RCB-IPL 2026: ಮಿಂಚಲಿದೆ ಆರ್‌ಸಿಬಿ ಜತೆ ನಂದಿನಿ ಬ್ರ್ಯಾಂಡ್, ಪ್ರಾಯೋಜಕತ್ವದ ಟೆಂಡರ್ ಆಹ್ವಾನ
ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಕ್ರಿಕೆಟ್ ಟೀಂ ಅಭಿಮಾನಿಗಳಲ್ಲಿ ಸೃಷ್ಟಿಸಿದ ಕ್ರೇಜ್ ಅಷ್ಟಿಷ್ಟಲ್ಲ. ಅದು ಈಗಾಗಲೇ ಪ್ರತಿ ಐಪಿಎಲ್ ಹಾಗೂ ಇತ್ತೀಚೆಗೆ ಆರ್‌ಸಿಬಿ ಕಪ್ ಗೆದ್ದಾಗ ನಾವೆಲ್ಲ ನೋಡಿದ್ದೇವೆ. ಇದೀಗ ಆರ್‌ಸಿಬಿ ಎರಡು ಪ್ರಮುಖ ಹಾಲಿನ ಒಕ್ಕೂಟಗಳ ಮಧ್ಯ ಪೈಪೋಟಿ ಉಂಟಾಗುವಂತೆ ಮಾಡಿದೆ. ಅಂದರೆ ಹಿಂದಿನ ಬಾರಿ ಅಮೂಲ್ ನಂತೆ (Amul) 2026ರ ಐಪಿಎಲ್ (IPL 2026)ನಲ್ಲಿ ಆರ್‌ಸಿಬಿ ಪ್ರಾಯೋಜಕತ್ವ ಪಡೆಯಲು ಕರ್ನಾಟಕ ಹಾಲು ಒಕ್ಕೂಟ (KMF) ಟೆಂಡರ್ ಕರೆದಿದೆ. ಈ ಮೂಲಕ ದೇಶಾದ್ಯಂತ ಕೆಎಂಎಫ್ ಮಿಂಚಲು, ಜನರ ತಲುಪಲು ಪ್ಲಾನ್ ಮಾಡಿಕೊಂಡಿದೆ.
ನಂದಿನಿ ಬ್ರ್ಯಾಂಡ್ ಅಡಿಯಲ್ಲಿ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಈ ಬಾರಿ 19 ನೇ ಆವೃತ್ತಿಯ ಐಪಿಎಲ್ 2026 ಸಂದರ್ಭದಲ್ಲಿ ಆರ್‌ಸಿಬಿ ಕುರಿತು ಪ್ರಚಾರ ಮಾಡಲು, ಬೃಹತ್ ವ್ಯಾಪಾರಿ ಒಪ್ಪಂದಕ್ಕೆ ಮುಂದಾಗಿದೆ. ಈ ಸಂಬಂಧ ಕೆಎಂಎಫ್ ಟೆಂಡರ್ ಆಹ್ವಾನಿಸಿದೆ. ಎಲ್ಲವು ಅಂದುಕೊಂಡಂತಾದರೆ ದಕ್ಷಿಣ ಭಾಗದಲ್ಲಿ ಹೆಚ್ಚು ಪ್ರಸಿದ್ಧಿಯಲ್ಲಿರುವ ನಂದಿನಿ ಬ್ರ್ಯಾಂಡ್ ಉತ್ತರದ ರಾಜ್ಯಗಳನ್ನು ಪ್ರವೇಶಿಸಲಿದೆ. ದಕ್ಷಿಣದ ನೆರೆ ಮೀರಿ ಬೆಳೆಯಲಿದೆ. ಮಾರುಕಟ್ಟೆ ವಿಸ್ತರಿಸಿಕೊಳ್ಳಲಿದೆ. ಜೊತೆಗೆ ಅನ್ಯ ರಾಜ್ಯದ ಅಮೂಲ್ ಗೂ ಠಕ್ಕರ್ ಕೊಡಲಿದೆ.

