ಮಹಿಳಾ ಸಾಧಕಿ ಭಾಗ-2: ಥ್ರೋಬಾಲ್ ಮಿನುಗು ತಾರೆ ಸಂಪೂರ್ಣ

Posted By:
Subscribe to Oneindia Kannada

ಹೆತ್ತ ಮಕ್ಕಳಿಗೆ ಆದರ್ಶ ಮಾತೆಯಾಗಿ ಬದುಕಿದರೆ ಸಾಕು ಎಂಬ ಸಾಮಾನ್ಯ ಕನಸಿನೊಂದಿಗೆ ಮುಗಿಲೆತ್ತರಕ್ಕೆ ಹಾರಿ ಆಕಾಶಕಾಯಗಳನ್ನೆಲ್ಲ ಮುಟ್ಟಿಬರುವ ಕನಸನ್ನೂ ಕಂಡ ಮಹಿಳೆಯರೆಷ್ಟೋ! ಯಾವುದೋ ಪರಿಸ್ಥಿತಿ, ಯಾರದೋ ಅಂಕುಷ, ಎಲ್ಲಿಯೋ ಬರೆದಿಟ್ಟ ವಿಧಿಯ ಸಾಲಿಗೆ ಕನಸುಗಳನ್ನೆಲ್ಲ ಮೂಟೆಕಟ್ಟಿಟ್ಟ ಮಾನಿನಿಯರೆಷ್ಟೋ!

ಸೌಂದರ್ಯಳನ್ನು ಜೀವಂತವಾಗಿಟ್ಟಿರುವ ಅತ್ತಿಗೆ ನಿರ್ಮಲಾ!

ಈ ಎಲ್ಲ ಸಂದಿಗ್ಧಗಳನ್ನೂ ಮೀರಿ ಸಾಮಾನ್ಯವಲ್ಲದ ಒಂದು ಆದರ್ಶ ಬದುಕನ್ನು ಬದುಕಿದವರು ಮತ್ತೊಂದಷ್ಟು ಜನ. ಅಂಥವರಲ್ಲಿ ಕುಗ್ರಾಮವೊಂದರಲ್ಲಿ ಜನಿಸಿ, ಹಂತ ಹಂತವಾಗಿ ಬೆಳೆದು ನಿಂತು, ಪ್ರಸ್ತುತ ಭಾರತೀಯ ಥ್ರೋಬಾಲ್ ತಂಡದ ನಾಯಕಿಯಾಗಿ, ದೇಶದ ಕೀರ್ತಿಪತಾಕೆ ಹಾರಿಸಿದ ಸಂಪೂರ್ಣ ಹೆಗಡೆ ಸಹ ಒಬ್ಬರು. ಮೈದಾನಕ್ಕಿಳಿದರೆ ಪರಿಣಿತ ಥ್ರೋಬಾಲ್ ಆಟಗಾರ್ತಿಯಾಗಿ, ವೃತ್ತಿಕ್ಷೇತ್ರದಲ್ಲಿ ಒಬ್ಬ ಡೇಟಾ ಸೈಂಟಿಸ್ಟ್ ಆಗಿ, ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ, ಮನೆಯ ಹೊಸಿಲೊಳಗೆ ಕಾಲಿಟ್ಟರೆ ಅಪ್ಪಟ ಗೃಹಿಣಿಯಾಗಿ, ಭಾರತೀಯ ಪಾರಂಪರಿಕ ವೈದ್ಯ ಪದ್ಧತಿಯಾದ ನ್ಯಾಚುರೋಪತಿಯ ಪ್ರತಿಪಾದಕಿಯಾಗಿ, ಮಹಿಳಾ ಸ್ವಾವಲಂಬನೆಯ ಪ್ರೋತ್ಸಾಹಕಿಯಾಗಿ ಸಂಪೂರ್ಣ ಅವರದು ಬಹುಮುಖಿ ವ್ಯಕ್ತಿತ್ವ.

ಆಕೆಯ ಛಲದೆದುರು ಸೀಳುಬಿಟ್ಟ 16 ಮೂಳೆಗಳೂ ಗೌಣವಾದವು!

