ಕಾಲ್ ಇಲ್ಲ, ಮೆಸೇಜ್ ಇಲ್ಲ, ದಿಢೀರ್ ಲೇಆಫ್ ಮಾಡಿದ ಇನ್ನೋಡೇಟಾ: ಭಾರತದಲ್ಲಿ 550ಕ್ಕೂ ಹೆಚ್ಚು ಟೆಕ್ಕಿಗಳಿಗೆ ಗೇಟ್‌ಪಾಸ್
ನವದೆಹಲಿ/ಬೆಂಗಳೂರು: ಐಟಿ ವಲಯದಲ್ಲಿ ಉದ್ಯೋಗ ಕಡಿತದ ಪರ್ವ ಇನ್ನೂ ಮುಂದುವರಿದಿದೆ. ಸೋಮವಾರ ಬೆಳಿಗ್ಗೆ ಎಂದಿನಂತೆ ಕೆಲಸಕ್ಕೆ ಹಾಜರಾಗಿದ್ದ ನೂರಾರು ಟೆಕ್ಕಿಗಳಿಗೆ ಮಧ್ಯಾಹ್ನದ ವೇಳೆಗೆ ದೊಡ್ಡ ಶಾಕ್ ಕಾದಿತ್ತು.
ಅಮೆರಿಕ ಮೂಲದ ಡೇಟಾ ಇಂಜಿನಿಯರಿಂಗ್ ಮತ್ತು ಕೃತಕ ಬುದ್ಧಿಮತ್ತೆ (ಎಐ) ಸೇವಾ ಕಂಪನಿಯಾದ 'ಇನ್ನೋಡೇಟಾ' ಭಾರತದಲ್ಲಿ ಬರೋಬ್ಬರಿ 550ಕ್ಕೂ ಹೆಚ್ಚು ಉದ್ಯೋಗಿಗಳನ್ನು ದಿಢೀರ್ ಆಗಿ ಕೆಲಸದಿಂದ ವಜಾಗೊಳಿಸಿದೆ. ಭಾರತ ಮಾತ್ರವಲ್ಲದೆ ಫಿಲಿಪೈನ್ಸ್‌ನಲ್ಲೂ ಹಲವು ಉದ್ಯೋಗಿಗಳು ತಮ್ಮ ಕೆಲಸ ಕಳೆದುಕೊಂಡಿದ್ದಾರೆ.

ದಿಢೀರ್ ಇನ್ನೋಡೇಟಾ ಉದ್ಯೋಗ ಕಡಿತ: ಅಂದು ಕಚೇರಿಯಲ್ಲಿ ನಡೆದಿದ್ದೇನು?
ಅಕ್ಟೋಬರ್ 26ರ ಸೋಮವಾರ, ಉದ್ಯೋಗಿಗಳು ಎಂದಿನಂತೆ ಲಾಗ್ ಇನ್ ಆಗಿ ತಮ್ಮ ದೈನಂದಿನ ಕೆಲಸವನ್ನ ಆರಂಭಿಸಿದ್ದರು. ಆದರೆ, ಮಧ್ಯಾಹ್ನದ ಊಟದ ಸಮಯದ ಹೊತ್ತಿಗೆ ಕಂಪನಿಯಲ್ಲಿ ಉದ್ಯೋಗ ಕಡಿತದ ವದಂತಿಗಳು ಹರಡಲು ಆರಂಭಿಸಿದವು. ಇದು ಕೇವಲ ವದಂತಿಯಲ್ಲ, ನಿಜ ಎಂಬುದು ತಿಳಿಯುವಷ್ಟರಲ್ಲಿ ಉದ್ಯೋಗಿಗಳ ಅಧಿಕೃತ ಲ್ಯಾಪ್‌ಟಾಪ್‌ಗಳು ಮತ್ತು ಸಿಸ್ಟಮ್‌ಗಳ ಆಕ್ಸೆಸ್ ಕಡಿತಗೊಂಡಿತ್ತು.
