Get Updates
Get notified of breaking news, exclusive insights, and must-see stories!

Indian Army Day: ಭಾರತೀಯ ಸೇನಾ ದಿನಾಚರಣೆ: ರಕ್ಷಣಾ ಸ್ವಾವಲಂಬನೆಯಲ್ಲಿದೆ ದೇಶದ ಶಕ್ತಿ

ಬೆಂಗಳೂರು, ಜನವರಿ 15: ಜನವರಿ 15 ಭಾರತದ ಇತಿಹಾಸದಲ್ಲಿ ಮಹತ್ವದ ದಿನವಾಗಿದ್ದು, ಅಂದು ಭಾರತ ತನ್ನ ಸೇನಾ ದಿನವನ್ನು ಸಂಭ್ರಮದಿಂದ ಆಚರಿಸುತ್ತದೆ. ದೇಶ ಸ್ವಾತಂತ್ರ್ಯ ಗಳಿಸಿದ ಬಳಿಕ, 1949ರಲ್ಲಿ ಲೆಫ್ಟಿನೆಂಟ್ ಜನರಲ್ ಕೆ.ಎಂ. ಕಾರ್ಯಪ್ಪ ಅವರು ಭಾರತೀಯ ಸೇನೆಯ ಪ್ರಥಮ ಭಾರತೀಯ ಮಹಾ ದಂಡನಾಯಕರಾಗಿ ನೇಮಕವಾದ ದಿನವನ್ನು ಸ್ಮರಿಸಲು ಸೇನಾ ದಿನವನ್ನು ಆಚರಿಸಲಾಗುತ್ತದೆ. ಇದು ಬ್ರಿಟಿಷರಿಂದ ಮಿಲಿಟರಿ ಅಧಿಕಾರ ಭಾರತಕ್ಕೆ ಹಸ್ತಾಂತರವಾದುದರ ಸಂಕೇತವಾಗಿದ್ದು, ಭಾರತದ ಸ್ವಾವಲಂಬನೆ ಮತ್ತು ಸಾರ್ವಭೌಮತ್ವದ ದೃಷ್ಟಿಯಿಂದ ಮುಖ್ಯ ಹೆಜ್ಜೆಯಾಗಿತ್ತು.

ಪ್ರತಿ ವರ್ಷವೂ ಈ ದಿನ ಭಾರತೀಯ ಯೋಧರ ಶೌರ್ಯ, ತ್ಯಾಗ, ಬಲಿದಾನಗಳನ್ನು ನೆನಪಿಸುತ್ತಾ, ಅದರೊಡನೆ ದೇಶವನ್ನು ಎಲ್ಲ ತೊಂದರೆಗಳಿಂದ ರಕ್ಷಿಸುತ್ತಾ, ಭಾರತದ ರಕ್ಷಣಾ ಸಾಮರ್ಥ್ಯಗಳನ್ನು ಹೆಚ್ಚಿಸುವ ಭಾರತೀಯ ಸೇನೆಯ ಬೆಳೆಯುತ್ತಿರುವ ಪಾತ್ರವನ್ನು ಸ್ಮರಿಸುವ ದಿನವಾಗಿದೆ. ಸೇನಾ ದಿನವನ್ನು ಆಚರಿಸುವ ಸಂದರ್ಭದಲ್ಲಿ, ಸ್ವಾವಲಂಬನೆಯತ್ತ ಭಾರತೀಯ ಸೇನೆಯ ಅಸಾಧಾರಣ ಹಾದಿಯನ್ನು ಗಮನಿಸುವುದು ಮುಖ್ಯವಾಗಿದೆ. ಅದರಲ್ಲೂ ಸಮಕಾಲೀನ ಭೌಗೋಳಿಕ ರಾಜಕಾರಣದ ಸವಾಲುಗಳ ದೃಷ್ಟಿಯಲ್ಲಿ ಮತ್ತು ರಕ್ಷಣಾ ತಾಂತ್ರಿಕ ಅಭಿವೃದ್ಧಿಯಲ್ಲಿ ಭಾರತೀಯ ಸೇನೆ ಸಾಗಿಬಂದ ಹಾದಿ ಗಮನಾರ್ಹವಾಗಿದೆ.

