ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಯೋಜನೆಯಲ್ಲಿ ಮಹಿಳೆ
ಭಾರತ ಗುರಿ ಇರಿಸಿಕೊಂಡಿರುವ ಮಾನವ ಸಹಿತ ಬಾಹ್ಯಾಕಾಶ ಯೋಜನೆಯಲ್ಲಿ ಮಹಿಳಾ ಗಗನಯಾತ್ರಿಯೊಬ್ಬರು ಇರುವ ಸಾಧ್ಯತೆ ಇದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶುಕ್ರವಾರ ಹೇಳಿದೆ.
ಯೋಜನೆ ಬಗ್ಗೆ ಇಸ್ರೋ ಮುಖ್ಯಸ್ಥರಾದ ಕೆ.ಶಿವನ್ ಮಾತನಾಡಿ, ಮೊದಲಿಗೆ ಡಿಸೆಂಬರ್ 2020 ಹಾಗೂ ಜುಲೈ 2021ಕ್ಕೆ ಹೀಗೆ ಎರಡು ಮಾನವರಹಿತ ಬಾಹ್ಯಾಕಾಶ ಯೋಜನೆ ಹಾಕಿಕೊಂಡಿದ್ದೇವೆ. ಆರಂಭದ ಗಗನಯಾನದ ತರಬೇತಿ ಭಾರತದಲ್ಲಿ ನೀಡಲಾಗುತ್ತದೆ. ಆ ನಂತರ ಹೆಚ್ಚುವರಿ ತರಬೇತಿ ರಷ್ಯಾದಲ್ಲಿ ಸಿಗಬಹುದು. ತಂಡದಲ್ಲಿ ಮಹಿಳಾ ಗಗನ ಯಾತ್ರಿ ಇರಲಿದ್ದಾರೆ ಎಂದು ಅವರು ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್ ಐ ವರದಿ ಮಾಡಿದೆ.
ಕಳೆದ ವರ್ಷ ಸ್ವಾತಂತ್ರ್ಯೋತ್ಸವ ಭಾಷಣ ಮಾಡುವ ವೇಳೆ, ಭಾರತವು ಮಾನವಸಹಿತ ಬಾಹ್ಯಾಕಾಶ ಯೋಜನೆ ಕೈಗೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದರು. 2022ನೇ ಇಸವಿಗೆ, ದೇಶ ಸ್ವತಂತ್ರಗೊಂಡು 75 ವರ್ಷ ಪೂರೈಸುವ ಸಂದರ್ಭದಲ್ಲಿ ಗಗನಯಾನ್ ಕೈಗೊಳ್ಳಲಾಗುವುದು. ಭಾರತದ ಮಗ ಅಥವಾ ಮಗಳು ಈ ಯಾನದಲ್ಲಿ ತ್ರಿವರ್ಣ ಧ್ವಜ ತೆಗೆದುಕೊಂಡು ಹೋಗಲಿದ್ದಾರೆ ಎಂದಿದ್ದರು.

ಶಿವನ್ ಹೇಳುವ ಪ್ರಕಾರ, ಪುರುಷ ಹಾಗೂ ಮಹಿಳೆ ಇಬ್ಬರೂ ಈ ಯೋಜನೆಯಲ್ಲಿ ಭಾಗಿಯಾಗಲಿದ್ದಾರೆ. ಈ ಗಗನಯಾನವು ದೇಶಿ ನಿರ್ಮಿತ ಬಾಹ್ಯಾಕಾಶ ನೌಕೆಯಲ್ಲಿ ಕೈಗೊಳ್ಳಲಾಗುವುದು. ಮೂವರು ಇದರಲ್ಲಿ ಇರಲಿದ್ದಾರೆ. ಕನಿಷ್ಠ ಏಳು ದಿನಗಳ ಕಾಲ ಬಾಹ್ಯಾಕಾಶದಲ್ಲಿ ಕಳೆಯುವ ಈ ಯೋಜನೆಗೆ ಹತ್ತು ಸಾವಿರ ಕೋಟಿ ವೆಚ್ಚವಾಗಲಿದೆ.
