MBBS, PhD ಓದಿದ್ದರೂ ಲಂಡನ್ ಉದ್ಯೋಗ ಬಿಟ್ಟು ಹಳ್ಳಿಯಲ್ಲಿ ಕೃಷಿ, ಮಡಿಕೆ ಮಾಡುತ್ತಿರುವ ಮಹಿಳೆ
ಜೀವನದಲ್ಲಿ ಯಶಸ್ಸು ಎಂದರೆ ಕೇವಲ ಕೈತುಂಬಾ ಸಂಬಳ, ದೊಡ್ಡ ಹುದ್ದೆ ಅಥವಾ ವಿದೇಶದಲ್ಲಿ ನೆಲೆಸುವುದು ಮಾತ್ರವೇ? ಇತ್ತೀಚಿನ ದಿನಗಳಲ್ಲಿ ಯಶಸ್ಸಿನ ಈ ಡೆಫಿನೇಶನ್ ಬದಲಾಗುತ್ತಿವೆ. ಇದಕ್ಕೆ ಒಂದೊಳ್ಳೆ ಉದಾಹರಣೆ ಎಂಬಂತೆ, ಎಂಬಿಬಿಎಸ್, ಎಂಎಸ್‌ಸಿ ಮತ್ತು ಪಿಎಚ್‌ಡಿಯಂತಹ ಉನ್ನತ ಪದವಿಗಳನ್ನ ಪಡೆದರೂ, ಲಂಡನ್‌ನ ಪ್ರತಿಷ್ಠಿತ ಉದ್ಯೋಗವನ್ನ ಬಿಟ್ಟು ಭಾರತದ ಹಳ್ಳಿಯೊಂದರಲ್ಲಿ ಕೃಷಿ ಮಾಡುತ್ತಿರುವ ಮಹಿಳೆಯೊಬ್ಬರ ಕಥೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
'ಅಂಕಲ್ ಜೇ' ಎಂಬ ಎಕ್ಸ್ ಬಳಕೆದಾರರು ಹಂಚಿಕೊಂಡಿರುವ ಈ ಪೋಸ್ಟ್, ನೆಮ್ಮದಿ ಮತ್ತು ಯಶಸ್ಸಿನ ನಡುವಿನ ವ್ಯತ್ಯಾಸದ ಬಗ್ಗೆ ಬಿಸಿಬಿಸಿ ಚರ್ಚೆ ಹುಟ್ಟುಹಾಕಿದೆ.

ಉನ್ನತ ವ್ಯಾಸಂಗದ ಬಳಿಕ ಲಂಡನ್ ಉದ್ಯೋಗ ತೊರೆದು ಕೃಷಿಯತ್ತ ಒಲವು
ಸಾಮಾನ್ಯವಾಗಿ ಎಂಬಿಬಿಎಸ್ ಮುಗಿಸಿದವರು ದೊಡ್ಡ ಆಸ್ಪತ್ರೆಗಳಲ್ಲಿ ಡಾಕ್ಟರ್ ಆಗಿ ಸೇವೆ ಸಲ್ಲಿಸಲು ಬಯಸುತ್ತಾರೆ. ಅದರಲ್ಲೂ ಪಿಎಚ್‌ಡಿಯಂತಹ ಉನ್ನತ ವ್ಯಾಸಂಗ ಮಾಡಿದವರಿಗೆ ವಿದೇಶದಲ್ಲಿ ಹಲವು ಅವಕಾಶಗಳಿರುತ್ತವೆ. ಆದರೆ, ಈ ಮಹಿಳೆ ಲಂಡನ್‌ನಲ್ಲಿದ್ದ ಅತ್ಯುತ್ತಮ ಕೆರಿಯರ್ ಅನ್ನು ಬಿಟ್ಟು, ಭಾರತದಲ್ಲಿರುವ ತಮ್ಮ ಹಳ್ಳಿಗೆ ಮರಳಿದ್ದಾರೆ.
ಹೌದು, ಕಾರ್ಪೊರೇಟ್ ಜಗತ್ತಿನ ಒತ್ತಡದ ಬದುಕಿನಿಂದ ದೂರವಾಗಿರುವ ಇವರು, ಪ್ರಸ್ತುತ ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಕೇವಲ ಕೃಷಿ ಮಾತ್ರವಲ್ಲದೆ, ಮಡಿಕೆ ಮಾಡುವುದು, ಹಾಡುಗಾರಿಕೆ ಮತ್ತು ಬರವಣಿಗೆಯಂತಹ ತಮ್ಮ ನೆಚ್ಚಿನ ಹವ್ಯಾಸಗಳಿಗೂ ಸಮಯ ಮೀಸಲಿಡುತ್ತಿದ್ದಾರೆ.
ಅಂಕಲ್ ಜೇ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿರುವಂತೆ, ಕಾರ್ಪೊರೇಟ್ ಜಗತ್ತಿನಿಂದ ಹೊರಬಂದ ನಂತರ ಈ ಮಹಿಳೆ "ಶೇಕಡಾ 1000ರಷ್ಟು ಹೆಚ್ಚು ಸಂತೋಷವಾಗಿದ್ದಾರೆ."