Indian Army Day The Country s Strength lies in Defense Self-Reliance

ಐತಿಹಾಸಿಕ ಹಿನ್ನೆಲೆ

ಭಾರತ ಬ್ರಿಟಿಷರ ವಸಾಹತಾಗಿದ್ದ ಸಂದರ್ಭದಲ್ಲಿ ಸ್ಥಾಪನೆಗೊಂಡ ಭಾರತೀಯ ಸೇನೆ, ಅಂದಿನಿಂದಲೂ ಐತಿಹಾಸಿಕ ಹಿರಿಮೆ, ಪರಂಪರೆಯನ್ನು ಹೊಂದಿದೆ. ಸ್ವಾತಂತ್ರ್ಯ ಗಳಿಸಿದ ಬಳಿಕ, ಭಾರತೀಯ ಸೇನೆಯ ಪ್ರಾಥಮಿಕ ಗುರಿ ದೇಶದ ಸಾರ್ವಭೌಮತ್ವವನ್ನು ರಕ್ಷಿಸುವ ಸಲುವಾಗಿ ಒಂದು ಸದೃಢ ರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸುವುದಾಗಿತ್ತು. ಆದರೆ, ದಶಕಗಳ ಕಾಲ ಭಾರತೀಯ ಸೇನೆ ತನಗೆ ಬೇಕಾದ ಆಯುಗಳನ್ನು ಪಡೆದುಕೊಳ್ಳಲು ವಿದೇಶಗಳ ಮೇಲೆ ಅತಿಯಾದ ಅವಲಂಬನೆ ಹೊಂದಿತ್ತು. 1962ರ ಭಾರತ - ಚೀನಾ ಯುದ್ಧದ ಸಂದರ್ಭದಲ್ಲಿ ಈ ಅವಲಂಬನೆ ಎದ್ದು ಕಾಣುವಂತಿತ್ತು. ಭಾರತೀಯ ಸೇನೆ ದೇಶೀಯ ನಿರ್ಮಾಣದ ಆಯುಧ ವ್ಯವಸ್ಥೆಗಳನ್ನು ಹೊಂದಿರದ ಕಾರಣ, ಭಾರತೀಯ ಸೇನೆಯ ಆಯುಧ ವ್ಯವಸ್ಥೆಗಳ ಬಲಹೀನತೆ ಗೋಚರಿಸಿ, ಚೀನಾದೆದುರು ಭಾರತ ಹಿನ್ನಡೆ ಅನುಭವಿಸುವಂತಾಗಿತ್ತು.

ಈ ಸಮಸ್ಯೆಗಳನ್ನು ಗಮನಿಸಿದ ಭಾರತ ಸರ್ಕಾರ, ರಕ್ಷಣಾ ವ್ಯವಸ್ಥೆಯಲ್ಲಿ ಸ್ವಾವಲಂಬನೆ ಸಾಧಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡತೊಡಗಿತು. 2014ರಲ್ಲಿ, ಭಾರತ ಸರ್ಕಾರ ದೇಶೀಯ ರಕ್ಷಣಾ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ 'ಮೇಕ್ ಇನ್ ಇಂಡಿಯಾ' ಯೋಜನೆಯನ್ನು ಆರಂಭಿಸಿತು. ಇದು ದೇಶೀಯ ಆಯುಧ ಉತ್ಪಾದನೆಗೂ ಹೆಚ್ಚಿನ ಆದ್ಯತೆ ನೀಡಿತು. ಜಾರಿಗೆ ಬಂದ ಬಳಿಕ, ಮೇಕ್ ಇನ್ ಇಂಡಿಯಾ ಒಂದು ಮುಖ್ಯ ರಾಷ್ಟ್ರೀಯ ಯೋಜನೆಯಾಗಿ ರೂಪುಗೊಂಡಿದ್ದು, ನಾವೀನ್ಯತೆ, ದೇಶೀಯ ನಿರ್ಮಾಣ, ಮತ್ತು ಸ್ಪರ್ಧಾತ್ಮಕ ರಕ್ಷಣಾ ಉದ್ಯಮಗಳಿಗೆ ಬೆಂಬಲ ನೀಡುವತ್ತ ಗಮನ ಹರಿಸಿತ್ತು.

