ಆಟೋ ಚಾಲಕನ ಮಗನ ಅಮೋಘ ಸಾಧನೆ: ಬಡತನ ಮೆಟ್ಟಿ ನಿಂತು MBBS ಸೀಟು ಗಿಟ್ಟಿಸಿಕೊಂಡ ಗ್ರಾಮೀಣ ಪ್ರತಿಭೆಯ ರೋಚಕ ಸ್ಟೋರಿ
Inspiring Story: ಸಾಮಾನ್ಯವಾಗಿ ಹಲವರು ಯಾವುದಾದರೂ ಒಂದು ಮಹತ್ತರ ಕೆಲಸಕ್ಕೆ ಕೈಹಾಕಿ ಅದರಲ್ಲಿ ಫೇಲ್ ಆದರೆ ಧೈರ್ಯ ಕಳೆದುಕೊಂಡುಬಿಡುತ್ತಾರೆ. ಆದರೆ, ಇಲ್ಲೊಬ್ಬ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಯೊಬ್ಬ ಛಲವೊಂದಿದ್ದರೆ ಸಾಕು ಯಾವ ಬಡತನವೂ ಅಡ್ಡಿ ಬರುವುದಿಲ್ಲ, ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದನ್ನ ಸಾಬೀತುಪಡಿಸಿ ಗಮನ ಸೆಳೆದಿದ್ದಾನೆ.
ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯ ದೇವಕಿಪುರ ಗ್ರಾಮದ ನಿವಾಸಿ ಪ್ರಭಾತ್ ಕುಮಾರ್ ಯಾದವ್ ಅವರು ಆರ್ಥಿಕ ಸಂಕಷ್ಟಗಳ ನಡುವೆಯೂ ನೀಟ್ ಯುಜಿ (NEET UG) ಪರೀಕ್ಷೆಯಲ್ಲಿ 627 ಅಂಕಗಳನ್ನು ಪಡೆದಿದ್ದಾರೆ. ಈ ಮೂಲಕ ಲಖನೌದ ಪ್ರತಿಷ್ಠಿತ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ (KGMU) ಎಂಬಿಬಿಎಸ್ (MBBS) ಸೀಟು ಗಿಟ್ಟಿಸಿಕೊಂಡಿದ್ದಾರೆ.

ಪ್ರಭಾತ್ ಕುಮಾರ್ ತಮ್ಮ ಮೊದಲ ಪ್ರಯತ್ನದಲ್ಲಿ ನೀಟ್ ಪರೀಕ್ಷೆಯಲ್ಲಿ 504 ಅಂಕಗಳನ್ನು ಮಾತ್ರ ಗಳಿಸಿದ್ದರು. ಆದರೆ ಧೈರ್ಯ ಕಳೆದುಕೊಳ್ಳದೆ ಮತ್ತೊಂದು ವರ್ಷ ಪರೀಕ್ಷೆಗೆ ಸಿದ್ಧತೆ ನಡೆಸಲು ನಿರ್ಧರಿಸಿದರು. ಎರಡನೇ ಪ್ರಯತ್ನದಲ್ಲಿ ಕಠಿಣ ಶ್ರಮವಹಿಸಿ 627 ಅಂಕಗಳನ್ನು ಗಳಿಸಿದ ಅವರು, ಅಖಿಲ ಭಾರತ ಮಟ್ಟದಲ್ಲಿ 3,864ನೇ ರ‍್ಯಾಂಕ್ (AIR 3864) ಪಡೆದು ಪ್ರತಿಷ್ಠಿತ ಕೆಜಿಎಂಯು ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಭಾತ್ ಅವರು ಶಾಲಾ ದಿನಗಳಲ್ಲೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, 10ನೇ ತರಗತಿಯಲ್ಲಿ ಶೇಕಡ 89.44 ಮತ್ತು 12ನೇ ತರಗತಿಯಲ್ಲಿ ಶೇಕಡ 83.44 ಅಂಕಗಳನ್ನು ಪಡೆದಿದ್ದರು. ಇನ್ನೂ ಇವರ ಈ ಅತ್ಯದ್ಭುತ ಯಶಸ್ಸಿನ ಹಿಂದಿನ ಹೀರೋ ಯಾರು ಎನ್ನುವ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಪ್ರಭಾತ್ ಯಶಸ್ಸಿನ ಹಿಂದಿರುವ ಹೀರೋ ಯಾರು?
