ಜಪಾನ್ ವಾಶ್‌ರೂಮ್‌ನಲ್ಲಿ ಮೇಕಪ್ ಕೌಂಟರ್ ಕಂಡು ದಂಗಾದ ಭಾರತದ ಮಹಿಳೆ: ಮಹಿಳೆಯರಿಗಾಗಿ ಇಷ್ಟೆಲ್ಲಾ ಯೋಚಿಸ್ತಾರಾ ಎಂದ ನೆಟ್ಟಿಗರು
ಜಪಾನ್ ದೇಶವು ತನ್ನ ಅತ್ಯಾಧುನಿಕ ತಂತ್ರಜ್ಞಾನ, ಸ್ವಚ್ಛತೆ ಹಾಗೂ ಶಿಸ್ತಿಗೆ ವಿಶ್ವಾದ್ಯಂತ ಹೆಸರುವಾಸಿಯಲ್ಲವೇ?. ಇದೀಗ ಜಪಾನ್‌ನ ಮತ್ತೊಂದು ಅದ್ಭುತ ವ್ಯವಸ್ಥೆಯೊಂದು ಇಂಟರ್ನೆಟ್‌ನಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಜಪಾನ್‌ನಲ್ಲಿ ವಾಸಿಸುತ್ತಿರುವ ಭಾರತೀಯ ಮಹಿಳೆಯೊಬ್ಬರು ಅಲ್ಲಿನ ಸಾರ್ವಜನಿಕ ಶೌಚಾಲಯಗಳ ಬಗ್ಗೆ ಹಂಚಿಕೊಂಡಿರುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಜನರ ಗಮನ ಸೆಳೆದಿದೆ.
ಅಂಕಿತಾ ಸೆಹಗಲ್ ಎಂಬ ಭಾರತೀಯ ಮಹಿಳೆ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ಜಪಾನ್‌ನ ವಾಶ್‌ರೂಮ್‌ಗಳಲ್ಲಿ ಮಹಿಳೆಯರು, ತಾಯಂದಿರು ಹಾಗೂ ಮಕ್ಕಳ ಅನುಕೂಲಕ್ಕಾಗಿ ಮಾಡಿರುವ ವಿಶೇಷ ವ್ಯವಸ್ಥೆಗಳನ್ನ ಕಂಡು ಅವರು ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ. ಜಪಾನ್‌ನ ಸಾರ್ವಜನಿಕ ಶೌಚಾಲಯಗಳು ಕೇವಲ ಸ್ವಚ್ಛತೆಗೆ ಮಾತ್ರ ಸೀಮಿತವಾಗಿಲ್ಲ,. ಬದಲಿಗೆ ನಾಗರಿಕರ ಸಣ್ಣ ಸಣ್ಣ ಅಗತ್ಯಗಳಿಗೂ ಎಷ್ಟು ಪ್ರಾಮುಖ್ಯತೆ ನೀಡುತ್ತವೆ ಎಂಬುದನ್ನ ಈ ವಿಡಿಯೋ ಜಗತ್ತಿಗೆ ಪರಿಚಯಿಸಿದೆ.

ಮಹಿಳಾ ಸ್ನೇಹಿ ಶೌಚಾಲಯಗಳಲ್ಲಿ ಪ್ರತ್ಯೇಕ ಮೇಕಪ್ ಕೌಂಟರ್‌ಗಳು
ಅಂಕಿತಾ ಅವರು ತಮ್ಮ ವಿಡಿಯೋದಲ್ಲಿ, ಜಪಾನ್‌ನ ಶೌಚಾಲಯಗಳಿಗೆ ನೀಡಲಾಗುವ ಗೌರವವನ್ನ ಕಂಡು ತಾವು ಭಾವುಕರಾಗುವುದಾಗಿ ಹೇಳಿಕೊಂಡಿದ್ದಾರೆ. "ನಾನು ಜಪಾನ್‌ನಲ್ಲಿದ್ದೇನೆ, ಇಲ್ಲಿನ ಜನರು ಶೌಚಾಲಯಗಳಿಗೆ ಎಷ್ಟು ಪ್ರಾಮುಖ್ಯತೆ ನೀಡುತ್ತಾರೆ ಎಂದರೆ, ಪ್ರತಿ ಬಾರಿ ನಾನು ವಾಶ್‌ರೂಮ್ ಪ್ರವೇಶಿಸಿದಾಗಲೂ ನನಗೆ ಆಶ್ಚರ್ಯವಾಗುತ್ತದೆ.
ಶೌಚಾಲಯವು ಎಷ್ಟೇ ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ, ಪ್ರತಿಯೊಂದರಲ್ಲೂ ಮೇಕಪ್ ಮಾಡಿಕೊಳ್ಳಲು ಪ್ರತ್ಯೇಕ ಕೌಂಟರ್‌ಗಳಿರುತ್ತವೆ. ಮಹಿಳೆಯರ ಖಾಸಗಿತನ ಹಾಗೂ ಸೌಕರ್ಯಕ್ಕೆ ಇಲ್ಲಿ ಅಪಾರ ಬೆಲೆ ನೀಡಲಾಗಿದೆ" ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ತಾಯಂದಿರು ಮತ್ತು ಮಕ್ಕಳಿಗಾಗಿ ಸೌಲಭ್ಯಗಳು
ಮಹಿಳೆಯರು ತಮ್ಮ ಸಣ್ಣ ಮಕ್ಕಳೊಂದಿಗೆ ಸಾರ್ವಜನಿಕ ಶೌಚಾಲಯಗಳನ್ನ ಬಳಸುವುದು ದೊಡ್ಡ ಸವಾಲಿನ ಕೆಲಸ. ಆದರೆ ಜಪಾನ್‌ನ ಮಹಿಳಾ ಸ್ನೇಹಿ ಶೌಚಾಲಯಗಳಲ್ಲಿ ಈ ಸಮಸ್ಯೆಗೆ ಅದ್ಭುತ ಪರಿಹಾರ ಒದಗಿಸಲಾಗಿದೆ.
