ಕೇವಲ 16ನೇ ವಯಸ್ಸಿಗೆ CA ಪಾಸ್: ಗಿನ್ನೆಸ್ ದಾಖಲೆ ಬರೆದ ಭಾರತ ಮೂಲದ ಲಕ್ಷ್ಮಣನ್ ಮಯ್ಯಪ್ಪನ್
ಸಾಮಾನ್ಯವಾಗಿ 16ನೇ ವಯಸ್ಸಿನ ವಿದ್ಯಾರ್ಥಿಗಳೆಂದರೆ 10ನೇ ತರಗತಿ ಅಥವಾ ಪ್ರಥಮ ಪಿಯುಸಿಯಲ್ಲಿ ಓದುತ್ತಿರುತ್ತಾರೆ. ಈ ಸಮಯದಲ್ಲಿ ಅವರು ತಮ್ಮ ಮುಂದಿನ ಕರಿಯರ್ ಬಗ್ಗೆ, ಯಾವ ಕೋರ್ಸ್ ಆಯ್ಕೆ ಮಾಡಬೇಕು, ಭವಿಷ್ಯದಲ್ಲಿ ತಾನು ಏನಾಗಬೇಕು ಎಂಬುದರ ಬಗ್ಗೆ ಇನ್ನೂ ಗೊಂದಲದಲ್ಲೇ ಇರುತ್ತಾರೆ.
ಆದರೆ, ದುಬೈನಲ್ಲಿ ನೆಲೆಸಿರುವ ಭಾರತ ಮೂಲದ ಯುವಕ ಲಕ್ಷ್ಮಣನ್ ಮಯ್ಯಪ್ಪನ್ ತನ್ನ 16ನೇ ವಯಸ್ಸಿನಲ್ಲಿಯೇ ಅತ್ಯಂತ ಕಠಿಣವಾದ ಹಾಗೂ ಪ್ರತಿಷ್ಠಿತ ಚಾರ್ಟೆಡ್ ಅಕೌಂಟೆಂಟ್ (ಸಿಎ) ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಇಡೀ ಜಗತ್ತೇ ತಿರುಗಿ ನೋಡುವಂತಹ ಸಾಧನೆ ಮಾಡಿದ್ದಾರೆ. 16ನೇ ವಯಸ್ಸಿಗೆ ಸಿಎ ಪೂರ್ಣಗೊಳಿಸಿದ ಇವರು, ವಿಶ್ವದ ಅತ್ಯಂತ ಕಿರಿಯ ಪುರುಷ ಸಿಎ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಇದೀಗ ಗಿನ್ನೆಸ್ ದಾಖಲೆ ಬರೆದಿದ್ದಾರೆ.

10ನೇ ತರಗತಿಯ ಬಳಿಕ CA ಪರೀಕ್ಷೆಗೆ ಸಿದ್ಧತೆ
ಲಕ್ಷ್ಮಣನ್ ಮಯ್ಯಪ್ಪನ್ ಅವರು ತಮ್ಮ 10ನೇ ತರಗತಿ ಬೋರ್ಡ್ ಪರೀಕ್ಷೆ ಮುಗಿದ ತಕ್ಷಣ ಈ ಸಿಎ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾರೆ. ಇವರು ಜಗತ್ತಿನಾದ್ಯಂತ ಆವರಿಸಿದ್ದ ಕೋವಿಡ್-19 ಲಾಕ್‌ಡೌನ್ ಸಮಯವನ್ನ ಅತ್ಯಂತ ಸರಿಯಾಗಿ ಬಳಸಿಕೊಂಡಿದ್ದಾರೆ. ಅವರ ತಾಯಿ ಕೂಡ ವೃತ್ತಿಯಲ್ಲಿ ಒಬ್ಬರು ಎಸಿಸಿಎ ಆಗಿದ್ದು, ಲಾಕ್‌ಡೌನ್ ವೇಳೆ ಮನೆಯಲ್ಲಿದ್ದ ಮಗನಿಗೆ ಅಕೌಂಟಿಂಗ್ ಕ್ಷೇತ್ರದ ಬೇಸಿಕ್ ವಿಚಾರಗಳನ್ನ ಪರಿಚಯಿಸಿದ್ದರು. ತಾಯಿಯ ಮಾರ್ಗದರ್ಶನ ಜೊತೆಗೆ ತಮ್ಮ ಸ್ವಂತ ಆಸಕ್ತಿಯಿಂದಲೇ ಲಕ್ಷ್ಮಣನ್ ತಮ್ಮ 15ನೇ ವಯಸ್ಸಿನಲ್ಲಿ ಸಿಎ ಕೋರ್ಸ್‌ಗಾಗಿ ಅಧ್ಯಯನವನ್ನ ಆರಂಭಿಸಿದರು.