ಸ್ವಾವಲಂಬನೆಯಲ್ಲಿ ಇತ್ತೀಚಿನ ಅಭಿವೃದ್ಧಿ-ಅಂಶಗಳು

ದೇಶೀಯ ಆಯುಧ ವ್ಯವಸ್ಥೆಗಳು

ಇತ್ತೀಚಿನ ವರ್ಷಗಳಲ್ಲಿ, ಭಾರತೀಯ ಸೇನೆ ದೇಶೀಯ ನಿರ್ಮಾಣದ ಆಯುಧ ವ್ಯವಸ್ಥೆಗಳನ್ನು ನಿರ್ಮಿಸುವಲ್ಲಿ ಮತ್ತು ಅವುಗಳನ್ನು ಸಂಪಾದಿಸುವಲ್ಲಿ ಮಹತ್ವದ ಹೆಜ್ಜೆಗಳನ್ನು ಇಡುತ್ತಾ ಸಾಗಿದೆ. ಅರ್ಜುನ್ ಯುದ್ಧ ಟ್ಯಾಂಕ್, ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆ, ಮತ್ತು ತೇಜಸ್ ಲಘು ಯುದ್ಧ ವಿಮಾನಗಳು ಭಾರತದ ಹೆಚ್ಚುತ್ತಿರುವ ದೇಶೀಯ ರಕ್ಷಣಾ ಉತ್ಪಾದನಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿವೆ. ರಷ್ಯಾದ ಜೊತೆಗಿನ ಜಂಟಿ ಉತ್ಪಾದನಾ ಯೋಜನೆಯಾಗಿರುವ ಬ್ರಹ್ಮೋಸ್ ಕ್ಷಿಪಣಿ, ತಾಂತ್ರಿಕವಾಗಿ ಒಂದು ಮಹತ್ವದ ಹೆಜ್ಜೆಯಾಗಿದೆ. ಇದು ಭಾರತಕ್ಕೆ ತನ್ನ ಭೌಗೋಳಿಕ ಪ್ರದೇಶದಲ್ಲಿ ತನ್ನ ಕಾರ್ಯತಂತ್ರದ ಸಾಮರ್ಥ್ಯವನ್ನು ಪ್ರದರ್ಶಿಸಲು ನೆರವಾಗಿದೆ.

Indian Army Day The Country s Strength lies in Defense Self-Reliance

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಈ ಬೆಳವಣಿಗೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಅಡ್ವಾನ್ಸ್ಡ್ ಟೋವ್ಡ್ ಆರ್ಟಿಲರಿ ಗನ್ ಸಿಸ್ಟಮ್ (ಎಟಿಎಜಿಎಸ್) ಮತ್ತು ಪಿನಾಕಾ ಮಲ್ಟಿ ಬ್ಯಾರಲ್ ರಾಕೆಟ್ ಲಾಂಚರ್‌ಗಳಂತಹ ಹಲವಾರು ದೇಶೀಯ ನಿರ್ಮಿತ ರಕ್ಷಣಾ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸಿದೆ. ಇಂತಹ ದೇಶೀಯ ರಕ್ಷಣಾ ವ್ಯವಸ್ಥೆಗಳ ನಿರ್ಮಾಣ, ವಿದೇಶೀ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುವುದು ಮಾತ್ರವಲ್ಲದೆ, ಭಾರತದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ, ಭಾರತದ ಆರ್ಥಿಕತೆಗೂ ಉತ್ತೇಜನ ನೀಡುತ್ತಿದೆ.

ಖಾಸಗಿ-ಸಾರ್ವಜನಿಕ ಸಹಭಾಗಿತ್ವ

ಭಾರತೀಯ ಸೇನೆ ರಕ್ಷಣಾ ಉತ್ಪಾದನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಖಾಸಗಿ ಸಂಸ್ಥೆಗಳೊಡನೆ ಸಹಭಾಗಿತ್ವ ಹೊಂದುವ ಅವಶ್ಯಕತೆ ಇರುವುದನ್ನು ಮನಗಂಡಿತು. ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಸ್ಥಾಪನೆಗೊಂಡಿರುವ ರಕ್ಷಣಾ ಕೈಗಾರಿಕಾ ಕಾರಿಡಾರ್‌ಗಳು ಹೂಡಿಕೆಗಳನ್ನು ಆಕರ್ಷಿಸುವ ಮತ್ತು ರಕ್ಷಣಾ ತಂತ್ರಜ್ಞಾನಗಳಲ್ಲಿ ನಾವೀನ್ಯತೆಗಳನ್ನು ಸಾಧಿಸುವ ಗುರಿಯನ್ನು ಹೊಂದಿವೆ. ಖಾಸಗಿ ಸಂಸ್ಥೆಗಳನ್ನು ರಕ್ಷಣಾ ಉತ್ಪಾದನೆಯಲ್ಲಿ ಪಾಲ್ಗೊಳ್ಳುವಂತೆ ಉತ್ತೇಜನ ನೀಡುವ ಮೂಲಕ ಭಾರತೀಯ ಸೇನೆ ತನ್ನ ಪೂರೈಕೆ ಸರಪಳಿಯನ್ನು ವೈವಿಧ್ಯಮಯಗೊಳಿಸುವುದರ ಜೊತೆಗೆ, ಖಾಸಗಿ ವಲಯ ನೀಡುವ ಚುರುಕುತನ ಮತ್ತು ದಕ್ಷತೆಗಳ ಪ್ರಯೋಜನ ಹೊಂದಲಿದೆ.

ತಂತ್ರಜ್ಞಾನ ಮತ್ತು ಆಧುನೀಕರಣ

ಆಧುನಿಕ ಯುದ್ಧಗಳು ತಂತ್ರಜ್ಞಾನದ ಮೇಲೆ ಹೆಚ್ಚು ಹೆಚ್ಚು ಅವಲಂಬಿತವಾಗುತ್ತಿದ್ದು, ಭಾರತೀಯ ಸೇನೆಯೂ ಆಧುನಿಕ ತಂತ್ರಜ್ಞಾನಗಳನ್ನು ತನ್ನ ಕಾರ್ಯಾಚರಣೆಗಳಲ್ಲಿ ಅಳವಡಿಸಿಕೊಳ್ಳುತ್ತಿದೆ. ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್ - ಎಐ), ಡ್ರೋನ್‌ಗಳು, ಮತ್ತು ಸೈಬರ್ ಸ್ಪೇಸ್ ಸಾಮರ್ಥ್ಯಗಳನ್ನು ಭಾರತೀಯ ಸೇನೆ ಅಳವಡಿಸಿಕೊಂಡಿದ್ದು, ಅವುಗಳ ಮೂಲಕ ಯುದ್ಧರಂಗದ ಆಯಾಮಗಳನ್ನು ಮರಳಿ ರೂಪಿಸುತ್ತಿದೆ. ಭಾರತೀಯ ಸೇನೆ ನೆಟ್‌ವರ್ಕ್ ಆಧಾರಿತವಾದ ಯುದ್ಧದತ್ತ ಗಮನಹರಿಸುತ್ತಿದ್ದು, ಇದರ ಅಭಿವೃದ್ಧಿಯಿಂದ ಸೇನೆಯ ಕಾರ್ಯಾಚರಣಾ ದಕ್ಷತೆಯನ್ನು ಹೆಚ್ಚಿಸಲು ಅವಶ್ಯಕವಾದ ಸಂವಹನ ವ್ಯವಸ್ಥೆಯೂ ಉತ್ತಮಗೊಂಡಿದೆ.

Indian Army Day The Country s Strength lies in Defense Self-Reliance

ಭಾರತೀಯ ಸೇನೆ ಸ್ಟಾರ್ಟಪ್‌ಗಳು ಮತ್ತು ಶೈಕ್ಷಣಿಕ ಸಂಸ್ಥೆಗಳೊಡನೆ ಹೊಂದಿರುವ ಸಹಯೋಗಗಳು ನಾವೀನ್ಯತೆಯ ಕುರಿತು ಸೇನೆಯ ಬದ್ಧತೆಗೆ ಸಾಕ್ಷಿಯಾಗಿವೆ. ಡಿಫೆನ್ಸ್ ಇನೋವೇಷನ್ ಆರ್ಗನೈಸೇಶನ್ (ಡಿಐಒ) ನಂತಹ ಕ್ರಮಗಳು ಹೊಸ ಆಲೋಚನೆಗಳು ಮತ್ತು ತಂತ್ರಜ್ಞಾನಗಳನ್ನು ಪರೀಕ್ಷಿಸಲು ವೇದಿಕೆ ಮಾಡಿಕೊಟ್ಟಿದ್ದು, ಅವುಗಳನ್ನು ಸೇನೆಯ ಕಾರ್ಯಾಚರಣಾ ವ್ಯವಸ್ಥೆಯಡಿ ಅಳವಡಿಸಿಕೊಳ್ಳಲು ಅನುಕೂಲ ಕಲ್ಪಿಸಿವೆ.

