Jaipur Literature Festival 2025: 18ನೇ ಆವೃತ್ತಿಯ ಜೈಪುರ ಸಾಹಿತ್ಯ ಉತ್ಸವ ಯಶಸ್ವಿ ಸಂಪನ್ನ
ಜೈಪುರ ಸಾಹಿತ್ಯ ಉತ್ಸವದ (JLF) 18ನೇ ಆವೃತ್ತಿಯು ಫೆಬ್ರವರಿ 3, 2025ರಂದು ಯಶಸ್ವಿಯಾಗಿ ಸಂಪನ್ನಗೊಂಡಿತು. ಜೈಪುರದ ಕ್ಲಾರ್ಕ್ಸ್ ಅಮೆರ್ ಹೋಟೆಲ್‌ನಲ್ಲಿ ಐದು ದಿನಗಳ ಕಾಲ ಚಿಂತಕರು ಮತ್ತು ಬರಹಗಾರರ ವಿಚಾರಧಾರೆಯೊಂದಿಗೆ ಹಾಗೂ ಸಾಂಸ್ಕೃತಿಕ ಉತ್ಸವಗಳೊಂದಿಗೆ ಹದಿನೆಂಟನೇ ಆವೃತ್ತಿಯ ಜೈಪುರ ಸಾಹಿತ್ಯ ಉತ್ಸವ ಮುಕ್ತಾಯಗೊಂಡಿದೆ.
ವಿಶ್ವದ ಅತಿದೊಡ್ಡ ಸಾಹಿತ್ಯ ಕೂಟಗಳಲ್ಲಿ ಒಂದೆಂದು ಗುರುತಿಸಲ್ಪಟ್ಟ ಈ ಉತ್ಸವವು ನೊಬೆಲ್ ಪ್ರಶಸ್ತಿ ವಿಜೇತರು, ಬುಕರ್ ಪ್ರಶಸ್ತಿ ವಿಜೇತರು, ಹೆಸರಾಂತ ಲೇಖಕರು, ಕವಿಗಳು, ರಾಜತಾಂತ್ರಿಕರು ಮತ್ತು ಚಿಂತಕರು ಸೇರಿದಂತೆ 300ಕ್ಕೂ ಹೆಚ್ಚು ಪ್ರಸಿದ್ಧ ಭಾಷಣಕಾರರನ್ನು ಐದು ದಿನಗಳ ಕಾಲ ಒಟ್ಟುಗೂಡಿಸಿದೆ.

ಜನವರಿ 30ರಂದು ನೊಬೆಲ್ ಪ್ರಶಸ್ತಿ ವಿಜೇತ ವೆಂಕಿ ರಾಮಕೃಷ್ಣನ್ ಅವರ ಭಾಷಣದೊಂದಿಗೆ ಆರಂಭವಾದ ಜೈಪುರ ಸಾಹಿತ್ಯ ಉತ್ಸವ 2025, ಐದು ದಿನಗಳ ಕಾಲ ಯಶಸ್ವಿಯಾಗಿ ನಡೆದಿದೆ. ಈ ಉತ್ಸವದಲ್ಲಿ ಭಾಗಿಯಾದವರು ಸಾಹಿತ್ಯ, ರಾಜಕೀಯ, ಮಾನವ ಹಕ್ಕುಗಳು, ಲಿಂಗ ಸಮಾನತೆ, ಆರೋಗ್ಯ, ಸಿನಿಮಾ, ಸಂಗೀತ ಮತ್ತು ಪ್ರಕಾಶನ ಉದ್ಯಮ ವಿಸ್ತಾರ ಸೇರಿದಂತೆ ವೈವಿಧ್ಯಮಯ ಚರ್ಚೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಅವರ್ ಸಿಟಿ ದ್ಯಾಟ್ ಇಯರ್, ಪೂವರ್ ಎಕನಾಮಿಕ್ಸ್ ಫಾರ್ ಯಂಗ್, ದಿ ಚೈಲ್ಡ್ ವಿಥ್ ಇನ್, ವ್ಯಾಕ್ಸ್ ನೇಷನ್, ಹೆಲ್ತ್ ಆ್ಯಂಡ್ ವ್ಯಾಕ್ಸಿನ್, ವೈ ವಿ ಡೈ, ದಿ ನ್ಯೂ ಸೈನ್ಸ್ ಆಫ್ ಏಜಿಂಗ್ ಮತ್ತು ದಿ ಕ್ವೆಸ್ಟ್ ಫಾರ್ ಮಾರ್ಟಾಲಿಟಿ ಹಾಗೂ ಕಾನೂನು ಮತ್ತು ನಾಯಕತ್ವದ ವಿಚಾರದ ಬಗ್ಗೆ ಜೈಪುರ ಸಾಹಿತ್ಯ ಉತ್ಸವದಲ್ಲಿ ವಿಶೇಷವಾದ ಸಂವಾದ ನಡೆದಿದೆ.
