Indian pilot: ವಿಮಾನದಲ್ಲೇ ಹನುಮಾನ್ ಚಾಲೀಸಾ ಪಠಿಸಿದ್ದೆ: ಪ್ರಧಾನಿ ಮೋದಿಗೆ ಭಾವುಕರಾಗಿ ಹೇಳಿದ ಪೈಲಟ್ ಸ್ಮಿತ್ ಮಚ್ಚಾರ್
ದುಬೈ-ಟೆಲ್ ಅವೀವ್ ಮಾರ್ಗದ flydubai ವಿಮಾನದಲ್ಲಿ ಸಹ ಪೈಲಟ್‌ನಿಂದ ಚಾಕು ಇರಿತಕ್ಕೊಳಗಾಗಿ ಗಾಯಗೊಂಡಿದ್ದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಿಡಿಯೋ ಕಾಲ್ ಮೂಲಕ ಮಾತುಕತೆ ನಡೆಸಿದರು. ಸಂಕಷ್ಟದ ಸಂದರ್ಭದಲ್ಲೂ ಧೈರ್ಯ, ಸಮಯಪ್ರಜ್ಞೆ ಹಾಗೂ ಆತ್ಮಸ್ಥೈರ್ಯದಿಂದ ಕಾರ್ಯನಿರ್ವಹಿಸಿದ್ದಕ್ಕಾಗಿ ಪ್ರಧಾನಿ ಮೋದಿ ಪೈಲಟ್ ಅವರನ್ನು ಶ್ಲಾಘಿಸಿದರು.
ಎರಡು ದಿನಗಳ ಹಿಂದೆ ನಡೆದ ಈ ಘಟನೆ ವೇಳೆ ಸ್ಮಿತ್ ಮಚ್ಚಾರ್ ಗಂಭೀರವಾಗಿ ಗಾಯಗೊಂಡಿದ್ದರು. ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ flydubai ವಿಮಾನವು ಸೌದಿ ಅರೇಬಿಯಾ ವಾಯುಪ್ರದೇಶದಲ್ಲಿದ್ದಾಗ, ಒಮಾನ್ ಮೂಲದ ಸಹ ಪೈಲಟ್ ಕಾಕ್‌ಪಿಟ್‌ನಲ್ಲೇ ಅವರನ್ನು ಚಾಕುವಿನಿಂದ ಇರಿದಿದ್ದಾನೆ ಎಂದು ವರದಿಯಾಗಿದೆ.

ನೀವು ನನ್ನ ದೊಡ್ಡ ಆದರ್ಶ
ಪ್ರಧಾನಿ ಮೋದಿಯವರೊಂದಿಗೆ ನಡೆದ ಭಾವುಕ ಸಂಭಾಷಣೆಯಲ್ಲಿ ಸ್ಮಿತ್ ಮಚ್ಚಾರ್, "ನೀವು ನನ್ನ ದೊಡ್ಡ ಆದರ್ಶ" ಎಂದು ಹೇಳಿದರು. ಇದೇ ವೇಳೆ ಸಂಕಷ್ಟದ ಸಮಯದಲ್ಲಿ ತಾವು ಹನುಮಾನ್ ಚಾಲೀಸಾ ಪಠಿಸುತ್ತಿದ್ದುದಾಗಿ ಅವರು ಪ್ರಧಾನಿ ಮೋದಿಗೆ ತಿಳಿಸಿದರು.
ನನಗೆ ಕಷ್ಟ ಬಂದಾಗಲೆಲ್ಲಾ ಹನುಮಾನ್ ಚಾಲೀಸಾ ಪಠಿಸುತ್ತೇನೆ. ಆ ಸಮಯದಲ್ಲೂ ನಾನು ಹನುಮಾನ್ ಚಾಲೀಸಾ ಹೇಳುತ್ತಿದ್ದೆ. ಈಗ ಅವರು ದೇವರು ಮಾತ್ರವಲ್ಲ, ನನ್ನ ರಕ್ಷಕ ಎಂದು ನನಗೆ ಗೊತ್ತಾಗಿದೆ ಎಂದು ಮಚ್ಚಾರ್ ಹೇಳಿದರು.