ಕಾರ್ಯತಂತ್ರದ ಸಹಭಾಗಿತ್ವಗಳು

ತನ್ನ ಸ್ವಾವಲಂಬನೆಯ ಕಾರ್ಯತಂತ್ರದ ಭಾಗವಾಗಿ, ಭಾರತೀಯ ಸೇನೆ ಇತರ ದೇಶಗಳೊಡನೆ ತನ್ನ ಕಾರ್ಯತಂತ್ರದ ಸಹಯೋಗವನ್ನು ಭದ್ರಪಡಿಸಿದೆ. ಅಮೆರಿಕಾ, ಫ್ರಾನ್ಸ್, ಮತ್ತು ಇಸ್ರೇಲ್‌ನಂತಹ ದೇಶಗಳೊಡನೆ ಸಹಯೋಗ ಹೊಂದುವ ಮೂಲಕ, ಭಾರತ ತನ್ನ ಕಾರ್ಯಾಚರಣಾ ಸಿದ್ಧತೆಯನ್ನು ಹೆಚ್ಚಿಸುವಂತಹ ತಂತ್ರಜ್ಞಾನ ವರ್ಗಾವಣೆಯ ಒಪ್ಪಂದಗಳು ಮತ್ತು ಜಂಟಿ ಸಮರಾಭ್ಯಾಸಗಳನ್ನು ಕೈಗೊಂಡಿದೆ. ಈ ಸಹಭಾಗಿತ್ವಗಳು ಭಾರತೀಯ ಸೇನೆಗೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಲು ಮತ್ತು ದೇಶೀಯ ರಕ್ಷಣಾ ಉಪಕರಣಗಳ ನಿರ್ಮಾಣದ ಸಾಮರ್ಥ್ಯವನ್ನು ಬೆಳೆಸಲು ನೆರವಾಗಿವೆ.

ಯುದ್ಧ್ ಅಭ್ಯಾಸ್ ಮತ್ತು ವಜ್ರ ಪ್ರಹಾರ್‌ನಂತಹ ಇತ್ತೀಚಿನ ಬಹುರಾಷ್ಟ್ರೀಯ ಸಮರಾಭ್ಯಾಸಗಳಲ್ಲಿ ಭಾರತ ಪಾಲ್ಗೊಂಡಿರುವುದು ಜಾಗತಿಕ ಶಕ್ತಿಗಳೊಡನೆ ಪರಸ್ಪರ ಕಾರ್ಯ ಸಾಧನೆ ನಡೆಸುವುದು ಮತ್ತು ಸಹಕಾರ ಸಾಧಿಸುವುದಕ್ಕೆ ಭಾರತ ಹೊಂದಿರುವ ಬದ್ಧತೆಗೆ ಸಾಕ್ಷಿಯಾಗಿದೆ. ಇಂತಹ ಸಹಯೋಗಗಳು ಕೇವಲ ಕಾರ್ಯತಂತ್ರದ ಸಾಧನೆಯನ್ನು ಬೆಂಬಲಿಸುವುದು ಮಾತ್ರವಲ್ಲದೆ, ಜಾಗತಿಕ ಭದ್ರತಾ ವ್ಯವಸ್ಥೆಯಲ್ಲಿ ಭಾರತವನ್ನು ಜವಾಬ್ದಾರಿಯುತ ಶಕ್ತಿಯನ್ನಾಗಿಸಿದೆ.