"ಒಬ್ಬೊಬ್ಬರಾಗಿ ನಮ್ಮ ಅಧಿಕೃತ ಸಾಧನಗಳ ಸಂಪರ್ಕವನ್ನು ಕಳೆದುಕೊಂಡೆವು. ಲ್ಯಾಪ್‌ಟಾಪ್‌ಗಳು ತಾನಾಗಿಯೇ ಲಾಗ್ ಔಟ್ ಆದವು ಮತ್ತು ಅಧಿಕೃತ ಐಡಿಗಳನ್ನು ನಿಷ್ಕ್ರಿಯಗೊಳಿಸಲಾಯಿತು" ಎಂದು ದೆಹಲಿ ಮೂಲದ 28 ವರ್ಷದ ಎಂಜಿನಿಯರ್ ಒಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸಿಸ್ಟಮ್ ಲಾಗ್ ಔಟ್: ಐಟಿ ವಲಯದ ಆತಂಕ ಹೆಚ್ಚಿಸಿದ ಟರ್ಮಿನೇಷನ್ ಇಮೇಲ್
ಕೆಲಸ ಕಳೆದುಕೊಂಡ ಆತಂಕದಲ್ಲಿ ಉದ್ಯೋಗಿಗಳು ತಮ್ಮ ಹೆಚ್‌ಆರ್ ತಂಡವನ್ನು ಸಂಪರ್ಕಿಸಲು ಮುಂದಾದರು. ಆದರೆ, ಪೇರೋಲ್ ಆ್ಯಪ್ ಸೇರಿದಂತೆ ಯಾವುದೇ ಅಧಿಕೃತ ದಾಖಲೆಗಳನ್ನು ಅಥವಾ ಪೇಸ್ಲಿಪ್ ಡೌನ್‌ಲೋಡ್ ಮಾಡಲು ಸಾಧ್ಯವಾಗದಂತೆ ಆಕ್ಸೆಸ್ ಹಿಂಪಡೆಯಲಾಗಿತ್ತು. ಸಂಜೆಯ ವೇಳೆಗೆ ಉದ್ಯೋಗಿಗಳ ವೈಯಕ್ತಿಕ ಇಮೇಲ್ ಐಡಿಗಳಿಗೆ ಟರ್ಮಿನೇಷನ್ ಲೆಟರ್ ರವಾನೆಯಾಗಿದೆ.
ಯಾವುದೇ ಮುನ್ಸೂಚನೆ ಇಲ್ಲದೆ ನಡೆದ ಈ ಬೆಳವಣಿಗೆಯಿಂದ ಕಂಗಾಲಾದ ಉದ್ಯೋಗಿಗಳು, ವಾಟ್ಸಾಪ್ ಗ್ರೂಪ್ ರಚಿಸಿಕೊಂಡು ತಮ್ಮ ಸಹೋದ್ಯೋಗಿಗಳನ್ನು ಸಂಪರ್ಕಿಸಲು ಯತ್ನಿಸಿದ್ದಾರೆ. ರಾತ್ರಿಯ ಹೊತ್ತಿಗೆ ಆ ಗ್ರೂಪ್‌ನಲ್ಲಿ ಸುಮಾರು 500ಕ್ಕೂ ಹೆಚ್ಚು ಮಂದಿ ಸೇರಿದ್ದು, ಎಲ್ಲರೂ ಭವಿಷ್ಯದ ಬಗ್ಗೆ ಆತಂಕಕ್ಕೊಳಗಾಗಿದ್ದಾರೆ.
ಕ್ಲೈಂಟ್ ಪ್ರಾಜೆಕ್ಟ್ ರದ್ದತಿ: ವಜಾಗೊಳಿಸಲು ಕಂಪನಿ ನೀಡಿದ ಕಾರಣವೇನು?
ಉದ್ಯೋಗಿಗಳಿಗೆ ಕಳುಹಿಸಲಾದ ಇಮೇಲ್‌ನಲ್ಲಿ, "ನಿಮ್ಮ ವೈಯಕ್ತಿಕ ಕಾರ್ಯಕ್ಷಮತೆಯ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಂಡಿಲ್ಲ. ಬದಲಾಗಿ, ಕಂಪನಿಯ ವ್ಯವಹಾರ ಮತ್ತು ಕಾರ್ಯಾಚರಣೆಯ ಅಗತ್ಯತೆಗಳ ಮೇರೆಗೆ, ನೀವು ಕೆಲಸ ಮಾಡುತ್ತಿದ್ದ ನಿರ್ದಿಷ್ಟ ಪ್ರಾಜೆಕ್ಟ್ (MUPSL ಪ್ರಾಜೆಕ್ಟ್) ಕಡಿಮೆಯಾದ ಕಾರಣ ನಿಮ್ಮ ಸೇವೆಯನ್ನು ಅಕ್ಟೋಬರ್ 26, 2026 ರಿಂದ ಅನ್ವಯವಾಗುವಂತೆ ಕೊನೆಗೊಳಿಸಲಾಗುತ್ತಿದೆ" ಎಂದು ತಿಳಿಸಲಾಗಿದೆ.
