ಪಿಎಂ ಮೋದಿ ಮನವಿಗೆ ರಷ್ಯಾ ಸ್ಪಂದನೆ: 6 ತಾಸು ಯುದ್ದ ಬಂದ್?
ರಷ್ಯಾ ಮತ್ತು ಉಕ್ರೇನ್ ನಡುವಿನ ಸಮರ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಉಕ್ರೇನ್ ರಾಜಧಾನಿ ಕೀವ್ ಮತ್ತು ಎರಡನೇ ಅತಿದೊಡ್ಡ ನಗರ ಕಾರ್ಕಿವ್ ಮೇಲೆ ರಷ್ಯಾ ಮಿಲಿಟರಿ ಸಂಪೂರ್ಣ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾಗುತ್ತಿದೆ.
ದೇಶದ ಬಂದರು ನಗರ ಎಂದೇ ಹೆಸರಾಗಿರುವ ಖೆರ್ಸಾನ್ ಕೂಡಾ ರಷ್ಯಾದ ವಶವಾಗಿದೆ. ಇದರ ಜೊತೆಗೆ, ಕಪ್ಪು ಸಮುದ್ರದ ಆಯಕಟ್ಟಿನ ಬಂದರು ಪ್ರದೇಶವೂ ರಷ್ಯಾ ಹಿಡಿತದಲ್ಲಿದೆ. ಇದರ ಮಧ್ಯೆ,
ಸಮರದಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.
ಉಕ್ರೇನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರ ಪ್ರಕ್ರಿಯೆ ಕೆಲವು ಅಪವಾದಗಳ ನಡುವೆ ಭರದಿಂದ ಸಾಗುತ್ತಿದೆ. ಆಪರೇಶನ್ ಗಂಗಾ ಹೆಸರಿನಲ್ಲಿ ಕಾರ್ಯಾಚರಣೆಯನ್ನು ಭಾರತ ಸರಕಾರ ತೀವ್ರಗೊಳಿಸಿದ್ದು ಎಂಬತ್ತಕ್ಕೂ ಹೆಚ್ಚು ವಿಮಾನಗಳ ಸೇವೆಯನ್ನು ಪಡೆದುಕೊಳ್ಳಲು ನಿರ್ಧರಿಸಲಾಗಿದೆ.
ಎರಡು ದಿನಗಳ ಹಿಂದೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಮಾತುಕತೆ ನಡೆಸಿದ್ದರು. ಈ ವೇಳೆ, ಮೋದಿ ಮಾಡಿದ ಮನವಿಗೆ ಪುಟಿನ್ ಕೂಡಲೇ ಸ್ಪಂದಿಸಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಆಪರೇಷನ್ ಗಂಗಾ ಕಾರ್ಯಾಚರಣೆ ನಡೆಸಲಾಗುತ್ತಿದೆ
"ಗುರುವಾರ (ಮಾ 3) 3,726 ಭಾರತೀಯರನ್ನು ಹತ್ತೊಂಬತ್ತು ವಿಮಾನಗಳ ಮೂಲಕ ಭಾರತಕ್ಕೆ ಕರೆತರಲಾಗಿದೆ. ಶುಕ್ರವಾರ 24 ವಿಮಾನಗಳ ಮೂಲಕ 7,400 ಭಾರತೀಯರನ್ನು ಕರೆತರುವ ಯೋಜನೆಯನ್ನು ಹಾಕಿಕೊಳ್ಲಲಾಗಿದೆ. ಇನ್ನೂ ಹದಿನೇಳು ಸಾವಿರಕ್ಕೂ ಹೆಚ್ಚು ಭಾರತೀಯರು ಉಕ್ರೇನ್ ನಲ್ಲಿ ಸಿಕ್ಕಿಹಾಕಿಕೊಂಡಿರುವ ಬಗ್ಗೆ ಮಾಹಿತಿಯಿದೆ. ವಾಯುಪಡೆ, ಏರ್ ಇಂಡಿಯಾ ಮತ್ತು ಸ್ಪೈಸ್ ಜೆಟ್ ಮೂಲಕ ಆಪರೇಷನ್ ಗಂಗಾ ಕಾರ್ಯಾಚರಣೆ ನಡೆಸಲಾಗುತ್ತಿದೆ"ಎಂದು ರಾಯಭಾರ ಕಚೇರಿಯ ಅಧಿಕಾರಿಗಳು ಹೇಳಿದ್ದಾರೆ.