ಸತತ ಪ್ರಯತ್ನ ಹಾಗೂ ಏಕಾಗ್ರತೆಯಿಂದ ಓದಿದ ಅವರು, ಕೇವಲ ಒಂದು ವರ್ಷದ ಅವಧಿಯಲ್ಲಿ 2021ರ ಫೆಬ್ರವರಿಯಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿಯೇ ಅಸೋಸಿಯೇಷನ್ ಆಫ್ ಚಾರ್ಟರ್ಡ್ ಸರ್ಟಿಫೈಡ್ ಅಕೌಂಟೆಂಟ್ಸ್ (ACCA) ಪರೀಕ್ಷೆ ಬರೆದು ಯಶಸ್ವಿಯಾಗಿ ಉತ್ತೀರ್ಣರಾದರು. ಈ ಪರೀಕ್ಷೆ ಪಾಸ್ ಮಾಡಿದಾಗ ಅವರ ವಯಸ್ಸು ಕೇವಲ 16 ವರ್ಷ, 141 ದಿನ ಎಂಬುದು ಮತ್ತೊಂದು ಅಚ್ಚರಿಯ ಸಂಗತಿ ನೋಡಿ.
ವಿಶ್ವದ ಅತ್ಯಂತ ಕಿರಿಯ CA ಆಗಿ ಗಿನ್ನೆಸ್ ದಾಖಲೆ
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆಯು ಇವರ ಈ ಅಸಾಧಾರಣ ಯಶಸ್ಸನ್ನ ಗುರುತಿಸಿದ್ದು, ಲಕ್ಷ್ಮಣನ್ ಮಯ್ಯಪ್ಪನ್ ಅವರನ್ನ 'ಜಗತ್ತಿನ ಅತ್ಯಂತ ಕಿರಿಯ ಪುರುಷ ಚಾರ್ಟೆಡ್ ಅಕೌಂಟೆಂಟ್' ಎಂದು ಅಧಿಕೃತವಾಗಿ ಘೋಷಿಸಿದೆ. ಜನವರಿ 11, 2005ರಲ್ಲಿ ಜನಿಸಿದ ಲಕ್ಷ್ಮಣನ್, ಅತ್ಯಂತ ಕಿರಿಯ ವಯಸ್ಸಿಗೆ ಈ ಪ್ರಮಾಣಪತ್ರ ಪಡೆದಿದ್ದಾರೆ.
ಆದರೆ, ಯಾವುದೇ ಸ್ಪರ್ಧೆಯ ದೃಷ್ಟಿಯಿಂದ ಅಥವಾ ದಾಖಲೆ ಬರೆಯಬೇಕು ಎಂಬ ಉದ್ದೇಶದಿಂದ ತಾವು ಈ ಪರೀಕ್ಷೆ ಬರೆದಿಲ್ಲ ಎಂದು ಲಕ್ಷ್ಮಣನ್ ಸ್ಪಷ್ಟಪಡಿಸುತ್ತಾರೆ. "ಈ ಗಿನ್ನೆಸ್ ಮೈಲಿಗಲ್ಲು ನನಗೆ ಬಹಳ ಖುಷಿ ಕೊಟ್ಟಿದೆ, ನಿಜ. ಆದರೆ ನಾನು ಈ ವ್ಯಾಸಂಗವನ್ನ ಎಂದಿಗೂ ಒಂದು ರೇಸ್ ಅಥವಾ ಸ್ಪರ್ಧೆಯಂತೆ ನೋಡಿರಲಿಲ್ಲ. ಜಗತ್ತಿನಲ್ಲಿ ಹಣಕಾಸು ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನ ತಿಳಿಯಬೇಕು ಎನ್ನುವ ಕುತೂಹಲ ನನಗಿತ್ತು. ಕೇವಲ ವೇಗವಾಗಿ ಕಲಿಯುವುದಕ್ಕಿಂತ, ಆಸಕ್ತಿ ಹಾಗೂ ಕುತೂಹಲದಿಂದ ಕಲಿಯುವುದು ಹೆಚ್ಚು ಅರ್ಥಪೂರ್ಣ ಫಲಿತಾಂಶ ನೀಡುತ್ತದೆ," ಎಂದು ಲಕ್ಷ್ಮಣನ್ ತಮ್ಮ ಯಶಸ್ಸಿನ ಗುಟ್ಟನ್ನ ಹಂಚಿಕೊಂಡಿದ್ದಾರೆ.
