Railway Ministry: ಸುಧಾರಿತ LHB ಕೋಚ್ ತಯಾರಿಕೆಯಲ್ಲಿ ಭಾರೀ ಹೆಚ್ಚಳ
Indian Railways LHB Coaches: ಭಾರತಾದ್ಯಂತ ರೈಲ್ವೆ ಜಾಲ ವಿಸ್ತರಿಸಲಾಗುತ್ತಿದೆ. ಹೊಸ ಮಾರ್ಗಗಳು ಘೋಷಣೆ ಆಗಿವೆ. ರೈಲು ಮಾರ್ಗಗಳ ಹಳಿ ದ್ವಿಪಥಗೊಳಿಸುವ ಯೋಜನೆಗಳು ಅನುಷ್ಠಾನಕ್ಕೆ ತರಲಾಗುತ್ತಿದೆ. ಮತ್ತೊಂದೆಡೆ ರೈಲ್ವೆ ಇಲಾಖೆ ಬಯಸಿದ ಆಧುನಿಕ ಲಿಂಕ್ ಹಾಫ್‌ಮನ್ ಬುಷ್ (LHB) ಕೋಚ್‌ಗಳ ಉತ್ಪಾದೆನಯಲ್ಲಿ ವರ್ಷದಿಂದ ವರ್ಷಕ್ಕೆ ಭಾರೀ ಹೆಚ್ಚಳವಾಗಿದೆ. ಇದು ರೈಲು ಸಂಖ್ಯೆ, ಹಳೆಯ ರೈಲುಗಳಿಗೆ ಹೊಸ ಸುವ್ಯವಸ್ಥಿತ ಕೋಚ್‌ಗಳ ಅಳವಡಿಕೆ ಉಪಕ್ರಮಕ್ಕೆ ಪೂರಕ ಬೆಳವಣಿಗೆ ಆಗಿದೆ.
ಭಾರತೀಯ ರೈಲ್ವೆ ಸುಧಾರಿತ ಲಿಂಕ್ ಹಾಫ್‌ಮನ್ ಬುಷ್ (LHB) ಕೋಚ್‌ಗಳ ತಯಾರಿಕೆಯಲ್ಲಿ ನಿರೀಕ್ಷೆಗೂ ಮೀರಿದ ಪ್ರಗತಿ (ಶೇಕಡಾ 18 ರಷ್ಟು) ಸಾಧಿಸಿದೆ. ಈ ಕೋಚ್‌ಗಳು ಹೆಚ್ಚು ಆರಾಮದಾಯಕ ಮತ್ತು ಪ್ರಯಾಣಿಕರ ಸುಖಕರ ಪ್ರಯಾಣ ಸೇವವೆ ಒದಗಿಸುತ್ತವೆ. ಇತ್ತೀಚೆಗೆ ಮಂಗಳೂರು-ಚೆನ್ನೈ, ಚೆನ್ನೈ-ಅಲೆಪ್ಪಿ ಮತ್ತು ಚೆನ್ನೈ-ತಿರುವನಂತಪುರಂ ಮಾರ್ಗಗಳ ಸೂಪರ್‌ಫಾಸ್ಟ್ ರೈಲುಗಳಿಗೆ ಇದೇ ಎಲ್‌ಎಚ್‌ಬಿ ಬೋಗಿಗಳ ಅಳವಡಿಸಿ 2026ರಲ್ಲಿ ಸೇವೆ ನಿಯೋಜಿಸುವುದಾಗಿ ತಿಳಿಸಿತ್ತು.

ಹಳೆಯ ರೈಲು ಕೋಚ್‌ಗಳ ಸ್ಥಾನ ತುಂಬಬಲ್ಲ, ಸುಧಾರಿತ ಎಲ್‌ಎಚ್‌ಬಿ ಕೋಚ್‌ಗಳ ಉತ್ಪಾದನೆಯಲ್ಲಿ ಏರಿಕೆ ಆಗಿದ್ದು, ರೈಲ್ವೆ ಸಚಿವಾಲಯ ಭಾನುವಾರ ಉತ್ಪಾದನೆಯ ಹೆಚ್ಚಳದ ಅಂಕಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ. ಹಣಕಾಸು ವರ್ಷದಲ್ಲಿ 2025-26 ರಲ್ಲಿ (2025 ನವೆಂಬರ್) ಒಟ್ಟು ಬರೋಬ್ಬರಿ 4,224 ಕ್ಕೂ ಹೆಚ್ಚು LHB ಕೋಚ್‌ಗಳು ರೈಲುಗಳಿಗೆ ಅಳವಡಿಕೆಗೆ ಸಿದ್ದವಾಗಿದೆ.
ಮೂರು ಘಟಕಗಳಲ್ಲಿ ಉತ್ಪಾದಿಸಿದ ಕೋಚ್‌ಗಳೆಷ್ಟು?
