Mirabai Chanu: ಒಲಿಂಪಿಕ್ ಪದಕ ವಿಜೇತೆ ಮೀರಾಬಾಯಿ ಚಾನು ಅವರ ಸರಳ ಸುಂದರ ಮನೆ ಹೇಗಿದೆ ಗೊತ್ತಾ? ಇಲ್ಲಿದೆ ಕಂಪ್ಲೀಟ್ ಟೂರ್

ಇತ್ತೀಚೆಗಷ್ಟೇ ಏಷ್ಯನ್ ಗೇಮ್ಸ್‌ನ ಮಹಿಳೆಯರ 49 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಹೆಮ್ಮೆಯ ವೇಟ್‌ಲಿಫ್ಟರ್ ಸೈಖೋಮ್ ಮೀರಾಬಾಯಿ ಚಾನು ದೇಶಾದ್ಯಂತ ಮತ್ತೆ ಸುದ್ದಿಯಲ್ಲಿದ್ದಾರೆ. ಒಲಿಂಪಿಕ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ತ್ರಿವರ್ಣ ಧ್ವಜ ರಾರಾಜಿಸುವಂತೆ ಮಾಡಿದ ಈ ಕ್ರೀಡಾತಾರೆ, ತಮ್ಮ ಆಟದ ಜೊತೆಗೆ ಸರಳತೆಯಿಂದಲೂ ಎಲ್ಲರ ಹೃದಯ ಗೆದ್ದಿದ್ದಾರೆ.

ಹೌದು, ಮಣಿಪುರದ ರಾಜಧಾನಿ ಇಂಫಾಲದಿಂದ ಸುಮಾರು 24 ಕಿಲೋಮೀಟರ್ ದೂರದಲ್ಲಿರುವ ನಾಂಗ್‌ಪೋಕ್ ಕಾಕ್ಚಿಂಗ್ ಗ್ರಾಮದಲ್ಲಿರುವ ಅವರ ಮನೆ, ಸಾಧಕಿಯೊಬ್ಬಳ ಸರಳ ಜೀವನ ಮೌಲ್ಯಗಳಿಗೆ ಕನ್ನಡಿಯಾಗಿದೆ. ಕ್ರಿಕೆಟ್ ತಾರೆಯರ ಅದ್ದೂರಿ ಬಂಗಲೆಗಳ ಬಗ್ಗೆಯೇ ಕೇಳಿರುವ ನಮಗೆ, ಮೀರಾಬಾಯಿ ಅವರ ಈ ಮನೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.

Inside Mirabai Chanu Humble Manipur Home From a Peaceful Prayer Room to a Proud Wall of Fame

ಭಾರತೀಯ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಮನೆಯ ವಿನ್ಯಾಸ

ಮೀರಾಬಾಯಿ ಚಾನು ಅವರ ಮನೆಯ ಒಳಾಂಗಣದಲ್ಲಿ ಐಷಾರಾಮಿತನ ಏನೂಯಿಲ್ಲ, ಅವರು ಸರಳತೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಲಿವಿಂಗ್ ರೂಂನಲ್ಲಿ ಸಾಧಾರಣವಾದ ಕಂದು ಬಣ್ಣದ ಸೋಫಾ ಸೆಟ್ ಇದ್ದು, ಗಾಳಿ-ಬೆಳಕು ಧಾರಾಳವಾಗಿ ಬರುವಂತೆ ದೊಡ್ಡ ಕಿಟಕಿಗಳನ್ನ ಅಳವಡಿಸಲಾಗಿದೆ. ಈ ಮನೆ ದುಬಾರಿ ವಸ್ತುಗಳಿಗಿಂತ ಹೆಚ್ಚಾಗಿ ಆರಾಮದಾಯಕ ಜೀವನಕ್ಕೆ ಒತ್ತು ನೀಡಿದೆ.