'ಈ ಕೆಲಸವನ್ನು ನಾನು ಮಾಡಲೇಬೇಕು' ಎಂಬ ತುಡಿತವಿದೆಯಲ್ಲ ಅದೇ ಈ ಎಲ್ಲವನ್ನೂ ಸಾಧ್ಯವಾಗಿಸಿದ್ದು ಎಂದು ವಿನಮೃವಾಗಿಯೇ ಹೇಳುವ ಸಂಪೂರ್ಣ, ಈ ವಾರದ ನಮ್ಮ ಮಹಿಳಾ ಸಾಧಕಿ. 'ಒನ್ ಇಂಡಿಯಾ' ಆರಂಭಿಸಿರುವ ಮಹಿಳಾ ಸಾಧಕಿಯರ ಪರಿಚಯದ ಎರಡನೇ ಹೆಜ್ಜೆ ಇದು. ಕುಗ್ರಾಮದಿಂದ ಬಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದರೂ ಸರಳತೆ ಮರೆಯದ ಸಂಪೂರ್ಣ ಹೆಗಡೆಯವರ ಸಾಧನೆಯ ಕುರಿತು ಅವರ ಮಾತಲ್ಲೇ ಕೇಳಿ...

ಮಲೆನಾಡ ನಡುವಲ್ಲಿ ಬೆಳೆದವಳು ನಾನು...

ಮಲೆನಾಡ ನಡುವಲ್ಲಿ ಬೆಳೆದವಳು ನಾನು...

"ಸದ್ದಿರದ ಪಸರುಡೆಯ ಮಲೆನಾಡ ಬನಗಳಲಿ ಹರಿವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ..." ಎಂಬ ಕುವೆಂಪು ಅವರ ಪದ್ಯಕ್ಕೆ ಅನ್ವರ್ಥ ಎಂಬಂಥ ಊರಲ್ಲಿ ಹುಟ್ಟಿದವಳು ನಾನು. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೀನ್ಗಾರು ಎಂಬ ಪುಟ್ಟ ಹಳ್ಳಿ. ಸುತ್ತಲೂ ಹಸಿರು, ನಡುವಲ್ಲಿ ಊರು. ಸಹಬಾಳ್ವೆ, ಸ್ನೇಹ, ಸಹಕಾರ ಇಂಥ ಪರಿಸರದಲ್ಲೇ ಮಧ್ಯಮ ವರ್ಗದ ಕುಟುಂಬದಲ್ಲಿ, ಯಾವ ಹೈಫೈ ಸೌಲಭ್ಯವೂ ಇಲ್ಲದಿದ್ದರೂ ನೆಮ್ಮದಿಯಿಂದಲೇ ಬೆಳೆದೆ. ಚಿಕ್ಕ ವಯಸ್ಸಿನಿಂದಲೂ ಕ್ರೀಡೆಯ ಬಗ್ಗೆ ಎಲ್ಲಿಲ್ಲದ ಆಸಕ್ತಿ ನನಗೆ. ಥ್ರೋಬಾಲ್ ಒಂದೇ ಅಲ್ಲ. ಎಲ್ಲಾ ಆಟಗಳನ್ನೂ ಮನದಣಿಯೇ ಆಡುತ್ತಿದ್ದೆ. ಆದರೆ ಓದು ಮುಗಿದು, ವೃತ್ತಿ ಆರಂಭಿಸಿದ ಮೇಲೆ ಥ್ರೋಬಾಲ್ ಆಡುವ ಅವಕಾಶ ಸಿಕ್ಕಿರಲಿಲ್ಲ. ಮೈಕ್ರೋಸಾಫ್ಟ್ ಕಂಪೆನಿಗೆ ಸೇರಿದಾಗ ಒಮ್ಮೆ ಇಂಟರ್ ಕಾರ್ಪೋರೇಟ್ ಥ್ರೋಬಾಲ್ ಟೂರ್ನಮೆಂಟ್ ಗೆ ಆಹ್ವಾನ ಬಂತು. ನಮ್ಮದೇ ತಂಡ ಮಾಡಿಕೊಂಡು ಎಷ್ಟೋ ದಿನದ ನಂತರ ಮೊದಲ ಬಾರಿಗೆ ಮೈದಾನಕ್ಕಿಳಿದೆ. ಹೀಗೇ ಕ್ರೀಡಾ ಬದುಕಿನ ಎರಡನೇ ಇನ್ನಿಂಗ್ಸ್ ಶುರುವಾಯ್ತು!"