ಕಳೆದ ವರ್ಷದ ಇದೇ ಅವಧಿಯಲ್ಲಿ ಕೇವಲ 3,590 ಕೋಚ್‌ಗಳನ್ನು ತಯಾರಿಸಲಾಗಿತ್ತು. ಆ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಉತ್ಪಾದನೆಯಲ್ಲಿ ಶೇಕಡಾ 18 ರಷ್ಟು ಹೆಚ್ಚಾಗಿದೆ. ತಯಾರಿಕೆಯ ಮೂರು ಘಟಕಗಳ ಪೈಕಿ ಚೆನ್ನೈ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF)ಯಲ್ಲಿ 1,659 ಎಲ್‌ಎಚ್‌ಬಿ ಬೋಗಿಗಳನ್ನು ತಯಾರಿಸುವ ಮೂಲಕ ಇತರ ಎರಡು ಘಟಕಗಳಿಗಿಂತ ಮುಂಚೂಣಿಯಲ್ಲಿದೆ. ಕಪರ್ತಲಾದ ರೈಲ್ ಕೋಚ್ ಫ್ಯಾಕ್ಟರಿ (RCF)ಯಿಂದ 1,331 ಹಾಗೂ ರಾಯ್‌ಬರೇಲಿಯಲ್ಲಿನ ಮಾಡರ್ನ್ ಕೋಚ್ ಫ್ಯಾಕ್ಟರಿ (MCF) 1,234 ಕೋಚ್ ಗಳನ್ನು ತಯಾರಿಸಿದೆ. ಈ ಮೂರು ಘಟಕಗಳಿಂದ ಶೇ.18ರಷ್ಟು ಉತ್ಪಾದನೆ ಹೆಚ್ಚಾಗಿದೆ.
42,600 ಕ್ಕೂ ಅಧಿಕ ಬೋಗಿಗಳ ಉತ್ಪಾದನೆ
ಇವು ಸಾಮಾನ್ಯ ಬೋಗಿಗಳಾಗಿರದೇ ಹೊಸ, ಸುಧಾರಿತ ಬೋಗಿಗಳು ಆಗಿವೆ. 2014 ರಿಂದ 2025 ರವರೆಗೆರ ನಡುವೆ, ಭಾರತೀಯ ರೈಲ್ವೆ 42,600 ಕ್ಕೂ ಹೆಚ್ಚು LHB ಕೋಚ್‌ಗಳನ್ನು ಉತ್ಪಾದಿಸಿದೆ. ಇದು 2004 ಮತ್ತು 2014 ರ ನಡುವೆ ಉತ್ಪಾದಿಸಿದ್ದ ಸುಮಾರು 2,300 ಕೋಚ್‌ಗಳಿಗಿಂತ ಸುಮಾರು 18 ಪಟ್ಟು ಅಧಿಕ ಎಂದು ಸಚಿವಾಲಯ ಮಾಹಿತಿ ನೀಡಿದೆ. ರೈಲ್ವೆ ಜಾಲದಲ್ಲಿ ಹಳೆಯ ICF ಕೋಚ್‌ಗಳನ್ನು ಆಧುನಿಕ LHB ಕೋಚ್ ಅಳವಡಿಸಲಾಗಿದೆ.
LHB ಕೋಚ್‌ಗಳ ವೈಶಿಷ್ಟ್ಯತೆಗಳೇನು?
ಅಲ್ಸ್ಟಾಮ್ ಜರ್ಮನ್ ತಂತ್ರಜ್ಞಾನದಿಂದ ಈ ಹೊಸ ಬಗೆಯ ಬೋಗಿಗಳನ್ನು ತಯಾರಿಸಲಾಗಿದೆ. ಸ್ಟೇನ್‌ಲೆಸ್ ಸ್ಟೀಲ್ ಬಾಡಿಗಳು, ಸುಧಾರಿತ ಡಿಸ್ಕ್ ಬ್ರೇಕಿಂಗ್ ವ್ಯವಸ್ಥೆಗಳ ಇವೆ. ಪ್ರತಿ ಗಂಟೆಗೆ 160 ಕಿಲೋ ಮೀಟರ್ ವೇಗದಲ್ಲಿ ಕಾರ್ಯಾಚರಣೆ ಮಾಡಬಲ್ಲ ಸಾಮರ್ಥ್ಯ ಹೊಂದಿವೆ. ಆಂಟಿ-ಕ್ಲೈಂಬಿಂಗ್ ಸಾಧನಗಳಂತಹ ವರ್ಧಿತ ಸುರಕ್ಷತಾ ಕಾರ್ಯವಿಧಾನ ಹೊಂದಿವೆ. ಶತಾಬ್ದಿ ಎಕ್ಸ್‌ಪ್ರೆಸ್ ರೈಲುಗಳು ಸೇರಿದಂತೆ ಪ್ರೀಮಿಯಂ ರೈಲುಗಳಿಗೆ, ಸೂಪರ್ ಫಾಸ್ಟ್ ರೈಲುಗಳಿಗೆ ಈ ಬೋಗಿಗಳನ್ನು ಅಳವಡಿಸಲಾಗಿದೆ. ಇದರ ನಿರ್ವಹಣೆಗೆ ಕಕಡಿಮೆ ವೆಚ್ಚವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತವು ಈ ಮೂಲಕ ದೇಶೀಯ ರೈಲು ಬೋಗಿಗಳ ಉತ್ಪಾದನೆಯಲ್ಲಿ ಸಾಧನೆ ಮಾಡಿದೆ. ಇದೆಲ್ಲವು 'ಆತ್ಮನಿರ್ಭರ ಭಾರತ್' ಮತ್ತು 'ಮೇಕ್ ಇನ್ ಇಂಡಿಯಾ' ಉಪಕ್ರಮಗಳ ಭಾಗವೇ ಆಗಿದೆ. ಈ ಬೋಗಿಗಳ ತಯಾರಿಕೆ ಮುಂದುವರಿಯಲಿದ್ದು, ಭವಿಷ್ಯದಲ್ಲಿ ಸಾಂಪ್ರದಾಯಿಕ ಕೋಚ್‌ಗಳ ಸ್ಥಾನವನ್ನು ಈ ಎಲ್‌ಎಚ್‌ಬಿ ಕೋಚ್‌ಗಳು ತುಂಬಲಿವೆ.












Click it and Unblock the Notifications