ಐಪಿಎಲ್ 2026: ಅಮೂಲ್ vs ನಂದಿನಿ ಪೈಪೋಟಿ
ಬೆಂಗಳೂರು ಸೇರಿ ದಕ್ಷಿಣ ಭಾಗದಲ್ಲೂ ಕಾಲಿಟ್ಟ ಡೈರಿ ಉತ್ಪನ್ನ ಮಾರಾಟ ಕಂಪನಿ ಅಮೂಲ್ ಈ ಹಿಂದೆ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿಯೊಂದಿಗೆ ಅಮುಲ್‌ನ ಪ್ರಾಯೋಜಕತ್ವ ಪಡೆದಿತ್ತು. ಇದೀಗ ಸ್ಥಳೀಯ ಡೈರಿ ಸಂಸ್ಥೆಯಾಗಿರುವ ನಂದಿನಿ ಸಹ ಬೆಂಗಳೂರು ಸೇರಿ ದಕ್ಷಿಣ ಭಾಗದಲ್ಲಿ ಹೆಚ್ಚು ಕ್ರಿಕೆಟ್ ಪ್ರೇಮಿಗಳನ್ನು ಹೊಂದಿರುವ ಆರ್‌ಸಿಬಿ ಪ್ರಾಯೋಜಕತ್ವ ಬಯಸಿ ಟೆಂಡರ್ ಕರೆದಿದೆ. ಈ ಮೂಲಕ ಕ್ರೀಡಾಸಕ್ತಿ ತೋರ್ಪಡಿಸಿದ್ದು, ಇದರೊಂದಿಗೆ ಈ ಬೆಳವಣಿಗೆ ಉನ್ನತ ಮಟ್ಟದ ಡೈರಿ ಕಂಪನಿಗಳ ಮಧ್ಯ ಪೈಪೋಟಿ, ಸಮರವಾಗಿ ಪರಿಣಮಿಸುವ ಸಾಧ್ಯತೆ ಇದೆ.
ಆರ್‌ಸಿಬಿ ಪರ ಬಹುಹಂತಗಳ ಪ್ರಚಾರ, ಪ್ರಾಯೋಜಕತ್ವವನ್ನು ಸುಗಮಗೊಳಿಸಲು ಕೆಎಂಎಫ್ ಐಪಿಎಲ್-ಅಧಿಕೃತ ಏಜೆನ್ಸಿಗೆ ಮಾಹಿತಿ ನೀಡಿ ಮನವಿಯೊಂದಿಗೆ ಟೆಂಡರ್ ನೀಡಿದೆ. ಈ ಒಪ್ಪಂದವು ನಂದಿನಿ ಪ್ಯಾಕೇಜಿಂಗ್‌ನಲ್ಲಿ ಆರ್‌ಸಿಬಿಯ ಹೆಸರು, ಲೋಗೋ ಮತ್ತು ಟ್ರೇಡ್‌ಮಾರ್ಕ್‌ಗಳ ಬಳಕೆ ಆಗಲಿದೆ. ಜಾಹೀರಾತು ಪ್ರಚಾರಗಳು ಮತ್ತು ಐಪಿಎಲ್ ವಿಂಡೋದಲ್ಲಿ ಸಾರ್ವಜನಿಕ ಸಂಪರ್ಕ ಚಟುವಟಿಕೆಯಂತಹ ಬ್ರ್ಯಾಂಡಿಂಗ್ ಹಕ್ಕುಗಳನ್ನು ಒಳಗೊಂಡಿದೆ.
