Asia Cup 2023: ಭಾರತಕ್ಕೆ 266 ರನ್ ಗುರಿ ನೀಡಿದ ಬಾಂಗ್ಲಾದೇಶ
ಏಷ್ಯಾಕಪ್ ಅಖಾಡದಲ್ಲಿ ಮತ್ತೊಮ್ಮೆ ಬಾಂಗ್ಲಾದೇಶ ಭಾರತಕ್ಕೆ ಎದುರಾಳಿಯಾಗಿ ಸಿಕ್ಕಿದ್ದು, ಹಂಗೋ ಹಿಂಗೋ ಒದ್ದಾಡಿ ಮೊದಲ ಇನ್ನಿಂಗ್ಸ್ ಮುಗಿಸಿದೆ ಬಾಂಗ್ಲಾ. ಆರಂಭದಿಂದಲೇ ಬಾಂಗ್ಲಾ ಆಟಗಾರರು ಭಾರತದ ಬೌಲರ್‌ಗಳನ್ನ ಎದುರಿಸಲು ಪರದಾಡಿದರು. ಶುರುವಲ್ಲೇ ವಿಕೆಟ್‌ಗಳು ಸಾಲಾಗಿ ಉರುಳಿ ಬಿದ್ದವು. ಆದರೆ 5ನೇ ವಿಕೆಟ್ ಜೊತೆಯಾಟ ತುಸು ನೆಮ್ಮದಿ ನೀಡಿದರೂ ಬಾಂಗ್ಲಾ ಹುಲಿಗಳಿಗೆ 270 ರನ್ ಗಡಿ ದಾಟಲು ಸಾಧ್ಯವಾಗಲೇ ಇಲ್ಲ.
ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಭಾರತ & ಬಾಂಗ್ಲಾದೇಶ ತಂಡಗಳು ಅಖಾಡ ಪ್ರವೇಶ ಮಾಡಿದ್ದವು. ಟಾಸ್ ಗೆದ್ದ ಭಾರತ ತಂಡ ಬೌಲಿಂಗ್ ಆಯ್ದುಕೊಂಡು, ಆರಂಭದಲ್ಲೇ ಬಾಂಗ್ಲಾ ಹುಲಿಗಳಿಗೆ ಶಾಕ್ ಕೊಟ್ಟಿತ್ತು. ಹಸನ್ ಮತ್ತು ಲಿಟನ್ ಆರಂಭಿಕರಾಗಿ ಮೈದಾನಕ್ಕೆ ಇಳಿದರು. ಆದರೆ ಬಾಂಗ್ಲಾದೇಶ ತಂಡದ ಮೊತ್ತ 13ರನ್ ಆಗಿದ್ದಾಗ, ಭಾರತದ ಬೌಲರ್ ಶಮಿ ಬೌಲ್ ಎಸೆದ ಮೂರನೇ ಓವರ್ನ ಮೊದಲ ಎಸೆತದಲ್ಲಿ ಆರಂಭಿಕ ಆಟಗಾರ ಲಿಟನ್ ದಾಸ್ ಕ್ಲೀನ್ ಬೌಲ್ಡ್ ಆದರು. ಹೀಗೆ ಲಿಟನ್ ದಾಸ್ ಸೊನ್ನೆ ಸುತ್ತಿ ಗೂಡು ಸೇರಿದರು.