ಮಾಡಬಲ್ಲೆ ಅನ್ನೋ ತುಡಿತವಿದ್ದರೆ ಎಲ್ಲವೂ ಸಾಧ್ಯ

ಮಾಡಬಲ್ಲೆ ಅನ್ನೋ ತುಡಿತವಿದ್ದರೆ ಎಲ್ಲವೂ ಸಾಧ್ಯ

"ಒಬ್ಬ ಗೃಹಿಣಿಯಾಗಿ ಕುಟುಂಬವನ್ನು ಸಲಹುವ ಜೊತೆಗೆ ಒಬ್ಬ ಉದ್ಯೋಗಿಯಾಗಿ ಕಚೇರಿಯಲ್ಲೂ ಕೆಲಸ ಮಾಡುತ್ತ, ಕೊನೆಗೆ ಹವ್ಯಾಸಗಳನ್ನೂ ಬಿಡದೆ ಮುನ್ನಡೆಸಿಕೊಂಡು ಹೋಗೋದಂದ್ರೆ ಸುಲಭವಲ್ಲ. ಹಾಗಂತ ಸಾಧ್ಯವಾಗದಿರುವುದೂ ಅಲ್ಲ. 'ನಾನು ಇದನ್ನು ಮಾಡಬಲ್ಲೆ' ಅನ್ನೋ ತುಡಿತ ಇದ್ರೆ ಎಲ್ಲವೂ ಆಗತ್ತೆ. ಹಾಗೇ ಮನೆ ಜನರಿಂದ ಸಹಕಾರ, ಪ್ರೋತ್ಸಾಹ, ಮೆಚ್ಚುಗೆ ಎಲ್ಲವೂ ಸಿಕ್ಕಿದರೆ ಇವನ್ನೆಲ್ಲ ಸಾಧಿಸೋದು ದೊಡ್ಡ ವಿಷಯವೇ ಅಲ್ಲ. ಈ ವಿಷಯದಲ್ಲಿ ನಾನಂತೂ ತುಂಬಾನೇ ಅದೃಷ್ಟವಂತೆ. ನನ್ನ ಪತಿಯಿರಬಹುದು, ಅತ್ತೆ, ಮಗಳು, ತಂದೆ-ತಾಯಿ ಹೀಗೇ ಪ್ರತಿಯೊಬ್ಬರೂ ನನಗೆ ಪ್ರೋತ್ಸಾಹ ನೀಡಿದ್ದಾರೆ. ನೀಡುತ್ತಿದ್ದಾರೆ. ಗೆದ್ದುಬಂದರೆ ಮೆಚ್ಚುಗೆಯ ಮಾತನಾಡಿ ಮತ್ತಷ್ಟು ಹುರಿದುಂಬಿಸುತ್ತಾರೆ. ಅವರೆಲ್ಲರ ಸಹಕಾರವೇ ನನಗೆ ಶ್ರೀರಕ್ಷೆ"

ಸಮಾಜಮುಖಿಯಾಗಿ....

ಸಮಾಜಮುಖಿಯಾಗಿ....