ಯಶಸ್ಸಿನ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮದೇ ಆದ ಅಭಿಪ್ರಾಯಗಳನ್ನ ಹಂಚಿಕೊಳ್ಳುತ್ತಿದ್ದಾರೆ. ಅನೇಕರು ಈ ಮಹಿಳೆಯ ನಿರ್ಧಾರವನ್ನು ಹೊಗಳಿದ್ದಾರೆ. ಜೀವನದಲ್ಲಿ ವೃತ್ತಿಪರ ಯಶಸ್ಸು ಅಥವಾ ಆದಾಯಕ್ಕಿಂತ ಮಾನಸಿಕ ನೆಮ್ಮದಿ ಮತ್ತು ವೈಯಕ್ತಿಕ ತೃಪ್ತಿ ಮುಖ್ಯ ಎಂಬುದನ್ನ ಈ ಘಟನೆ ಸಾಬೀತುಪಡಿಸಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
My friend left the rat race in London and went back to her village in India. With her MBBS, MSc and a PhD. She's now on a farm, doing pottery, writing, singing etc
— Uncle Jay (@Jaybaba_) September 27, 2026
She looks 1000% happier
ಬ್ರಿಟನ್ ಅಥವಾ ಬೇರೆ ಯಾವುದೇ ದೇಶದಲ್ಲಿ ಕೈತುಂಬಾ ಸಂಬಳವಿದ್ದರೂ, ಒತ್ತಡದ ಜೀವನ ಬೇಡವೆಂದು ಭಾರತ, ಚೀನಾ ಸೇರಿದಂತೆ ತಮ್ಮ ತಾಯ್ನಾಡಿಗೆ ಮರಳಿ ಸರಳ ಜೀವನ ನಡೆಸುತ್ತಿರುವ ಅನೇಕ ವೃತ್ತಿಪರರ ಉದಾಹರಣೆಗಳನ್ನ ನೆಟ್ಟಿಗರು ಕಾಮೆಂಟ್ ಬಾಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
ವೈದ್ಯಕೀಯ ಸೀಟು ಪೋಲು: ಪರ ವಿರೋಧದ ಕಾಮೆಂಟ್‌ಗಳು
ಎಲ್ಲರೂ ಈ ಸ್ಟೋರಿಯನ್ನ ಸಕಾರಾತ್ಮಕವಾಗಿ ತೆಗೆದುಕೊಂಡಿಲ್ಲ ನೋಡಿ. ಲಂಡನ್ ಬಿಟ್ಟು ಭಾರತದ ಹಳ್ಳಿಗೆ ಬಂದರೆ ಒತ್ತಡ ರಹಿತ ಜೀವನ ಸಿಗುತ್ತದೆ ಎಂಬ ವಾದವನ್ನ ಕೆಲವರು ತಳ್ಳಿಹಾಕಿದ್ದಾರೆ. ಭಾರತದ ಹಳ್ಳಿಗಳ ಜನಸಂಖ್ಯೆಯು ಬ್ರಿಟನ್‌ನ ಸಣ್ಣ ಪಟ್ಟಣಗಳ ಜನಸಂಖ್ಯೆಗಿಂತ ಹೆಚ್ಚಿರುತ್ತದೆ. ಜೊತೆಗೆ ಭಾರತದಲ್ಲಿಯೂ ಪೈಪೋಟಿ ಮತ್ತು ಸವಾಲುಗಳು ಸಾಕಷ್ಟಿವೆ ಎಂದು ಕೆಲವರು ವಾದಿಸಿದ್ದಾರೆ.
ಇದರ ಜೊತೆಗೆ ಮತ್ತೊಂದು ಪ್ರಮುಖ ಟೀಕೆಯೂ ವ್ಯಕ್ತವಾಗಿದೆ. ವೈದ್ಯಕೀಯ ಸೀಟು ಪಡೆಯುವುದು ಅತ್ಯಂತ ಕಷ್ಟ ಮತ್ತು ಸ್ಪರ್ಧಾತ್ಮಕ ವಿಚಾರ. ಲಕ್ಷಾಂತರ ವಿದ್ಯಾರ್ಥಿಗಳು ವೈದ್ಯರಾಗುವ ಕನಸು ಕಾಣುತ್ತಿರುತ್ತಾರೆ. ಹೀಗಿರುವಾಗ, ಕಷ್ಟಪಟ್ಟು ಸೀಟು ಪಡೆದು, ಓದಿ, ನಂತರ ಆ ವೃತ್ತಿಯನ್ನೇ ಕೈಬಿಡುವುದು ಎಷ್ಟರ ಮಟ್ಟಿಗೆ ಸರಿ? ವೃತ್ತಿಪರ ಕೋರ್ಸ್‌ಗಳಿಗೆ ಸೇರುವವರು ಆ ಕ್ಷೇತ್ರದ ಬಗ್ಗೆ ಬದ್ಧತೆ ಇರಬೇಕು, ಇಲ್ಲವಾದಲ್ಲಿ ಅರ್ಹ ವಿದ್ಯಾರ್ಥಿಯೊಬ್ಬರ ಸೀಟು ಪೋಲು ಮಾಡಿದಂತಾಗುತ್ತದೆ ಎಂದು ಒಂದು ವರ್ಗದ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


Click it and Unblock the Notifications
