ಋತುಚಕ್ರದ ಸಮಯದಲ್ಲಿ ಕೊರೊನಾ ಲಸಿಕೆ ಪಡೆಯಬಹುದಾ?
ನವದೆಹಲಿ, ಏಪ್ರಿಲ್ 24: ಮೇ 1ರಿಂದ ದೇಶದಲ್ಲಿ ಮೂರನೇ ಹಂತದ ಲಸಿಕಾ ಅಭಿಯಾನ ಆರಂಭವಾಗಲಿದೆ. ಆದರೆ ಯುವತಿಯರು ಅಥವಾ ಮಹಿಳೆಯರು ತಮ್ಮ ಋತುಚಕ್ರದ ಸಮಯದಲ್ಲಿ ಕೊರೊನಾ ಲಸಿಕೆ ಪಡೆದುಕೊಳ್ಳುವುದು ಸೂಕ್ತವಲ್ಲ ಎಂಬ ಸುದ್ದಿ ಎರಡು ದಿನಗಳಿಂದೀಚೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.
ಈ ಕುರಿತು ಕೇಂದ್ರ್ ಸ್ಪಷ್ಟನೆ ನೀಡಿದ್ದು, ಇದು ಸುಳ್ಳು ಸುದ್ದಿ ಎಂದು ಹೇಳಿದೆ.
ಕೊರೊನಾ ಲಸಿಕೆ ಪಡೆದುಕೊಳ್ಳಲಿರುವ ಮಹಿಳೆಯರು ತಮ್ಮ ಋತುಚಕ್ರದ ಸಮಯದಲ್ಲಿ ಲಸಿಕೆ ತೆಗೆದುಕೊಳ್ಳಬಾರದು. ಋತುಚಕ್ರದ ಐದು ದಿನಕ್ಕೂ ಮುನ್ನ ಹಾಗೂ ನಂತರದ ಐದು ದಿನಗಳಲ್ಲಿ ಲಸಿಕೆ ಪಡೆದುಕೊಳ್ಳುವುದು ಸೂಕ್ತವಲ್ಲ. ಆ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ಶಕ್ತಿ ಕಡಿಮೆ ಇರುವುದರಿಂದ ಲಸಿಕೆ ತೆಗೆದುಕೊಳ್ಳಬಾರದು ಎನ್ನಲಾಗಿತ್ತು ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.
ಶನಿವಾರ, ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ಈ ಕುರಿತು ಸ್ಪಷ್ಟನೆ ನೀಡಿದ್ದು, ಇದು ಸುಳ್ಳು. ಇಂಥ ಗಾಳಿಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಟ್ವೀಟ್ ಮಾಡಿದೆ.

ಮೇ 1ರಿಂದ ದೇಶದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುವುದು ಎಂದು ಈಚೆಗೆ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಏಪ್ರಿಲ್ 28ರಿಂದ ನೋಂದಣಿ ಕಾರ್ಯ ಆರಂಭವಾಗಲಿದೆ.
ದೇಶದಲ್ಲಿ ಜನವರಿ 16ರಿಂದ ಕೊರೊನಾ ಲಸಿಕಾ ಅಭಿಯಾನವನ್ನು ಆರಂಭಿಸಲಾಗಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿತ್ತು. ಎರಡನೇ ಹಂತದಲ್ಲಿ 60 ವರ್ಷ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗಿತ್ತು. ಮೇ1ರಿಂದ ಮೂರನೇ ಹಂತದ ಲಸಿಕಾ ಅಭಿಯಾನ ಆರಂಭವಾಗಲಿದ್ದು, 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದೆ.












Click it and Unblock the Notifications