27ನೇ ವಯಸ್ಸಿನಲ್ಲೇ ಒತ್ತಡಕ್ಕೆ ಆಸ್ಪತ್ರೆಗೆ; ಬಳಿಕ ₹7,000 ಕೋಟಿ ಸ್ಟಾರ್ಟಪ್ ಕಟ್ಟಿದ ಭಾರತೀಯ ಮೂಲದ ಉದ್ಯಮಿ
ಉದ್ಯಮದಲ್ಲಿ ಯಶಸ್ಸು ಗಳಿಸುವ ಧಾವಂತದಲ್ಲಿ ಆರೋಗ್ಯವನ್ನು ನಿರ್ಲಕ್ಷಿಸಿದರೆ ಅದರ ಪರಿಣಾಮ ಎಷ್ಟರ ಮಟ್ಟಿಗೆ ಗಂಭೀರವಾಗಬಹುದು ಎಂಬುದಕ್ಕೆ ಭಾರತೀಯ ಮೂಲದ ಉದ್ಯಮಿ ರಾಹುಲ್ ವೋಹ್ರಾ ಅವರ ಕಥೆ ಉದಾಹರಣೆಯಾಗಿದೆ. 27ನೇ ವಯಸ್ಸಿನಲ್ಲೇ ಸ್ಟಾರ್ಟಪ್ ಆರಂಭಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ಒಪ್ಪಂದ ಮಾಡಿಕೊಂಡಿದ್ದ ವೋಹ್ರಾ, ಅತಿಯಾದ ಒತ್ತಡ, ಅನಾರೋಗ್ಯಕರ ಆಹಾರ ಪದ್ಧತಿ ಹಾಗೂ ವ್ಯಾಯಾಮದ ಕೊರತೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಈ ಅನುಭವವೇ ಬಳಿಕ ಅವರ ಜೀವನಶೈಲಿ ಮತ್ತು ಉದ್ಯಮದ ಕುರಿತ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಿಸಿತು.
27ನೇ ವಯಸ್ಸಿನಲ್ಲೇ ಯಶಸ್ಸು
ರಾಹುಲ್ ವೋಹ್ರಾ ಅವರು 2009ರಲ್ಲಿ Rapportiveಎಂಬ ಸ್ಟಾರ್ಟಪ್ ಅನ್ನು ಸಹ-ಸ್ಥಾಪಿಸಿದ್ದರು. ಇಮೇಲ್ ಸೇವೆಯೊಂದಿಗೆ ಕೆಲಸ ಮಾಡುವ ಬ್ರೌಸರ್ ಪ್ಲಗ್ಇನ್ ಆಗಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿತ್ತು. 2012ರ ಫೆಬ್ರವರಿಯಲ್ಲಿ LinkedIn ಸಂಸ್ಥೆಯನ್ನು ಸುಮಾರು15 ಮಿಲಿಯನ್ ಡಾಲರ್ಗೆ ಸ್ವಾಧೀನಪಡಿಸಿಕೊಂಡಿತು. ಆ ಸಮಯದಲ್ಲಿ ವೋಹ್ರಾ ಕಂಪನಿಯ ಸಿಇಒ ಆಗಿದ್ದರು. ಸ್ಟಾರ್ಟಪ್ ಯಶಸ್ಸಿನ ಹಾದಿಯಲ್ಲಿದ್ದರೂ, ಅದರ ಹಿಂದಿನ ಒತ್ತಡ ಅವರ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರಿತ್ತು.

ಮ್ಯಾಕ್ಡೊನಾಲ್ಡ್ಸ್ ಬಳಿ ಕುಸಿದು ಬಿದ್ದಿದ್ದರು
ಒಂದು ದಿನ ಬೆಳಗಿನ ಜಾವ 3 ಗಂಟೆಗೆ ವೋಹ್ರಾ ತೀವ್ರ ವಾಕರಿಕೆ ಮತ್ತು ಹೊಟ್ಟೆನೋವಿನಿಂದ ಎಚ್ಚರಗೊಂಡರು. ಆರಂಭದಲ್ಲಿ ಅದನ್ನು ನಿರ್ಲಕ್ಷಿಸಿ ಎಂದಿನಂತೆ ಕೆಲಸ ಮುಂದುವರಿಸಲು ಪ್ರಯತ್ನಿಸಿದರು. ಆದರೆ ಮಧ್ಯಾಹ್ನದ ವೇಳೆಗೆ ನೋವು ತೀವ್ರಗೊಂಡಿತ್ತು.
ಔಷಧಿ ಪಡೆಯಲು ಕಚೇರಿಯ ಸಮೀಪದ ಫಾರ್ಮಸಿಗೆ ತೆರಳುತ್ತಿದ್ದಾಗ ಸ್ಯಾನ್ಫ್ರಾನ್ಸಿಸ್ಕೋದಲ್ಲಿನ McDonald's ಔಟ್ಲೆಟ್ವೊಂದರ ಬಳಿ ನೋವು ತಾಳಲಾರದೆ ಕುಸಿದುಬಿದ್ದರು. ಸಹ-ಸಂಸ್ಥಾಪಕರೊಬ್ಬರು ಅವರಿಗೆ ನೆರವಾದರು. ನೋವು ಕಡಿಮೆಯಾದ ಬಳಿಕವೂ ವೋಹ್ರಾ ಮತ್ತೆ ಕೆಲಸಕ್ಕೆ ಮರಳಿದ್ದರು.