ತಾಯಂದಿರು ಶೌಚಾಲಯ ಬಳಸುವಾಗ ಅವರ ಮಕ್ಕಳು ಸುರಕ್ಷಿತವಾಗಿ ಕುಳಿತುಕೊಳ್ಳಲು ವಾಶ್‌ರೂಮ್ ಒಳಗಡೆಯೇ ಗೋಡೆಗೆ ಲಗತ್ತಿಸಿದ ಸಣ್ಣ ಆಸನದ (ಚೈಲ್ಡ್ ಸೀಟ್) ವ್ಯವಸ್ಥೆ ಮಾಡಲಾಗಿದೆ. ಈ ಉಪಯುಕ್ತವಾದ ಸೌಲಭ್ಯವು ಎಲ್ಲರ ಮನಗೆದ್ದಿದೆ.
ಅಚ್ಚರಿ ಮೂಡಿಸಿದ ನೆಲದ ಮೇಲಿನ 'ಬಟ್ಟೆ ಬದಲಾಯಿಸುವ ಬೋರ್ಡ್'
ವಿಡಿಯೋದಲ್ಲಿ ಅತಿ ಹೆಚ್ಚು ಗಮನ ಸೆಳೆದ ಮತ್ತೊಂದು ವಿಚಾರವೆಂದರೆ ಶೌಚಾಲಯದ ನೆಲದ ಮೇಲೆ ಅಳವಡಿಸಲಾಗಿದ್ದ ಫೋಲ್ಡಿಂಗ್ ಬೋರ್ಡ್. ಇದನ್ನು ನೋಡಿದಾಗ ಆರಂಭದಲ್ಲಿ ಅಂಕಿತಾ ಅವರಿಗೆ, ಇದು ಬಹುಶಃ ಸಣ್ಣ ಮಕ್ಕಳ ಡೈಪರ್ ಬದಲಾಯಿಸಲು ಮಾಡಿರುವ ವ್ಯವಸ್ಥೆ ಇರಬಹುದು ಎನಿಸಿತ್ತು.
ಆದರೆ ನಂತರ ಅದರ ಅಸಲಿ ಉಪಯೋಗ ತಿಳಿದು ಅವರು ದಂಗಾಗಿದ್ದಾರೆ. "ಶೌಚಾಲಯದ ಒದ್ದೆಯಾದ ಅಥವಾ ಕೊಳೆಯಾದ ನೆಲದ ಮೇಲೆ ಕಾಲಿಡುವ ಅಗತ್ಯವಿಲ್ಲದೆ ಬಟ್ಟೆ ಬದಲಾಯಿಸಲು ಈ ಬೋರ್ಡ್ ಅನ್ನು ನೀಡಲಾಗಿದೆ. ಬೋರ್ಡ್ ಅನ್ನು ಕೆಳಗೆ ಇಳಿಸಿ, ಅದರ ಮೇಲೆ ನಿಂತು ಸುಲಭವಾಗಿ ಬಟ್ಟೆಗಳನ್ನು ಬದಲಾಯಿಸಬಹುದು" ಎಂದು ಅವರು ವಿವರಿಸಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ
"ಒಂದು ದೇಶವು ತನ್ನ ನಾಗರಿಕರ ಬಗ್ಗೆ, ಅದರಲ್ಲೂ ವಿಶೇಷವಾಗಿ ಮಹಿಳಾ ನಾಗರಿಕರ ಬಗ್ಗೆ ಇಷ್ಟೊಂದು ಆಳವಾಗಿ ಯೋಚಿಸಲು ಹೇಗೆ ಸಾಧ್ಯ? ನಮ್ಮಲ್ಲಿ ಇಂತಹ ಸೌಲಭ್ಯಗಳ ಅಭ್ಯಾಸವಿಲ್ಲ" ಎಂದು ಅಂಕಿತಾ ತಮ್ಮ ಬೆರಗನ್ನು ವ್ಯಕ್ತಪಡಿಸಿದ್ದಾರೆ. ಈ ವಿಡಿಯೋಗೆ ನೆಟ್ಟಿಗರಿಂದ ಭಾರೀ ಮೆಚ್ಚುಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಸೋಶಿಯಲ್ ಮೀಡಿಯಾ ಬಳಕೆದಾರರು "ಜಪಾನ್ ನಿಜಕ್ಕೂ ಪ್ರತಿಯೊಂದರ ಬಗ್ಗೆಯೂ ಸೂಕ್ಷ್ಮವಾಗಿ ಯೋಚಿಸುತ್ತದೆ", "ಇದು ಅತ್ಯಂತ ಅರ್ಥಪೂರ್ಣವಾದ ವ್ಯವಸ್ಥೆ", "ಎಲ್ಲಾ ದೇಶಗಳಲ್ಲೂ ಸಾರ್ವಜನಿಕ ಶೌಚಾಲಯಗಳು ಇದೇ ರೀತಿ ಇರಬೇಕು" ಎಂದು ಕಾಮೆಂಟ್ ಮಾಡುವ ಮೂಲಕ ಜಪಾನ್‌ನ ಈ ನಾಗರಿಕ ಸ್ನೇಹಿ ನಿಲುವನ್ನು ಕೊಂಡಾಡಿದ್ದಾರೆ.


Click it and Unblock the Notifications
