Indian Navy: ಯಾವಾಗಾದ್ರೂ ಸರಿ, ಎಲ್ಲಿಯಾದ್ರೂ ಸರಿ ನಾವ್ ರೆಡಿ ಎಂದ ಭಾರತೀಯ ನೌಕಾಪಡೆ
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ದಾಳಿ ಮಾಡಿ 26 ಪ್ರವಾಸಿಗರನ್ನು ಹತ್ಯೆ ಮಾಡಿದ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಪರಿಸ್ಥಿತಿ ಉದ್ವಿಗ್ನವಾಗಿದೆ. ಪಾಕಿಸ್ತಾನ ಭಯೋತ್ಪಾದನೆಗೆ ಕುಮ್ಮಕ್ಕು ಕೊಡುತ್ತಿದೆ ಎಂದು ಆರೋಪಿಸಿರುವ ಭಾರತ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದೆ. ದಾಳಿ ಮಾಡಿದವರನ್ನು ಮತ್ತು ಇದರ ಹಿಂದಿರುವ ಶಕ್ತಿಗಳನ್ನು ದಮನ ಮಾಡುವುದಾಗಿ ಪ್ರಧಾನಿ ಮೋದಿ ಎಚ್ಚರಿಕೆ ನೀಡಿದ್ದಾರೆ.
ಎರಡೂ ದೇಶಗಳ ನಡುವೆ ಯುದ್ಧ ಆರಂಭವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬೆನ್ನಲ್ಲೇ ಭಾರತೀಯ ನೌಕಾಪಡೆ ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಭಾನುವಾರ ಬೆಳಿಗ್ಗೆ ಭಾರತೀಯ ನೌಕಾಪಡೆ ಭಾನುವಾರ ಬೆಳಿಗ್ಗೆ ಅರೇಬಿಯನ್ ಸಮುದ್ರದಲ್ಲಿ ಅನೇಕ ಹಡಗು ವಿರೋಧಿ ಗುಂಡಿನ ದಾಳಿಗಳ ದೃಶ್ಯಗಳನ್ನು ಹಂಚಿಕೊಂಡಿದ್ದು, ಅವು ಯುದ್ಧಕ್ಕೆ ಸಿದ್ಧವಾಗಿವೆ ಎಂದು ಸಂದೇಶ ನೀಡಿದೆ.

ಕೋಲ್ಕತಾ-ವರ್ಗದ ವಿಧ್ವಂಸಕ ನೌಕೆಗಳು ಮತ್ತು ನೀಲಗಿರಿ ಮತ್ತು ಕ್ರಿವಾಕ್-ವರ್ಗದ ಯುದ್ಧನೌಕೆಗಳು ಸೇರಿದಂತೆ ಯುದ್ಧನೌಕೆಗಳ ಸಮೂಹದಿಂದ ಬ್ರಹ್ಮೋಸ್ ಹಡಗು ಕ್ರೂಸ್ ಕ್ಷಿಪಣಿಗಳನ್ನು ಉಡಾಯಿಸಲಾಗುತ್ತಿರುವ ದೃಶ್ಯಗಳನ್ನು ನೌಕಾಪಡೆ ಹಂಚಿಕೊಂಡಿದೆ.
ಪಾಕಿಸ್ತಾನಕ್ಕೆ ಎಚ್ಚರಿಕೆ
ಪಾಕಿಸ್ತಾನವು ಈ ಹಿಂದೆ ಅರೇಬಿಯನ್ ಸಮುದ್ರದ ಮೇಲೆ ಹಾರಾಟ ನಿಷೇಧ ವಲಯವ ಎಂದು ಘೋಷಣೆ ಮಾಡಿತ್ತು. ಹೊಸ ಕ್ಷಿಪಣಿಯನ್ನು ಪರೀಕ್ಷಿಸಲು ಸಿದ್ಧತೆ ನಡೆಸುತ್ತಿದೆ ಎಂಬ ವರದಿಗಳ ನಡುವೆ ಪ್ರತಿದಾಳಿಯ ಎಚ್ಚರಿಕೆ ನೀಡಿತ್ತು.