ಆದರೆ ಮರುದಿನ ವೈದ್ಯರನ್ನು ಭೇಟಿಯಾದಾಗ ಹಲವು ಪರೀಕ್ಷೆಗಳನ್ನು ನಡೆಸಲಾಯಿತು. ವರ್ಷಗಳ ಕಾಲದ ಒತ್ತಡ, ಜಂಕ್ ಫುಡ್ ಸೇವನೆ ಹಾಗೂ ವ್ಯಾಯಾಮದ ಕೊರತೆ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿರುವುದು ಪತ್ತೆಯಾಯಿತು. ಅವರಿಗೆ ಗ್ಯಾಸ್ಟ್ರೋಇಂಟೆಸ್ಟೈನಲ್ ರಿಫ್ಲಕ್ಸ್ ಡಿಸೀಸ್ (GERD) ಸಮಸ್ಯೆ ಕಾಣಿಸಿಕೊಂಡಿತ್ತು.
ವೈದ್ಯಕೀಯ ಸಿಬ್ಬಂದಿಯೊಬ್ಬರು ಅವರ ದೇಹದ ಸ್ಥಿತಿ ಅವರ ವಯಸ್ಸಿಗಿಂತ 10ರಿಂದ 20 ವರ್ಷ ಹಿರಿಯ ವ್ಯಕ್ತಿಯಂತಿದೆ ಎಂದು ಎಚ್ಚರಿಸಿ, ಜೀವನಶೈಲಿಯನ್ನು ಮರುಪರಿಶೀಲಿಸುವಂತೆ ಸಲಹೆ ನೀಡಿದರು.
ಆಸ್ಪತ್ರೆಯಲ್ಲೇ ಬದಲಾದ ಜೀವನ
ವೋಹ್ರಾ ಸುಮಾರು ಒಂದು ವಾರ ಆಸ್ಪತ್ರೆಯಲ್ಲಿದ್ದರು. ಆ ಸಮಯದಲ್ಲಿ ಉದ್ಯಮ ಯಶಸ್ಸು ಎಂದರೆ ನಿರಂತರವಾಗಿ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುವುದೇ ಎಂಬ ತಮ್ಮ ನಂಬಿಕೆಯನ್ನು ಅವರು ಮರುಪರಿಶೀಲಿಸಿದರು.
ನಂತರ ಕೆಲವು ವಾರಗಳನ್ನು ಕುಟುಂಬದೊಂದಿಗೆ ಮನೆಯಲ್ಲಿ ವಿಶ್ರಾಂತಿಯಲ್ಲಿ ಕಳೆದರು. ಕೆಲಸದಿಂದ ಸಂಪೂರ್ಣವಾಗಿ ದೂರ ಉಳಿದುಕೊಂಡ ಈ ಅವಧಿ ಅವರ ಜೀವನದಲ್ಲಿ ಮಹತ್ವದ ತಿರುವಾಯಿತು.
ಯುವ ಉದ್ಯಮಿಗಳು ಅತಿಯಾದ ಕೆಲಸವನ್ನು ಹೆಮ್ಮೆಯ ವಿಷಯವನ್ನಾಗಿ ಮಾಡಿಕೊಳ್ಳಬಾರದು ಎಂಬುದು ಅವರ ಸಂದೇಶ. ತಮ್ಮ ಹಿಂದಿನ ಅನುಭವಕ್ಕಿಂತಲೂ ಹೆಚ್ಚು ಸಮಯ ಕೆಲಸ ಮಾಡಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ಯುವ ಸಂಸ್ಥಾಪಕರ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಧ್ಯಾನದಿಂದ ಬದಲಾದ ಜೀವನಶೈಲಿ
ವೋಹ್ರಾ ನಂತರ Transcendental Meditation ಅಭ್ಯಾಸ ಆರಂಭಿಸಿದರು. ಭಾರತ ಮೂಲದ ರಾಜ ಪರಂಪರೆಯ ಧ್ಯಾನ ಪದ್ಧತಿಯಲ್ಲಿ ವೈಯಕ್ತಿಕ ಮಾರ್ಗದರ್ಶನ ಮತ್ತು ಮಂತ್ರಾಧಾರಿತ ಅಭ್ಯಾಸವನ್ನು ಅವರು ಕೈಗೊಂಡರು. ಇಂದು ಅವರ ಬೆಳಗಿನ ದಿನಚರಿಯಲ್ಲಿ 20 ನಿಮಿಷಗಳ ಧ್ಯಾನ ಪ್ರಮುಖ ಭಾಗವಾಗಿದೆ. ಧ್ಯಾನದಿಂದ ದಿನವನ್ನು ಹೆಚ್ಚು ಶಾಂತ ಹಾಗೂ ಸ್ಪಷ್ಟ ಮನಸ್ಸಿನಿಂದ ಆರಂಭಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳುತ್ತಾರೆ.
