ಅದಾನಿ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಐರಿಸ್ ನ್ಯಾಷನಲ್ ಫೇರ್; ದೇಶದ ಉದಯೋನ್ಮುಖ ಪ್ರತಿಭೆಗಳ ಪ್ರದರ್ಶನ
ಅಹಮದಾಬಾದ್‌ನ ಶಾಂತಿಗ್ರಾಮದಲ್ಲಿರುವ ಅದಾನಿ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ (ADIS) ಐರಿಸ್ ನ್ಯಾಷನಲ್ ಫೇರ್ 2025-26 (ಕೋಹಾರ್ಟ್-2) ಅನ್ನು ಫೆಬ್ರವರಿ 6ರಿಂದ 8ರವರೆಗೆ ಭವ್ಯವಾಗಿ ಆಯೋಜಿಸಲಾಯಿತು. ಮೂರು ದಿನಗಳ ಕಾಲ ನಡೆದ ಈ ರಾಷ್ಟ್ರೀಯ ಮಟ್ಟದ ವಿಜ್ಞಾನ ಮೇಳವು, ಶಾಲಾ ಹಂತದಲ್ಲೇ ಸಂಶೋಧನೆ ಮತ್ತು ನವೀನತೆಯನ್ನು ಉತ್ತೇಜಿಸುವ ಉದ್ದೇಶದೊಂದಿಗೆ ದೇಶದ ವಿವಿಧ ಭಾಗಗಳಿಂದ ಬಂದ ಯುವ ವಿದ್ಯಾರ್ಥಿ ಸಂಶೋಧಕರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿತು.
ಈ ಕಾರ್ಯಕ್ರಮದಲ್ಲಿ 12 ರಾಜ್ಯಗಳು ಮತ್ತು 24 ನಗರಗಳಿಂದ 75 ವಿದ್ಯಾರ್ಥಿಗಳು ಭಾಗವಹಿಸಿದ್ದು, ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM) ಕ್ಷೇತ್ರಗಳಲ್ಲಿ ತಾವು ರೂಪಿಸಿದ ಮೂಲ ಸಂಶೋಧನಾ ಯೋಜನೆಗಳನ್ನು ಪ್ರದರ್ಶಿಸಿದರು. ಪ್ರದರ್ಶನಗಳ ಜೊತೆಗೆ ಮೆಂಟರಿಂಗ್ ಸೆಷನ್‌ಗಳು, ತಜ್ಞರ ಸಂವಾದಗಳು ನಡೆದಿದ್ದು, ಪಠ್ಯಾಧಾರಿತ ಕಲಿಕೆಗೆ ಮೀರಿದ ಪ್ರಾಯೋಗಿಕ, ವಿಚಾರಾಧಾರಿತ ಮತ್ತು ನೈಜ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರೀಕೃತ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಲಾಯಿತು.

ಇದರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಗುಜರಾತ್ ರಾಜ್ಯ ಶಿಕ್ಷಣ ಸಚಿವೆ ರಿವಾಬಾ ರವೀಂದ್ರ ಜಡೇಜಾ, ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020ರ ಆಶಯದಂತೆ ವಿದ್ಯಾರ್ಥಿಗಳಿಗೆ ಬಾಲ್ಯದಲ್ಲೇ ಸಂಶೋಧನೆ, ಕುತೂಹಲ ಮತ್ತು ವೈಜ್ಞಾನಿಕ ಚಿಂತನೆ ಬೆಳೆಸುವುದು ಅತ್ಯಗತ್ಯ ಎಂದು ಹೇಳಿದರು. ಶಾಲೆಗಳು ಕೇವಲ ಪಾಠ ಕಲಿಸುವ ಕೇಂದ್ರಗಳಾಗದೇ, ಪ್ರಶ್ನಿಸುವ ಮನೋಭಾವ, ಪ್ರಯೋಗಶೀಲತೆ ಮತ್ತು ವಿಫಲತೆಯಿಂದ ಕಲಿಯುವ ಅವಕಾಶಗಳನ್ನು ನೀಡುವ ವೇದಿಕೆಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅದಾನಿ ಇಂಟರ್‌ನ್ಯಾಷನಲ್ ಸ್ಕೂಲ್‌ನ ಪ್ರಚಾರಕರು ಹಾಗೂ ಅದಾನಿ ಗ್ರೂಪ್‌ನ ನಾನ್-ಎಕ್ಸಿಕ್ಯೂಟಿವ್ ಡೈರೆಕ್ಟರ್ ನಮ್ರತಾ ಅದಾನಿ, ಐರಿಸ್ ನ್ಯಾಷನಲ್ ಫೇರ್‌ನಂತಹ ವೇದಿಕೆಗಳು ವಿದ್ಯಾರ್ಥಿಗಳನ್ನು ಪಠ್ಯಪುಸ್ತಕಗಳ ಮಿತಿಯಿಂದ ಹೊರತಂದು, ನೈಜ ಜಗತ್ತಿನ ಸವಾಲುಗಳಿಗೆ ಸಂಶೋಧನೆ ಮತ್ತು ಪ್ರಯೋಗಗಳ ಮೂಲಕ ಪರಿಹಾರ ಹುಡುಕಲು ಪ್ರೇರೇಪಿಸುತ್ತವೆ ಎಂದರು. ಇನ್ನು ಕಾರ್ಯಕ್ರಮದ ಆರಂಭದಲ್ಲಿ ಪ್ರಾಂಶುಪಾಲರು ಮತ್ತು ಶಿಕ್ಷಕರ ಸಮ್ಮೇಳನ ನಡೆಯಿತು. ಅಹಮದಾಬಾದ್‌ನ ವಿವಿಧ ಶಾಲೆಗಳ ಶಿಕ್ಷಣ ತಜ್ಞರು ಭಾಗವಹಿಸಿ, ಅನುಭವಾಧಾರಿತ ಕಲಿಕೆ, STEM ಶಿಕ್ಷಣದಲ್ಲಿ ವಿಚಾರಾಧಾರಿತ ವಿಧಾನಗಳನ್ನು ಬಲಪಡಿಸುವ ಬಗ್ಗೆ ಚರ್ಚಿಸಿದರು.