ಭಾರತದ ಮುಂದಿರುವ ಸವಾಲುಗಳು

ಭಾರತ ಈಗಾಗಲೇ ಸಾಕಷ್ಟು ಪ್ರಗತಿ ಸಾಧಿಸಿದ್ದರೂ, ಸಂಪೂರ್ಣ ಸ್ವಾವಲಂಬನೆ ಸಾಧಿಸುವತ್ತ ಭಾರತದ ಹಾದಿ ಇನ್ನಷ್ಟು ಸವಾಲುಗಳನ್ನು ಹೊಂದಿದೆ. ಭಾರತದ ರಕ್ಷಣಾ ಉತ್ಪನ್ನಗಳ ಖರೀದಿ ಪ್ರಕ್ರಿಯೆ ಬಹಳಷ್ಟು ವಿಳಂಬಗೊಳ್ಳುತ್ತವೆ. ಇದಕ್ಕೆ ಈ ಪ್ರಕ್ರಿಯೆಯಲ್ಲಿ ಕಂಡುಬರುವ ರಾಜತಾಂತ್ರಿಕ ವಿಳಂಬಗಳು ಮತ್ತು ತೊಡಕುಗಳು ಕಾರಣವಾಗಿದ್ದು, ಅವುಗಳು ವ್ಯಾಪಕವಾಗಿ ಟೀಕೆಗೊಳಗಾಗಿವೆ. ಭಾರತೀಯ ಸೇನೆ ತನಗೆ ಎದುರಾಗುವ ಅಪಾಯಗಳನ್ನು ನಿವಾರಿಸುವ ಸಾಮರ್ಥ್ಯ ಗಳಿಸಲು ಆಯುಧ ಖರೀದಿ ಪ್ರಕ್ರಿಯೆಗಳಲ್ಲಿನ ವಿಳಂಬವನ್ನು ನಿವಾರಿಸಿ, ಆಯುಧಗಳು, ರಕ್ಷಣಾ ವ್ಯವಸ್ಥೆಗಳನ್ನು ಕ್ಷಿಪ್ರವಾಗಿ ಗಳಿಸುವುದು ಮತ್ತು ಅಭಿವೃದ್ಧಿ ಪಡಿಸುವುದು ಅತ್ಯವಶ್ಯಕವಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ, ರಕ್ಷಣಾ ಉದ್ಯಮ ತನ್ನ ಸಂಶೋಧನೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಹಣಕಾಸಿನ ಅವಶ್ಯಕತೆಗಳು, ತಂತ್ರಜ್ಞಾನ ವರ್ಗಾವಣೆ ಮತ್ತು ಗುಣಮಟ್ಟ ಖಾತ್ರಿಗಳಿಗಿರುವ ತೊಡಕುಗಳನ್ನು ನಿವಾರಿಸಬೇಕು. ಅದರೊಡನೆ, ಭಾರತದ ರಕ್ಷಣಾ ಉತ್ಪನ್ನಗಳನ್ನು ಜಾಗತಿಕವಾಗಿ ಪ್ರಚುರಪಡಿಸಲು ಅವುಗಳು ಅಂತಾರಾಷ್ಟ್ರೀಯ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ಮಾಡಬೇಕು.

ಭಾರತೀಯ ಸೇನೆಯ ಮುಂದಿರುವ ಹಾದಿ

ಭಾರತೀಯ ಸೇನೆ ಭವಿಷ್ಯದತ್ತ ಕಣ್ಣು ನೆಟ್ಟು ನೋಡಿ, ನಾವೀನ್ಯತೆಯನ್ನು ಒಪ್ಪಿಕೊಂಡು, ಸಂಶೋಧನೆ ಮತ್ತು ಅಭಿವೃದ್ಧಿಯ ಸಂಸ್ಕೃತಿಗೆ ಬೆಂಬಲ ನೀಡಬೇಕು. ಭಾರತೀಯ ಸೇನೆಯ ಗಮನ ಕೇವಲ ಆಯುಧಗಳ ಪ್ರಮಾಣದ ಕಡೆಗಿರದೆ, ಅವುಗಳ ಗುಣಮಟ್ಟದ ಕಡೆಗೂ ಇದ್ದು, ತನ್ನ ಪಡೆಗಳು ಅತ್ಯಾಧುನಿಕ ಗುಣಮಟ್ಟದ ರಕ್ಷಣಾ ವ್ಯವಸ್ಥೆಗಳನ್ನು ಹೊಂದುವಂತೆ ಮಾಡಬೇಕು. ಶೈಕ್ಷಣಿಕ ಸಂಸ್ಥೆಗಳು ಮತ್ತು ಉದ್ಯಮದ ನಡುವಿನ ಬಾಂಧವ್ಯವನ್ನು ಉತ್ತಮಪಡಿಸುವುದರಿಂದ, ಈ ಸಹಯೋಗಗಳು ರಕ್ಷಣಾ ತಂತ್ರಜ್ಞಾನದಲ್ಲಿ ಹೊಸ ಸಾಧನೆ ನಿರ್ಮಿಸಿ, ರಕ್ಷಣಾ ಉತ್ಪಾದನೆಗೆ ಭಾರತವನ್ನು ಪ್ರಮುಖ ಕೇಂದ್ರವನ್ನಾಗಿಸಬಹುದು.