ಇನ್ನು, ಉದ್ಯೋಗಿಗಳ ಅಂತಿಮ ಸೆಟ್ಲಮೆಂಟ್ ಮೊತ್ತವನ್ನ ಡಿಮ್ಯಾಂಡ್ ಡ್ರಾಫ್ಟ್ (DD) ಮೂಲಕ ಸಿದ್ಧಪಡಿಸಲಾಗಿದೆ. ಕಂಪನಿಯು ನೀಡಿದ್ದ ಲ್ಯಾಪ್‌ಟಾಪ್ ಸೇರಿದಂತೆ ಇತರ ಅಧಿಕೃತ ವಸ್ತುಗಳನ್ನು ಹಿಂದಿರುಗಿಸಿದ ಬಳಿಕ ಒರಿಜಿನಲ್ ಡಿಡಿಯನ್ನ ಹಸ್ತಾಂತರಿಸುವುದಾಗಿ ಕಂಪನಿ ಹೇಳಿದೆ.
ಭಾರತ ಮಾತ್ರವಲ್ಲ, ಫಿಲಿಪೈನ್ಸ್‌ನಲ್ಲೂ ಟೆಕ್ ಕಂಪನಿಗಳ ಲೇಆಫ್ ಬಿಸಿ
ಈ ಉದ್ಯೋಗ ಕಡಿತ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಫಿಲಿಪೈನ್ಸ್‌ನಲ್ಲಿರುವ ಇನ್ನೋಡೇಟಾ ತಂಡದ ಸದಸ್ಯರನ್ನು ಝೂಮ್ ಕರೆ ಮೂಲಕ ವಜಾಗೊಳಿಸಲಾಗಿದೆ ಎಂದು ವರದಿಯಾಗಿದೆ. ರೆಡಿಟ್ ಪೋಸ್ಟ್‌ಗಳಲ್ಲಿ ಹಲವು ಉದ್ಯೋಗಿಗಳು ಈ ಬಗ್ಗೆ ಬರೆದುಕೊಂಡಿದ್ದು, ಕ್ಲೈಂಟ್ ಕಡೆಯಿಂದ ಸೇವೆಗಳ ಬೇಡಿಕೆ ಕಡಿಮೆಯಾದ ಕಾರಣ ಈ ಲೇಆಫ್ ನಡೆದಿದೆ ಎಂದು ಹೇಳಿಕೊಂಡಿದ್ದಾರೆ.
1988ರಲ್ಲಿ ಸ್ಥಾಪನೆಯಾದ ಇನ್ನೋಡೇಟಾ, ಗೂಗಲ್, ಮೈಕ್ರೋಸಾಫ್ಟ್, ಆಪಲ್, ಅಮೆಜಾನ್‌ನಂತಹ ದೈತ್ಯ ಕಂಪನಿಗಳಿಗೆ ಎಐ ಸೇವೆಗಳನ್ನು ಒದಗಿಸುತ್ತಿದ್ದು, ಜಾಗತಿಕವಾಗಿ 10,000ಕ್ಕೂ ಹೆಚ್ಚು ಉದ್ಯೋಗಿಗಳನ್ನ ಹೊಂದಿದೆ. ಇತ್ತೀಚೆಗೆ ಮೈಕ್ರೋಸಾಫ್ಟ್ ಕೂಡ ಸ್ವಯಂಪ್ರೇರಿತ ನಿರ್ಗಮನದ ಆಫರ್ ನೀಡಿದ್ದು, ಟೆಕ್ ವಲಯದಲ್ಲಿ ಪ್ರಾಜೆಕ್ಟ್‌ಗಳ ಕೊರತೆ ಹಾಗೂ ಉದ್ಯೋಗದ ಅಭದ್ರತೆ ಮತ್ತೆ ಮುನ್ನೆಲೆಗೆ ಬಂದಿದೆ.


Click it and Unblock the Notifications
