11ನೇ ತರಗತಿಯಲ್ಲಿ ಜಸ್ಟ್ ಪಾಸ್, ಎಂಜಿನಿಯರಿಂಗ್‌ನಲ್ಲಿ 24 ಬ್ಯಾಕ್‌ಲಾಗ್: ಛಲ ಬಿಡದೆ UPSC ಪಾಸ್ ಮಾಡಿದ IPS ಸಮೀರ್ ಶರ್ಮಾ

ಶೈಕ್ಷಣಿಕ ಜೀವನದಲ್ಲಿ ಕಡಿಮೆ ಅಂಕ ಗಳಿಸಿದರೆ ಅಥವಾ ಯಾವುದಾದರೂ ಪರೀಕ್ಷೆಯಲ್ಲಿ ಫೇಲ್ ಆದರೆ, ತಮ್ಮ ಭವಿಷ್ಯವೇ ಮುಗಿದುಹೋಯಿತು ಎಂದು ಖಿನ್ನತೆಗೆ ಜಾರುವವರೇ ಹೆಚ್ಚು. ಇನ್ನು ಯುಪಿಎಸ್‌ಸಿಯಂತಹ ದೇಶದ ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯಲು ಶಾಲಾ-ಕಾಲೇಜುಗಳಲ್ಲಿ ಟಾಪರ್ ಆಗಿರಬೇಕು ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಆದರೆ, ಈ ಎಲ್ಲಾ ಊಹೆಗಳನ್ನ ಹುಸಿಗೊಳಿಸಿ, ಶೈಕ್ಷಣಿಕ ಹಿನ್ನಡೆಯ ನಡುವೆಯೂ ಕಠಿಣ ಪರಿಶ್ರಮದಿಂದ ಅತ್ಯುನ್ನತ ಹುದ್ದೆಗೇರಿದವರ ಕಥೆಗಳು ಯುವಜನತೆಗೆ ಹೆಚ್ಚು ಸ್ಫೂರ್ತಿ ನೀಡುತ್ತವೆ.

ಅಂತಹವರ ಪೈಕಿ ಮುಂಚೂಣಿಯಲ್ಲಿ ನಿಲ್ಲುವ ಹೆಸರು ಐಪಿಎಸ್ ಸಮೀರ್ ಶರ್ಮಾ. 11ನೇ ತರಗತಿಯಲ್ಲಿ ಕೇವಲ ಶೇ. 34ರಷ್ಟು ಅಂಕ ಪಡೆದು, ಎಂಜಿನಿಯರಿಂಗ್ ಓದುವಾಗ ಬರೋಬ್ಬರಿ 24 ಬ್ಯಾಕ್‌ಲಾಗ್ ಉಳಿಸಿಕೊಂಡಿದ್ದ ಯುವಕನೊಬ್ಬ ಇಂದು ದೇಶದ ಪ್ರತಿಷ್ಠಿತ ಪೊಲೀಸ್ ಸೇವಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವುದು ನಿಜಕ್ಕೂ ಅಚ್ಚರಿ.

Inspiring Journey Of IPS Sameer Sharma Scored 34 In Class 11 Cleared 24 Engineering Backlogs To Pass UPSC

ಎಂಜಿನಿಯರಿಂಗ್‌ನಲ್ಲಿ 24 ಬ್ಯಾಕ್‌ಲಾಗ್

ಸಮೀರ್ ಶರ್ಮಾ ಅವರ ಶೈಕ್ಷಣಿಕ ಪಯಣವನ್ನಾ ಸ್ವಲ್ಪ ನೋಡುವುದಾದ್ರೆ ಶಾಲಾ ದಿನಗಳಲ್ಲೇ ಅವರು ಓದಿನಲ್ಲಿ ತೀರಾ ಸಾಧಾರಣ ವಿದ್ಯಾರ್ಥಿಯಾಗಿದ್ದರು. 10ನೇ ತರಗತಿಯಲ್ಲಿ ಶೇಕಡಾ 57 ಅಂಕ ಪಡೆದಿದ್ದ ಅವರು, 11ನೇ ತರಗತಿಯಲ್ಲಿ ಕೇವಲ ಶೇಕಡಾ 34 ಅಂಕಗಳೊಂದಿಗೆ ಜಸ್ಟ್ ಪಾಸ್ ಆಗಿದ್ದರು.

12ನೇ ತರಗತಿಯಲ್ಲಿ ಸ್ವಲ್ಪ ಸುಧಾರಿಸಿಕೊಂಡು ಶೇ. 60 ಅಂಕ ಗಳಿಸಿದರು. ಇನ್ನು ಶಾಲಾ ಶಿಕ್ಷಣ ಮುಗಿಸಿ ಎಂಜಿನಿಯರಿಂಗ್‌ಗೆ ಕಾಲಿಟ್ಟ ಮೇಲಂತೂ ಕೇಳುವುದೇ ಬೇಡ. ಎಂಜಿನಿಯರಿಂಗ್ ಓದುವ ಸಂದರ್ಭದಲ್ಲಿ ಅವರು ಬರೋಬ್ಬರಿ 24 ವಿಷಯಗಳಲ್ಲಿ ಫೇಲ್‌ ಆಗಿ ಬ್ಯಾಕ್‌ಲಾಗ್ ಉಳಿಸಿಕೊಂಡಿದ್ದರು.

ಬೇರೆ ಯಾರೇ ಆಗಿದ್ದರೂ ಇಷ್ಟೊಂದು ಬ್ಯಾಕ್‌ಲಾಗ್ ನೋಡಿ ಓದನ್ನೇ ಅರ್ಧಕ್ಕೆ ಕೈಬಿಡುತ್ತಿದ್ದರು, ಆದರೆ ಸಮೀರ್ ಶರ್ಮಾ ಅವರ ಹಾಗೆ ಮಾಡಲಿಲ್ಲ.

