ಐಎಂ ಉಗ್ರರನ್ನು ಕಾಂಗ್ರೆಸ್ ನಾಯಕ ಸಮರ್ಥಿಸಿಕೊಂಡಿದ್ದು ಹೀಗೆ
ಇಂಡಿಯನ್ ಮುಜಾಹಿದ್ದೀನ್ ಅಂದರೇನೆಂದು ಮಕ್ಕಳನ್ನು ಕೇಳಿದರೂ ಅದೊಂದು ಉಗ್ರ ಸಂಘಟನೆ ಎನ್ನುವ ಉತ್ತರ ಬರುತ್ತೆ. ಆದರೆ ಶತಮಾನದ ಇತಿಹಾಸವನ್ನು ಹೊಂದಿರುವ ಕಾಂಗ್ರೆಸ್ ಮುಖಂಡರೊಬ್ಬರು ಈ ಬಗ್ಗೆ ಮಕ್ಕಳೂ ಹುಬ್ಬೇರಿಸುವಂತೆ ತನ್ನ ಸಾಮಾಜಿಕ ಜ್ಞಾನ ಪ್ರದರ್ಶಿಸಿದ್ದಾರೆ.
ಇಂಡಿಯನ್ ಮುಜಾಹಿದ್ದೀನ್ (ಐಎಂ) ಸಂಘಟನೆಯ ಮುಖಂಡರು ನಾನ್ ಸೆನ್ಸ್ ಹೇಳಿಕೆ ನೀಡುತ್ತಿರಬಹುದು ಆದರೆ ಅದು ಉಗ್ರ ಸಂಘಟನೆಯೇ ಆಗಬೇಕೆಂದೇನೂ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಖುರ್ಷಿದ್ ಅಹಮದ್ ಸಯೀದ್ ಹೇಳಿದ್ದಾರೆ.
ಗೋವಾದ ರಾಜಧಾನಿ ಪಣಜಿಯಲ್ಲಿ (ಏ 8) ಮಾತನಾಡುತ್ತಿದ್ದ ಅಖಿಲ ಭಾರತ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿರುವ ಖುರ್ಷಿದ್, ಇಂಡಿಯನ್ ಮುಜಾಹಿದ್ದೀನ್ ಮತೀಯ ಸಂಘಟನೆಯಾಗಿರಬಹುದು, ಆದರೆ ಅದರ ಯಾವ ಸದಸ್ಯರೂ ಉಗ್ರರಲ್ಲ ಎಂದು ಸ್ವಯಂ ಸರ್ಟಿಫಿಕೇಟ್ ನೀಡಿದ್ದಾರೆ. (ಬಂಧಿತ ಶಂಕಿತರು ಅಮಾಯಕರು)
ಜಗತ್ತಿನ ಉಗ್ರ ಚಟುವಟಿಕೆಗಳಲ್ಲಿ ಮುಸ್ಲಿಮರ ಪಾರುಪತ್ಯವಿರಬಹುದು, ಆದರೆ ಹಿಂದೂಸ್ಥಾನ ಮೂಲದ ಯಾವುದೇ ಮುಸ್ಲಿಮರು ಭಯೋತ್ಪಾದನಾ ಕೃತ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿಲ್ಲ ಎಂದು ಖುರ್ಷಿದ್, ಘಂಟಾಘೋಷವಾಗಿ ಹೇಳಿದ್ದಾರೆ.
ಗುಜರಾತ್ ಮೂಲದ ಕಾಂಗ್ರೆಸ್ ಮುಖಂಡ ಖುರ್ಷಿದ್, ಭಾರತದ ಯಾವುದೇ ಮುಸ್ಲಿಮರು ಮೂಲಭೂತವಾದಿಗಳಲ್ಲ. ಅವರ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದಿದ್ದಾರೆ.

ಭಾರತದ ಮುಸ್ಲಿಮರು ಭಾಗವಹಿಸಿಲ್ಲ
ಕೇಂದ್ರ ಸರಕಾರದ ಭೂಸ್ವಾಧೀನ ಯೋಜನೆಯ ವಿರುದ್ದ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಖುರ್ಷಿದ್, ಭಾರತದಲ್ಲಿ ನಡೆದ ಉಗ್ರ ಕೃತ್ಯಗಳಲ್ಲಿ ಭಾರತದ ಮುಸ್ಲಿಮರು ಯಾರೂ ಭಾಗವಹಿಸಲಿಲ್ಲ, ಉಗ್ರರೆಲ್ಲಾ ವಿದೇಶಿಯರು ಎಂದು ಹೇಳಿದ್ದಾರೆ.

ನಾವೆಂದೂ ಅಡ್ಡಿಪಡಿಸಿಲ್ಲ
ದೇಶದಲ್ಲಿ ಮತೀಯ ಭಾವನೆಯನ್ನು ಕೆರಳಿಸುತ್ತಿರುವುದು ಬಿಜೆಪಿಯವರು ಹೊರತು ಕಾಂಗ್ರೆಸ್ಸಿನವರಲ್ಲ ಎಂದು ಟೀಕಿಸಿದ ಖುರ್ಷಿದ್, ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಸದಸ್ಯರ ವಿರುದ್ದ ಈ ಹಿಂದೆ ಕ್ರಮ ತೆಗೆದುಕೊಂಡಾಗ ನಾವು ಎಂದೂ ವಿರೋಧಿಸಿದವರಲ್ಲ - ಖುರ್ಷಿದ್

ನಮ್ಮ ಅವಧಿಯಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೇವೆ
ಯುಪಿಎ ಸರಕಾರದ ಅವಧಿಯಲ್ಲಿ ಮೂಲಭೂತವಾದಿಗಳು ಮತ್ತು ಅಂತಹ ಸಂಘಟನೆಗಳ ವಿರುದ್ದ ಸರಿಯಾದ ಕ್ರಮ ತೆಗೆದುಕೊಂಡಿದ್ದೇವೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ - ಖುರ್ಷಿದ್.

ಐಎಂ ನಿಷೇಧಿಸಿದ್ದು ಯುಪಿಎ
ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯನ್ನು ನಿಷೇಧಿಸಿದ್ದು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ. 2010ರಲ್ಲಿ ತೀವ್ರ ಒತ್ತಡದ ನಂತರ ಕೇಂದ್ರ ಸರಕಾರ ಈ ಸಂಘಟನೆಯನ್ನು ನಿಷೇಧಿಸಿತ್ತು. ನ್ಯೂಜಿಲ್ಯಾಂಡ್ ಕೂಡಾ 2010ರಲ್ಲಿ ಐಎಂ ಸಂಘಟನೆಯನ್ನು ನಿಷೇಧಿಸಿತ್ತು. ಇತ್ತೀಚೆಗೆ ಸೌದಿ ಅರೇಬಿಯಾ ಕೂಡಾ ಐಎಂ ಸಂಘಟನೆಯನ್ನು ನಿಷೇಧಿಸಿತ್ತು.

ಬಾಂಬ್ ದಾಳಿ
ಪುಣೆ (2010), ವಾರಣಾಸಿ (2010) ಮತ್ತು ಮುಂಬೈ ಸರಣಿ ಸ್ಪೋಟ (2011) ಸೇರಿದಂತೆ ಇದುವರೆಗೆ ಹತ್ತು ಉಗ್ರ ಕೃತ್ಯಗಳನ್ನು ಐಎಂ ಸಂಘಟನೆ ನಡೆಸಿದೆ.











Click it and Unblock the Notifications