"ಮಹಿಳೆಯರು ಯಾವಾಗಲೂ ಸ್ವಾವಲಂಬಿಗಳಾಗಿ ಬದುಕಬೇಕು ಎಂಬುದು ನನ್ನ ಇಚ್ಛೆ. ಅದಕ್ಕೆಂದೇ AWAKE (ಅಸೋಸಿಯೇಶನ್ ಆಫ್ ವುಮೆನ್ ಎಂಟರ್ ಪ್ರೀನರ್ಸ್ ಆಫ್ ಕರ್ನಾಟಕ) ಎಂಬ ಸಂಸ್ಥೆಯ ವತಿಯಿಂದ ನಮ್ಮೂರು ಸಿದ್ದಾಪುರದಲ್ಲೂ ಮಹಿಳೆಯರಿಗಾಗಿ ವೃತ್ತಿ ಕೌಶಲ್ಯ, ಜೊತೆಗೆ ವಾಣಿಜ್ಯೋದ್ಯಮದ ಕುರಿತು ಒಂದು ವಾರದ ತರಬೇತಿ ಕಾರ್ಯಕ್ರಮಗಳನ್ನು ಮಾಡಿದ್ದೆವು. ಅದರಲ್ಲಿ ಭಾಗವಹಿಸಿದ್ದ 28 ಕ್ಕೂ ಹೆಚ್ಚುನ ಜನರಲ್ಲಿ ಸುಮಾರು 14 ಜನ ಈಗಾಗಲೇ ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ. ಜೊತೆಗೆ ಉದ್ಯೋಗಕ್ಕೆ ಸಂಬಂಧಿಸಿದಂತೇ ಯಾರೇ ನನ್ನೊಂದಿಗೆ ಸಲಹೆ, ಸೂಚನೆಗಳನ್ನು ಕೇಳಿದರೂ, ಮಾರ್ಗದರ್ಶನ ಕೇಳಿದರೂ ಅತ್ಯಂತ ಸಂತೋಷದಿಂದ ನೀಡುತ್ತೇನೆ. ಹೆಣ್ಣು ಮಕ್ಕಳು ಮುಂದೆಬರುತ್ತಾರೆ ಅಂದ್ರೆ ಅದೇನೋ ಖುಷಿ ನನಗೆ."

ನ್ಯಾಚುರೋಪತಿಯ ಪ್ರತಿಪಾದಕಿಯಾಗಿ...

ನ್ಯಾಚುರೋಪತಿಯ ಪ್ರತಿಪಾದಕಿಯಾಗಿ...

"ನ್ಯಾಚುರೋಪತಿಯ ಬಹುದೊಡ್ಡ ಬೆನಿಫಿಶಿಯರಿ ನಾನಅಗಿರೋದ್ರಿಂದ ನ್ಯಾಚುರೋಪತಿಯ ಬಗ್ಗೆ ಧೈರ್ಯವಾಗಿ ಮಾತನಾಡಬಲ್ಲೆ. ನ್ಯಾಚುರೋಪತಿಯಲ್ಲಿ ಡಿಪ್ಲೊಮಾ ಮಾಡಿ, ಆ ಪದ್ಧತಿಯನ್ನು ನನ್ನ ಜೀವನದಲ್ಲೂ ಅಳವಡಿಸಿಕೊಂಡಿದ್ದೇನೆ. ದೇಹವನ್ನು ಯಾವಾಗಲೂ ನಮ್ಮ ನಿಯಂತ್ರಣದಲ್ಲೇ ಇಟ್ಟುಕೊಳ್ಳೋದು, ಯೋಗ, ಕ್ರೀಡೆ, ನಿಯಮಿತ, ಶಿಸ್ತಿನ ಆಹಾರ ಕ್ರಮವನ್ನು ಅಳವಡಿಸಿಕೊಳ್ಳುವ ಪಾಠವನ್ನು ನ್ಯಾಚುರೋಪತಿ ಮಾಡುತ್ತದೆ. ಅದನ್ನು ಅಳವಡಿಸಿಕೊಂಡಿದ್ದರಿಂದಲೇ ನಾನು ಕಳೆದ ಸುಮಾರು 25 ವರ್ಷದಿಂದ ಒಂದೇ ಒಂದು ಮಾತ್ರೆಯನ್ನೂ ನುಂಗಿಲ್ಲ! ಪ್ರತಿಯೊಬ್ಬರೂ ಅದನ್ನು ಅಳವಡಿಸಿಕೊಳ್ಳುವುದರಿಂದ ಸರ್ವೇಸಂತು ನಿರಾಮಯಾಃ ಎಂಬ ಮಾತು ಸತ್ಯವಾಗುತ್ತದೆ"

