ಯುಎಇನಲ್ಲಿ ಇರುವ ದಾವೂದ್ ಆಸ್ತಿ ಶೀಘ್ರ ಮುಟ್ಟುಗೋಲು?
ಪ್ರಧಾನಿ ಮೋದಿಯವರು ಕಳೆದ ವರ್ಷದ ಯುಎಇ ಭೇಟಿಯ ನಂತರ ಯುಎಇ ಸರ್ಕಾರ, ದಾವೂದ್ ಅಕ್ರಮ ಆಸ್ತಿ ಬಗ್ಗೆ ತನಿಖೆ ಆರಂಭಿಸಿದೆ. ಆದಷ್ಟು ಬೇಗನೇ ಈ ತನಿಖೆ ಮುಗಿದು, ಆಸ್ತಿಯನ್ನು ಯುಎಇ ಮುಟ್ಟುಗೋಲು ಹಾಕಿಕೊಳ್ಳಬೇಕೆಂಬುದು ಭಾರತದ ಅಭಿಲಾಷೆಯಾಗಿದೆ.
ನವದೆಹಲಿ, ಜನವರಿ 26: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿರುವ ಭೂಗತ ದೊರೆ ದಾವೂದ್ ಇಬ್ರಾಹೀಂಗೆ (ಯುಎಇ) ಸೇರಿದ ತನಿಖೆಯನ್ನು ಬೇಗನೇ ಪೂರ್ತಿಗಳೊಸಿ, ಆಸ್ತಿಯನ್ನು ಶೀಘ್ರವೇ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು, ಯುಎಇ ರಾಜಕುಮಾರ ಶೇಖ್ ಮೊಹಮ್ಮದ್ ಬಿನ್ ಜಾಯೇದ್ ಅಲ್ ನಹಯಾನ್ ಅವರಲ್ಲಿ ಮನವಿ ಮಾಡಿದ್ದಾರೆ.
ಗಣರಾಜ್ಯೋತ್ಸವದ ಅತಿಥಿಯಾಗಿ ಭಾರತಕ್ಕೆ ಆಗಮಿಸಿರುವ ಶೇಖ್ ಮೊಹಮ್ಮದ್ ಅವರು, ಭಾರತದೊಂದಿಗೆ ಸುಮಾರು 14 ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಅವುಗಳ ಮಾತುಕತೆಗಾಗಿ ಮೋದಿಯವರು ಶೇಖ್ ಜತೆ ಮಾತುಕತೆಯಲ್ಲಿ ನಿರತರಾಗಿದ್ದಾಗ ಮೋದಿಯವರು ಈ ವಿಚಾರವನ್ನು ರಾಜಕುಮಾರ ಅವರ ಗಮನಕ್ಕೆ ತಂದಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.

ಕಳೆದ ವರ್ಷ ನರೇಂದ್ರ ಮೋದಿಯವರು ಯುಎಇಗೆ ಭೇಟಿ ನೀಡಿದ್ದಾಗಲೇ ದಾವೂದ್ ಇಬ್ರಾಹೀಂ ಅಲ್ಲಿ ಬೇನಾಮಿ ಹೆಸರಲ್ಲಿ ಮಾಡಿರುವ ಮಿಲಿಯನ್ ಗಟ್ಟಲೇ ಆಸ್ತಿಯ ಪಟ್ಟಿಯುಳ್ಳ ಕಡತವೊಂದನ್ನು ನೀಡಿದ್ದರು. ಆ ಕಡತವನ್ನು ಜಾರಿ ನಿರ್ದೇಶನಾಲಯ ತಯಾರಿಸಿತ್ತು. ಆಗ ಅವರೊಂದಿಗೆ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಕೂಡಾ ಇದ್ದರು.
ಅದರಲ್ಲಿ ದಾವೂದ್, ತನ್ನ ಸಹೋದರನ ಹೆಸರಿನಲ್ಲಿ ಗೋಲ್ಡನ್ ಬಾಕ್ಸ್ ಎಂಬ ಹೆಸರಿನ ಕಂಪನಿಯನ್ನು ದುಬೈನಲ್ಲಿ ನಡೆಸುತ್ತಿರುವುದೂ ಸೇರಿದಂತೆ ಹಲವಾರು ಐಶಾರಾಮಿ ಹೋಟೆಲ್ ಗಳು ಮತ್ತಿತರ ಆಸ್ತಿಗಳ ಸಂಪೂರ್ಣ ವಿವರ ಇದ್ದವು.
ಹಾಗಾಗಿ, ಮೋದಿಯವರ ಯುಎಇ ಭೇಟಿ ಮುಗಿದ ಕೂಡಲೇ (ಅಕ್ಟೋಬರ್ 2016) ಇಲ್ಲಿ ಯುಎಇ ಸರ್ಕಾರ ದಾವೂದ್ ಆಸ್ತಿ ವಿರುದ್ಧ ತನಿಖೆ ಆರಂಭಿಸಿತ್ತು. ತನಿಖೆ ಇನ್ನೂ ಪ್ರಗತಿಯಲ್ಲಿದೆ.
ಹಾಗಾಗಿಯೇ, ಮೋದಿಯವರು ಈಗ ಪುನಃ ಈ ವಿಚಾರವನ್ನು ಶೇಖ್ ಅವರಿಗೆ ಮನವರಿಕೆ ಮಾಡಿಕೊಟ್ಟು, ದಾವೂದ್ ಆಸ್ತಿ ಮುಟ್ಟುಗೋಲು ಪ್ರಕ್ರಿಯೆಯನ್ನು ಆದಷ್ಟು ಬೇಗನೇ ಮಾಡಿ ಮುಗಿಸಬೇಕೆಂದು ಕೋರಿದ್ದಾರೆ.












Click it and Unblock the Notifications