ಇದರ ಜೊತೆಗೆ ನಿಯಮಿತ ವ್ಯಾಯಾಮ ಮತ್ತು ಉತ್ತಮ ಆಹಾರ ಪದ್ಧತಿಗೂ ಅವರು ಆದ್ಯತೆ ನೀಡಲು ಆರಂಭಿಸಿದರು. ಆಹಾರ ತಜ್ಞರು ಹಾಗೂ ಪೌಷ್ಟಿಕ ತಜ್ಞರ ಸಲಹೆ ಪಡೆದು ತಮ್ಮ ಆಹಾರ ಪದ್ಧತಿಯನ್ನೂ ಬದಲಿಸಿಕೊಂಡರು.
Indian businessman: ಎರಡನೇ ಸ್ಟಾರ್ಟಪ್ ಯಶಸ್ಸು
Rapportive ಮಾರಾಟದ ನಂತರ ವೋಹ್ರಾ Superhuman ಎಂಬ ಮತ್ತೊಂದು ಕಂಪನಿಯನ್ನು ನಿರ್ಮಿಸಿದರು. ಇಮೇಲ್ ಉತ್ಪಾದಕತೆ ಕ್ಷೇತ್ರದಲ್ಲಿ ಗಮನ ಸೆಳೆದ ಈ ಸ್ಟಾರ್ಟಪ್ ಅನ್ನು 2025ರಲ್ಲಿ Grammarly ಸುಮಾರು 825 ಮಿಲಿಯನ್ ಡಾಲರ್ಗೆ ಸ್ವಾಧೀನಪಡಿಸಿಕೊಂಡಿತು.
ಅಂದರೆ, ಮೊದಲ ಸ್ಟಾರ್ಟಪ್ ಮಾರಾಟದ ಸಂದರ್ಭದಲ್ಲಿ ಎದುರಾದ ಆರೋಗ್ಯ ಬಿಕ್ಕಟ್ಟಿನ ಅನುಭವದ ನಂತರ, ವೋಹ್ರಾ ತಮ್ಮ ಎರಡನೇ ಕಂಪನಿಯನ್ನು ಸಂಪೂರ್ಣ ವಿಭಿನ್ನ ಜೀವನಶೈಲಿಯೊಂದಿಗೆ ಮುನ್ನಡೆಸಿದರು.
ಈ ಬಾರಿ ಕಂಪನಿ ಯಶಸ್ಸಿನ ಹಂತ ತಲುಪಿದರೂ ಅವರು ಹಿಂದಿನ ರೀತಿಯಲ್ಲಿ ತಮ್ಮ ಆರೋಗ್ಯವನ್ನು ನಿರ್ಲಕ್ಷಿಸಲಿಲ್ಲ. ಕೆಲಸ, ಧ್ಯಾನ, ವ್ಯಾಯಾಮ, ಕುಟುಂಬ ಮತ್ತು ಆರೋಗ್ಯಕರ ಆಹಾರಕ್ಕೆ ಸಮತೋಲನ ನೀಡಿದರು.
ವೋಹ್ರಾ ಅವರ ಪ್ರಕಾರ, ಎರಡನೇ ಕಂಪನಿಯ ಮಾರಾಟದ ನಿರ್ಧಾರವು ಹಣದ ಅವಶ್ಯಕತೆಯಿಂದ ತೆಗೆದುಕೊಂಡ ನಿರ್ಧಾರವಾಗಿರಲಿಲ್ಲ. ಕಂಪನಿಯ ಉದ್ದೇಶವನ್ನು ಮತ್ತಷ್ಟು ವೇಗವಾಗಿ ಸಾಧಿಸಲು Grammarly ಜೊತೆ ಸೇರುವುದು ಸೂಕ್ತವೇ ಎಂಬುದನ್ನು ಪರಿಗಣಿಸಿ ನಿರ್ಧಾರ ಕೈಗೊಳ್ಳಲಾಗಿತ್ತು.
27ನೇ ವಯಸ್ಸಿನಲ್ಲಿ ಒತ್ತಡದಿಂದ ಆಸ್ಪತ್ರೆ ಸೇರಿದ್ದ ಉದ್ಯಮಿ, ನಂತರ ತಮ್ಮ ಜೀವನಶೈಲಿಯನ್ನೇ ಬದಲಿಸಿಕೊಂಡು 825 ಮಿಲಿಯನ್ ಡಾಲರ್ ಮೌಲ್ಯದ ಸ್ಟಾರ್ಟಪ್ ನಿರ್ಮಿಸಿರುವುದು ಉದ್ಯಮ ಯಶಸ್ಸಿನ ಜೊತೆಗೆ ಆರೋಗ್ಯಕ್ಕೂ ಆದ್ಯತೆ ನೀಡುವ ಮಹತ್ವವನ್ನು ತೋರಿಸುತ್ತದೆ.


Click it and Unblock the Notifications