ವೈಫಲ್ಯಗಳೇ ಯುಪಿಎಸ್‌ಸಿ ಸಾಧನೆಗೆ ಸ್ಫೂರ್ತಿ

ತಮ್ಮ ಶೈಕ್ಷಣಿಕ ಹಿನ್ನಡೆಯನ್ನ ತಮ್ಮ ಅಂತಿಮ ಹಣೆಬರಹ ಎಂದು ಒಪ್ಪಿಕೊಳ್ಳಲು ಸಮೀರ್ ಶರ್ಮಾ ಸಿದ್ಧರಿರಲಿಲ್ಲ. ಈ ಹಿನ್ನಡೆಗಳನ್ನೇ ಕಲಿಕೆಯ ಅವಕಾಶವನ್ನಾಗಿ ಪರಿವರ್ತಿಸಿಕೊಂಡರು. ಬೇರೆಯವರೊಂದಿಗೆ ತಮ್ಮನ್ನು ಹೋಲಿಸಿಕೊಳ್ಳುವುದನ್ನು ಬಿಟ್ಟು, ತಮ್ಮದೇ ಆದ ತಪ್ಪುಗಳನ್ನ ಗುರುತಿಸಿ ಅವುಗಳನ್ನು ಸರಿಪಡಿಸುವತ್ತ ಗಮನ ಹರಿಸಿದರು.

ಪ್ರತಿದಿನ ಸ್ವಲ್ಪ ಮಟ್ಟಿಗಿನ ಸುಧಾರಣೆ ಕಾಣುವ ಕಡೆಗೆ ಒತ್ತು ನೀಡಿದರು. ಒಳ್ಳೆ ಓದುವ ಶಿಸ್ತನ್ನು ಮೈಗೂಡಿಸಿಕೊಂಡು, ನಿರಾಸೆಗಳನ್ನ ಬದಿಗೊತ್ತಿ ದೀರ್ಘಾವಧಿಯ ಗುರಿಯತ್ತ ಮುಖ ಮಾಡಿದರು.

ಕಠಿಣ ಪರಿಶ್ರಮದಿಂದ ಒಲಿದ ಯುಪಿಎಸ್‌ಸಿ ಯಶಸ್ಸು

ಸರಿಯಾದ ಮಾರ್ಗದರ್ಶನ ಮತ್ತು ಏಕಾಗ್ರತೆಯಿಂದ ಓದಲು ಶುರುಮಾಡಿದ ಸಮೀರ್ ಶರ್ಮಾ, ಕೇವಲ 18 ತಿಂಗಳ ಕಠಿಣ ಅಧ್ಯಯನದ ಮೂಲಕ ಇಡೀ ದೇಶವೇ ಬೆರಗಾಗುವಂತಹ ಸಾಧನೆ ಮಾಡಿದರು. ಛಲ ಬಿಡದೆ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆ ಎದುರಿಸಿ, ಅಖಿಲ ಭಾರತ ಮಟ್ಟದಲ್ಲಿ (AIR) 182ನೇ ರ್‍ಯಾಂಕ್ ಗಳಿಸುವ ಮೂಲಕ ಭರ್ಜರಿ ಯಶಸ್ಸು ಕಂಡರು.

ಸದ್ಯ ಅವರು 2011ರ ಬ್ಯಾಚ್‌ನ ಅರುಣಾಚಲ ಪ್ರದೇಶ, ಗೋವಾ, ಮಿಜೋರಾಂ ಮತ್ತು ಕೇಂದ್ರಾಡಳಿತ ಪ್ರದೇಶಗಳ ಜಂಟಿ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಸಮೀರ್ ಶರ್ಮಾ ಮಾದರಿ

ಕೇವಲ ಟಾಪರ್‌ಗಳು ಮಾತ್ರ ಐಎಎಸ್, ಐಪಿಎಸ್ ಆಗಬಹುದು ಎಂಬ ಭ್ರಮೆಯನ್ನ ಸಮೀರ್ ಶರ್ಮಾ ಸುಳ್ಳು ಎಂದು ಸಾಬೀತು ಮಾಡಿದ್ದಾರೆ. ಸಾವಿರಾರು ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಇವರ ಕಥೆ ಬಹುದೊಡ್ಡ ಸ್ಫೂರ್ತಿಯಾಗಿದೆ.

ಅಕಾಡೆಮಿಕ್ ಒತ್ತಡ, ಕಳಪೆ ಫಲಿತಾಂಶ ಹಾಗೂ ಅನುಮಾನಗಳು ಯಾವುದೇ ವಿದ್ಯಾರ್ಥಿಯ ಭವಿಷ್ಯವನ್ನು ನಿರ್ಧರಿಸುವುದಿಲ್ಲ ಎಂಬುದನ್ನು ಇವರ ಸಾಧನೆ ಸಾಬೀತುಪಡಿಸಿದೆ. ತಪ್ಪುಗಳಿಂದ ಪಾಠ ಕಲಿಯುವ ಗುಣ, ಸತತ ಪರಿಶ್ರಮ ಹಾಗೂ ಒಂದು ದೃಢವಾದ ಗುರಿ ಇದ್ದರೆ, ಎಷ್ಟೇ ಕಠಿಣ ಹಾದಿಯಾದರೂ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ಐಪಿಎಸ್ ಸಮೀರ್ ಶರ್ಮಾ ಅವರ ಜೀವನವೇ ಉದಾಹರಣೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+