Jharkhand Election: ಚುನಾವಣಾ ಆಯೋಗಕ್ಕೆ ಮಾಹಿತಿ ಕೊಡದೆ ಮನೆಗೆ ಹೋದ ಐಪಿಎಸ್ ಅಧಿಕಾರಿ ಅಮಾನತು
ಜಾರ್ಖಂಡ್ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು ನಡೆಯುತ್ತಿದ್ದು, ವ್ಯಾಪಕ ಬಂದೋಬಸ್ತ್ ಏರ್ಪಡಿಸಲಾಗಿದೆ. 43 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು ಜನ ಉತ್ಸಾಹದಿಂದ ಮತ ಚಲಾಯಿಸುತ್ತಿದ್ದಾರೆ. ಚುನಾವಣಾ ಕರ್ತವ್ಯದ ವೇಳೆ ಮಾಹಿತಿ ನೀಡದೆ ಕರ್ತವ್ಯ ಬಿಟ್ಟು ಜೈಪುರಕ್ಕೆ ತೆರಳಿದ್ದ ಐಪಿಎಸ್ ಅಧಿಕಾರಿ ಕಿಶನ್ ಸಹಾಯ್ ಮೀನಾರನ್ನು ಚುನಾವಣಾ ಆಯೋಗ ಅಮಾನತು ಮಾಡಿದೆ.
ಕಿಶನ್ ಸಹಾಯ್ ಮೀನಾ ರಾಜಸ್ಥಾನ ಕೇಡರ್‌ನ 2004 ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದು, ಜಾರ್ಖಂಡ್‌ನಲ್ಲಿ ಚುನಾವಣಾ ಆಯೋಗವು ಕರ್ತವ್ಯಕ್ಕೆ ನಿಯೋಜಿಸಿತ್ತು. ಕರ್ತವ್ಯದ ನಡುವೆಯೇ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡದೇ ಕಿಶನ್ ಸಹಾಯ್ ಮೀನಾ ಜಾರ್ಖಂಡ್‌ನಿಂದ ಜೈಪುರಕ್ಕೆ ಮರಳಿದ್ದು, ಕರ್ತವ್ಯ ಲೋಪದ ಕಾರಣ ನೀಡಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. ಕೆಲಸದಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಕಿಶನ್ ಸಹಾಯ್ ಮೀನಾ ಅವರಿಗೆ ನೋಟಿಸ್ ಕೊಡಲಾಗುತ್ತದೆ ಎಂದು ಹೇಳಿದೆ.

ರಾಜಸ್ಥಾನ ಸರ್ಕಾರಕ್ಕೆ ಪತ್ರ
ಚುನಾವಣಾ ಆಯೋಗವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ರಾಜಸ್ಥಾನ ಸರ್ಕಾರಕ್ಕೆ ಪತ್ರ ಬರೆದಿದ್ದು ಜಾರ್ಖಂಡ್‌ನ ಸಿಸಾಯಿ, ಗುಲ್ಮಾ ಮತ್ತು ಬಿಷ್ಣುಪುರ ವಿಧಾನಸಭಾ ಕ್ಷೇತ್ರಗಳಿಗೆ ಕಿಶನ್ ಸಹಾಯ್ ಮೀನಾ ಅವರನ್ನು ಪೊಲೀಸ್ ವೀಕ್ಷಕರನ್ನಾಗಿ ನೇಮಿಸಲಾಗಿತ್ತು, ಆದರೆ ಅವರು ಆಯೋಗಕ್ಕೆ ತಿಳಿಸದೆ ಅಕ್ಟೋಬರ್ 28 ರಂದು ತಮ್ಮ ಕರ್ತವ್ಯ ಸ್ಥಳವನ್ನು ತೊರೆದಿದ್ದಾರೆ. ಆಯೋಗದ ಅನುಮೋದನೆಯಿಲ್ಲದೆ ಅವರು ಜೈಪುರಕ್ಕೆ ಹೋಗಿದ್ದು ಕೆಲಸದಲ್ಲಿ ನಿರ್ಲಕ್ಷ್ಯ ತೋರಿದ್ದರಿಂದ ಅಮಾನತು ಮಾಡಲಾಗಿದೆ ಎಂದು ತಿಳಿಸಿದೆ.
ಕಿಶನ್ ಸಹಾಯ್ ಮೀನಾ ರಾಜಸ್ಥಾನದ ಅಲ್ವಾರ್ ನಿವಾಸಿ. ಅವರು ಮೊದಲು ರಾಜಸ್ಥಾನ ಪೊಲೀಸ್ ಸೇವೆಗೆ ಆಯ್ಕೆಯಾದರು. 11 ವರ್ಷಗಳ ಹಿಂದೆಯಷ್ಟೇ ಬಡ್ತಿ ಪಡೆದು ಐಪಿಎಸ್ ರ ರ್‍ಯಾಂಕಿಂಗ್ ಪಡೆದಿದ್ದರು. ಟೋಂಕ್‌ನ ಎಸ್‌ಪಿ ಮತ್ತು ಅಜ್ಮೀರ್‌ನ ಜಿಆರ್‌ಪಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಿಬಿ ಸಿಐಡಿ, ಜೈಲು ಮತ್ತು ಆರ್‌ಎಸ್‌ಪಿಯೊಂದಿಗೆ ಕೂಡ ಸಂಬಂಧ ಹೊಂದಿದ್ದಾರೆ. ಪ್ರಸ್ತುತ ಅವರು ರಾಜಸ್ಥಾನದ ಮಾನವ ಹಕ್ಕುಗಳ ಘಟಕದಲ್ಲಿ ಪೊಲೀಸ್ ಮಹಾನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.












Click it and Unblock the Notifications