ಪ್ರಧಾನಿ ಮೋದಿ ಅವರು ದೇಶದ ಜನರೆಲ್ಲರೂ ತಮ್ಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ ಎಂದು ಹೇಳಿ, ಪೈಲಟ್ ಅವರ ಧೈರ್ಯವನ್ನು ಮೆಚ್ಚಿಕೊಂಡರು. ಸ್ಮಿತ್ ಅವರ ತಾಯಿ ಗೀತಾ ಬೆನ್ ಅವರ ಬಗ್ಗೆಯೂ ಪ್ರಧಾನಿ ವಿಚಾರಿಸಿದರು. ತಾಯಿ ಭಗವದ್ಗೀತೆಯ ಮೌಲ್ಯಗಳು ಹಾಗೂ ಬೋಧನೆಗಳೊಂದಿಗೆ ಅವರನ್ನು ಬೆಳೆಸಿದ್ದಾರೆ ಎಂದು ಮೋದಿ ಹೇಳಿದರು.
'ವಿಮಾನ ಕೆಳಗೆ ಹೋಗುತ್ತಿದೆ ಎಂದು ಗೊತ್ತಾಯಿತು'
ಕಾಕ್‌ಪಿಟ್‌ನಲ್ಲಿ ದಾಳಿ ನಡೆದ ಬಳಿಕದ ಕ್ಷಣಗಳನ್ನು ಸ್ಮಿತ್ ಮಚ್ಚಾರ್ ಪ್ರಧಾನಿ ಮೋದಿಗೆ ವಿವರಿಸಿದರು. ಗಂಭೀರವಾಗಿ ಗಾಯಗೊಂಡು ನೆಲಕ್ಕೆ ಬಿದ್ದಿದ್ದರೂ ವಿಮಾನದ ಸ್ಥಿತಿಯನ್ನು ಅರ್ಥಮಾಡಿಕೊಂಡು ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದ್ದಾಗಿ ಹೇಳಿದರು.
ನಾನು ಆ ಕ್ಷಣದಲ್ಲಿ ನನ್ನ ಜೀವಕ್ಕಾಗಿ ಹೋರಾಡುತ್ತಿದ್ದೆ. ಕೆಳಗೆ ಬಿದ್ದಿದ್ದೆ, ಹಲವು ಗಾಯಗಳಾಗಿದ್ದವು. ಆದರೆ ವಿಮಾನ ಕೆಳಗೆ ಹೋಗುತ್ತಿದೆ ಎಂಬುದು ನನಗೆ ತಿಳಿಯುತ್ತಿತ್ತು. ನಾನು ಕಳೆದ 11 ವರ್ಷಗಳಿಂದ ಕ್ಯಾಪ್ಟನ್ ಆಗಿದ್ದೇನೆ. ಕಣ್ಣು ಮುಚ್ಚಿಕೊಂಡಿದ್ದರೂ ವಿಮಾನದಲ್ಲಿ ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವಷ್ಟು ಅನುಭವವಿದೆ ಎಂದು ಅವರು ಹೇಳಿದರು.
ತಮ್ಮ ಜೀವನದ ಕೊನೆಯ ಕೆಲವು ಸೆಕೆಂಡುಗಳು ಇರಬಹುದು ಎಂಬ ಭಾವನೆ ಬಂದರೂ, ಕಾಕ್‌ಪಿಟ್ ಬಾಗಿಲಿನತ್ತ ತೆವಳಿಕೊಂಡು ಹೋಗಿ ಅದನ್ನು ತೆರೆಯಲು ಸಾಧ್ಯವಾಯಿತು ಎಂದು ಮಚ್ಚಾರ್ ವಿವರಿಸಿದರು. ಬಳಿಕ ಪ್ರಯಾಣಿಕರು ಮತ್ತು ಸಿಬ್ಬಂದಿ ಕಾಕ್‌ಪಿಟ್‌ಗೆ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ನೆರವಾದರು.
