Rail: ಸ್ವದೇಶಿ LHB ಕೋಚ್ ಉತ್ಪಾದನೆಗೆ ಒತ್ತು, 2500 ಬೋಗಿಗಳ ತಯಾರಿಕೆ ಎಲ್ಲೆಲ್ಲಿ?, ವಿಶೇಷತೆಗಳು
ಬೆಂಗಳೂರು, ಮೇ 13: ದೇಶದಲ್ಲಿ ಭಾರತೀಯ ರೈಲ್ವೆ ವಂದೇ ಭಾರತ್ ರೈಲನ್ನು ಪರಿಚಯಿಸಿದ ನಂತರ ಸಾಮಾನ್ಯ ರೈಲುಗಳು ಅಂದರೆ ನಾನ್ ಎಸಿ ಸ್ಲೀಪರ್ ಹಾಗೂ ಜನರಲ್ ಆಸನದ ರೈಲುಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಯಿತು. ಹಬ್ಬದ ಸಂದರ್ಭಗಳಲ್ಲಿ, ಬೇಸಿಗೆ ರಜೆ ಸೇರಿದಂತೆ ವಿಶೇಷ ದಿನಗಳಲ್ಲಿ ಜನಸಾಮಾನ್ಯರಿಗೆ ನಾನ್ ಎಸಿ (ಹಾವಾ ನಿಯಂತ್ರಣ ಅಲ್ಲದ) ಸೀಟುಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಈ ಸಂಬಂಧ ರೈಲ್ವೆಯು ಪ್ರಯಾಣಿಕರಿಂದ ಆಕ್ರೋಶವನ್ನು ಎದುರಿಸಿತ್ತು. ಈ ಕಾರಣದಿಂದ ಹೊಸ ರೈಲು ಬೋಗಿಗಳ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ.
ವಂದೇ ಭಾರತ್ ರೈಲುಗಳ ಜೊತೆಗೆ ಎಸಿ ಮತ್ತು ಪ್ರಥಮ ದರ್ಜೆ ಬೋಗಿಗಳನ್ನು ಹೆಚ್ಚಿಸಲಾಗಿತ್ತು. ಎಸಿ ಬೋಗಿಗಳಲ್ಲಿ ಓಡಾಡುವವರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರಲ್ ಬೋಗಿಯಲ್ಲಿ ಓಡಾಡುತ್ತಾರೆ. ಆದರೆ ಅವರಿಗೆ ಸೀಟುಗಳೇ ಸಿಕ್ಕುವುದಿಲ್ಲ ಎಂಬ ದೂರು ಕೇಳಿ ಬಮದಿತ್ತು. ಹೀಗಾಗಿಯೇ ಭಾರತೀಯ ರೈಲ್ವೆಯು LHB (ಲಿಂಕ್ ಹಾಫ್‌ಮನ್ ಬುಷ್) ಕೋಚ್ ಹೆಚ್ಚು ಉತ್ಪಾದಿಸಲು ಮುಂದಾಗಿದೆ. 2023ರಿಂದ ಈ ವರೆಗೆ ಉತ್ಪಾದನೆ ಏರಿಕೆ ಆಗಿದೆ.

ಭಾರತೀಯ ರೈಲ್ವೆ ಇಲಾಖೆಯು ಸ್ಲೀಪರ್ ಮತ್ತು ಕಾಯ್ದಿರಿಸದ ವಿಭಾಗಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಭಾರಿ ಬೇಡಿಕೆ ಪೂರೈಕೆಗೆ ಎದುರಾಗುತ್ತಿರುವ ಸಮಸ್ಯೆಗೆ ಪರಿಹಾರ ನೀಡಲು ಮುಂದೆ ಬಂದಿದೆ. ಈ ಸಂಬಂಧ ಪ್ರಸ್ತಕ 2025 ಹಣಕಾಸು ವರ್ಷದಲ್ಲಿ 2,500 ಎಸಿ ಅಲ್ಲದ ಬೋಗಿಗಳ ತಯಾರಿಕೆಗೆ ನಿರ್ಧರಿಸಿದೆ. ಈ ಮೂಲಕ LHB ಕೋಚ್‌ಗಳ ಉತ್ಪಾದನೆಗೆ ಉತ್ತೇಜನ ನೀಡುತ್ತಿದೆ.
ಈಗಾಗಲೇ ಕಾಯ್ದಿರಿಸದ LHB ಕೋಚ್‌ಗಳ ತಯಾರಿಕೆಗೆ ವೇಗ ನೀಡಲಾಗಿದೆ. LHB (ಲಿಂಕ್ ಹಾಫ್‌ಮನ್ ಬುಷ್) ಜೊತೆಗೆ ಕೆಲಸ ಮಾಡುವ ಮೇಲ್/ಎಕ್ಸ್‌ಪ್ರೆಸ್ ರೈಲುಗಳಲ್ಲಿ 900 ಕ್ಕೂ ಹೆಚ್ಚು ಸಾಮಾನ್ಯ ದರ್ಜೆಯ ಕೋಚ್‌ಗಳನ್ನು ಜೋಡಿಸಲಾಗಿದೆ. ಈ ವರ್ಷ 2,500 ಬೋಗಿ ತಯಾರಿಕೆಗೆ ಗುರಿ ಹಾಕಿಕೊಳ್ಳಲಾಗಿದೆ ಎಂದು ರೈಲ್ವೆ ಸಚಿವಾಲಯದ ಮೂಲಗಳು ಮಾಹಿತಿ ನೀಡಿವೆ.