ಮಳೆಯಂತೆ ಬಿದ್ದ ಬಾಂಗ್ಲಾ ವಿಕೆಟ್!
13ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡಿದ್ದ ಬಾಂಗ್ಲಾ ತಂಡಕ್ಕೆ ಯಾವೊಬ್ಬ ಆಟಗಾರನು ಕೂಡ ಬೆನ್ನೆಲುಬಾಗಿ ನಿಲ್ಲಲೇ ಇಲ್ಲ. ಹೀಗಾಗಿ ಲಿಟನ್ ದಾಸ್ ಬಳಿಕ 3.1ನೇ ಓವರ್‌ನಲ್ಲಿ ತಂಜಿದ್ ಹಸನ್ ಔಟ್ ಆದರು, ಆಗ ತಂಡದ ಮೊತ್ತ 15 ರನ್ ಆಗಿತ್ತು. ನಂತರ 28 ರನ್ ಆಗಿದ್ದಾಗ ಅನಾಮುಲ್ ಹಕ್ ಔಟ್ ಆದರು. 59 ರನ್‌ಗೆ ಮೆಹಿದಿ ಹಸನ್ ಮಿರಾಜ್ ಔಟಾಗಿ ಪೆವಿಲಿಯನ್ ಪರೇಡ್ ನಡೆಸಿದರು. ಆದರೆ 5ನೇ ವಿಕೆಟ್‌ಗೆ ಜೊತೆಯಾದ ಶಕೀಬ್ ಅಲ್ ಹಸನ್ ಮತ್ತು ತೌಹಿದ್ ಜೋಡಿ ಭಾರತದ ಬೌಲರ್‌ಗಳನ್ನ ಕೆಲಕಾಲ ಕಾಡಿದರು.
ಅಂತೂ ಶಕೀಬ್ ಅಲ್ ಹಸನ್ ಔಟ್
ಹೀಗೆ ಭಾರತದ ಬೌಲರ್‌ಗಳನ್ನ ಕಾಡುತ್ತಿದ್ದ ಶಕೀಬ್ ಅಲ್ ಹಸನ್ ತಂಡದ ಮೊತ್ತ 160 ರನ್ ಆಗಿದ್ದಾಗ ಔಟ್ ಆದರು. ನಂತರ ಶಮಿಮ್ ಹುಸೈನ್ 161 ರನ್‌ಗೆ, ತೌಹಿದ್ 193 ರನ್‌ಗೆ ಔಟ್ ಆದರು. ಹೀಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಇದ್ದ ಬಾಂಗ್ಲಾಗೆ 8ನೇ ವಿಕೆಟ್‌ನಲ್ಲಿ ಉತ್ತಮವಾಗಿ ರನ್ ಬಂದರೂ, ಅಂತಿಮವಾಗಿ 265 ರನ್ ಗಳಿಸಲು ಮಾತ್ರ ಶಕ್ತವಾಯಿತು. 265 ರನ್ ಗಳಿಸಿ 8 ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಮುಗಿಸಿತು ಬಾಂಗ್ಲಾ ತಂಡ. ಈ ಮೂಲಕ ಭಾರತಕ್ಕೆ ಈಗ ಬಾಂಗ್ಲಾದೇಶ ತಂಡ 266 ರನ್‌ಗಳ ಗುರಿ ನೀಡಿದೆ.
ಸೋಲಿನ ಪಾಠ ಕಲಿಸುತ್ತಾ ಭಾರತ?
ಬಾಂಗ್ಲಾದೇಶ ಪರ ಶಕೀಬ್ ಅಲ್ ಹಸನ್ 80 ರನ್, ತೌಹಿದ್ 54 ರನ್ ಮತ್ತು ನಸುಮ್ ಅಹಮದ್ 44 ರನ್ ಗಳಿಸಿದ್ದು ಬಿಟ್ಟರೆ ಮಿಕ್ಕವರು ಅಷ್ಟಕ್ಕಷ್ಟೇ ಎಂಬಂತಾಗಿತ್ತು. ಇನ್ನು ಭಾರತದ ಪರ ಮೊಹಮ್ಮದ್ ಶಮಿ 2 ಹಾಗೂ ಶಾರ್ದುಲ್ ಠಾಕೂರ್ 3 ವಿಕೆಟ್ ಪಡೆದು ಮಿಂಚಿದರು. ಒಟ್ನಲ್ಲಿ ಇದೀಗ ಭಾರತಕ್ಕೆ 266 ರನ್ ಗುರಿ ಇದ್ದು ಸುಲಭವಾಗಿ ಗುರಿಯನ್ನ ಭಾರತ ಮುಟ್ಟುವ ವಿಶ್ವಾಸವಿದೆ. ಈ ಮೂಲಕ ಮತ್ತೊಮ್ಮೆ ಬಾಂಗ್ಲಾ ಹುಲಿಗಳಿಗೆ ಭಾರತ ತಂಡ ಸೋಲಿನ ಪಾಠ ಕಲಿಸುವುದು ಪಕ್ಕಾ ಅಂತಿದ್ದಾರೆ ಅಭಿಮಾನಿಗಳು. ಹೀಗಾಗಿ ಭಾರತ ತಂಡದ ಇನ್ನಿಂಗ್ಸ್ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ.

ಈಗಾಗಲೇ ಸೂಪರ್ 4 ಹಂತದಲ್ಲಿ 2 ಪಂದ್ಯ ಗೆದ್ದಿರುವ ಭಾರತ ತಂಡ ಫೈನಲ್ ಪ್ರವೇಶ ಮಾಡಿದೆ. ಇನ್ನು ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಭಾರತ ಮುಖಾಮುಖಿ ಆಗಿ, ಪ್ರಶಸ್ತಿಗಾಗಿ ಸೆಣೆಸಲಿವೆ. ಭಾರತಕ್ಕೆ ಈ ಪಂದ್ಯ ಲೆಕ್ಕಕ್ಕೆ ಇಲ್ಲವಾದರೂ, ಬಾಂಗ್ಲಾ ವಿರುದ್ಧ ಗೆಲ್ಲಬೇಕು ಎಂಬುದು ಅಭಿಮಾನಿಗಳ ಆಸೆ. ಹಾಗೇ ಈ ಮೊದಲು ಪದೇ ಪದೆ ಮಳೆರಾಯ ಕಾಟ ಕೊಡುತ್ತಿದ್ದ, ಆದರೆ ಇಂದಿನ ಪಂದ್ಯದಲ್ಲಿ ಇಲ್ಲಿಯ ತನಕ ಮಳೆ ಪ್ರತ್ಯಕ್ಷವಾಗಿಲ್ಲ ಎಂಬುದು ಮತ್ತೊಂದು ವಿಶೇಷ.












Click it and Unblock the Notifications