ಹೆಣ್ಣುಮಕ್ಕಳ ಸುರಕ್ಷತೆಗೆ ಹೊಸ ಭಾಷ್ಯ ಬರೆದ IPS ಅಧಿಕಾರಿ ಶಿಖಾ ಗೋಯೆಲ್ ಬಗ್ಗೆ ನಿಮಗೆಷ್ಟು ಗೊತ್ತು?
ಹೆಣ್ಣುಮಕ್ಕಳ ದಿನಾಚರಣೆ ಕೇವಲ ಶುಭಾಶಯ ಕೋರಲು, ಉಡುಗೊರೆ ನೀಡಲು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಂಚಿಕೊಳ್ಳಲು ಮಾತ್ರ ಸೀಮಿತವಾಗಬಾರದು ಅಲ್ಲವೇ?. ನಿಜವಾಗಿಯೂ ಹೆಣ್ಣುಮಕ್ಕಳು ಮುಕ್ತವಾಗಿ ಮತ್ತು ಸ್ವತಂತ್ರರಾಗಿ ಬದುಕಬೇಕಾದರೆ, ಅವರು ಅಪಾಯಕ್ಕೆ ಸಿಲುಕಿದಾಗ ಮಾತ್ರ ರಕ್ಷಣೆ ನೀಡುವುದಲ್ಲ, ಬದಲಾಗಿ ಅವರ ಸುತ್ತಲಿನ ವಾತಾವರಣವೇ ಸಂಪೂರ್ಣ ಸುರಕ್ಷಿತವಾಗಿರಬೇಕು.
ಇದೇ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿರುವ ತೆಲಂಗಾಣದ ಮಹಿಳಾ ಸುರಕ್ಷತಾ ವಿಭಾಗದ ಮುಖ್ಯಸ್ಥೆ, ಹಿರಿಯ ಐಪಿಎಸ್ ಅಧಿಕಾರಿ ಶಿಖಾ ಗೋಯೆಲ್ ಅವರ ಕಾರ್ಯವೈಖರಿಯನ್ನ ನಿಜಕ್ಕೂ ಶ್ಲಾಘಿಸಬೇಕು. ಅವರು ಹೆಣ್ಣುಮಕ್ಕಳ ಮತ್ತು ಮಕ್ಕಳ ಸುರಕ್ಷತೆಗಾಗಿ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳು ಇಂದಿನ ಸಮಾಜಕ್ಕೆ ಮಾದರಿಯಾಗಿವೆ.

ಶಿ ಟೀಮ್ಸ್ ತೆಲಂಗಾಣ: ಮಹಿಳೆಯರ ಪಾಲಿನ ರಕ್ಷಾಕವಚ
ಮಹಿಳೆಯರ ಮೇಲಿನ ದೌರ್ಜನ್ಯಗಳನ್ನ ತಡೆಯುವ ನಿಟ್ಟಿನಲ್ಲಿ ತೆಲಂಗಾಣ ಪೊಲೀಸ್ ಇಲಾಖೆ ಜಾರಿಗೆ ತಂದಿರುವ ಅತ್ಯಂತ ಯಶಸ್ವಿ ಯೋಜನೆಗಳಲ್ಲಿ 'ಶಿ ಟೀಮ್ಸ್' ಪ್ರಮುಖವಾದದ್ದು. ರಾಜ್ಯಾದ್ಯಂತ ಪ್ರಸ್ತುತ 300ಕ್ಕೂ ಹೆಚ್ಚು ಶಿ ಟೀಮ್ಸ್ ಹಗಲಿರುಳು ಕಾರ್ಯನಿರ್ವಹಿಸುತ್ತಿವೆ.
ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರನ್ನ ಚುಡಾಯಿಸುವುದು, ಅನಗತ್ಯವಾಗಿ ಹಿಂಬಾಲಿಸುವುದು ಮತ್ತು ಆನ್‌ಲೈನ್ ಕಿರುಕುಳಗಳನ್ನ ತಡೆಯುವಲ್ಲಿ ಈ ತಂಡಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಕೇವಲ ಅಪರಾಧ ನಡೆದಾಗ ದೂರು ದಾಖಲಿಸಿಕೊಂಡು ಪ್ರತಿಕ್ರಿಯಿಸುವುದಷ್ಟೇ ಅಲ್ಲದೆ, ಅಪರಾಧ ನಡೆಯದಂತೆ ಮೊದಲೇ ತಡೆಯಲು ತಂತ್ರಜ್ಞಾನ ಮತ್ತು ಡೇಟಾವನ್ನ ಸಮರ್ಥವಾಗಿ ಬಳಸಿಕೊಂಡು ಈ ತಂಡಗಳು ಮಹಿಳೆಯರಿಗೆ ಮತ್ತು ವಿದ್ಯಾರ್ಥಿನಿಯರಿಗೆ ಅತ್ಯಂತ ಸುರಕ್ಷಿತ ವಾತಾವರಣವನ್ನ ನಿರ್ಮಿಸುತ್ತಿವೆ.
ಆಪರೇಷನ್ ಮುಸ್ಕಾನ್: ಸಾವಿರಾರು ಕಂದಮ್ಮಗಳ ರಕ್ಷಣೆ
ಶಿಖಾ ಗೋಯೆಲ್ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ಮತ್ತೊಂದು ಮಹತ್ವದ ಕಾರ್ಯಾಚರಣೆ 'ಆಪರೇಷನ್ ಮುಸ್ಕಾನ್'. ಕಾಣೆಯಾದ, ಅಪಹರಣಕ್ಕೊಳಗಾದ ಮತ್ತು ಕಳ್ಳಸಾಗಣೆಗೆ ಒಳಗಾದ ಮಕ್ಕಳನ್ನು ಪತ್ತೆಹಚ್ಚಿ ರಕ್ಷಿಸುವಲ್ಲಿ ಈ ಯೋಜನೆ ದೊಡ್ಡ ಮಟ್ಟದ ಯಶಸ್ಸು ಕಂಡಿದೆ.
ಬಾಲಕಾರ್ಮಿಕ ಪದ್ಧತಿ ಮತ್ತು ಶೋಷಣೆಗೆ ಒಳಗಾದ ಅಮಾಯಕ ಮಕ್ಕಳ ಪಾಲಿಗೆ ಇದೊಂದು ಆಶಾಕಿರಣ. ಕೇವಲ ಜುಲೈ 2026 ರಲ್ಲಿಯೇ ನಡೆದ ಆಪರೇಷನ್ ಮುಸ್ಕಾನ್-12 ಕಾರ್ಯಾಚರಣೆಯ ಮೂಲಕ ತೆಲಂಗಾಣದಾದ್ಯಂತ ಬರೋಬ್ಬರಿ 6,307 ಮಕ್ಕಳನ್ನ ರಕ್ಷಿಸಲಾಗಿದೆ.
ವಿಶೇಷವೆಂದರೆ, ಇವರಲ್ಲಿ ಕೇವಲ ಸ್ಥಳೀಯರು ಮಾತ್ರವಲ್ಲ, ಬೇರೆ ರಾಜ್ಯಗಳಿಂದ ಮತ್ತು ನೆರೆಯ ನೇಪಾಳದಿಂದ ಕಳ್ಳಸಾಗಣೆ ಮೂಲಕ ಕೂಲಿ ಕೆಲಸಕ್ಕೆಂದು ಕರೆತರಲಾಗಿದ್ದ ಮಕ್ಕಳೂ ಸೇರಿದ್ದಾರೆ.