ನಾವು ಈ ಹಿಂದೆ ಇರಿಸಿಕೊಂಡಿದ್ದ ಗುರಿಯನ್ನು ಮುಂಚಿತವಾಗಿ ಹಾಕಿಕೊಳ್ಳಲಾಗಿದೆ. ಆದ್ದರಿಂದ ಎಂಥದ್ದೇ ಸನ್ನಿವೇಶದಲ್ಲಿ ಪ್ರಧಾನಿ ಅವರ ಗುರಿಗಿಂತ ಮುಂಚಿತವಾಗಿ ತಲುಪಲು ಪ್ರಯತ್ನ ಪಡುತ್ತೇವೆ ಎಂದು ಶಿವನ್ ಹೇಳಿದ್ದಾರೆ. ಮೊದಲ ಬಾರಿಗೆ ಮಾನವ ಸಹಿತ ಯಾನ ಕೈಗೊಳ್ಳುತ್ತಿರುವುದರಿಂದ ಆಯ್ಕೆ ಮಾನದಂಡಗಳು ಕಠಿಣವಾಗಿರುತ್ತವೆ. ಆ ನಂತರ ಎರಡು-ಮೂರನೇ ಬಾರಿಗೆ ಸಾಮಾನ್ಯರಿಗೂ ಅವಕಾಶ ದೊರೆಯಬಹುದು ಎಂದಿದ್ದಾರೆ.
ಭಾರತೀಯ ವಾಯು ಸೇನೆಯವರು ಇರ್ತಾರೆ. ನಾಗರಿಕರು ಇರುತ್ತಾರೆ. ನಿಗದಿತ ಮಾನದಂಡವನ್ನು ಪೂರೈಸುವುದಾದರೆ ಅಂಥವರನ್ನು ಆಯ್ಕೆ ಮಾಡಲಾಗುವುದು. ಆಯ್ಕೆ ಸಮಿತಿಯು ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಅಂದಹಾಗೆ ಮಾನವಸಹಿತ ಬಾಹ್ಯಾಕಾಶ ಯಾನ ಮಾಡುತ್ತಿರುವ ನಾಲ್ಕನೇ ದೇಶ ಭಾರತ. ಇದಕ್ಕೂ ಮುನ್ನ ಯುಎಸ್ ಎಸ್ ಆರ್, ಅಮೆರಿಕ ಹಾಗೂ ಚೀನಾ ಆ ಸಾಧನೆ ಮಾಡಿವೆ.
ಡೆನ್ಮಾರ್ಕ್ ಕೂಡ 2022ರಲ್ಲಿ ಮಾನವಸಹಿತ ಬಾಹ್ಯಾಕಾಶ ಯಾನದ ಯೋಜನೆ ಇಟ್ಟುಕೊಂಡಿದೆ. ಹತ್ತು ವರ್ಷಗಳ ಹಿಂದೆ ಭಾರತವು ಚಂದ್ರಯಾನ್ -1, ಮಾರ್ಸ್ ಆರ್ಬಿಟರ್ ಮಿಷನ್ (ಮಾಮ್) ಹಾಗೂ ಮಂಗಳ್ ಯಾನ್ (ಸೆಪ್ಟೆಂಬರ್ 2014) ಕೈಗೊಂಡ ನಂತರದ ಮಹತ್ವದ ಹೆಜ್ಜೆ ಇದಾಗಿದೆ. ಈಗಾಗಲೇ ಕೇಂದ್ರ ಸಚಿವ ಸಂಪುಟ ಗಗನ್ ಯಾನ್ ಗೆ ಒಪ್ಪಿಗೆ ನೀಡಿದೆ.












Click it and Unblock the Notifications