ಫೇಸ್ಬುಕ್ ಮಾಹಿತಿಗೆ ಕನ್ನ, ಕೇಂಬ್ರಿಡ್ಜ್ ಅನಾಲಿಟಿಕಾಗೆ ಕೇಂದ್ರದಿಂದ ನೋಟಿಸ್
ನವದೆಹಲಿ, ಮಾರ್ಚ್ 24: ಫೇಸ್ಬುಕ್ ನ ದತ್ತಾಂಶಗಳ ಸೋರಿಕೆ ಪ್ರಕರಣದ ರೂವಾರಿ ಲಂಡನ್ ಮೂಲದ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಗೆ ಕೇಂದ್ರ ಸರಕಾರ ನೋಟಿಸ್ ಜಾರಿ ಮಾಡಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಚುನಾವಣೆಯಲ್ಲಿ ಪರಿಣಾಮ ಬೀರಲು ಅನುಮತಿ ಪಡೆಯದೆ 5 ಕೋಟಿ ಫೇಸ್ಬುಕ್ ಗ್ರಾಹಕರ ಮಾಹಿತಿಗಳನ್ನು ಎಗರಿಸಿದ ಆರೋಪ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಯ ಮೇಲಿದೆ. ಈ ಸಂಬಂಧ ಇಂಗ್ಲೆಂಡ್ ಮತ್ತು ಅಮೆರಿಕಾದಲ್ಲಿ ಸಂಸ್ಥೆಯ ವಿರುದ್ಧ ತನಿಖೆ ನಡೆಯುತ್ತಿದೆ.
ಇದೀಗ ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಕೇಂಬ್ರಿಡ್ಜ್ ಅನಾಲಿಟಿಕಾಗೆ ನೋಟಿಸ್ ನೀಡಿದ್ದು ಮಾರ್ಚ್ 31ರ ಒಳಗೆ ಉತ್ತರಿಸುವಂತೆ ಸೂಚಿಸಿದೆ. ದತ್ತಾಂಶಗಳನ್ನು ಹೇಗೆ ಸಂಗ್ರಹಿಸಿದ್ದೀರಿ ಎಂಬುದರಿಂದ ಹಿಡಿದು ಹಲವು ಪ್ರಶ್ನೆಗಳನ್ನು ಕೇಳಲಾಗಿದೆ.

ಮಾಹಿತಿಗಳನ್ನು ಸಂಗ್ರಹಿಸುವ ಮೊದಲು ವ್ಯಕ್ತಿಗಳ ಒಪ್ಪಿಗೆ ಪಡೆಯಲಾಗಿದೆಯೇ? ಮಾಹಿತಿಗಳನ್ನು ಹೇಗೆ ಬಳಸಿಕೊಂಡಿದ್ದೀರಿ? ಕಂಪನಿ ಜತೆ ಗುರುತಿಸಿಕೊಂಡಿರುವ ಸಂಸ್ಥೆಗಳ ಮತ್ತು ವ್ಯಕ್ತಿಗಳು ಯಾರು? ದತ್ತಾಂಶ ಪಡೆದುಕೊಳ್ಳಲು ಯಾವ ವಿಧಾನವನ್ನು ಅನುಸರಿಸಿದ್ದೀರಿ? ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಲಾಗಿದೆ.
ಖಾಸಗಿತನದ ಹರಣವನ್ನು ಸಹಿಸುವುದಿಲ್ಲ ಎಂದು ಈ ಹಿಂದೆ ಇಲಾಖೆ ಹೇಳಿತ್ತು. ಇದೀಗ ಈ ಸಂಬಂಧ ನೋಟಿಸ್ ಜಾರಿಗೊಳಿಸಲಾಗಿದೆ. ಮೂಲಭೂತ ಹಕ್ಕಾದ ಖಾಸಗಿತನದ ಹಕ್ಕನ್ನು ಕಾಪಾಡಲು ಸರಕಾರ ಬದ್ಧವಾಗಿದೆ ಎಂದು ಸಚಿವಾಲಯ ಹೇಳಿದೆ.
ದತ್ತಾಂಶಗಳನ್ನು ಕದ್ದು ಚುನಾವಣಗಳ ಮೇಲೆ ಪರಿಣಾಮ ಬೀರಲು ಯತ್ನಿಸಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಫೇಸ್ಬುಕ್ ಗೆ ಇತ್ತೀಚೆಗೆ ರವಿಶಂಕರ್ ಪ್ರಸಾದ್ ಎಚ್ಚರಿಕೆ ನೀಡಿದ್ದರು. ಜತೆಗೆ ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಝುಕರ್ ಬರ್ಗ್ ಗೆ ಸಮನ್ಸ್ ನೀಡುವುದಾಗಿಯೂ ಎಚ್ಚರಿಸಿದ್ದರು.












Click it and Unblock the Notifications