ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಂಪಿಸಿದ ಭೂಮಿ, ಮುಂದೆ ಏನಾಯ್ತು?
ನವದೆಹಲಿ: ಪ್ರಕೃತಿಯ ಮೇಲೆ ಮನುಷ್ಯನ ಒತ್ತಡ ಹೆಚ್ಚಾದಷ್ಟು, ಪ್ರಾಕೃತಿಕ ವಿಕೋಪಗಳು ಕೂಡ ಹೆಚ್ಚಾಗುತ್ತಿವೆ. ಇಂದು ರಾಷ್ಟ್ರ ರಾಜಧಾನಿ ದೆಹಲಿ ಜನರು ದಿಢೀರನೆ ಮನೆಯಿಂದ ಹೊರಗೆ ಓಡಿ ಬಂದರು. ಆಗಲೇ ಗೊತ್ತಾಗಿದ್ದು, ದೆಹಲಿಯ ಸುತ್ತಮುತ್ತ ಭೂಮಿ ಕಂಪಿಸಿದೆ ಎಂಬ ಆಘಾತಕಾರಿ ವಿಚಾರ. ಹೌದು ಕೇವಲ 15 ದಿನಗಳ ಅಂತರದಲ್ಲಿ ರಾಷ್ಟ್ರ ರಾಜಧಾನಿ ದೆಹಲಿ 2ನೇ ಬಾರಿಗೆ ಭೂಕಂಪನ ಎದುರಿಸಿದೆ.
ಅಂದಹಾಗೆ ದೆಹಲಿ & ಎನ್‌ಸಿಆರ್ ಭಾಗ ಇಂದು ಲಘು ಭೂಕಂಪನ ಕಂಡಿದ್ದು, ರಿಕ್ಟರ್ ಮಾಪಕದಲ್ಲಿ 3.1 ತೀವ್ರತೆ ಪತ್ತೆಯಾಗಿದೆ. ಈ ಕುರಿತು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಮಾಹಿತಿಯನ್ನ ನೀಡಿದೆ. ಇನ್ನು ಭೂಮಿ ಕಂಪಿಸಿದ ಹಿನ್ನೆಲೆಯಲ್ಲಿ ದೆಹಲಿ ಜನರು ಕೂಡ ಭಯಭೀತರಾದರು. ಆದರೆ ಲಘು ಭೂಕಂಪನವಾದ ಕಾರಣ ಹೆಚ್ಚಿನ ಹಾನಿ ಏನು ಆಗಿರಲಿಲ್ಲ. ಇಲ್ಲಿಯ ತನಕ ಜೀವ ಹಾನಿಯಾದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.

15 ದಿನದಲ್ಲಿ 2ನೇ ಭೂಕಂಪ
ಇಂದು ಸಂಜೆ 4.09ಕ್ಕೆ ದೆಹಲಿ ಸುತ್ತಮುತ್ತಲ ಭಾಗದಲ್ಲಿ ಭೂಮಿ ಕಂಪಿಸಿದ್ದು ಹರಿಯಾಣದ ಫರಿದಾಬಾದ್‌ನಲ್ಲಿ 9 ಕಿ.ಮೀ ಆಳದಲ್ಲಿ ಕಂಪನದ ಕೇಂದ್ರಬಿಂದು ಗುರುತಿಸಲಾಗಿದೆ ಎಂದು ಎನ್‌ಸಿಎಸ್ ಮಾಹಿತಿ ನೀಡಿದೆ. ಮತ್ತೊಂದು ಕಡೆ 15 ದಿನಗಳಲ್ಲಿ ದೆಹಲಿಯಲ್ಲಿ ಸಂಭವಿಸಿದ 2ನೇ ಭೂಕಂಪ ಇದಾಗಿರುವ ಕಾರಣ ಭಯ ಮತ್ತಷ್ಟು ಹೆಚ್ಚಾಗಿದೆ. ಅಕ್ಟೋಬರ್ 3ರಂದು ಇದೇ ರೀತಿ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಭೂಕಂಪನ ಸಂಭವಿಸಿತ್ತು. ಆಗ ಕೂಡ ಜನರು ಭಯಭೀತರಾಗಿ ತಮ್ಮ ಮನೆ & ತಮ್ಮ ಕಚೇರಿಗಳಿಂದ ಹೊರಗೆ ಓಡಿ ಬಂದಿದ್ದರು.
ತಾಲಿಬಾನ್ ನಾಡಲ್ಲೂ ಭೂಕಂಪನ ಸಂಚಲನ
ಅಷ್ಟಕ್ಕೂ ರಜೆಯ ದಿನವಾದ ಭಾನುವಾರ ಜಗತ್ತಿಗೆ ಭೂಕಂಪನ ಶಾಕ್ ಕೊಟ್ಟಿದ್ದು ಪಶ್ಚಿಮ ಅಫ್ಘಾನ್‌ನಲ್ಲಿ, ಇಂದು ಬೆಳಗ್ಗೆ ಹಲವು ಭಾರಿ ಭೂಮಿ ಕಂಪಿಸಿದೆ ಎನ್ನಲಾಗಿದೆ. ಈ ಮೂಲಕ ಒಂದೇ ವಾರದಲ್ಲಿ 3 ಬಾರಿ ಪ್ರಾಕೃತಿಕ ವಿಕೋಪ ಸಂಷಕ್ಟ ಅನುಭವಿಸಿದ್ದಾರೆ ಇಲ್ಲಿನ ಜನ. ಈಗಿನ ಮಾಹಿತಿ ಪ್ರಕಾರ ಒಬ್ಬರ ಶವ ಸಿಕ್ಕಿದ್ದು, 35ಕ್ಕೂ ಹೆಚ್ಚು ಜನ ಭೂಮಿ ಕಂಪನಿಸಿದ ನಂತರ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತಾಗಿ ಹೆರಾತ್ ಗವರ್ನರ್ ಕಚೇರಿ ಮಾಹಿತಿ ನೀಡಿದ್ದಾರೆ. ಹಾಗೇ ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ.

6.5ರ ತೀವ್ರತೆಯಲ್ಲಿ ಕಂಪಿಸಿದ ಭೂಮಿ
ಮತ್ತೊಂದು ಕಡೆ ಹಲವು ಕಟ್ಟಡಗಳು ಭೂಕಂಪನದ ತೀವ್ರತೆಗೆ ನೆಲಸಮವಾಗಿವೆ. ಇದೇ ಕಾರಣಕ್ಕೆ ಕಟ್ಟಡಗಳ ಅವಶೇಷದ ಅಡಿಯಲ್ಲಿ ಹಲವರು ಸಿಲುಕಿರುವ ಕಾರಣ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ. ಇನ್ನು ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.5ರಷ್ಟು ದಾಖಲಾಗಿದೆ. ಹೆರಾತ್ ಹೊರವಲಯದಲ್ಲಿ ಭೂಮಿಯಿಂದ 10 ಕಿಲೋ ಮೀಟರ್ ಆಳದಲ್ಲಿ ಈ ಕಂಪನದ ಕೇಂದ್ರಬಿಂದು ಗುರುತಿಸಲಾಗಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications