ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲಿದೆ 'ಇಂಡಿಯಾ': ಭಾರತ- ಇಂಡಿಯಾ ಚರ್ಚೆಗೆ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಎಂಟ್ರಿ
ಚೆನ್ನೈ, ಸೆಪ್ಟೆಂಬರ್ 05: 'ಇಂಡಿಯಾ' ಎನ್ನುವ ಪರಿಕಲ್ಪನೆಯೇ ಬಿಜೆಪಿಯನ್ನು ದೃತಿಗೆಡುವಂತೆ ಮಾಡಿದೆ ಎಂದು ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಹೇಳಿದ್ದಾರೆ. ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ 'ಇಂಡಿಯಾ' ಎಂದು ಹೆಸರಿಡಲಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ 28 ವಿರೋಧ ಪಕ್ಷಗಳು ಒಗ್ಗೂಡುವ ಮೂಲಕ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಯನ್ನು ಸೋಲಿಸಲು ಮುಂದಾಗಿವೆ.
ಜಿ 20 ಶೃಂಗಸಭೆಯ ಆಹ್ವಾನ ಪತ್ರಿಕೆಯಲ್ಲಿ 'President of India' ಎಂದು ಸಂಭೋದಿಸುವ ಬದಲು 'President of Bharat' ಎಂದು ಕೇಂದ್ರ ಸರ್ಕಾರ ಸಂಭೋದಿಸಿದೆ. ಇದು ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಎಂಕೆ ಸ್ಟಾಲಿನ್, ಬಿಜೆಪಿ 'ಇಂಡಿಯಾ'ಗೋಸ್ಕರ ಭಾರತದ ಹೆಸರನ್ನು ಬದಲಾಯಿಸಲು ಹೊರಟಿದೆ. ವಿರೋಧ ಪಕ್ಷಗಳ ಮೈತ್ರಿಕೂಟದ ಹೆಸರು 'ಇಂಡಿಯಾ' ಎಂಬ ಕಾರಣದಿಂದ ಬಿಜೆಪಿ ಕೆರಳಿದೆ ಎಂದು ಅವರು ಆರೋಪಿಸಿದ್ದಾರೆ.
'ಫ್ಯಾಸಿಸ್ಟ್ ಬಿಜೆಪಿ ಆಡಳಿತವನ್ನು ಕಿತ್ತೊಗೆಯಲು ಬಿಜೆಪಿಯೇತರ ಶಕ್ತಿಗಳು ಒಂದಾಗಿವೆ. ವಿರೋಧ ಪಕ್ಷಗಳ ಮೈತ್ರಿಗೆ ಸೂಕ್ತವಾಗಿ INDIA ಎಂದು ಹೆಸರಿಸಿವೆ. ಈಗ ಬಿಜೆಪಿ 'ಇಂಡಿಯಾ'ವನ್ನು 'ಭಾರತ್' ಎಂದು ಬದಲಾಯಿಸಲು ಬಯಸಿದೆ. ಭಾರತವನ್ನು ಬದಲಾಯಿಸುವುದಾಗಿ ಈ ಹಿಂದೆ ಬಿಜೆಪಿ ಭರವಸೆ ನೀಡಿತ್ತು. ಆದರೆ, 9 ವರ್ಷಗಳ ನಂತರ ನಮಗೆ ಸಿಕ್ಕಿದ್ದು ಕೇವಲ ಹೆಸರು ಬದಲಾವಣೆ' ಎಂದು ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

'ಬಿಜೆಪಿಯು ಇಂಡಿಯಾ ಎಂಬ ಒಂದೇ ಪದದಿಂದ ಜರ್ಜರಿತವಾಗಿದೆ ಎಂದು ತೋರುತ್ತಿದೆ. ಏಕೆಂದರೆ ಅವರು ವಿರೋಧ ಪಕ್ಷಗಳ ಏಕತೆಯ ಶಕ್ತಿಯನ್ನು ಗುರುತಿಸಿದ್ದಾರೆ. ಚುನಾವಣೆಯ ಸಮಯದಲ್ಲಿ, ಇಂಡಿಯಾ ಬಿಜೆಪಿಯನ್ನು ಅಧಿಕಾರದಿಂದ ಓಡಿಸುತ್ತದೆ. #IndiaStaysIndia' ಎಂದು ಎಂಕೆ ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ.
ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದೇನು?
'ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ 'INDIA' ಎಂಬ ಹೆಸರಿಟ್ಟ ಕಾರಣಕ್ಕೆ ಕೇಂದ್ರ ಸರ್ಕಾರ ದೇಶದ ಹೆಸರನ್ನು 'INDIA'ದ ಬದಲು 'ಭಾರತ' ಎಂದು ಬದಲಾಯಿಸಲು ಮುಂದಾಗಿದೆ. #INDIA ಮೈತ್ರಿಕೂಟದ ಬಗ್ಗೆ BJPಯವರಿಗೆ ಇಷ್ಟೊಂದು ಭಯವೆ? ದೇಶದ ಹೆಸರು ಮರುನಾಮಕರಣಕ್ಕೆ 'INDIA' ಮೈತ್ರಿಕೂಟದ ಮೇಲಿನ ಭಯವಲ್ಲದೆ ಮತ್ತೇನು ಕಾರಣ ಮೋದಿಯವರೆ?' ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
'INDIA ಹೆಸರನ್ನು 'ಭಾರತ' ಎಂದು ಬದಲಿಸಿದರೆ ದೇಶ ಬದಲಾಗಲಿದೆಯೇ? ಮೋದಿಯವರೇ ಬದಲಾಗಬೇಕಿರುವುದು ದೇಶದ ಹೆಸರಲ್ಲ, ಬದಲಿಗೆ ದೇಶದ ಪರಿಸ್ಥಿತಿ. ಹೆಸರು ಬದಲಾಯಿಸುವ ಬದಲು ಜನರ ಜೀವನ ಮಟ್ಟ ಬದಲಾಯಿಸಿ. ದ್ವೇಷದ ಮೂಲಕ ಸಮಾಜದ ಶಾಂತಿ ಕೆಡಿಸುತ್ತಿರುವ ನಿಮ್ಮ ಭಕ್ತರ ಮನಸ್ಸು ಬದಲಾಯಿಸಿ. ಈ ದೇಶವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿ ಬದಲಾಯಿಸಿ' ಎಂದು ಅವರು ತಿಳಿಸಿದ್ದಾರೆ.
'INDIA ಮತ್ತು ಭಾರತ ಎರಡೂ ಹೆಸರುಗಳು ನಮ್ಮ ಎದೆಯೊಳಗೆ ಅಜರಾಮರವಾಗಿವೆ. ಇಂಡಿಯಾ ಎಂದರೆ ಬೇರೆಯಲ್ಲ, ಭಾರತ ಎಂದರೆ ಬೇರೆಯಲ್ಲ. ಸದುದ್ದೇಶದಿಂದ INDIA ಬದಲು ಭಾರತ ಎಂದು ಮರುನಾಮಕರಣ ಮಾಡಿದರೆ ಆಕ್ಷೇಪಣೆಯಿಲ್ಲ. ಆದರೆ ವಿರೋಧ ಪಕ್ಷಗಳ ಒಕ್ಕೂಟ INDIA ಹೆಸರನ್ನು ಅಪ್ರಸ್ತುತಗೊಳಿಸಲು ದೇಶದ ಹೆಸರು ಬದಲಾಯಿಸಲು ಹೊರಟಿರುವುದು ಮೂರ್ಖತನ' ಎಂದು ಟೀಕಿಸಿದ್ದಾರೆ.












Click it and Unblock the Notifications