ಈ ಮನೆಯ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಗುಲಾಬಿ ಬಣ್ಣದ ವಾಲ್ ಆಫ್ ಫೇಮ್. ಈ ಗೋಡೆಯ ಮೇಲೆ ಮೀರಾಬಾಯಿ ಅವರು ತಮ್ಮ ಕ್ರೀಡಾಬದುಕಿನಲ್ಲಿ ಗಳಿಸಿದ ಪ್ರಶಸ್ತಿಗಳು, ಪದಕಗಳು ಮತ್ತು ಸಾಧನೆಗಳ ಫೋಟೋಗಳನ್ನ ಅತ್ಯಂತ ಸುಂದರವಾಗಿ ಫ್ರೇಮ್ ಮಾಡಿ ಹಾಕಲಾಗಿದೆ.

ಮನೆಯ ಪ್ರಮುಖ ಆಕರ್ಷಣೆಯಾದ ಭಕ್ತಿ ತುಂಬಿದ ಪೂಜಾ ಕೋಣೆ

ಈ ಮನೆಯ ಅತಿ ವಿಶೇಷ ಸ್ಥಳವೆಂದರೆ ಅಲ್ಲಿನ ಪೂಜಾ ಕೋಣೆ. ಬಿಳಿ ಅಮೃತಶಿಲೆಯಿಂದ ನಿರ್ಮಿಸಲಾದ ಈ ಸುಂದರವಾದ ಮಂದಿರದಲ್ಲಿ ಶಿವ ಮತ್ತು ಹನುಮಂತನ ಮೂರ್ತಿಗಳನ್ನ ಇರಿಸಲಾಗಿದೆ. ಅತ್ಯಂತ ಸ್ವಚ್ಛವಾಗಿರುವ ಈ ಪೂಜಾ ಸ್ಥಳ, ಮನೆಗೆ ಒಂದು ರೀತಿಯ ಆಧ್ಯಾತ್ಮಿಕ ಹಾಗೂ ಶಾಂತಿಯುತ ವಾತಾವರಣ ಒದಗಿಸುತ್ತದೆ. ಮೀರಾಬಾಯಿ ಅವರು ತಮ್ಮ ಕುಟುಂಬ, ಸಂಸ್ಕೃತಿ ಮತ್ತು ದೇವರ ಮೇಲಿಟ್ಟಿರುವ ಅಪಾರ ನಂಬಿಕೆಯನ್ನ ಇದು ಪ್ರತಿಬಿಂಬಿಸುತ್ತದೆ.

Inside Mirabai Chanu Humble Manipur Home From a Peaceful Prayer Room to a Proud Wall of Fame

ಇಂಫಾಲದಲ್ಲಿ ತರಬೇತಿ: ಮರಳು ಲಾರಿಗಳಲ್ಲಿ ಪ್ರಯಾಣಿಸಿದ ಕ್ರೀಡಾತಾರೆ

ಇಂದು ಜಗತ್ತೇ ತಿರುಗಿ ನೋಡುವಂತಹ ಸಾಧನೆ ಮಾಡಿರುವ ಮೀರಾಬಾಯಿ ಅವರ ಹಿಂದಿನ ಹಾದಿ ಸುಲಭದ್ದಾಗಿರಲಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಮುನ್ನ, ಅವರು ತಮ್ಮ ಗ್ರಾಮದಿಂದ ಇಂಫಾಲದ ತರಬೇತಿ ಕೇಂದ್ರಕ್ಕೆ ಪ್ರತಿದಿನ ಸುಮಾರು 30 ಕಿಲೋಮೀಟರ್ ಪ್ರಯಾಣಿಸುತ್ತಿದ್ದರು.

ಬಸ್ ಅಥವಾ ಇತರ ವಾಹನಗಳಿಗೆ ಹಣ ನೀಡಲು ಸಾಧ್ಯವಾಗದ ಕಡುಬಡತನದ ದಿನಗಳಲ್ಲಿ, ರಸ್ತೆಯಲ್ಲಿ ಹೋಗುತ್ತಿದ್ದ ಮರಳು ತುಂಬಿದ ಲಾರಿಗಳನ್ನ ಹತ್ತಿ ಪ್ರಯಾಣಿಸುತ್ತಿದ್ದರು. ಲಾರಿ ಚಾಲಕರು ಈಕೆಗೆ ತರಬೇತಿ ಕೇಂದ್ರ ತಲುಪಲು ಉಚಿತವಾಗಿ ಸಹಾಯ ಮಾಡುತ್ತಿದ್ದರು. ತಮ್ಮ ಈ ಕಷ್ಟದ ದಿನಗಳನ್ನ ಮೀರಾಬಾಯಿ ಅವರು ಸಂದರ್ಶನವೊಂದರಲ್ಲಿ ಹೆಮ್ಮೆಯಿಂದಲೇ ನೆನಪಿಸಿಕೊಂಡಿದ್ದಾರೆ.