ಫೆಬ್ರವರಿ 7ರಂದು ಅಧಿಕೃತವಾಗಿ ಉದ್ಘಾಟನೆಯಾದ ಈ ಕಾರ್ಯಕ್ರಮವು ಅಂತರರಾಷ್ಟ್ರೀಯ ವಿಜ್ಞಾನ ಮತ್ತು ಎಂಜಿನಿಯರಿಂಗ್ ಫೇರ್(ISEF)-2026ಕ್ಕೆ ಅರ್ಹತೆ ಪಡೆಯುವ ವೇದಿಕೆಯಾಗಿಯೂ ಕಾರ್ಯನಿರ್ವಹಿಸಿತು. ಸ್ಪರ್ಧೆಯ ಅಂತ್ಯದಲ್ಲಿ 15 ಯೋಜನೆಗಳಿಗೆ ಚಿನ್ನದ ಪದಕ ಮತ್ತು 10 ಯೋಜನೆಗಳಿಗೆ ಬೆಳ್ಳಿ ಪದಕ ಪ್ರದಾನ ಮಾಡಲಾಯಿತು. ಚಿನ್ನದ ಪದಕ ವಿಜೇತರು ಭಾರತವನ್ನು ಪ್ರತಿನಿಧಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಅಂತಿಮ ಆಯ್ಕೆ ಹಂತಕ್ಕೆ ಪ್ರವೇಶ ಪಡೆಯಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಅದಾನಿ ಗ್ರೂಪ್‌ನ ಅಂತಾರಾಷ್ಟ್ರೀಯ ಎನರ್ಜಿ ವ್ಯವಹಾರದ ಸಿಇಒ ಅಮಿತ್ ಸಿಂಗ್ ಸೇರಿದಂತೆ ಅದಾನಿ ಗ್ರೂಪ್‌ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಐರಿಸ್ ನ್ಯಾಷನಲ್ ಫೇರ್‌ನ್ನು ಆತಿಥ್ಯ ವಹಿಸುವ ಮೂಲಕ, ಅದಾನಿ ಇಂಟರ್‌ನ್ಯಾಷನಲ್ ಸ್ಕೂಲ್ ತನ್ನ ಸಮಗ್ರ ಶಿಕ್ಷಣ ದೃಷ್ಟಿಕೋನವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಶೈಕ್ಷಣಿಕ ಶ್ರೇಷ್ಠತೆ ಮಾತ್ರವಲ್ಲದೆ, STEM ಸಂಶೋಧನೆ, ಅಂತರರಾಷ್ಟ್ರೀಯ ಸ್ಪರ್ಧೆಗಳು, ಕ್ರೀಡೆ, ಕಲೆ ಮತ್ತು ನಾಯಕತ್ವ ಅಭಿವೃದ್ಧಿಯಲ್ಲಿಯೂ ವಿದ್ಯಾರ್ಥಿಗಳಿಗೆ ಸಮಾನ ಮಹತ್ವ ನೀಡುತ್ತಿರುವುದನ್ನು ಈ ಕಾರ್ಯಕ್ರಮ ತೋರಿಸಿದೆ.
ಐರಿಸ್ ಕಾರ್ಯಕ್ರಮವು EXSTEMPLAR ಎಜುಕೇಶನ್ ಲಿಂಕರ್ಸ್ ಫೌಂಡೇಶನ್ ಅವರ ಮುಂದಾಳತ್ವದಲ್ಲಿ ನಡೆಯುತ್ತಿದ್ದು, 5 ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಸಂಶೋಧನಾ ಮನೋಭಾವ ಬೆಳೆಸುವ ಹಾಗೂ ರಾಷ್ಟ್ರೀಯ-ಅಂತರರಾಷ್ಟ್ರೀಯ ವೇದಿಕೆಗಳಿಗೆ ಅವಕಾಶ ಕಲ್ಪಿಸುವ ಉದ್ದೇಶ ಹೊಂದಿದೆ. ಈ ಕಾರ್ಯಕ್ರಮವು ಅಹಮದಾಬಾದ್ ಅನ್ನು ಶಾಲಾ ಹಂತದ ಸಂಶೋಧನೆ ಮತ್ತು ನವೀನತೆಯ ಹೊಸ ಕೇಂದ್ರವಾಗಿ ಗುರುತಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.












Click it and Unblock the Notifications