ಪ್ರಭಾತ್ ಅವರ ಈ ಯಶಸ್ಸಿನ ಹಿಂದೆ ಅವರ ತಂದೆ ಮಹೇಂದ್ರ ಕುಮಾರ್ ಯಾದವ್ ಅವರ ಕಠಿಣ ತ್ಯಾಗವಿದೆ. ಮಹೇಂದ್ರ ಅವರು ಕಳೆದ ಸುಮಾರು 20 ವರ್ಷಗಳಿಂದ ಮುಂಬೈನಲ್ಲಿ ಆಟೋ ರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಮುಂಬೈನ ಸಣ್ಣ ಮನೆಯಲ್ಲಿ ವಾಸಿಸುತ್ತಾ, ತಾವು ಗಳಿಸಿದ ಹಣವನ್ನು ಗ್ರಾಮದಲ್ಲಿರುವ ಕುಟುಂಬಕ್ಕೆ ಕಳುಹಿಸಿ ಮಕ್ಕಳ ಶಿಕ್ಷಣಕ್ಕೆ ಆಸರೆಯಾಗಿದ್ದರು. ಪ್ರಭಾತ್ ತಮ್ಮ ತಾಯಿ ಬನ್ಸರಾಜಿ, ತಾತ ಇಂದ್ರ ಬಹದ್ದೂರ್ ಯಾದವ್ ಮತ್ತು ಸಹೋದರ - ಸಹೋದರಿಯರೊಂದಿಗೆ ಗ್ರಾಮದಲ್ಲೇ ವಾಸಿಸುತ್ತಿದ್ದರು.
ತರಬೇತಿಗಾಗಿ ರಾಜಸ್ಥಾನದ ಕೋಟಾಗೆ ಪ್ರಯಾಣ
ಆರಂಭದಲ್ಲಿ ಗ್ರಾಮದಲ್ಲೇ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ ಪ್ರಭಾತ್, ನಂತರ ರಾಜಸ್ಥಾನದ ಕೋಟಾಕ್ಕೆ ತೆರಳಿ ತರಬೇತಿ ಸಂಸ್ಥೆಗೆ ಸೇರಿದರು. ಇವರ ಆರ್ಥಿಕ ಸ್ಥಿತಿಯನ್ನು ಕಂಡು 'ಅಲೆನ್ ಕ್ಯಾರಿಯರ್ ಇನ್‌ಸ್ಟಿಟ್ಯೂಟ್' ತರಬೇತಿ ಶುಲ್ಕದಲ್ಲಿ ಶೇಕಡ 50ರಷ್ಟು ರಿಯಾಯಿತಿ ನೀಡಿತ್ತು. ಉಳಿದ ಮೊತ್ತವನ್ನು ತಂದೆ ಕಷ್ಟಪಟ್ಟು ಮಾಸಿಕ ಕಂತುಗಳಲ್ಲಿ ಪಾವತಿಸಿದರು. ಜೊತೆಗೆ ಪ್ರಭಾತ್ ಅವರ ಸೋದರಮಾವ ದಯಾರಾಮ್ ಯಾದವ್ ಕೂಡ ಶಿಕ್ಷಣಕ್ಕೆ ಅಗತ್ಯವಾದ ಆರ್ಥಿಕ ನೆರವು ನೀಡಿದರು.
ಪ್ರಭಾತ್ ಸಾಧನೆಗೆ ಹರಿದುಬಂದ ಶುಭಾಶಯಗಳ ಮಹಾಪೂರ
ಪ್ರಭಾತ್ ಅವರ ಈ ಸಾಧನೆ ದೇವಕಿಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಾರೀ ಸಂತಸ ಮನೆ ಮಾಡಿದೆ. ಗ್ರಾಮಸ್ಥರು ಮತ್ತು ಸಂಬಂಧಿಕರು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ತಮ್ಮ ಈ ಯಶಸ್ಸಿನ ಬಗ್ಗೆ ಮಾತನಾಡಿದ ಪ್ರಭಾತ್, 'ಒಬ್ಬ ವೈದ್ಯನಾಗಿ ನನ್ನ ಗ್ರಾಮ ಮತ್ತು ಸುತ್ತಮುತ್ತಲಿನ ಬಡ ಜನರಿಗೆ ವೈದ್ಯಕೀಯ ಸೇವೆ ಸಲ್ಲಿಸುವುದು ನನ್ನ ಮುಖ್ಯ ಗುರಿಯಾಗಿದೆ,' ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಛಲದ ಮುಂದೆ ಎಂತಹ ಬಡತನದ ಆಟವೂ ನಡೆಯುವುದಿಲ್ಲ ಎನ್ನುವುದಕ್ಕೆ ಇವರ ಬದುಕೇ ಒಂದು ಸೂಕ್ತ ಉದಾಹರಣೆಯಾಗಿದೆ ಎಂದರೆ ತಪ್ಪಾಗಲಾರದು.


Click it and Unblock the Notifications