ಕ್ರೀಡಾಪಟುಗಳ ಸರಳ ಜೀವನ: ಮನೋವಿಜ್ಞಾನಿಗಳ ಅಭಿಪ್ರಾಯವೇನು?

ಬೆಟ್ಟದಷ್ಟು ಸಾಧನೆ ಮಾಡಿ, ಆರ್ಥಿಕವಾಗಿ ಸಬಲರಾದ ಮೇಲೂ ಕ್ರೀಡಾಪಟುಗಳು ಹೇಗೆ ಇಷ್ಟು ಸರಳವಾಗಿರುತ್ತಾರೆ ಎಂಬ ಬಗ್ಗೆ ಮುಂಬೈನ ಸೆಂಟ್ಲರ್ ವೆಲ್ನೆಸ್‌ನ ಮನೋವಿಜ್ಞಾನಿ ಡಾ. ರಿಂಪಾ ಸರ್ಕಾರ್ ವಿವರಿಸಿದ್ದಾರೆ. "ಶ್ರೇಷ್ಠ ಕ್ರೀಡಾಪಟುಗಳು ಭೌತಿಕ ವಸ್ತುಗಳಿಗಿಂತ ಶಿಸ್ತು, ನಿರಂತರತೆ ಮತ್ತು ದೀರ್ಘಕಾಲೀನ ಗುರಿಗಳತ್ತ ಹೆಚ್ಚು ಗಮನ ಹರಿಸುತ್ತಾರೆ. ಕಠಿಣ ಪರಿಶ್ರಮವೇ ಅವರ ಅಸ್ತಿತ್ವವಾಗಿರುತ್ತದೆ. ಹೀಗಾಗಿ ಖ್ಯಾತಿ ಮತ್ತು ಹಣ ಸಿಕ್ಕ ಮೇಲೂ ಅವರು ತಮ್ಮ ಸರಳತೆಯನ್ನ ಕಳೆದುಕೊಳ್ಳುವುದಿಲ್ಲ" ಎಂದು ಅವರು ಹೇಳುತ್ತಾರೆ.

ತಮ್ಮ ಮೂಲ ಬೇರುಗಳೊಂದಿಗೆ ಮತ್ತು ಬೆಳೆದು ಬಂದ ಹಾದಿಯೊಂದಿಗೆ ಸಂಪರ್ಕದಲ್ಲಿರುವುದು ಕ್ರೀಡಾಪಟುಗಳಿಗೆ ಭಾವನಾತ್ಮಕ ಸ್ಥಿರತೆಯನ್ನ ನೀಡುತ್ತದೆ. ಇದು ಬಾಹ್ಯ ಯಶಸ್ಸಿನಿಂದ ಅಹಂಕಾರ ಬರದಂತೆ ತಡೆಯುತ್ತದೆ ಹಾಗೂ ಹಣ, ಐಷಾರಾಮಿ ಜೀವನದ ಪ್ರದರ್ಶನಕ್ಕಿಂತ ತಮ್ಮ ದೇಶವನ್ನ ಪ್ರತಿನಿಧಿಸುವುದರಲ್ಲೇ ಅವರಿಗೆ ನಿಜವಾದ ಖುಷಿ ಸಿಗುತ್ತದೆ ಎಂದು ಡಾ. ರಿಂಪಾ ವಿಶ್ಲೇಷಿಸಿದ್ದಾರೆ. ಮೀರಾಬಾಯಿ ಚಾನು ಅವರ ಜೀವನ ಶೈಲಿ ಈ ಮಾತಿಗೆ ಒಂದೊಳ್ಳೆ ಉದಾಹರಣೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+