ಜಯಲಲಿತಾ ಚಪ್ಪಲಿ, ಆಸ್ತಿ ಪತ್ರ, ಒಡವೆಗಳು ಸೇರಿದಂತೆ ಇನ್ನಿತರ ವಸ್ತುಗಳ ಹಸ್ತಾಂತರ ಪ್ರಕ್ರಿಯೆ ಆರಂಭ
J.Jayalalitha Assets: ಮಿಳುನಾಡು ಮಾಜಿ ಸಿಎಂ ದಿವಂಗತ ಜಯಯಲಲಿತಾ ಅವರಿಗೆ ಸಂಬಂಧಿಸಿದ ಆಸ್ತಿ ಪತ್ರಗಳು, ಒಡವೆ ಸೇರಿದಂತೆ ಇನ್ನಿತರೆ ವಸ್ತುಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಆರಂಭವಾಗಿದೆ. ಹಾಗಾದರೆ ಎಷ್ಟು ಆಸ್ತಿ ಇದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಜಯಲಲಿತಾ ಅವರಿಗೆ ಸಂಬಂಧಿಸಿದ ಆಸ್ತಿ ಪತ್ರಗಳು, 11,344 ರೇಷ್ಮೆ ಸೀರೆಗಳು, 7,040 ಗ್ರಾಂ ತೂಕದ 468 ರೀತಿಯ ಚಿನ್ನ, ವಜ್ರಖಚಿತ ಆಭರಣಗಳು ಹಾಗೂ 750 ಜೊತೆ ಚಪ್ಪಲಿಗಳು, ವಾಚ್‌ಗಳು ಸೇರಿದಂತೆ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಆರಂಭ ಆಗಿದೆ. ಈಗಾಗಲೇ ಇಂದು (ಫೆಬ್ರವರಿ 14) ತಮಿಳುನಾಡಿನಿಂದ ಪೊಲೀಸರು ಬಿಗಿ ಭದ್ರತೆಯಲ್ಲಿ ಬೆಂಗಳೂರಿಗೆ ಆಗಮಿಸಿದ್ದಾರೆ. ಇಂದು ಅಥವಾ ನಾಳೆ ಇವುದನ್ನು ತೆಗೆದುಕೊಂಡು ಹೋಗಲಿದ್ದಾರೆ ಎಂದು ತಿಳಿದುಬಂದಿದೆ.

ಸಂಬಂಧಿಕರು ಎಂದು ಹೇಳಿಕೊಂಡು ದೀಪ ಹಾಗೂ ದೀಪಕ್ ಇಬ್ಬರು ಜಯಲಲಿತಾ ಒಡವೆಯನ್ನ ನಮಗೆ ಕೊಡಿ ಎಂದು ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಹೈಕೋರ್ಟ್ ಅವರ ಅರ್ಜಿಯನ್ನ ವಜಾ ಮಾಡಿತ್ತು. ಇಂದು ನ್ಯಾಯಾಧೀಶರ ಸಮ್ಮುಖದಲ್ಲಿ ತಮಿಳುನಾಡು ಸರ್ಕಾರಕ್ಕೆ ಎಲ್ಲಾ ವಸ್ತುಗಳನ್ನು ವರ್ಗಾವಣೆ ಮಾಡಲಾಗುತ್ತಿದೆ. ವಕೀಲರು ಹಾಗೂ ತಮಿಳುನಾಡಿನ ಕೆಲವು ಅಧಿಕಾರಿಗಳು ನ್ಯಾಯಾಧೀಶರ ಮುಂದೆ ಪ್ರತಿಯೊಂದು ಮಾಹಿತಿಯನ್ನು ನೀಡಿ ಬಂಗಾರದ ಒಡವೆಗಳನ್ನು ತೂಕ ಹಾಕುತ್ತಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ತಮಿಳುನಾಡು ಮಾಜಿ ಸಿಎಂ ದಿವಂಗತ ಜೆ.ಜಯಲಲಿತಾ ಅವರಿಂದ ಮುಟ್ಟುಗೋಲು ಹಾಕಿಕೊಂಡಿದ್ದ ಬೆಲೆ ಬಾಳುವ ವಸ್ತುಗಳು ಮತ್ತು ಆಸ್ತಿಗಳನ್ನು ಹರಾಜು ಹಾಕುವ ಬದಲು ತಮಿಳುನಾಡು ಸರ್ಕಾರದ ಸುಪರ್ದಿಗೆ ನೀಡುವಂತೆ ವಿಶೇಷ ನ್ಯಾಯಾಲಯ ಆದೇಶಿಸಿತ್ತು.