ದುಬೈ ಕಂಪನಿಯಲ್ಲಿ ಉನ್ನತ ಹುದ್ದೆ
ಕೇವಲ ಸಿಎ ಕೋರ್ಸ್ ಮುಗಿಸಿದ ತಕ್ಷಣವೇ ಲಕ್ಷ್ಮಣನ್ ತಮ್ಮ ವಿದ್ಯಾಭ್ಯಾಸವನ್ನ ಅಲ್ಲಿಗೇ ನಿಲ್ಲಿಸಲಿಲ್ಲ. ತಮ್ಮ ಜ್ಞಾನದ ಹಸಿವನ್ನ ಮುಂದುವರಿಸಿದ ಅವರು, ನಂತರ ವಾಣಿಜ್ಯ ಕ್ಷೇತ್ರದ ಅತ್ಯಂತ ಕಠಿಣವಾದ ಸಿಎಫ್‌ಎ ಚಾರ್ಟರ್ ಅನ್ನು ಕೂಡ ಪಡೆದುಕೊಂಡಿದ್ದಾರೆ. ಕೇವಲ 18 ವರ್ಷ ತುಂಬುವಷ್ಟರಲ್ಲಿ ಸಿಎಫ್‌ಎಯ ಎಲ್ಲಾ ಹಂತಗಳನ್ನ ಪೂರ್ಣಗೊಳಿಸಿದ್ದು ಅವರ ಪ್ರತಿಭೆಗೆ ಸಾಕ್ಷಿ. ಪ್ರಸ್ತುತ ಅವರು ಫೈನಾನ್ಸ್‌ನಲ್ಲಿ ಎಂಎಸ್ಸಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ.
ವಿದ್ಯಾಭ್ಯಾಸದ ಜೊತೆಗೆ, ವೃತ್ತಿಜೀವನದಲ್ಲೂ ಇವರು ಬಹಳ ಬೇಗನೆ ಮುನ್ನಡೆ ಸಾಧಿಸಿದ್ದಾರೆ. ಸದ್ಯ ದುಬೈನಲ್ಲಿರುವ ಸೆಂಚುರಿ ಫೈನಾನ್ಶಿಯಲ್ ಎಂಬ ಪ್ರತಿಷ್ಠಿತ ಹೂಡಿಕೆ ಸಂಸ್ಥೆಯಲ್ಲಿ ಸೀನಿಯರ್ ರಿಸರ್ಚ್ ಅನಲಿಸ್ಟ್ ಆಗಿ ಲಕ್ಷ್ಮಣನ್ ಕಾರ್ಯನಿರ್ವಹಿಸುತ್ತಿದ್ದಾರೆ. ಹಣಕಾಸು ಮಾರುಕಟ್ಟೆಯಲ್ಲಿನ ಹೂಡಿಕೆ, ಸಂಶೋಧನೆ ಹಾಗೂ ವಿಶ್ಲೇಷಣೆಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನ ತೆಗೆದುಕೊಳ್ಳುವ ಬಹುದೊಡ್ಡ ಜವಾಬ್ದಾರಿಯನ್ನ ಅವರು ಚಿಕ್ಕ ವಯಸ್ಸಿನಲ್ಲಿಯೇ ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ.
ಹಣಕಾಸು ವಲಯದ ಆಚೆಗೂ ಅವರಿಗೆ ವಿಶೇಷ ಆಸಕ್ತಿಗಳಿದ್ದು, ವಾಚ್‌ಗಳನ್ನ ವಿನ್ಯಾಸ ಮಾಡುವುದು ಹಾಗೂ ಅವುಗಳನ್ನ ತಯಾರಿಸುವುದು ಅವರ ನೆಚ್ಚಿನ ಹವ್ಯಾಸವಾಗಿದೆ. ಲಕ್ಷ್ಮಣನ್ ಮಯ್ಯಪ್ಪನ್ ಅವರ ಈ ಪಯಣ ಇಂದಿನ ಲಕ್ಷಾಂತರ ಯುವ ವಿದ್ಯಾರ್ಥಿಗಳಿಗೆ ಸ್ಫೂರ್ತಿ.


Click it and Unblock the Notifications