ಈ ಬಾರಿಯ ಜೈಪುರ ಸಾಹಿತ್ಯ ಉತ್ಸವದಲ್ಲಿ ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ, ಫ್ರೆಂಚ್-ಅಮೆರಿಕನ್ ಅರ್ಥಶಾಸ್ತ್ರಜ್ಞ ಎಸ್ತರ್ ಡುಫ್ಲೋ, ನಟ ಅಮೋಲ್ ಪಾಲೇಕರ್, ಲೇಖಕಿ ಇರಾ ಮುಖೋಟಿ, ಲೇಖಕಿ ಗೀತಾಂಜಲಿ ಶ್ರೀ, ನಾಟಕಕಾರ ಡೇವಿಡ್ ಹರೇ, ಲೇಖಕ ಯರೊಸ್‌ಕುಲಿ, ಮಾನವಶಾಸ್ತ್ರಜ್ಞ ಮುಕುಲಿಕಾ ಬ್ಯಾನರ್ಜಿ, ಮಾಜಿ ರಾಜತಾಂತ್ರಿಕ ಮನ್‌ಪ್ರೀತ್ ವೋಹ್ರಾ, ಲೇಖಕ ಸಲೀಲ್ ತ್ರಿಪಾಠಿ, ಪತ್ರಕರ್ತೆ ಜಾರ್ಜಿನಾ ಗಾಡ್ವಿನ್, ಇಸ್ರೇಲಿ ಪತ್ರಕರ್ತ ಗಿಡಿಯಾನ್ ಲೆವಿ, ಚಲನಚಿತ್ರ ನಿರ್ದೇಶಕ ಮಾನವ್ ಕೌಲ್, ಗೀತ ರಚನೆಕಾರ ಜಾವೇದ್ ಅಖ್ತರ್, ನಟ ರಾಹುಲ್ ಬೋಸ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.
ಸಂಗೀತ, ಸಾಹಿತ್ಯ, ಸಿನಿಮಾ, ರಂಗಭೂಮಿಗೆ ಸಂಬಂಧಿಸಿದ ಚರ್ಚೆಗಳ ನಂತರ ಜೈಪುರ ಸಾಹಿತ್ಯ ಉತ್ಸವದಲ್ಲಿ ಕೈಲಾಶ್ ಖೇರ್ ಅವರ ಸಂಗೀತ ಪ್ರದರ್ಶನ ನೆರೆದಿದ್ದವರ ಉತ್ಸಾಹ ಹೆಚ್ಚಿಸಿತು. ಜೈಪುರ ಸಾಹಿತ್ಯ ಉತ್ಸವದಲ್ಲಿ ಸಂಜೆಯ ವೇಳೆ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಜನರು ಸಂಭ್ರಮಿಸಿದ್ದು, ಅಂತಿಮ ದಿನ ಬಹುಸಂಖ್ಯೆಯ ಪ್ರೇಕ್ಷಕರು ಭಾಗಿಯಾಗಿದ್ದರು.












Click it and Unblock the Notifications