#WATCH | Flydubai Captain Smit Machchhar and PM Modi share a conversation in the Gujarati language. The PM praises the Captain's family and their courage. pic.twitter.com/hfZYDesSoM
— ANI (@ANI) October 2, 2026
Indian pilot: 174 ಪ್ರಯಾಣಿಕರಿದ್ದ ವಿಮಾನ
ಸ್ಮಿತ್ ಮಚ್ಚಾರ್ ಅವರು flydubaiಯ FZ1073 ವಿಮಾನದ ಕ್ಯಾಪ್ಟನ್ ಆಗಿದ್ದರು. ಬೋಯಿಂಗ್ 737 MAX 8 ವಿಮಾನದಲ್ಲಿ 174 ಪ್ರಯಾಣಿಕರಿದ್ದರು. ಸೌದಿ ಅರೇಬಿಯಾ ವಾಯುಪ್ರದೇಶದಲ್ಲಿ ವಿಮಾನ ಸಾಗುತ್ತಿದ್ದಾಗ ಕಾಕ್‌ಪಿಟ್‌ನಲ್ಲೇ ಸಹ ಪೈಲಟ್ ದಾಳಿ ನಡೆಸಿದ್ದಾನೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದರೂ ಮಚ್ಚಾರ್ ಕಾಕ್‌ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು. ಬಳಿಕ ಪ್ರಯಾಣಿಕರು ಹಾಗೂ ಸಿಬ್ಬಂದಿ ದಾಳಿಕೋರನನ್ನು ನಿಯಂತ್ರಿಸಲು ಮುಂದಾದರು. ವಿಮಾನ ಅಪಾಯಕಾರಿಯಾಗಿ ಕೆಳಮುಖವಾಗುತ್ತಿದ್ದ ಸಂದರ್ಭದಲ್ಲಿ ಓರ್ವ ಪ್ರಯಾಣಿಕ ನೆರವಿನಿಂದ ವಿಮಾನವನ್ನು ನಿಯಂತ್ರಿಸಲಾಯಿತು ಎಂದು ವರದಿಯಾಗಿದೆ. ನಂತರ ವಿಮಾನದಲ್ಲಿದ್ದ ಇತರ ಪೈಲಟ್‌ಗಳು ವಿಮಾನವನ್ನು ಸೌದಿ ಅರೇಬಿಯಾದ ತಬೂಕ್‌ಗೆ ತಿರುಗಿಸಿ ತುರ್ತು ಲ್ಯಾಂಡಿಂಗ್ ಮಾಡಿದರು.
ಸೌದಿಯಿಂದ ಯುಎಇಗೆ ಸ್ಥಳಾಂತರ
ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಚ್ಚಾರ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸೌದಿ ಅರೇಬಿಯಾದಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಸ್ಥಳಾಂತರಿಸಲಾಗಿದೆ. ಯುಎಇಯಲ್ಲಿರುವ ಭಾರತದ ರಾಯಭಾರಿ ದೀಪಕ್ ಮಿತ್ತಲ್ ಆಸ್ಪತ್ರೆಗೆ ಭೇಟಿ ನೀಡಿ ಪೈಲಟ್ ಮತ್ತು ಅವರ ಕುಟುಂಬದವರನ್ನು ಭೇಟಿಯಾಗಿದ್ದರು. ಮಚ್ಚಾರ್ ಉತ್ತಮ ಆರೋಗ್ಯದಲ್ಲಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಈ ಘಟನೆ ಬಳಿಕ ಪ್ರಧಾನಿ ಮೋದಿ ಅವರು ಪೈಲಟ್ ಅವರ ಧೈರ್ಯವನ್ನು ಶ್ಲಾಘಿಸಿ ಶೀಘ್ರ ಚೇತರಿಕೆಗೆ ಶುಭ ಹಾರೈಸಿದರು.


Click it and Unblock the Notifications