ಯಾವುದೇ ದಾಳಿಯನ್ನು ತಡೆಯುವ ಸಾಮರ್ಥ್ಯ ಇದೆ ಎಂದು ಭಾರತೀಯ ನೌಕಾಪಡೆ ಸಂದೇಶ ರವಾನಿಸಿದೆ. ಭಾರತೀಯ ನೌಕಾಪಡೆಯ ಹಡಗುಗಳು ಯಶಸ್ವಿ ಬಹು ಹಡಗು ವಿರೋಧಿ ಗುಂಡಿನ ದಾಳಿಗಳನ್ನು ಕೈಗೊಂಡಿದ್ದು ಅದರ ವಿಡಿಯೋಗಳನ್ನು ಹಂಚಿಕೊಂಡಿದೆ.
ರಾಷ್ಟ್ರದ ಸಾಗರದ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಭಾರತೀಯ ನೌಕಾಪಡೆ ವಿಶ್ವಾಸಾರ್ಹ ಭವಿಷ್ಯಕ್ಕೆ ಮತ್ತು ಯುದ್ದಕ್ಕೆ ಸಜ್ಜಾಗಿರುತ್ತದೆ, ಯಾವಾಗ ಬೇಕಾದರೂ, ಹೇಗಾದರೂ ಸರಿ ಎಂದು ಭಾರತೀಯ ನೌಕಾಪಡೆ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ನಂತರ ಭಾರತೀಯ ನೌಕಾಪಡೆಯ ಯಶಸ್ವಿ ಗುಂಡಿನ ದಾಳಿಯ ಸಾರ್ವಜನಿಕ ಘೋಷಣೆ ಬಂದಿದೆ. ದಾಳಿಗೆ ಪಾಕಿಸ್ತಾನ ಬೆಂಬಲ ಕೊಟ್ಟಿದೆ ಎಂದು ಆರೋಪಿಸಲಾಗಿದ್ದು, ಭಾರತ ಪಾಕ್ ಸರ್ಕಾರವನ್ನು ಟೀಕಿಸಿದೆ.
ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತವು 1960 ರ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಲು, ಏಪ್ರಿಲ್ 27 ರೊಳಗೆ ಎಲ್ಲಾ ಪಾಕಿಸ್ತಾನಿ ಪ್ರಜೆಗಳನ್ನು ಹೊರಹಾಕಲು ಮತ್ತು ಅಟ್ಟಾರಿ-ವಾಘಾ ಗಡಿಯನ್ನು ಮುಚ್ಚಲು ಆದೇಶ ನೀಡಿದೆ. ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ತಾನಿ ಪಡೆಗಳು ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುವುದನ್ನು ಖಂಡಿಸಿದ್ದು ತಕ್ಕ ಪ್ರತಿಕ್ರಿಯೆ ನೀಡಿವುದಾಗಿ ಹೇಳಿದೆ.
ಭಾರತದ ಕ್ರಮಕ್ಕೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನವು ಭಾರತದೊಂದಿಗಿನ ಎಲ್ಲಾ ದ್ವಿಪಕ್ಷೀಯ ಒಪ್ಪಂದಗಳನ್ನು ರದ್ದುಗೊಳಿಸಿದೆ. ನೀರು ನಿಲ್ಲಿಸಿದರೆ ರಕ್ತ ಹರಿಸುತ್ತೇವೆ ಎಂದು ಭಾರತಕ್ಕೆ ಬೆದರಿಕೆಯನ್ನು ಹಾಕಿದೆ.
ಭಾನುವಾರ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್‌ನಲ್ಲಿ, ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರದಾದ್ಯಂತ ಅನುಭವಿಸುತ್ತಿರುವ ನೋವು ಮತ್ತು ಕೋಪದ ಬಗ್ಗೆ ಹೆಚ್ಚಿನ ಸಮಯ ಮಾತನಾಡಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಆಗುತ್ತಿರುವ ಅಭಿವೃದ್ಧಿಯನ್ನು ಸಹಿಸಲು ಆಗದೆ ಇಂತಹ ಕೃತ್ಯಗಳನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ. ದೇಶದ ಮುಂದೆ ಎದುರಾಗಿರುವ ಈ ಸವಾಲನ್ನು ಎದುರಿಸಲು ನಾವು ನಮ್ಮ ಸಂಕಲ್ಪವನ್ನು ಬಲಪಡಿಸಿಕೊಳ್ಳಬೇಕು, ಎಲ್ಲರೂ ಒಗ್ಗಟ್ಟಾಗಿ ಭಯೋತ್ಪಾದನೆಯನ್ನು ಎದುರಿಸಬೇಕು ಎಂದು ಹೇಳಿದ್ದಾರೆ.












Click it and Unblock the Notifications