ಐಪಿಎಸ್ ಶಿಖಾ ಗೋಯೆಲ್ ಅವರ ದೃಷ್ಟಿಕೋನ
ಹೆಣ್ಣುಮಕ್ಕಳನ್ನ ಬೆಳೆಸುವಾಗ ಕೇವಲ" ಹುಷಾರಾಗಿರು, ಬೇಗ ಮನೆಗೆ ಬಾ" ಎಂದು ಬುದ್ಧಿ ಹೇಳುವುದಲ್ಲ. ಅವರು ಯಾವುದೇ ಭಯವಿಲ್ಲದೆ ಒಂಟಿಯಾಗಿ ಮನೆಗೆ ನಡೆದುಕೊಂಡು ಹೋಗುವಂತಹ, ಯಾರ ಅಂಜಿಕೆಯೂ ಇಲ್ಲದೆ ಮುಕ್ತವಾಗಿ ಮಾತನಾಡುವಂತಹ, ಸುರಕ್ಷಿತವಾಗಿ ಇಂಟರ್ನೆಟ್ ಬಳಸುವಂತಹ ಮತ್ತು ತಮ್ಮ ಭವಿಷ್ಯದ ನಿರ್ಧಾರಗಳನ್ನ ತಾವೇ ತೆಗೆದುಕೊಳ್ಳುವಂತಹ ಜಗತ್ತನ್ನ ನಿರ್ಮಿಸುವುದು ನಮ್ಮೆಲ್ಲರ ಮೊದಲ ಆದ್ಯತೆಯಾಗಬೇಕು. ಶಿಖಾ ಗೋಯೆಲ್ ಅವರ ನಿರಂತರ ಪ್ರಯತ್ನ ಇದೇ ಆಶಯವನ್ನ ಪ್ರತಿಬಿಂಬಿಸುತ್ತದೆ.
ಈ ಬಾರಿಯ ಹೆಣ್ಣುಮಕ್ಕಳ ದಿನದಂದು ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ ಕೇವಲ "ನಮ್ಮ ಹೆಣ್ಣುಮಕ್ಕಳನ್ನು ರಕ್ಷಿಸುವುದು ಹೇಗೆ?" ಎಂಬುದಲ್ಲ. ಬದಲಾಗಿ, "ನಮ್ಮ ಹೆಣ್ಣುಮಕ್ಕಳು ಸುರಕ್ಷಿತವಾಗಿರಲು ತಮ್ಮ ಬದುಕನ್ನು, ಕನಸುಗಳನ್ನು ಮತ್ತು ಗುರಿಗಳನ್ನು ಸಂಕುಚಿತಗೊಳಿಸಿಕೊಳ್ಳದಂತಹ ಮುಕ್ತವಾದ ಹಾಗೂ ನಿರ್ಭೀತ ಜಗತ್ತನ್ನು ನಾವು ನಿರ್ಮಿಸುವುದು ಹೇಗೆ?" ಎಂಬುದಾಗಬೇಕು.
ತೆಲಂಗಾಣದಲ್ಲಿ ಮಹಿಳಾ ಸುರಕ್ಷತೆ ಎನ್ನುವುದು ಕೇವಲ ಭಾಷಣಗಳಿಗೆ ಸೀಮಿತವಾಗದೆ, ವಾಸ್ತವದಲ್ಲಿ ಸಮರ್ಥವಾಗಿ ಅನುಷ್ಠಾನಗೊಳ್ಳುತ್ತಿರುವುದು ಇಡೀ ದೇಶದ ಪೊಲೀಸ್ ವ್ಯವಸ್ಥೆಗೆ ಒಂದು ಅತ್ಯುತ್ತಮ ಉದಾಹರಣೆಯಾಗಿದೆ. ತಳಮಟ್ಟದಿಂದಲೇ ಸುರಕ್ಷತೆಯನ್ನು ಒದಗಿಸುವ ಇಂತಹ ಕಾರ್ಯಗಳು ಎಲ್ಲೆಡೆ ಪಸರಿಸಬೇಕಿದೆ.


Click it and Unblock the Notifications