ವಯಸ್ಸೇ ನಾಚುವ ಹಾಗೆ ಕೆಲಸ ಮಾಡಿ

ವಯಸ್ಸೇ ನಾಚುವ ಹಾಗೆ ಕೆಲಸ ಮಾಡಿ

"ನಮ್ಮ ನಮ್ಮ ಪ್ರತಿಭೆಗೆ ಅವಕಾಶ ಹುಡುಕಿಕೊಂಡು ನಾವು ಬೆಳೆಯೋದಕ್ಕೆ ಪ್ರಯತ್ನಿಸಬೇಕು. ಕುಟುಂಬವನ್ನೂ ನೋಡಿಕೊಂಡು, ನಮ್ಮ ಪ್ರತಿಭೆಯೂ ಮಂಕಾಗುವುದಕ್ಕೆ ಬಿಡದೆ ಸದಾ ಕ್ರಿಯಾಶೀಲರಾಗಿರಬೇಕು. ಅಯ್ಯೋ, ನನ್ ಮದುವೆ ಆಯ್ತು, ಅಯ್ಯೋ ಮಗು ಆಯ್ತು ಎಲ್ಲಾ ಮುಗೀತು ಅಂದುಕೊಳ್ಳೋದರಲ್ಲಿ ಅರ್ಥವಿಲ್ಲ. ಕಲಿಯೋದಕ್ಕೆ, ಸಾಧಿಸೋಕೆ ವಯಸ್ಸಿನ ಹಂಗಿಲ್ಲ. ನಮ್ಮ ಶಕ್ತಿಯೆದುರು ವಯಸ್ಸೇ ನಾಚುವ ಹಾಗೆ ಬದುಕಬೇಕು. ಉದ್ಯೋಗಂ ಪುರುಷ ಲಕ್ಷಣಂ ಅನ್ನೋದು ಹಳೇ ಮಾತು. ಈಗ ಯಾರು ಬೇಕಾದರೂ ದುಡಿಯಬಹುದು. ಪುರುಷನಿಗೆ ಸರಿಸಮವಾಗಿ ನಿಲ್ಲಬಹುದು. ದೇಶದ ಅಭಿವೃದ್ಧಿಯಲ್ಲಿ ನಮ್ಮದೂ ಕಾಣಿಕೆಯಿದೆ ಎಂಬುದನ್ನು ಅರಿಯಬೇಕು."

ಮಾಧ್ಯಮದ ಸಹಕಾರ ಅತ್ಯಗತ್ಯ

ಮಾಧ್ಯಮದ ಸಹಕಾರ ಅತ್ಯಗತ್ಯ

"ಈಗಾಗಲೇ ನಮ್ಮ ಭಾರತೀಯ ಥ್ರೋಬಾಲ್ ತಂಡ ಸಾಕಷ್ಟು ಅಂತಾರಾಷ್ಟ್ರೀಯ ಪಂದ್ಯಗಳನ್ನು ಗೆದ್ದಿದೆ. ಆದರೂ ತಂಡದ ಪರಿಚಯ ಹೆಚ್ಚು ಜನರಿಗೆ ಇಲ್ಲದೆ ಇರೋದಕ್ಕೆ ಕಾರಣ ಸರ್ಕಾರ ಅಂತ ನಂಗನ್ನಿಸ್ತಿಲ್ಲ. ಯಾಕಂದ್ರೆ ಥ್ರೋಬಾಲ್ ಅನ್ನು ಶಾಲೆಗಳಲ್ಲಿ ಅಧಿಕೃತ ಕ್ರೀಡಾ ಪಠ್ಯವನ್ನಾಗಿ ಸೇರಿಸಲಾಗಿದೆ. ಬಹುಪಾಲು ಎಲ್ಲ ಶಾಲೆಗಳಲ್ಲೂ ಹೆಣ್ಣುಮಕ್ಕಳಿಗೆ ಥ್ರೋಬಾಲ್ ತರಬೇತಿ ನೀಡಲಾಗುತ್ತದೆ. ಆದರೂ ಇದಕ್ಕೆ ಹೆಚ್ಚು ಮನ್ನಣೆ ಸಿಗುತ್ತಿಲ್ಲ. ಮಾಧ್ಯಮಗಳು ಇಂಥ ಕ್ರೀಡೆಗಳಿಗೂ ಪ್ರಚಾರ ನೀಡಬೇಕಿದೆ. ಹಾಗೆಯೇ ನಾವೂ ಈ ಕ್ರೀಡೆಯನ್ನು ಪ್ರಸಿದ್ಧವಾಗಿಸಲು ಮಾಧ್ಯಮಗಳನ್ನು ಬಳಿಸಿಕೊಳ್ಳೋದು ಹೇಗೆ ಅನ್ನೋದನ್ನೂ ಕಲಿಯಬೇಕಿದೆ"