ಎಲ್ಲೆಲ್ಲಿ ಎಸಿ ಅಲ್ಲದ ಬೋಗಿ ನಿರ್ಮಾಣ?
ಭಾರತೀಯ ರೈಲ್ವೆಯು LHB (ಲಿಂಕ್-ಹಾಫ್‌ಮನ್-ಬುಷ್) ಕೋಚ್‌ಗಳನ್ನು ದೇಶದ ಮೂರು ಪ್ರಮುಖ ಸುವ್ಯವಸ್ಥಿತ ಸ್ಥಳಗಳಲ್ಲಿ ಉತ್ಪಾದಿಸಲಾಗುತ್ತಿದೆ. ಕಪುರ್ತಲಾದಲ್ಲಿರುವ ರೈಲ್ ಕೋಚ್ ಫ್ಯಾಕ್ಟರಿ (RCF), ಚೆನ್ನೈನಲ್ಲಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ಹಾಗೂ ರಾಯ್ ಬರೇಲಿಯಲ್ಲಿರುವ ಮಾಡರ್ನ್ ಕೋಚ್ ಫ್ಯಾಕ್ಟರಿ (MCF)ಗಳಲ್ಲಿ ಈ ರೈಲು ಬೋಗಿಗಳು ತಯಾರಾಗುತ್ತಿವೆ.
2023-24ರಲ್ಲಿ 4977 ರೈಲು ಬೋಗಿಗಲು ನಿರ್ಮಿಸಿದ್ದರೆ, ಕಳೆದ ಸಾಲಿನಲ್ಲಿ (2024-25ರಲ್ಲಿ) 5744 ಕೋಚ್‌ಗಳನ್ನು ತಯಾರಿಸಲಾಗಿದೆ. ಅಂದರೆ ಈ ಎರಡು ವರ್ಷಗಳಲ್ಲಿ ಉತ್ಪಾದನೆ ಪ್ರಮಾಣ ಶೇಕಡಾ 15.4 ರಷ್ಟು ಏರಿಕೆ ಆಗಿದೆ. ಈ ವರ್ಷದ ಗುರಿ ಸಾಧಿಸುತ್ತಿದ್ದಂತೆ 2026ರ ಹೊತ್ತಿಗೆ ಹೊಸ ಬೋಗಿಗಳು ಟ್ರ್ಯಾಕ್‌ಗೆ ಇಳಿಯಲಿವೆ.
ಬೋಗಿಗಳ ವಿಶೇಷತೆಗಳು ಏನು?
* ಎಲ್‌ಎಚ್‌ಬಿ (ಲಿಂಕ್-ಹಾಫ್‌ಮನ್-ಬುಷ್) ಕೋಚ್‌ಗಳು ಸುರಕ್ಷತಾ ವೈಶಿಷ್ಟ್ಯ ಹೊಂದಿವೆ
* ಬೋಗಿಗಳಲ್ಲಿ ಆಂಟಿ-ಟೆಲಿಸ್ಕೋಪಿಂಗ್ ವಿನ್ಯಾಸ ಇದೆ. ಇದು ಅಪಘಾತಗಳ ಸಮಯದಲ್ಲಿ ಪ್ರಯೋಜನಕ್ಕೆ ಬರುತ್ತದೆ.
* ಹಳೆಯ ICF (ಇಂಟಿಗ್ರಲ್ ಕೋಚ್ ಫ್ಯಾಕ್ಟರಿ) ಕೋಚ್‌ಗಳಿಗೆ ಹೋಲಿಸಿದರೆ ಉತ್ತಮ ಬ್ರೇಕಿಂಗ್ ಸಾಮರ್ಥ್ಯ ಹೊಂದಿವೆ.
* ಕಡಿಮೆ ನಿರ್ವಹಣಾ ಅಗತ್ಯತೆ ಹೊಂದಿರುವ ಬೋಗಿಗಳು ಇವಾಗಿವೆ.
* LHB ಕೋಚ್‌ಗಳು ಕಡಿಮೆ ಭಾರ ಹೊಂದಿವೆ. ತುಕ್ಕು-ನಿರೋಧಕವಾಗಿವೆ
* ಜೈವಿಕ-ಶೌಚಾಲಯಗಳು ಮತ್ತು ಹೆಚ್ಚಿನ ಸಾಮರ್ಥ್ಯದ ಹವಾನಿಯಂತ್ರಣದಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
* ಸುರಕ್ಷಿತ ಪ್ರಯಾಣ ಒದಗಿಸುತ್ತವೆ.
* ಪ್ರಯಾಣಿಕರಿಗೆ ಆರಾಮದಾಯಕವಾಗಿ ಕೂರಲು, ಅನುಕೂಲಕರ ಒಳಾಂಗಣ ಹೊಂದಿದೆ.












Click it and Unblock the Notifications