಭದೇರ್ವಾ ಮತ್ತು ದೋಡಾ ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿರುವುದು ವಿಶೇಷ. ಸೌಹಾರ್ದ ಸ್ಪರ್ಧೆಗಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ.
ಮೊದಲ ಹಂತದ ಮತದಾನ ಇಂದು ನಡೆಯಲಿದ್ದು, ಎರಡನೇ ಹಂತದ ಮತದಾನ ಸೆಪ್ಟೆಂಬರ್ 25 ರಂದು ಮತ್ತು ಮೂರನೇ ಹಂತದ ಮತದಾನ ಅಕ್ಟೋಬರ್ 1 ರಂದು ನಡೆಯಲಿದೆ. ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ.












Click it and Unblock the Notifications