Jammu And Kashmir Assembly Election 2024: ಪಿಡಿಪಿ, ನ್ಯಾಷನಲ್ ಕಾನ್ಪರೆನ್ಸ್ ಹೋರಾಟದ ಚಿತ್ರಣ
ಶ್ರೀನಗರ, ಸೆಪ್ಟೆಂಬರ್ 25: ಜಮ್ಮು ಮತ್ತು ಕಾಶ್ಮೀರದ 26 ವಿಧಾನಸಭಾ ಕ್ಷೇತ್ರಗಳಲ್ಲಿ ಬುಧವಾರ ಮತದಾನ ನಡೆಯುತ್ತಿದೆ. ರಾಜ್ಯದ 90 ಕ್ಷೇತ್ರಗಳಿಗೆ ಮೂರು ಹಂತದಲ್ಲಿ ಮತದಾನ ನಡೆಯುತ್ತಿದ್ದು, ಇಂದು 2ನೇ ಹಂತದ ಮತದಾನ ಬಿರುಸಿನಿಂದ ಸಾಗಿದೆ. ಮತದಾನದ ಹಿನ್ನಲೆಯಲ್ಲಿ ರಾಜ್ಯದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಚುನಾವಣಾ ಫಲಿತಾಂಶ ಅಕ್ಟೋಬರ್ 8ರಂದು ಪ್ರಕಟವಾಗಲಿದೆ.
26 ಕ್ಷೇತ್ರಗಳ ಪೈಕಿ 15 ದೊಡ್ಡ ವಿಧಾನಸಭಾ ಕ್ಷೇತ್ರಗಳು ಕಾಶ್ಮೀರ ವಿಭಾಗದಲ್ಲಿವೆ. ಉಳಿದ 11 ಜಮ್ಮು ವಿಭಾಗದಲ್ಲಿವೆ. 9 ಕ್ಷೇತ್ರಗಳು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿವೆ. ಇವುಗಳಲ್ಲಿ ಕಾಶ್ಮೀರ ವಿಭಾಗದಲ್ಲಿ ಕಂಗನ್ ಕ್ಷೇತ್ರ ಮಾತ್ರವಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಜನರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ.

ಬುಧವಾರ ಮತದಾನ ನಡೆಯುತ್ತಿರುವ 26 ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳ ಹೆಸರು ಬದಲಾವಣೆ ಮಾಡಿ, ಅವುಗಳನ್ನು ಪುನಾರಚನೆ ಮಾಡಲಾಗಿದೆ. 2022ರಲ್ಲಿ ನಡೆದ ಕ್ಷೇತ್ರ ಪುನರ್ ವಿಂಗಡನೆ ಬಳಿಕ ಈ ಕ್ಷೇತ್ರಗಳು ಮೊದಲ ಬಾರಿಗೆ ಚುನಾವಣೆಯನ್ನು ಎದುರಿಸುತ್ತಿವೆ.
ಪಿಡಿಪಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಹೋರಾಟ: 26 ಕ್ಷೇತ್ರಗಳ ಪೈಕಿ 2014ರ ಚುನಾವಣೆಯಲ್ಲಿ ಮೆಹಬೂಬಾ ಮುಫ್ತಿ ನೇತೃತ್ವದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮತ್ತು ಫಾರೂಕ್ ಅಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪ್ರಬಲ ಎದುರಾಳಿಗಳಾಗಿದ್ದವು. ಇವುಗಳಲ್ಲಿ ಪಿಡಿಪಿ 10 ಕ್ಷೇತ್ರಗಳಲ್ಲಿ ಗೆದ್ದಿತ್ತು. 8 ಸೀಟುಗಳು ನ್ಯಾಷನಲ್ ಕಾನ್ಫರೆನ್ಸ್ ಪಾಲಾಗಿತ್ತು. ಉಳಿದಂತೆ ಬಿಜೆಪಿ 3, ಕಾಂಗ್ರೆಸ್ 2 ಮತ್ತು ಪಿಡಿಎಫ್ 1 ಕ್ಷೇತ್ರವನ್ನು ಗೆದ್ದಿತ್ತು.