ಮಾತ್ರವಲ್ಲದೇ ಆರ್‌ಸಿಬಿಯ ಹೋಮ್ ಪಂದ್ಯಗಳಲ್ಲಿ ಆನ್-ಗ್ರೌಂಡ್ ಚಟುವಟಿಕೆಗಳನ್ನು ನಡೆಸಲಿದೆ. ಪ್ರಚಾರ, ಡೈರಿ ಉತ್ಪನ್ನಗಳ ನೇರ ಮಾರಾಟಕ್ಕಾಗಿ ಕ್ರೀಡಾಂಗಣದ ಸ್ಥಳಗಳಲ್ಲಿ ಕಿಯೋಸ್ಕ್‌ಗಳ ಸ್ಥಾಪಿಸಲು ನಂದಿನಿ ಮುಂದಾಗಿದೆ. ಇದರೊಂದಿಗೆ ಬ್ರ್ಯಾಂಡ್ ಇನ್‌ಸ್ಟಾಗ್ರಾಮ್, ಎಕ್ಸ್ ಮತ್ತು ಫೇಸ್‌ಬುಕ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಡಿಜಿಟಲ್ ಪ್ರಚಾರ ನೀಡಲಿದೆ. ಹೋರ್ಡಿಂಗ್‌ಗಳು ಮತ್ತು ದೊಡ್ಡ ಸ್ವರೂಪದ ಮಾಧ್ಯಮಗಳ ಮೂಲಕ ಹೊರಾಂಗಣ ಜಾಹೀರಾತು ಕೊಡಲು ಪ್ಲ್ಯಾನ್ ಮಾಡಿಕೊಂಡಿದೆ.
ನಂದಿನಿಯಿಂದ ಜಾಲ ವಿಸ್ತರಣೆ ಗುರಿ
ಉತ್ತರದ ಜೊತೆಗೆ ದಕ್ಷಿಣ ಭಾಗಕ್ಕೂ ತನ್ನ ಜಾಲ ವಿಸ್ತರಿಸುತ್ತಿರುವ ಅಮೂಲ್ ಕಂಪನಿಯ ಮಾರುಕಟ್ಟೆಯು ದೆಹಲಿ, ಉತ್ತರ ಪ್ರದೇಶ ಮತ್ತು ಮುಂಬೈನಲ್ಲಿ ದೊಡ್ಡಮಟ್ಟದಲ್ಲಿದೆ. ಅಲ್ಲಿ ಅಮೂಲ್‌ಗೆ ಪೈಪೋಟಿ ನೀಡಿ ತನ್ನ ಉತ್ಪನ್ನಗಳ ಮೂಲಕ ಗಟ್ಟಿ ನೆಲೆಯೂರಲ್ಲಿ ಕೆಎಂಎಫ್ ಬೃಹತ್ ಕಾರ್ಯತಂತ್ರ ರೂಪಿಸಿದೆ. ಈ ನಿಟ್ಟಿನಲ್ಲಿ ವಿತರಣೆ ಮತ್ತು ಗ್ರಾಹಕರ ಆಕರ್ಷಣೆ ಸೆಳೆಯಲು ಮಹತ್ವ ಹೆಜ್ಜೆ ಇಟ್ಟಿದೆ. ಅದರಲ್ಲಿ ಈ ಆರ್‌ಸಿಬಿ ಪ್ರಾಯೋಜಕತ್ವವು ಒಂದಾಗಿದೆ. ಬೇರೆ ಬೇರೆ ಭಾಗಗಳಲ್ಲಿ ಬ್ರ್ಯಾಂಡ್ ಸ್ಥಾಪಿಸಲಿದ್ದು, ಇದೀಗ ಆರ್‌ಸಿಬಿ ರಾಷ್ಟ್ರೀಯ ಅಭಿಮಾನಿಗಳನ್ನು ನಂದಿನಿ ಉತ್ಪನ್ನಗಳತ್ತ ಸೆಳೆಯಲು ಮುಂದಾಗಿದೆ.