ಪುಟಿನ್ ಜೊತೆ ಮಾತುಕತೆಯ ವೇಳೆ ಪ್ರಧಾನಿ ಮೋದಿ ಮನವಿ
ಎರಡು ದಿನಗಳ ಹಿಂದೆ ಪುಟಿನ್ ಜೊತೆ ಮಾತುಕತೆಯ ವೇಳೆ ಪ್ರಧಾನಿ ಮೋದಿ, ಭಾರತೀಯರ ಸ್ಥಳಾಂತರ ಪ್ರಕ್ರಿಯೆ ತೀವ್ರಗತಿಯಿಂದ ಸಾಗುತ್ತಿದೆ. ನಮ್ಮವರ ಸ್ಥಳಾಂತರಕ್ಕೆ ಸಹಕಾರ ನೀಡಿ ಎಂದು ದೂರವಾಣಿ ಮೂಲಕ ಮನವಿ ಮಾಡಿದ್ದರು. ಭಾರತದ ಮನವಿಗೆ ರಷ್ಯಾ ಸಕಾರಾತ್ಮಕವಾಗಿ ಸ್ಪಂದಿಸಿ ಆರು ತಾಸು ಆಕ್ರಮಣವನ್ನು ನಿಲ್ಲಿಸಿತ್ತು ಎಂದು ಕೆಲವೊಂದು ವೆಬ್ಸೈಟುಗಳು ವರದಿ ಮಾಡಿದ್ದವು. ಆ ಮೂಲಕ, ಭಾರತೀಯರ ಸ್ಥಳಾಂತರ ಕಾರ್ಯಾಚರಣೆಗೆ ರಷ್ಯಾ ಸಹಕರಿಸಿತ್ತು ಎಂದು ವರದಿಯಾಗಿದೆ.

ರಾಷ್ಟ್ರೀಯ ಭದ್ರತಾ ವಿಶ್ಲೇಷಕರಾದ ನಿತಿನ್ ಗೋಖಲೆಯವರ ಟ್ವೀಟ್
ಈ ಸುದ್ದಿಗೆ ಪೂರಕ ಎನ್ನುವಂತೆ ರಾಷ್ಟ್ರೀಯ ಭದ್ರತಾ ವಿಶ್ಲೇಷಕರಾದ ನಿತಿನ್ ಗೋಖಲೆಯವರ ಟ್ವೀಟ್ ಈ ಸುದ್ದಿಯನ್ನು ಖಚಿತ ಪಡಿಸುವಂತಿದೆ. "ನಮ್ಮ ದೇಶದ ತುರ್ತು ಮನವಿಯ ನಂತರ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ರಷ್ಯಾ ಸಹಕರಿಸಿತು. ಖಾರ್ಕಿವ್ ನಗರವನ್ನು ವಶ ಪಡಿಸಿಕೊಳ್ಳುವುದನ್ನು ವಿಳಂಬ ಮಾಡಲು ಬಯಸುತ್ತಿಲ್ಲ. ಹಾಗಾಗಿ, ಆರು ಗಂಟೆಗಳ ಕಾಲಾವಕಾಶವನ್ನು ನೀಡಿತ್ತು. ಎಲ್ಲಾ ಭಾರತೀಯರನ್ನು ನಿಗದಿತ ಸಮಯದಲ್ಲಿ ಸ್ಥಳಾಂತರಿಸುವುದು ಸವಾಲಿನ ಸಂಗತಿ"ಎಂದು ಗೋಖಲೆ ಟ್ವೀಟ್ ಮಾಡಿದ್ದರು.

ಭಾರತೀಯ ಕಾಲಮಾನ ರಾತ್ರಿ 9.30ರ ಡೆಡ್ಲೈನ್ ನೀಡಲಾಗಿದೆ
"ಖಾರ್ಕಿವ್ ನಿಂದ ಭಾರತೀಯರನ್ನು ಸ್ಥಳಾಂತರಿಸಲು ಆರು ಗಂಟೆ ಕಾಲಾವಕಾಶವನ್ನು ನೀಡಲು ರಷ್ಯಾ ಒಪ್ಪಿತ್ತು. ಭಾರತೀಯ ಕಾಲಮಾನ ರಾತ್ರಿ 9.30ರ ಡೆಡ್ಲೈನ್ ನೀಡಲಾಗಿದೆ" ಎಂದು ನಿತಿನ್ ಗೋಖಲೆ ಇನ್ನೊಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಮಾರ್ಚ್ ಮೂರರಂದು ಗೋಖಲೆ ಈ ಟ್ವೀಟ್ ಅನ್ನು ಮಾಡಿದ್ದಾರೆ. ಆದರೆ, ಮೋದಿಯವರ ಮನವಿಗೆ ರಷ್ಯಾ ಆರು ತಾಸು ಆಕ್ರಮಣ ನಿಲ್ಲಿಸಿತು ಎನ್ನುವ ಸುದ್ದಿಯನ್ನು ಭಾರತೀಯ ವಿದೇಶಾಂಗ ಸಚಿವಾಲಯ ನಿರಾಕರಿಸಿದೆ ಎನ್ನುವ ಸುದ್ದಿಯಿದೆ. (ಚಿತ್ರದಲ್ಲಿ : ರಾಷ್ಟ್ರೀಯ ಭದ್ರತಾ ವಿಶ್ಲೇಷಕರಾದ ನಿತಿನ್ ಗೋಖಲೆ)












Click it and Unblock the Notifications