ಥ್ರೋಬಾಲ್ ಅನ್ನು ಒಲಿಂಪಿಕ್ಸ್ ನಲ್ಲಿ ನೋಡೋ ಕನಸು

ಥ್ರೋಬಾಲ್ ಅನ್ನು ಒಲಿಂಪಿಕ್ಸ್ ನಲ್ಲಿ ನೋಡೋ ಕನಸು

"ಥ್ರೋಬಾಲ್ ಅನ್ನು ಒಲಿಂಪಿಕ್ಸ್ ಮಟ್ಟದಲ್ಲಿ ನೋಡ್ಬೇಕು ಅನ್ನೋದು ನನ್ನ ಕನಸು. ಅದಕ್ಕೆ ಮಾಧ್ಯಮ, ಸರ್ಕಾರ ಜನರ ಪ್ರೋತ್ಸಾಹ, ಸಹಕಾರ ಅತ್ಯಗತ್ಯ. ಅದಕ್ಕಾಗಿ ಬೇರೆ ಬೇರೆ ದೇಶದ ಸಹಕಾರವನ್ನೂ ನಾವು ಬಯಸುತ್ತೇವೆ. ಹಾಗೆಯೇ ಡೇಟಾ ಸೈಂಟಿಸ್ಟ್ ಆಗಿ ಕೆಲಸ ಮಾಡುತ್ತಿರೋದ್ರಿಂದ ನನಗೆ ಹೊಸ ಹೊಸ ತಂತ್ರಜ್ಞಾನಗಳನ್ನು ರೈತಸ್ನೇಹಿಯಾಗಿ ರೂಪಿಸೋದು, ಅವರಿಗೆ ಉಪಯೋಗವಾಗುವಂಥ ಕೆಲಸ ಮಾಡೋದು ಹೇಗೆ ಎಂಬ ಬಗ್ಗೆ ಹೆಚ್ಚು ಗಮನಹರಿಸುತ್ತಿದ್ದೇನೆ. ದೇಶವನ್ನು ಪ್ರತಿನಿಧಿಸೋದು, ದೇಶಕ್ಕಾಗಿ ಪ್ರಶಸಸ್ತಿ ಗೆಲ್ಲೋದರಲ್ಲಿ ಇರುವ ಖುಷಿ ಬೇರೆ ಯಾವುದರಲ್ಲಿಯೂ ಇಲ್ಲ. ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಅನ್ನುವ ಹಾಗೆ ನಮ್ಮ ದೇಶವೇ ನಮಗೆ ಇಷ್ಟ. ಈ ದೇಶದ ಕೀರ್ತಿ ಹೆಚ್ಚಿಸೋಕೆ, ಪ್ರಗತಿ ಪಥದಲ್ಲಿ ನಡೆಯೋದಕ್ಕೆ ಪ್ರತಿಯೊಬ್ಬರೂ ತಮ್ಮ ಕೈಲಾದ ಕೆಲಸ ಮಾಡಲೇಬೇಕು ಅನ್ನೊದು ನನ್ನ ಆಶಯ "