7,040 ಗ್ರಾಂ ತೂಕದ 468 ಬಗೆಯ ಚಿನ್ನ, ವಜ್ರಖಚಿತ ಆಭರಣಗಳು, 700 ಕೆ.ಜಿ ತೂಕದ ಬೆಳ್ಳಿ ಆಭರಣಗಳು, 740 ದುಬಾರಿ ಚಪ್ಪಲಿಗಳು, 11,344 ರೇಷ್ಮೆ ಸೀರೆಗಳು, 250 ಶಾಲು, 12 ರೆಫ್ರಿಜರೇಟರ್, 10 ಟಿವಿ ಸೆಟ್, 8 ವಿಸಿಆರ್, 1 ವಿಡಿಯೋ ಕ್ಯಾಮೆರಾ, 4 ಸಿಡಿ ಪ್ಲೇಯರ್, 2 ಆಡಿಯೋ ಡೆಕ್, 24 ಟೂ-ಇನ್ ಒನ್ ಟೇಪ್ ರೆಕಾರ್ಡರ್ ಹಾಗೂ 1,040 ವಿಡಿಯೋ ಕ್ಯಾಸೆಟ್, 3 ಐರನ್ ಲಾಕರ್‌ಗಳು ತಮಿಳುನಾಡು ಸರ್ಕಾರಕ್ಕೆ ಸೇರಲಿವೆ.
ವಿಶೇಷ ನ್ಯಾಯಾಲಯವು ಬೆಲೆ ಬಾಳುವ ವಸ್ತುಗಳು, ಚಿನ್ನ ಮತ್ತು ವಜ್ರಾಭರಣಗಳನ್ನು ಹಿಂದಿರುಗಿಸಲು 2024ರ ಫೆಬ್ರವರಿ 19ಕ್ಕೆ ದಿನಾಂಕ ನಿಗದಿಪಡಿಸಿತ್ತು. 2024ರ ಮಾರ್ಚ್ 6 ಮತ್ತು 7ರಂದು ಅವುಗಳನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಕೃತ ಅಧಿಕಾರಿಗಳನ್ನು ನಿಯೋಜಿಸುವಂತೆ ತಮಿಳುನಾಡು ಸರಕಾರಕ್ಕೆ ನಿರ್ದೇಶನ ನೀಡಿತ್ತು. ಈ ನಡುವೆಯೇ ದೀಪಾ ಮತ್ತು ದೀಪಕ್ ಅವರು ವಿಶೇಷ ನ್ಯಾಯಾಲಯದ ಆದೇಶದ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಆಸ್ತಿ ಮತ್ತು ಬೆಲೆ ಬಾಳುವ ವಸ್ತುಗಳ ಹಸ್ತಾಂತರ ಪ್ರಕ್ರಿಯೆಗೆ ಒಂದು ದಿನದ ಮೊದಲು 2024ರ ಮಾರ್ಚ್ 5ರಂದು ಹೈಕೋರ್ಟ್‌ನ ಏಕ ಸದಸ್ಯ ಪೀಠ, ವಿಶೇಷ ನ್ಯಾಯಾಲಯದ ಆದೇಶವನ್ನು ತಡೆಹಿಡಿದಿತ್ತು. ಇದೀಗ ಮೇಲ್ಮನವಿ ವಜಾಗೊಂಡ ಹಿನ್ನೆಲೆ ವಿಶೇಷ ನ್ಯಾಯಾಲಯ ಆಸ್ತಿ ಮತ್ತು ಆಭರಣಗಳನ್ನು ಹಸ್ತಾಂತರಿಸುತ್ತಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯ 2014ರ ಸೆಪ್ಟೆಂಬರ್ 27ರಂದು ಜಯಲಲಿತಾ ಅವರಿಗೆ ನಾಲ್ಕು ವರ್ಷ ಜೈಲು ಮತ್ತು 100 ಕೋಟಿ ರೂಪಾಯಿ ದಂಡ ವಿಧಿಸಿತ್ತು.












Click it and Unblock the Notifications