ಮತಗಳಿಕೆ ಪ್ರಮಾಣದಲ್ಲಿ ಪಿಡಿಪಿ ಶೇ 31.04, ನ್ಯಾಷನಲ್ ಕಾನ್ಫರೆನ್ಸ್ ಶೇ 28.66, ಕಾಂಗ್ರೆಸ್ 14.19 ಮತ್ತು ಬಿಜೆಪಿ 12.53ರಷ್ಟು ಮತಗಳನ್ನು ಪಡೆದಿದ್ದವು. ಪಿಡಿಪಿ-ಬಿಜೆಪಿ ಮೈತ್ರಿ ಸರ್ಕಾರ 2019ರಲ್ಲಿ ಪತನಗೊಂಡಿತು. ಬಳಿಕ ನಡೆದ ಲೋಕಸಭೆ ಚುನಾವಣೆಯಲ್ಲಿ ಪಿಡಿಪಿಗೆ ಭಾರೀ ಹಿನ್ನಡೆಯಾಗಿತ್ತು.
ಇಂದು ಮತದಾನ ನಡೆಯುತ್ತಿರುವ 26 ಕ್ಷೇತ್ರಗಳಲ್ಲಿ ಪಿಡಿಪಿ ಒಂದೂ ಕ್ಷೇತ್ರದಲ್ಲಿಯೂ ಮುನ್ನಡೆ ಪಡೆಯುವಲ್ಲಿ ವಿಫಲವಾಗಿತ್ತು. ನ್ಯಾಷನಲ್ ಕಾನ್ಫರೆನ್ಸ್ 15 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿತ್ತು. ಕಾಂಗ್ರೆಸ್ 6 ಮತ್ತು ಬಿಜೆಪಿ 3ರಲ್ಲಿ ಮುನ್ನಡೆ ಪಡೆದಿದ್ದವು.
ಕೇಂದ್ರ ಸರ್ಕಾರ ಸಂವಿಧಾನದ 370ನೇ ವಿಧಿ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಕಲ್ಪಿಸಿದ್ದ ವಿಶೇಷ ಸ್ಥಾನಮಾನವನ್ನು 2019ರ ಆಗಸ್ಟ್ 5ರಂದು ರದ್ದುಗೊಳಿಸಿದೆ. ಈ ಬೆಳವಣಿಗೆ ಬಳಿಕ ನಡೆದ 2024ರ ಲೋಕಸಭೆ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ 20 ಸೀಟುಗಳಲ್ಲಿ ಮುನ್ನಡೆ ಪಡೆದುಕೊಂಡಿತ್ತು. 26 ಕ್ಷೇತ್ರಗಳಲ್ಲಿ ಎಲ್ಲಿಯೂ ಪಿಡಿಪಿ ಹೇಳಿಕೊಳ್ಳುವಂತಹ ಮತಗಳನ್ನು ಪಡೆದಿರಲಿಲ್ಲ. ಬಿಜೆಪಿ ಮೂರು, ಕಾಂಗ್ರೆಸ್ ಮತ್ತು ಪಕ್ಷೇತರರು 1 ಸೀಟುಗಳಲ್ಲಿ ಮುನ್ನಡೆ ಪಡೆದಿದ್ದರು.
ಇಂದು ಮತದಾನ ನಡೆಯುತ್ತಿರುವ 26 ಕ್ಷೇತ್ರಗಳಲ್ಲಿ 25.7 ಲಕ್ಷ ಮತದಾರರು ಇದ್ದಾರೆ. ಇವರಲ್ಲಿ 13.09 ಲಕ್ಷ ಪುರುಷರು, 12.61 ಲಕ್ಷ ಮಹಿಳೆಯರು. 2014ರಲ್ಲಿ ಈ ಕ್ಷೇತ್ರಗಳಲ್ಲಿ ಶೇ 61.28ರಷ್ಟು ಮತದಾನವಾಗಿತ್ತು.
ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ಅಡಿಯಲ್ಲಿ ಕಲ್ಪಿಸಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸುತ್ತಿವೆ.












Click it and Unblock the Notifications