ವೈಯಕ್ತಿಕ ಜೀವನ

ವೈಯಕ್ತಿಕ ಜೀವನ

ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೀನ್ಗಾರು ಎಂಬ ಹಳ್ಳಿಯಲ್ಲಿ. ತಂದೆ ಸೀತಾರಾಮ ಹೆಗಡೆ, ತಾಯಿ ಅನ್ನಪೂರ್ಣ ಹೆಗಡೆ. ಎಸ್ ಎಸ್ ಎಲ್ ಸಿಯಲ್ಲಿ ಆಗಿನ ಕಾಲದಲ್ಲಿ ರಾಜ್ಯಕ್ಕೆ 30 ನೇ ರ್ಯಾಂಕ್ ಪಡೆದ ಹೆಗ್ಗಳಿಕೆಯೂ ಸಂಪೂರ್ಣ ಅವರದು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಇವರದು, ಪತಿ ಸುರೇಂದ್ರ ಹೆಗಡೆ, ಮಗಳು ಮಂಥನ ಜೊತೆಗೆ ಚಿಕ್ಕ-ಚೊಕ್ಕ ಸಂಸ್ಕಾರ. ತಮ್ಮ ಥ್ರೋ ಬಾಲ್ ಯಶಸ್ಸಿನ ಹಿಂದೆ ತರಬೇತುದಾರರಾದ ನರಸಿಂಹ ರೆಡ್ಡಿ, ಸಂತೋಷ ಮತ್ತು ಟಿ.ರಾಮಣ್ಣ ಅವರ ಕೊಡುಗೆ ಇರುವುದನ್ನು ನೆನಪಿಸಿಕೊಳ್ಳಲು ಸಂಪೂರ್ಣ ಅವರು ಮರೆಯುವುದಿಲ್ಲ.

ಸಂಪೂರ್ಣ ಮತ್ತವರ ತಂಡ ಗೆದ್ದ ಪಂದ್ಯಗಳು

ಸಂಪೂರ್ಣ ಮತ್ತವರ ತಂಡ ಗೆದ್ದ ಪಂದ್ಯಗಳು

ದುಬೈನಲ್ಲಿ 2009 ರಲ್ಲಿ ನಡೆದ ಇಂಡೋ ದುಬೈ ಸಿರೀಸ್ - ಗೆಲುವು
ಇಂಡೋ-ಶ್ರೀಲಂಕಾ ಸೀರಿಸ್ ಬೆಂಗಳೂರು- 2009 -ಗೆಲುವು
ಇಂಡೋ ಚೀನಾ ಸೀರೀಸ್ -ಬೀಜಿಂಗ್, ಚೀನಾ-ಗೆಲುವು- 2010
ಶ್ರೀಲಂಕಾ-ಇಂಡೋ ಸೀರೀಸ್ -ಶ್ರೀಲಂಕಾ 2012- ಗೆಲುವು
ಚತುಷ್ಕೋನ ಸರಣಿ ಶ್ರೀಲಂಕಾ- 2012 -ಗೆಲುವು
ಏಶಿಯನ್ ಥ್ರೋಬಾಲ್ ಚಾಂಪಿಯನ್ ಶಿಪ್ ಕೊಲಾಲಂಪುರ್, ಮಲೇಶಿಯಾ-2014 -ಗೆಲುವು
ಪಂಚಕೋನ ಸರಣಿ-ಬೆಂಗಳೂರು- 2015 -ಗೆಲುವು
ಇಂಡೋ ತಾಯ್ಲೆಂಡ್ ಥ್ರೋಬಾಲ್ ಸಿರೀಸ್ -2017-ಬ್ಯಾಂಕಾಕ್, ತಾಯ್ಲೆಂಡ್-ಗೆಲುವು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mrs. Sampoorna Hegde, International Throwball player, represented India in 8 International tournaments, brought the winning trophies to India in each one of them including Asian Championship in 2014 at Malaysia being a Captain. Here is an interview with her. This is the 2nd episode of our women achievers' series.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