ಬೆಂಗಳೂರು ನಮ್ಮ ಮೆಟ್ರೋದಲ್ಲಿ ಅಮೂಲ್ ಶಾಪ್ ತೆರೆಯಲು ಅನುಮಿತಿ ಪಡೆಯುವುದು ಸೇರಿದಂತೆ ಈ ಹಿಂದೆ ಕೆಲವು ಬಾರಿ ಈ ಎರಡು ಡೈರಿ ಬ್ರ್ಯಾಂಡ್‌ಗಳ ಮಧ್ಯೆ ತೀವ್ರ ಪೈಪೋಟಿ ಉಂಟಾಗಿತ್ತು. 2023 ರಲ್ಲಿ ಬೆಂಗಳೂರಿಗೆ ಅಮುಲ್‌ನ ಪ್ರವೇಶವು ರಾಜಕೀಯ ಮತ್ತು ಸಹಕಾರಿ ವಲಯದ ಪ್ರತಿಸ್ಪರ್ಧೆಗೆ ಕಾರಣವಾಯಿತು. ಅಷ್ಟೆ ಅಲ್ಲದೇ ಕರ್ನಾಟಕದ ಹಾಲು ಉತ್ಪಾದಕರು, ಇಲ್ಲಿನ ಸಹಕಾರಿ ಜಾಲಗಳ ಮೇಲೆ ಅಮೂಲ್ ಪರಿಣಾಮ ಬೀರಿತ್ತು. ಇದು ಸಾಕಷ್ಟು ಕಳವಳಕ್ಕೆ ಕಾರಣವಾಗಿತ್ತು.
ಕ್ರೀಡಾ ಪ್ರಾಯೋಕತ್ವ ಹೆಚ್ಚಿಸುತ್ತಿರುವ ನಂದಿನಿ
ಮೂಲಗಳ ಪ್ರಕಾರ, ಪ್ರತಿನಿತ್ಯ ಕೆಎಂಎಫ್ 8.4 ಮಿಲಿಯನ್ ಲೀಟರ್ ಹಾಲು ಸಂಗ್ರಹಿಸುತ್ತದೆ. 2021-22 ರಲ್ಲಿ ಸುಮಾರು 19,800 ಕೋಟಿ ರೂ.ಗಳ ವಹಿವಾಟು ನಡೆಸಿದೆ. ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟದಿಂದ ನಡೆಸಲ್ಪಡುವ ಅಮುಲ್, 2022-23 ರಲ್ಲಿ ರೂ. 55,055 ಕೋಟಿ ತಾತ್ಕಾಲಿಕ ಆದಾಯ ಗಳಿಸಿದೆ ಎಂದು ವರದಿ ಆಗಿದೆ. ಕೆಎಂಎಫ್ ಕ್ರೀಡಾ ಮಾರ್ಕೆಟಿಂಗ್ ಹೆಚ್ಚಿಸುತ್ತಾ ಮುನ್ನಡೆಯುತ್ತಿದೆ. ಐಸಿಸಿ ಪುರುಷರ ಟಿ 20 ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್‌ನ ಪ್ರಾಯೋಜಕತ್ವ ಪಡೆದಿತ್ತು. ಪ್ರೊ ಕಬಡ್ಡಿ ಲೀಗ್ ಮತ್ತು ಇಂಡಿಯನ್ ಸೂಪರ್ ಲೀಗ್‌ನಲ್ಲಿ ಪಾಲುದಾರಿಕೆಗಳನ್ನು ಹೊಂದಿತ್ತು. ಅದು ಹೊಸ ಗ್ರಾಹಕರನ್ನು ತಲುಪಲು ಸಹಾಯವಾಗಿತ್ತು.
ಐಪಿಎಲ್ 19 ನೇ ಆವೃತ್ತಿಯಾದ ಐಪಿಎಲ್ 2026 ಮಾರ್ಚ್ 26 ರಿಂದ ಮೇ 31 ರವರೆಗೆ ನಡೆಯಲು ನಿರ್ಧರಿಸಲಾಗಿದೆ. ಕೆಎಂಎಫ್ ಮತ್ತು ಆರ್‌ಸಿಬಿ ಇಲ್ಲಿಯವರೆಗೆ ಟೆಂಡರ್ ಪ್ರಕ್ರಿಯೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.












Click it and Unblock the Notifications