ಅದರೊಡನೆ, ಸಾರ್ವಜನಿಕರಲ್ಲೂ ಜಾಗೃತಿ ಮೂಡಿಸಿ, ಅವರು ದೇಶೀಯ ನಿರ್ಮಾಣದ ಉತ್ಪನ್ನಗಳನ್ನು ಬೆಂಬಲಿಸುವಂತೆ ಉತ್ತೇಜಿಸಬೇಕು. 'ಮೇಡ್ ಇನ್ ಇಂಡಿಯಾ' ರಕ್ಷಣಾ ಉತ್ಪನ್ನಗಳಿಗೆ ಆದ್ಯತೆ ನೀಡುವುದರಿಂದ, ಭಾರತದ ಆರ್ಥಿಕತೆಗೆ ಉತ್ತೇಜನ ಲಭಿಸುವುದು ಮಾತ್ರವಲ್ಲದೆ, ಭಾರತೀಯ ಸೇನೆಯ ಸಾಮರ್ಥ್ಯದ ಕುರಿತು ಭಾರತೀಯರಲ್ಲಿ ಹೆಮ್ಮೆ ಮತ್ತು ಆತ್ಮವಿಶ್ವಾಸ ಮೂಡಿಸಲಿದೆ.

ಯೋಧರ ಶೌರ್ಯ, ತ್ಯಾಗಗಳಿಗೆ ನಮನ

ಭಾರತೀಯ ಸೇನಾ ದಿನದ ಸಂದರ್ಭದಲ್ಲಿ, ಸಮಸ್ತ ಭಾರತ ನಮ್ಮ ಸೈನಿಕರ ತ್ಯಾಗ ಮತ್ತು ಸಮರ್ಪಣಾ ಭಾವಕ್ಕೆ ಗೌರವ ಸಲ್ಲಿಸುತ್ತದೆ. ಅದರೊಡನೆ, ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವತ್ತ ಭಾರತದ ಹೆಜ್ಜೆಯನ್ನು ಗೌರವಿಸುವುದೂ ಅಷ್ಟೇ ಮುಖ್ಯವಾಗಿದೆ. ಭಾರತೀಯ ಸೇನೆ ಸಾಗಿ ಬಂದಿರುವ ಹಾದಿ ಅದರ ನಾವೀನ್ಯತೆ, ಕಾರ್ಯತಂತ್ರದ ದೂರದೃಷ್ಟಿಗೆ ಸಾಕ್ಷಿಯಾಗಿದೆ.

ಸ್ವದೇಶಿ ಸಾಮರ್ಥ್ಯಗಳ ಹೆಚ್ಚಳಕ್ಕೆ ಹೂಡಿಕೆ ನಡೆಸುವುದರಿಂದ, ಸಹಯೋಗಗಳನ್ನು ಬೆಳೆಸುವುದರಿಂದ, ಮತ್ತು ತಾಂತ್ರಿಕ ಅಭಿವೃದ್ಧಿಯನ್ನು ಸಾಧಿಸುವುದರಿಂದ, ಭಾರತೀಯ ಸೇನೆ ಇಂದಿನ ಸವಾಲುಗಳಿಗೆ ಮಾತ್ರವಲ್ಲದೆ, ಭಾರತದ ಹೆಚ್ಚು ಸುರಕ್ಷಿತ ಮತ್ತು ಸ್ವಾವಲಂಬಿ ಭವಿಷ್ಯಕ್ಕೂ ಹಾದಿ ಮಾಡಿಕೊಡಲಿದೆ. ಸ್ವಾವಲಂಬನೆಯ ಸಾಧನೆಯತ್ತ ಸಾಗುವ ಹಾದಿ ಕೇವಲ ಮಿಲಿಟರಿ ದೃಷ್ಟಿಕೋನದ ಗುರಿ ಮಾತ್ರವಲ್ಲದೆ, ಮುಂದಿನ ವರ್ಷಗಳಲ್ಲಿ ಭಾರತದ ಭವಿಷ್ಯವನ್ನು ರೂಪಿಸುವ ದೃಷ್ಟಿಯಿಂದ ಒಂದು ಮಹತ್ವದ ರಾಷ್ಟ್ರೀಯ ಬದ್ಧತೆಯಾಗಿದೆ.

(ಈ ಲೇಖನದ ಬರಹಗಾರರು ಪ್ರಶಸ್ತಿ ಪುರಸ್ಕೃತ ವಿಜ್ಞಾನ ಬರಹಗಾರರು, ಮತ್ತು ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ:[email protected])

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+